ಶಾಸಕ ಎಸ್.ಆರ್.ಶ್ರೀನಿವಾಸ್ ಕಾಳೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದರು

ಬ್ಯಾಗ್ ತುಂಬಾ ಕಲ್ಲುಗಳನ್ನು ತುಂಬಿಕೊಂಡು ಮನೆ ಮನೆಗೆ ಕಲ್ಲು ಹೊಡೆಯುವ ಪ್ರವೃತ್ತಿಯ ಸಂಸದ ಬಸವರಾಜು ಅವರು ನಾನು ಮಾಡುವ ಅಭಿವೃದ್ದಿ ಕೆಲಸಗಳಿಗೆ ಅಡ್ಡಿ ಪಡಿಸುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ವ್ಯಂಗ್ಯವಾಡಿದರು.

ತಾಲ್ಲೂಕಿನ ಕಾಳೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಗುಬ್ಬಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳಿಗೆ ಮಾರಕ ಎನಿಸಿರುವುದಕ್ಕೆ ಪಟ್ಟಣ ಪಂಚಾಯಿತಿ ಅಭಿವೃದ್ದಿ ಕೆಲಸಕ್ಕೆ ಮೀಸಲಿದ್ದ 10 ಕೋಟಿ ರೂಗಳನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಪತ್ರ ಬರೆದಿರುವುದೇ ದೊಡ್ಡ ಸಾಕ್ಷಿಯಾಗಿದೆ. ಮತದಾರರು ಒಳ್ಳೆವರಿಗೂ ಹಾಗೂ ಕೆಟ್ಟವರಿಗೂ ಇಬ್ಬರಿಗೂ ಮತ ನೀಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇದ್ದದ್ದು ಕಳೆದುಕೊಂಡು ಊರಬಸವ ಆದೆ ಎನ್ನುವ ಗಾದೆಯಂತೆ ನನ್ನ ಪರಿಸ್ಥಿತಿ ಇದೆ. ಅಚ್ಚುಕಟ್ಟಾಗಿ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಂಡು ಎಲ್ಲಾ ಶಾಸಕರ ಅಭಿವೃದ್ದಿ ಕೆಲಸಗಳಿಗೆ ಅಸ್ತು ನೀಡಬೇಕಾದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಸರ್ಕಾರ ಬಿದ್ದಿದ್ದು ಸಾಕಷ್ಟು ಪೆಟ್ಟು ನೀಡಿತು. ಗುಬ್ಬಿ ಕ್ಷೇತ್ರಕ್ಕೆ ಮಂಜೂರು ಹಂತದಲ್ಲಿದ್ದ 175 ಕೋಟಿ ಅಭಿವೃದ್ದಿ ಕೆಲಸಗಳು ಹಾಗೂ ಹೇಮಾವತಿಗೆ ಸಂಬಂಧಿಸಿದ 70 ಕೋಟಿ ರೂಗಳನ್ನು ಬಿಜೆಪಿ ಸರ್ಕಾರ ವಾಪಸ್ ಪಡೆಯಿತು. ಹಂತ ಹಂತವಾಗಿ ಮರಳಿ ನೀಡುವ ಭರವಸೆಯಂತೆ ಕೇವಲ 5 ಕೋಟಿ ರೂಗಳು ಮಾತ್ರ ಮೊದಲ ಹಂತದಲ್ಲಿ ಬಂದಿದೆ. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾತಿ ಪಡೆದ ಕೆಲಸಗಳು ಅನುಷ್ಠಾನಕ್ಕೆ ಬಂದಿದ್ದಲ್ಲಿ ಬಾಕಿ ಕೆಲಸವೇ ಇರುತ್ತಿರಲಿಲ್ಲ ಎಂದರು.

ಹೈನುಗಾರಿಕೆ ರೈತನ ಬದುಕಿಗೆ ನಿಜವಾದ ಅರ್ಥ ಕಲ್ಪಿಸಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕೆಲಸ ಹಾಲು ಉತ್ಪಾದನೆ ಮಾಡಿದೆ. ತಾಲ್ಲೂಕಿನಲ್ಲಿನ ಎಲ್ಲಾ ಡೈರಿಗಳು ಲಾಭದಾಯಕವಾಗಿರುವ ವಿಚಾರ ಮೆಚ್ಚುವಂತಹದು. ಗ್ರಾಮಗಳಲ್ಲಿ ಡೈರಿ ಸೇರಿದಂತೆ ಶಾಲೆ, ಅಂಗನವಾಡಿ ಕಟ್ಟಡ ಕಟ್ಟಿಸಿಕೊಂಡು ರಸ್ತೆ ಅಭಿವೃದ್ದಿ ಮಾಡಿಕೊಳ್ಳಬೇಕು. ಆದರೆ ಕೇವಲ ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡುವುದು ಸರಿಯಲ್ಲ ಎಂದು ಸಲಹೆ ನೀಡಿದ ಅವರು ಕಾಳೇನಹಳ್ಳಿ ಗ್ರಾಮದ ಎಲ್ಲಾ ರಸ್ತೆ ಸಿಸಿ ರಸ್ತೆಯಾಗಿದೆ. ಹೇಮಾವತಿ ನೀರು ಸರಾಗವಾಗಿ ಹರಿಯಲು ನಾಲೆಯಲ್ಲಿನ ಹೂಳು ತೆಗೆಯುವ ಕೆಲಸವನ್ನು 40 ಲಕ್ಷ ರೂಗಳನ್ನು ವಿನಿಯೋಗಿಸಲಾಗಿತ್ತು. ಓವರ್ಹೆಡ್ ಟ್ಯಾಂಕ್ ದುರಸ್ಥಿ ಮಾಡಿಸಿ ನೀರು ಒದಗಿಸಲಾಗಿದೆ. ಜತೆಗೆ ಬಿಕ್ಕೇಗುಡ್ಡ ಯೋಜನೆಗೆ ಕಾಯಕಲ್ಪ ನೀಡಲು ಸಭೆ ನಡೆಸಲಾಗಿದೆ. ರೈತರು ಭೂಮಿ ನೀಡುವ ಕೆಲಸ ಮಾಡಬೇಕಿದೆ. ಅವರ ಮನವೊಲಿಸುವ ಕೆಲಸವನ್ನೂ ಸಹ ಮಾಡಲಾಗಿದೆ ಎಂದರು.

ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಚಂದ್ರಶೇಖರ್ ಮಾತನಾಡಿ ತಾಲ್ಲೂಕಿನ 125 ಹಾಲು ಉತ್ಪಾದಕರ ಸಂಘಗಳು ಲಾಭದಾಯಕವಾಗಿ ನಡೆದಿವೆ. ಈ ಜತೆಗೆ 28 ಉಪಕೇಂದ್ರಗಳು ಕೂಡಾ ಕೆಲಸ ಮಾಡುತ್ತಿವೆ. 7.15 ಲಕ್ಷ ರೂಗಳ ಲಾಭ ಪಡೆದ ಕಾಳೇನಹಳ್ಳಿ ಡೈರಿ ಸ್ವಂತ ಕಟ್ಟಡ ಹಾಗೂ ಗೋಡಾನ್ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹ. ಒಕ್ಕೂಟದಿಂದ 9 ಲಕ್ಷ ರೂಗಳ ನೆರವು ಸಿಕ್ಕಿದೆ. ಕಟ್ಟಡ ನಿರ್ಮಾಣವನ್ನು ಗುತ್ತಿಗೆ ನೀಡದೇ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಮುಂದೆ ನಿಂತು ಕಟ್ಟಡವನ್ನು ಕಟ್ಟಿಸಿಕೊಳ್ಳಬೇಕಿದೆ. ಮನೆ ಬಾಗಿಲಿಗೆ ಹಣ ಒದಗಿಸುವ ಹೈನುಗಾರಿಕೆಗೆ ಮೊದಲ ಆದ್ಯತೆ ನೀಡುವುದು ಅತ್ಯಗತ್ಯ ಎಂದರು.
ಕೋವಿಡ್ನಿಂದಾಗಿ ಹಾಲು ಮಾರುಕಟ್ಟೆ ಇಳಿಮುಖದತ್ತ ಸಾಗಿದೆ. ನಿತ್ಯ ಲಕ್ಷಾಂತರ ಲೀಟರ್ ಉಳಿಯುತ್ತಿದೆ. ತುಮಕೂರು ಡೈರಿಗೆ ಸಹಕಾರಿಯಾಗಿದ್ದ ಮುಂಬೈ ಮಾರುಕಟ್ಟೆ ಕೈಕೊಟ್ಟ ಹಿನ್ನಲೆ 2.5 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿಲ್ಲ. ಈ ಜತೆಗೆ ಶಾಲೆ ಅಂಗನವಾಡಿ ಮುಚ್ಚಿರುವ ಕಾರಣ ಹಾಲು ಹಾಗೆಯೇ ಉಳಿಯುತ್ತಿದೆ. ಎರಡು ವರ್ಷಗಳ ನಂತರವೇ ಮಾರುಕಟ್ಟೆ ಸುಧಾರಿಸಲಿದೆ. ನಂತರದಲ್ಲಿ ಮುಂಬೈ ಮಾರುಕಟ್ಟೆಗೆ ನಿತ್ಯ 5 ಲಕ್ಷ ಲೀಟರ್ ಹಾಲು ಕಳುಹಿಸುವ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದ ಅವರು ತುಮಕೂರು ಒಕ್ಕೂಟದಿಂದ ರೈತರಿಗೆ ನೆರವು ನೀಡುವ ಕೆಲಸ ಕೂಡಾ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ, ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಎನ್.ವೆಂಕಟೇಗೌಡ, ಮುಖಂಡರಾದ ಕೆ.ಜಿ.ಶಿವಣ್ಣ, ತಿಮ್ಮೇಗೌಡ, ಪ್ರತಾಪ್, ಡಿ.ಮಂಜುನಾಥ್, ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಚಂದ್ರಶೇಖರ್.ಬಿ.ಕೇದನೂರಿ, ವಿಸ್ತರಣಾಧಿಕಾರಿ ಎಂ.ಬಿ.ಸಿದ್ದಲಿಂಗಸ್ವಾಮಿ, ಕಾರ್ಯನಿರ್ವಾಹಕ ಕೆ.ತಿಮ್ಮೇಗೌಡ ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

Next Post

ಪಂಜರದ‌ಗಿಣಿ ರಾಗಿಣಿ ಜೈಲಿನಲ್ಲಿ ಪ್ರಚಾರ...!-

Fri Oct 30 , 2020
ಕಳೆದ ಒಂದುವರೆ ತಿಂಗಳಿನಿಂದ ಜೈಲು ಪಾಲಾಗಿರುವ ರಾಗಿಣಿಗೆ ಈಗ ಜೈಲು ಬಹಳ ಪ್ರೀತಿಯಾಗಿ ಬಿಟ್ಟಿದೆಯಂತೆ ಜೈಲಿನಲ್ಲಿ ಎಲ್ಲಾ ಖೈದಿಗಳ ಜೊತೆ ಮಾತಾಡ್ತಾ ಸಮಯ ಕಳಿತಿರುವ ರಾಗಿಣಿ ಬೆಳಗ್ಗೆ ಎದ್ದಕೂಡಲೇ ರಾಜಕಾರಣಿಯಂತೆ ಹೊರಗಡೆ ಬಂದು ಕೈಬೀಸಿ ಭಾಷಣ ಮಾಡೋಕೆ ನಿಂತು ಬಿಡ್ತಾರಂತೆ ಇತರ ಖೈದಿಗಳ ಜೊತೆಗೆ ಖುಷಿಯಾಗಿ ಮಾತಾನಾಡಿ ಸಮಯ ಕಳಿಯುತ್ತಿದ್ಧಾರೆ, ಬೇರೆ ಖೈದಿಗಳು ಕೂಡ ರಾಗಿಣಿಯವರೊಂದಿಗೆ ಅವರವರ ವಿಚಾರ ಗಳ ಬಗ್ಗೆ ಹೇಳಿಕೊಳ್ತಾರಂತೆ ಇನ್ನೂ ಜೈಲಿನಾಧಿಕಾರಿಗಳು ಬ್ಯಾರಕ್ ಒಳಗಡೆ ಇರುವಂತೆ […]

Advertisement

Wordpress Social Share Plugin powered by Ultimatelysocial