ರೇಣುಕಾ ಮಂಜುನಾಥ್

ನಮ್ಮ ರೇಣುಕಾ ಮಂಜುನಾಥ್ ಅಂದರೆ ಸರ್ವ ಸಮ ಭಾವತ್ವವನ್ನು ಎಲ್ಲೆಡೆ ಕಾಣುವ ಸಹೃದಯ ರೂಪ ಕಣ್ಮುಂದೆ ಬಂದು ನಿಲ್ಲುತ್ತದೆ. ಅವರು ಓರ್ವ ಅಪೂರ್ವ ಗುಣಗ್ರಾಹಿ.
ಮಾರ್ಚ್ 22 ರೇಣುಕಾ ಅವರ ಜನ್ಮದಿನ. ಕೋಲಾರದಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿ, ಮುಂದೆ ಶ್ರೀ ಸಿದ್ಧಗಂಗಾ ಕಲೆ ಮತ್ತು ವಿಜ್ಞಾನ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದರು. ಬಾಲ್ಯದಿಂದಲೂ ಅವರಿಗೆ ಓದುವುದರಲ್ಲಿ ಅಪಾರ ಆಸಕ್ತಿ. ರೇಣುಕಾ ಅವರ ತಂದೆ ವಿಶ್ವದ ಶ್ರೇಷ್ಠ ಪುಸ್ತಕಗಳನ್ನೆಲ್ಲ ಮನೆಯಲ್ಲಿ ತುಂಬಿಟ್ಟುಕೊಂಡಿದ್ದವರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸುಮಾರು 22 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದ ರೇಣುಕಾ ಅವರು ಮುಂದೆ ತಮ್ಮ ವಿಭಿನ್ನ ಆಸಕ್ತಿಗಳತ್ತ ಗಮನ ಹರಿಸಲಿಕ್ಕಾಗಿ ಆ ಹುದ್ದೆಯನ್ನು ತೊರೆದರು. ಮನೆಯಲ್ಲಿ ಚಾಪೆಯ ಮೇಲೆ ಕುಳಿತು ಪುಸ್ತಕಗಳ ಲೋಕದಲ್ಲಿ ಮುಳುಗುವ ಕಲ್ಪನೆ ಅವರಲ್ಲಿ ಮನೆ ಮಾಡಿತ್ತು.
ರೇಣುಕಾ ಅವರು ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮ ವ್ಯಾಸಂಗವನ್ನು ಕೈಗೊಂಡ ಉತ್ಸಾಹಿ. ಅವರು ಅನೇಕ ಪತ್ರಿಕೆಗಳಿಗೆ ಅಮೂಲ್ಯ ಲೇಖನಗಳನ್ನು ಬರೆದು ಎರಡು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾದವರು.
ವೈಯಕ್ತಿಕ ಬದುಕಿನ ಕೆಲವು ಅನಿರೀಕ್ಷಿತ ತಿರುವುಗಳು ರೇಣುಕಾ ಅವರಿಗೆ ಅವರ ಬದುಕಿನಲ್ಲಿದ್ದ ಅದ್ಭುತ ಸಾಮರ್ಥ್ಯಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಆಸ್ಪದವೀಯಲಿಲ್ಲ. ಮುಂದೆ ಮಕ್ಕಳೊಂದಿಗಿರಲು ಒಮ್ಮೆ ಯೂರೋಪು, ಒಮ್ಮೆ ಅಮೆರಿಕಾ ಎಂಬ ಪಯಣ ವಾಸ್ತವ್ಯಗಳ ಬದುಕೂ ಅವರ ಜೊತಗೂಡಿತು.
ಈ ಎಲ್ಲವುಗಳ ನಡುವೆಯೂ ತಾವು ಓದಿದ, ಮನನ ಮಾಡಿದ, ಕಂಡ ಜನ ಸಾಮರ್ಥ್ಯ, ಪ್ರತಿಭೆ, ಸದ್ಗುಣ ವಿಶೇಷಣಗಳನ್ನೆಲ್ಲ ಅವರು ಎಷ್ಟು ಅಚ್ಚುಕಟ್ಟಾಗಿ, ಕೂಲಂಕಷವಾಗಿ
ಆಪ್ತವಾಗಿ ತೆರೆದಿಡುತ್ತಾರೆ ಎಂದರೆ ಅವರಿಗಿರುವ ಸೂಕ್ಷ್ಮಗ್ರಹಿತ್ವದ ಬಗ್ಗೆ ಅಸೂಯೆ ಹುಟ್ಟಿಸುವ ಮೆಚ್ಚುಗೆ ನಮ್ಮ ಹೃದಯದಲ್ಲಿ ತುಂಬುತ್ತದೆ.
“Humanity is my religion as Gandhi says” ಎಂಬುದು ರೇಣುಕಾ ಮಂಜುನಾಥ್ ಅವರ ಫೇಸ್ಬುಕ್ ಗೋಡೆಯ ಮೇಲಿನ religious view. ಈ ಮಾತಿಗೆ ಅನ್ವರ್ಥವಾಗುವಂತೆ ಅವರೊಬ್ಬ ನಿಷ್ಕಲ್ಮಷ ನೋಟವುಳ್ಳ ಗುಣಗ್ರಾಹಿ. ಅವರ ಬರಹಗಳ ಮೂಲಕ ನನಗೆ ಅನೇಕ ದಿವ್ಯ ಮನಗಳ ಸಾಧನೆಗಳ ಪರಿಚಯ ಸಿಗುತ್ತಿದೆ. ನನ್ನ ಕೆಲಸಕ್ಕೂ ಅವರಿಂದ ಪ್ರತಿದಿನ ವಿಶಾಲ ವ್ಯಾಪ್ತಿಯ ಪ್ರಚಾರ ಸಿಗುತ್ತಿದೆ.
“ನಿಮ್ಮ ಬಗ್ಗೆ ಏನೂ ಗೊತ್ತಿಲ್ಲ ಏನಾದ್ರೂ ಹೇಳಿ” ಎಂದು ರೇಣುಕಾ ಅವರ ಅಮೆರಿಕದ ನಂಬರಿಗೆ ಫೋನ್ ಮಾಡಿದರೆ “ನನ್ನದೇನೂ ಇಲ್ಲ” ಎಂದು ಉಳಿದ ಸಮಸ್ತದ ಬಗ್ಗೆ ಅರ್ಧ ಗಂಟೆ ಮಾತಾಡಿದರು. ತನ್ನದೇನಿಲ್ಲವೆಂದು ಮತ್ತೊಬ್ಬರಿಗಾಗಿ ಚಿಂತಿಸಿ, ಲೋಕದ ವಿಶಿಷ್ಟ ಗುಣಗಳನ್ನು ಶುಭ್ರ ನೋಟದಿಂದ ಕಾಣುವ ಹೃದಯ ಏನೂ ಇಲ್ಲದೆ ತನ್ನನ್ನು ಬರಿದಾಗಿಸಿಕೊಂಡಿರುವುದರಲ್ಲಿ ಅಚ್ಚರಿ ಇಲ್ಲ ಅನಿಸಿತು. ಆ ಬರಿದಾಗಿರುವಿಕೆ ರೇಣುಕಾ ಅಂತಹವರಿಗೆ ಮಾತ್ರವೇ ಸಾಧ್ಯವಿರುವಂತದ್ದು.

ಆತ್ಮೀಯರಾದ ರೇಣುಕಾ ಮಂಜುನಾಥ್ ಅವರಿಗೆ ಹುಟ್ಟುಹಬ್ಬ ಹಾರ್ದಿಕ ಶುಭಹಾರೈಕೆಗಳು. ನಿಮ್ಮಂತಹ ಆತ್ಮೀಯರಿದ್ದೀರಿ ಎಂಬುದೇ ನಮಗಿರುವ ಧನ್ಯತೆ. ನಮಸ್ಕಾರ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಯಟೆ ಸಂಸ್ಮರಣೆ

Fri Mar 25 , 2022
  ಗಯಟೆ ಜರ್ಮನಿಯ ಕವಿ. ನಾಟಕಕಾರ, ವಿಮರ್ಶಕ, ಕಾದಂಬರಿಕಾರ, ವಿಜ್ಞಾನಿ, ಚಿಂತಕ, ಆಡಳಿತಗಾರ, ವಿವಿಧ ಪ್ರಕಾರಗಳಲ್ಲಿ ವಿಪುಲ ಸಾಹಿತ್ಯ ರಾಶಿಯನ್ನೇ ಸೃಷ್ಟಿಸಿದ ಮಹಾನ್ ಸಾಹಿತಿ. ಗಯಟೆ 1749ರ ಆಗಸ್ಟ್ 28ರಂದು ಜರ್ಮನಿಯ ಫ್ರಾಂಕ್ಫರ್ಟ್ ಆನ್-ದಿ-ಮೆಯ್ನ್ ಎಂಬಲ್ಲಿ ಜನಿಸಿದ. ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಇವನ ತಂದೆ ಜೋವಾನ್ ಕ್ಯಾಸ್ಪರ್ ಗಯಟೆ ಸುಸಂಸ್ಕೃತ ವ್ಯಕ್ತಿ. ತಾಯಿ ಕ್ಯಾಥರೀನ್ ಎಲಿಜಬೆತ್ ಟೆಕ್ಸ್ ಟರ್ ಫ್ರಾಂಕ್ ಫರ್ಟಿನ ಪೌರಾಧ್ಯಕ್ಷನ ಮಗಳು. ಸುಖಸಂತೋಷಗಳಿಂದ ತುಂಬಿದ ಶ್ರೀಮಂತ ವಾತಾವರಣದಲ್ಲಿ […]

Advertisement

Wordpress Social Share Plugin powered by Ultimatelysocial