ಎಸ್. ರಾಮಸ್ವಾಮಿ

 
ಪ್ರಖ್ಯಾತ ವಿದ್ವಾಂಸ, ಪ್ರಾಧ್ಯಾಪಕ, ಸಂಶೋಧಕ, ಪತ್ರಿಕಾ ಸಂಪಾದಕ, ಬರಹಗಾರ, ವಿಶ್ವದೆಲ್ಲೆಡೆ ಅಲಮಾರಿ ಹೀಗೆ ವಿಶಿಷ್ಟ ವೈವಿಧ್ಯಮಯ ಕೀರ್ತಿಗಳಿಂದ ಪ್ರಖ್ಯಾತರಾದವರು ಡಾ. ಎಸ್. ರಾಮಸ್ವಾಮಿ. ಅಲೆಮಾರಿ ರಾಮಸ್ವಾಮಿ ಎಂದು ಪ್ರಖ್ಯಾತರಾದ ಇವರು ಸುತ್ತದ ದೇಶವಿಲ್ಲ, ಪ್ರಬಂಧ ಮಂಡಿಸಿದ ಸಮ್ಮೇಳನಗಳಿಲ್ಲ, ಸಂದರ್ಶಕ ಪ್ರಾಧ್ಯಾಪಕರಾಗಿ ಪಾಠ ಹೇಳದ ವಿಶ್ವವಿದ್ಯಾಲಯಗಳಿಲ್ಲ.
ರಾಮಸ್ವಾಮಿಯವರು 1932ರ ಮಾರ್ಚ್‌ 27ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಸ್.ಹನುಮಂತರಾವ್. ತಾಯಿ ನಾಗಮ್ಮ.
ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಓದಿ, ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಡನೆ ಪ್ರಪ್ರಥಮ ಶ್ರೇಣಿಯಲ್ಲಿ ಎಂ. ಎ ಪದವಿ ಪಡೆದ ರಾಮಸ್ವಾಮಿಯವರು ಹಲವು ಬಾರಿ ಫುಲ್ ಬ್ರೈಟ್ ಸ್ಕಾಲರ್ ಶಿಪ್ ಪಡೆದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಟೆಕ್ಸಾಸ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಇವೆಲ್ಲವುಗಳ ಜೊತೆಯಲ್ಲಿ ಗುರುಕುಲ ಪದ್ಧತಿಯಲ್ಲಿ ಸಂಸ್ಕೃತವನ್ನೂ ಅಭ್ಯಾಸ ಮಾಡಿದರು.
ಮೂವತ್ತೆಂಟು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿ ನಡೆಸಿದ ರಾಮಸ್ವಾಮಿಯವರು ಸಂದರ್ಶಕ ಪ್ರಾಧ್ಯಾಪಕರಾಗಿ ಟೆಕ್ಸಾಸ್‌ನ ಆಸ್ಟಿನ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ (ಲಾಸ್‌ಏಂಜಲ್ಸ್), ಲಂಡನ್ನಿನ ಕಾಮನ್‌ವೆಲ್ತ್‌ ಇನ್‌ಸ್ಟಿಟ್ಯೂಟ್ ಮತ್ತು ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್, ಕೆನಡದ ಮಾಂಟ್ರಿಯಾಲ್‌ನಲ್ಲಿರುವ ಮೆಕ್‌ಗಿಲ್ ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ ಸಹಾ ಬೋಧನೆ ಮಾಡಿದರು. ರಾಮಸ್ವಾಮಿ ಅವರ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಕೆ. ಎಸ್. ನಿಸಾರ್ ಅಹಮದ್, ಪಿ.ಲಂಕೇಶ್, ಎಂ. ಆರ್. ದೊರೆಸ್ವಾಮಿ ಮುಂತಾದ ಅನೇಕ ಮಹನೀಯರಿದ್ದಾರೆ.
ಅಮೆರಿಕನ್ ಸಾಹಿತ್ಯ, ಕಾಮನ್‌ವೆಲ್ತ್‌ ಸಾಹಿತ್ಯ ಮತ್ತು ಭಾರತೀಯ ಶಾಸ್ತ್ರದ ತುಲನಾತ್ಮಕ ವಿಮರ್ಶೆ ಮುಂತಾದವುಗಳ ಬಗ್ಗೆ ರಾಮಸ್ವಾಮಿಯವರು ಬರೆದ ಲೇಖನಗಳು ಇಂಡಿಯನ್ ಜರ್ನಲ್ ಆಫ್‌ ಇಂಗ್ಲಿಷ್ ಸ್ಟಡೀಸ್, ಇಂಡಿಯನ್ ಜರ್ನಲ್ ಆಫ್ ಅಮೆರಿಕನ್ ಸ್ಟಡೀಸ್, ಇಂಡಿಯನ್ ಜರ್ನಲರ್ ಆಫ್ ಕೆನಡಿಯನ್ ಸ್ಟಡೀಸ್, ದಿ ಜರ್ನಲ್ ಆಫ್ ಕಾಮನ್‌ವೆಲ್ತ್‌ ಲಿಟರೇಚರ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆ ವಿದ್ವತ್ಪೂರ್ಣ ಸಂಶೋಧನಾತ್ಮಕ ಬರವಣಿಗೆಗಳೇ ಸುಮಾರು 250ರ ಸಮೀಪದ್ದು.
ರಾಮಸ್ವಾಮಿಯವರು ಬೋಧನೆಯಷ್ಟೇ ಮುಖ್ಯವಾಗಿ ತಮ್ಮನ್ನು ತೊಡಗಿಸಿಕೊಂಡ ಮತ್ತೊಂದು ಜವಾಬ್ದಾರಿಯುತ ಕೆಲಸವೆಂದರೆ ವಿವಿಧ ಪತ್ರಿಕೆಗಳ ಸಂಪಾದಕತ್ವ. ಮದರಾಸು ಮತ್ತು ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಜರ್ನಲ್ ಆಫ್ ವೇದಾಂತ’ ಸಂಪಾದಕರಾಗಿ, ರಾಜ್ಯ ಸಾಹಿತ್ಯ ಅಕಾಡಮಿಯ ‘ಅನಿಕೇತನ’ ಇಂಗ್ಲಿಷ್ ಆವೃತ್ತಿಯ ಸಂಪಾದಕರಾಗಿ, ಅಮೆರಿಕ ನಾಟಕ ಮತ್ತು ರಂಗಭೂಮಿಗಳ ಬಗ್ಗೆ ಪ್ರಕಟಗೊಳ್ಳುತ್ತಿದ್ದ ವಿಶೇಷ ಸಂಚಿಕೆಯಾದ ಇಂಡಿಯನ್ ಜರ್ನಲ್ ಆಫ್ ಅಮೆರಿಕನ್ ಸ್ಟಡೀಸ್‌ ಗೌರವ ಸಂಪಾದಕರಾಗಿ, ಕೋಲ್ಕತ್ತಾದ ಥಿಯೇಟರ್‌ ಇಂಟರ್ ನ್ಯಾಷನಲ್ ಪತ್ರಿಕೆಯ ಬರಹಗಾರ ಸಂಪಾದಕರಾಗಿ, ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಆಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್‌ನ ‘ಸಂಸ್ಕೃತಿ’ ಪತ್ರಿಕೆಯ ಸಂಪಾದಕರಾಗಿ ಹೀಗೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳ ಸಂಪಾದಕತ್ವ ವಹಿಸಿದ ಹಿರಿಮೆ ರಾಮಸ್ವಾಮಿಯವರದ್ದು.
ರಾಮಸ್ವಾಮಿಯವರು ಪ್ರಖ್ಯಾತ ಪತ್ರಿಕೆಗಳಿಗಾಗಿ ಮಾಡಿರುವ ಗ್ರಂಥಗಳ ವಿಮರ್ಶೆಗಳು; ಬೆಂಗಳೂರು, ಊಟಿ, ಕೊಲ್ಹಾಪುರ, ನಾಗಪುರ, ಭುವನೇಶ್ವರ, ಹೈದರಾಬಾದ್, ದೆಹಲಿ, ಮದರಾಸು, ಧಾರವಾಡ, ದೆಹಲಿ, ತಿರುಚಿರಾಪಲ್ಲಿ, ರಾಜಸ್ಥಾನ್, ಮುಂತಾದೆಡೆಗಳಲ್ಲಿ ನಡೆದ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಶೈಕ್ಷಣಿಕ ವಿವಿಧ ವಿಷಯಗಳ ಮೇಲೆ ಮಂಡಿಸಿದ ಪ್ರಬಂಧಗಳು; ಇಂಗ್ಲಿಷ್‌ನಲ್ಲಿ ರಚಿಸಿರುವ ಕೃತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ಎಸ್ಸೇಸ್ ಆನ್ ಕಾಮನ್‌ವೆಲ್ತ್ ಲಿಟರೇಚರ್‌, ಕಾಮೆಂಟರಿಸ್ ಆನ್ ಕಾಮನ್ ವೆಲ್ತ್ ಪೊಯಿಟ್ರಿ ಅಂಡ್ ಡ್ರಾಮ, ಕಾಮೆಂಟರೀಸ್ ಆನ್ ಕೆನಡಿಯನ್ ಲಿಟರೇಚರ್‌, ಇಂಡಿಯನ್‌ ಫಿಲಾಸಫಿಕಲ್ ಐಡಿಯಾಸ್ ಅಂಡ್ ವೆಸ್ಟರ್ನ್‌ ಲಿಟರೇಚರ್, ಎಸ್ಸೆಸ್ ಆನ್ ಅಮೆರಿಕನ್ ಲಿಟರೇಚರ್ ಮುಂತಾದವುಗಳ ಜೊತೆಗೆ ಕನ್ನಡದಲ್ಲಿ ‘ಕೆಲವು ವಿದೇಶಿ ನಾಟಕಕಾರರು’, ‘ಇಂಗ್ಲೆಂಡ್‌ನಲ್ಲಿ ಅಲೆಮಾರಿ’, ‘ಸಾಹಿತ್ಯಲೋಕದ ನೆನಪುಗಳು’, ‘ಫ್ರಾನ್ಸ್‌ನಲ್ಲಿ ಅಲೆಮಾರಿ’, ‘ಇಟಲಿಯಲ್ಲಿ ಅಲೆಮಾರಿ’, ‘ಭಗವಾನ್ ರಮಣಮಹರ್ಷಿ’, ‘ಫ್ರೆಂಚ್ ಸಾಹಿತ್ಯ’, ‘ಜರ್ಮನಿಯಲ್ಲಿ ಅಲೆಮಾರಿ’, ಉತ್ಖನನ ಮುಂತಾದವುಗಳಲ್ಲದೆ ಶಿವರಾಮಕಾರಂತರು, ಭೈರಪ್ಪ, ಎಂ.ಎಸ್.ಕೆ.ಪ್ರಭು, ವೈ.ಎನ್.ಕೆ. ಜಿ.ಪಿ. ರಾಜರತ್ನಂ, ಎಸ್.ಕೆ.ರಾಮಚಂದ್ರರಾವ್, ಎಚ್.ವಿ.ನಾಗರಾಜರಾವ್, ಇವರುಗಳ ಬಗ್ಗೆ ಹಲವಾರು ಪತ್ರಿಕೆಗಳಿಗೆ ಇಂಗ್ಲಿಷ್‌ನಲ್ಲಿ ಲೇಖನಗಳನ್ನು ಬರೆದಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಸಾರ್ಥ’, ‘ತಂತು’ ಕಾದಂಬರಿಗಳನ್ನು ಮತ್ತು’ಭಿತ್ತಿ’ ಆತ್ಮವೃತ್ತಾಂತವನ್ನು ಇಂಗ್ಲಿಷಿಗೆ ತಂದಿದ್ದಾರೆ.
ಅಲೆಮಾರಿ ಪ್ರವೃತ್ತಿಯ ರಾಮಸ್ವಾಮಿಯವರು ನಿವೃತ್ತಿಯ ನಂತರವೂ ಸಂಯುಕ್ತ ಸಂಸ್ಥಾನಗಳು, ಕೆನಡ, ಮೆಕ್ಸಿಕೋ, ಫ್ರಾನ್ಸ್, ಜರ್ಮನಿ, ಹಾಲೆಂಡ್, ಸ್ವಿಜರ್‌ಲ್ಯಾಂಡ್, ಇಟಲಿ, ಬೆಲ್ಜಿಯಂ, ಡೆನ್ಮಾರ್ಕ್, ಸ್ವೀಡನ್, ಜಪಾನ್, ಹಾಂಗ್‌ಕಾಂಗ್, ಥಾಯಲ್ಯಾಂಡ್ ಮಲೇಷಿಯಾ, ಸಿಂಗಪೂರ್‌ಹೀಗೆ ಒಂದಿಲ್ಲೊಂದು ದೇಶದ ಸಮ್ಮೇಳನಗಳಲ್ಲಿ ಭಾಗಿಯಾಗಿ ಗಮನ ಸೆಳೆದ ಬೋಧಕರು, ಸಂಶೋಧಕರು, ಬರಹಗಾರರು ಮತ್ತು ಪ್ರಬಂಧಕಾರರು.
ಪ್ರೊ.ಎಸ್. ರಾಮಸ್ವಾಮಿ ಅವರು ಜನವರಿ 2019ರಲ್ಲಿ ಈ ಲೋಕವನ್ನಗಲಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೀಣೆ ರಾಜಾರಾವ್

Mon Mar 28 , 2022
  ವೀಣೆ ರಾಜಾರಾವ್ ಕರ್ನಾಟಕ ಸಂಗೀತದ ಶ್ರೇಷ್ಠ ಕಲಾ ಪರಂಪರೆಗೆ ಸೇರಿದವರು. ರಾಜಾರಾವ್ ಅವರು 1909ರ ಮಾರ್ಚ್ 26ರಂದು ಜನಿಸಿದರು. ರಾಜಾರಾಯರ ತಂದೆ ಮೈಸೂರು ಆಸ್ಥಾನ ವಿದ್ವಾನ್ ಭೈರವಿ ಲಕ್ಷ್ಮೀನಾರಾಯಣಪ್ಪನವರು ಪ್ರಸಿದ್ಧ ವೈಣಿಕ ವೀಣೆ ಶೇಷಣ್ಣನವರ ನೇರ ಶಿಷ್ಯರಾಗಿದ್ದರು. ತಮ್ಮ ಪೂಜ್ಯ ತಂದೆಯವರಲ್ಲಿ ಶಿಷ್ಯವೃತ್ತಿ ಮಾಡಿ ಪಳಗಿದ್ದ ರಾಜಾರಾಯರು, ತಾರುಣ್ಯದಲ್ಲೇ ತಮ್ಮ ನೆಚ್ಚಿನ ಗುರುಗಳಾದ ಕರ್ನಾಟಕ ಸಂಗೀತದ ಪ್ರಸಿದ್ಧ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಜೊತೆಗೆ ವಿನಿಕೆ ಮಾಡುವಷ್ಟು ಸಾಧನೆ ಮಾಡಿದ್ದರು. […]

Advertisement

Wordpress Social Share Plugin powered by Ultimatelysocial