ರವಿ ತಿರುಮಲೈ

 
ಇಂದು ನಮ್ಮೆಲ್ಲರ ಆತ್ಮೀಯರೂ, ಫೇಸ್ಬುಕ್ ವಲಯದಲ್ಲಿ ಕಗ್ಗದ ಗುರುವರ್ಯ ಎಂದು ಆಪ್ತವಾಗಿ ಗುರುತಿಸಲ್ಪಡುತ್ತಿದ್ದ ದಿವಂಗತ ರವಿ ತಿರುಮಲೈ ಅವರ ಜನ್ಮದಿನ.
ರವಿ ತಿರುಮಲೈ ಅವರು ಡಿ. ವಿ. ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ದ ಕುರಿತಾದ ವ್ಯಾಖ್ಯಾನಗಳನ್ನು 4 ಬೃಹತ್ ಸಂಪುಟಗಳಲ್ಲಿ ಹೊರತಂದಿದ್ದಾರೆ. ಇದು ಫೇಸ್ಬುಕ್ಕಿನ ಬ್ಲಾಗ್ ಮೂಲಕ ಪ್ರತಿನಿತ್ಯ ಹರಿದು ಬಂದು ಆ ನಂತರದಲ್ಲಿ ಪ್ರೀತಿಪಾತ್ರರ ಒತ್ತಾಯದ ಮೇರೆಗೆ ಗ್ರಂಥರೂಪದಲ್ಲಿ ಹೊರಹೊಮ್ಮಿ ಬಂತು ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಈ ಪ್ರತಿಯೊಂದು ಸಂಪುಟ ಹೊರಬಂದಾಗ ಅದಕ್ಕೆ ನಡೆದ ಸಮಾರಂಭದ ವೈಖರಿ ಮತ್ತು ಅದು ಆಪ್ತರೀತಿಯಲ್ಲಿ ಜನರನ್ನು ಒಂದು ಸೇರಿಸಿದ ಬಗೆ ಮನನೀಯವಾದದ್ದು. ಫೇಸ್ಬುಕ್ ಗೆಳೆಯರು ಬಹುತೇಕವಾಗಿ ಒಬ್ಬರಿಗೊಬ್ಬರು ಮುಖ ನೋಡಿದ್ದು ಇಂತಹ ಸಮಾರಂಭಗಳ ಮೂಲಕ. ಇಂತಹ ಸಮಾರಂಭಗಳು ಇತ್ತೀಚಿನ ದಿನಗಳಲ್ಲಿ ಹಲವಾರು ಗೆಳೆಯ ಗೆಳತಿಯರ ಪುಸ್ತಕ ಬಿಡುಗಡೆ ಮುಂತಾದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲದೆ ಹಲವಾರು ಮಹನೀಯರ ಸ್ಮರಣೆ ರೂಪದ ಕಾರ್ಯಕ್ರಮಗಳಾಗಿ ಸಹಾ ಹೆಚ್ಚು ಹೆಚ್ಚು ನಡೆಯುತ್ತಿರುವುದು ಕನ್ನಡ ಭಾಷೆಗೆ ಒಂದು ಹೊಸ ವ್ಯಾಪ್ತಿಯಾಗಿ ಸಹಾ ಕಾಣುತ್ತಿದೆ.
‘ಮಂಕುತಿಮ್ಮನ ಕಗ್ಗ’ದಂತಹ ಒಂದು ಭಗವದ್ಗೀತಾ ಸದೃಶ ಗ್ರಂಥದ ಕುರಿತು ಸುಮಾರು ಸಹಸ್ರ ಪುಟಗಳ ಬಗ್ಗೆ ಬರೆದ ಮಹನೀಯರನ್ನು ಹೇಗೆ ಉಲ್ಲೇಖಿಸಬೇಕು? ಈ ಪ್ರಶ್ನೆ ಹುಟ್ಟುವುದು ಏಕೆ ಅಂದರೆ ರವಿ ತಿರುಮಲೈ ಅವರಿಗಿದ್ದ ಸರಳ ಸಜ್ಜನಿಕೆಯಲ್ಲಿ. ಅವರು ತಮ್ಮ ಕಗ್ಗರಸಧಾರೆಯ ಪ್ರಸ್ತಾವನೆಯನ್ನು ಪ್ರಾರಂಭಿಸುವುದೇ ‘ನಾನು ಸಾಹಿತಿಯೂ ಅಲ್ಲ , ಲೇಖಕನೂ ಅಲ್ಲ’ ಎಂದು. ಹೀಗೆನ್ನುವ ವ್ಯಕ್ತಿಯ ಕೈಂಕರ್ಯವನ್ನು ಏನೆನ್ನಬೇಕು? ಅದು ಅವರಿಗೆ ಭಕ್ತಿ. ಆ ಭಕ್ತಿಯಿಂದ ಅವರು ತಮ್ಮನ್ನು ತಮ್ಮಿಂದ ಹೊರಗಿಟ್ಟುಕೊಂಡು ಆಂತರ್ಯದ ಮೂಲಕ ಹೇಳಿರುವುದರಿಂದಲೇ ಅದು ಅಷ್ಟೊಂದು ಆಪ್ತ ಹೃದಯಗಳನ್ನು ತಟ್ಟಿದೆ. ಈ ಭಾವ ಅವರ ಹೃದಯದಲ್ಲಿ ತುಂಬಿರುವುದರಿಂದಲೇ ರವಿ ತಿರುಮಲೈ ಅವರಿಗೆ ‘ಕಗ್ಗ ರಸಧಾರೆ’ಯನ್ನು ಹೊರಹೊಮ್ಮಿಸುವಾಗ, ಎಷ್ಗೊಂದು ಕೃತಿಗಳು ಈಗಾಗಲೇ ಬಂದಿವೆ. ಎಷ್ಟೊಂದು ದೊಡ್ಡವರು ಇದರ ಬಗ್ಗೆ ಹೇಳಿದ್ದಾರೆ, ಈಗ ನಾನೇಕೆ ಎಂಬ ಭಾವ ಕಾಡಿದಂತಿಲ್ಲ. ಭಕ್ತಿಗೆ ಆ ಪ್ರಶ್ನೆಗಳು ಹುಟ್ಟುವುದಿಲ್ಲ. ಅದು ಯಾವಾಗಲೂ ಶರಣಾಗತಿಯತ್ತ ಹೊರಟು ಇದು ನನ್ನದಲ್ಲ ಇದು ನಿನಗೆ ಅರ್ಪಣೆ ಎನ್ನುತ್ತದೆ. ಅಂತಹ ಆಧ್ಯಾತ್ಮ ಭಾವದಿಂದ ರವಿ ತಿರುಮಲೈ ಅವರು ಕೆಲಸ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಡಿ.ವಿ.ಜಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಫೇಸ್ಬುಕ್ಕಿಗೆ ಸಂಬಂಧಪಟ್ಟ ಸ್ನೇಹ ವಲಯಗಳೇ, ಹಲವೆಡೆಗಳಲ್ಲಿ ಯಾವುದೇ ರೀತಿಯ ಏಕತಾನತೆ ಇಲ್ಲದ ಹಾಗೆ ವಿವಿಧರೀತಿಯಲ್ಲಿ ಮನೋಜ್ಞವಾಗೆಂಬ ಹಾಗೆ, ಜನತುಂಬಿದ ಆತ್ಮೀಯ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಒಂದು ಭಕ್ತಿ ಹಲವೆಡೆಗಳಲ್ಲಿ ಹೊರಹೊಮ್ಮಿಸುವ ಸುಸಂಸ್ಕೃತಿಯ ನಾದದ ಅಲೆಯಿದು ಎಂದು ಅನಿಸುತ್ತದೆ. ರವಿ ತಿರುಮಲೆ ಅವರು ಮುಕುಂದ ಮಾಲಾ ವ್ಯಾಖ್ಯಾನವನ್ನೂ ಕನ್ನಡದಲ್ಲಿ ಹರಿಸಿದ್ದಾರೆ. ಮರುಳು ಮುನಿಯನ ಬಗ್ಗೆ ಬರೆಯುತ್ತಿದ್ರು. ತಮ್ಮ ಬದುಕಿನಲ್ಲಿ ಕಂಡ ಹಲವು ಮಹನೀಯರ ಬದುಕನ್ನು ಆಪ್ತವಾಗಿ ತೆರೆದಿರಿಸಿದ್ದರು.
ಮೂಲತಃ ಕೋಲಾರ ಜಿಲ್ಲೆಯವರಾದ ರವಿ ತಿರುಮಲೈ ಅವರು ವಾಣಿಜ್ಯ ಪದವಿ ಪಡೆದು ಕೆನರಾ ಬ್ಯಾಂಕಿನಲ್ಲಿ ಎರಡು ದಶಕಗಳ ಸೇವೆ ಸಲ್ಲಿಸಿ, ಐಚ್ಛಿಕ ನಿವೃತ್ತಿ ಪಡೆದು, ಹಲವಾರು ವರ್ಷಗಳ ಕಾಲ ಮೈಸೂರಿನಲ್ಲಿ ವಾಸಿಸಿ, ಮುಂದಿನ ಒಂದು ದಶಕದಲ್ಲಿ ಬೆಂಗಳೂರಿನ ನಿವಾಸಿಯಾಗಿದ್ದರು. ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯ ಸುಖೀ ಸಂಸಾರ ಅವರದ್ದಾಗಿತ್ತು. ಕನ್ನಡ ಪ್ರೇಮ, ಅಧ್ಯಯನ, ತರ್ಜುಮೆ, ಕವನ – ಹಾಡು ಬರೆಯುವುದು, ರಂಗಭೂಮಿ, ಹಳೆಯ ಚಿತ್ರ ಸಂಗೀತ ಹೀಗೆ ವೈವಿಧ್ಯಮಯ ಸುಸಂಸ್ಕೃತ ಆಸಕ್ತಿಗಳ ನೆಲೆ ಅವರಲ್ಲಿತ್ತು. ಉತ್ತಮ ಶಾಸ್ತ್ರೀಯ ಸಂಗೀತದಲ್ಲಿ ಮುಳುಗಿಹೋಗುವ ತನ್ಮಯತೆ ಅವರಲ್ಲಿತ್ತು. ರವಿ ತಿರುಮಲೈ ಅವರಿಂದ ಸುಭಾಷಿತ ರೂಪದ ಚೆನ್ನುಡಿಗಳೂ ನಿರಂತರವಾಗಿ ಹರಿದು ಬರುತ್ತಿದ್ದವು. ಅವರ ಚಿಂತನಗಳು ಹಲವಾರು ಪತ್ರಿಕೆಗಳಲ್ಲೂ ಆಗಾಗ ಹರಿದಿದ್ದವು.
ಎತ್ತರದ ನಿಲುವು, ಹಸನ್ಮುಖದೊಂದಿಗೆ ಹೊಳೆವ ನಾಮದ ತಿಲಕ, ಶುಭ್ರ ಶ್ವೇತ ವಸ್ತ್ರ, ಸುಮಧುರ ಧ್ವನಿ, ಎಲ್ಲರೊಂದಿಗೆ ನಾನೂ ಒಬ್ಬ ಎನ್ನುವ ಸಜ್ಜನಿಕೆಯ ಆಂತರ್ಯದಿಂದ ಜೊತೆಗೂಡಿದ ಆಕರ್ಷಕ ವ್ಯಕ್ತಿತ್ವದಿಂದ ತಮ್ಮೆಡೆಗೆ ಸೆಳೆಯುವ ಗುಂಪು, ಆ ಗುಂಪಿನ ನಡುವೆ ಅವರು ಹೊರಡಿಸುವ ಸುಸಂಸ್ಕೃತ ಭಾವವನ್ನು ಮೀರದ ವಿನೋದ ಪೂರ್ಣ ಮಾತು ಇವು ರವಿ ತಿರುಮಲೈ ಎಂದರೆ ನಮಗೆ ತಕ್ಷಣಕ್ಕೆ ಬರುವ ಹೃದ್ಭಾವ. ಈ ನೆನಪು ಸದಾ ಅಮರ.

2019 ವರ್ಷ ಅವರ ಹುಟ್ಟುಹಬ್ಬದ ಇದೇ ದಿನ ದುಬೈನಿಂದ ನಾನು ಫೋನ್ ಮಾಡಿದಾಗ ಅವರಿಗೆ ತುಂಬಾ ಸಂತೋಷವಾಗಿತ್ತು. ಆರೋಗ್ಯ ಸರಿ ಇಲ್ಲ ಅದು ಆದಷ್ಟು ಬೇಗ ಸರಿಹೋಗುತ್ತೆ ಎಂದು ನನಗೆ ಗೊತ್ತಿದೆ ಎಂದು ಕೂಡಾ ಹೇಳಿದರು. 2019ರ ನವೆಂಬರ್ ಮಾಸದಲ್ಲಿ ಈ ಲೋಕದಿಂದ ಅಸ್ತಮಿಸಿಯೇಬಿಟ್ಟರು. ಹಲವು ನಿಟ್ಟಿನಲ್ಲಿ ನಮ್ಮೊಡನೆ ಸದಾ ನೆನಪಾಗುಳಿದಿರುವವರು.ರವಿ ತಿರುಮಲೈರವಿ ತಿರುಮಲೈಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖುಷ್ವಂತ್ ಸಿಂಗ್

Fri Mar 25 , 2022
  ಖುಷ್ವಂತ್ ಸಿಂಗ್ ನಮ್ಮ ದೇಶದ ಹೆಸರಾಂತ ಕಥೆಗಾರ, ಪತ್ರಕರ್ತ ಮತ್ತು ಅಂಕಣಕಾರ. ಅವರ ಪ್ರಸಿದ್ಧ ಧಾರಾವಾಹಿ ಅಂಕಣ ‘with malice towards one and all’ ಭಾರತದ ಬಹುತೇಕ ದೈನಿಕಗಳಲ್ಲಿ ಆವರ್ತನಗೊಂಡು ಅವರಿಗೆ ಬೃಹತ್ ಓದುಗ ಬಳಗವನ್ನು ಸೃಷ್ಟಿಸಿತು. ಇಂದು ಅವರ ಸಂಸ್ಮರಣೆ ದಿನ. ಖುಷ್ವಂತ್ ಸಿಂಗ್ 1915ರ ಫೆಬ್ರವರಿ 2ರಂದು ಜನಿಸಿದರು. ಭಾರತದ ಆಂಗ್ಲ ಭಾಷಾ ಸಾಹಿತಿಯಾಗಿ ಬಹಳಷ್ಟು ವರ್ಷಗಳಿಂದ ಆ ಕೃಷಿಯಲ್ಲಿ ತೊಡಗಿದ್ದ ಖುಷ್ವಂತ್ ಸಿಂಗರು, […]

Advertisement

Wordpress Social Share Plugin powered by Ultimatelysocial