ಬಹುಭಾಷಾ ಪ್ರಾಜ್ಞರಾಗಿದ್ದ ರುದ್ರಪಟ್ನ ಶಾಮಾಶಾಸ್ತ್ರಿ.

ಕೌಟಿಲ್ಯನ ಅರ್ಥಶಾಸ್ತ್ರವನ್ನೂ ಒಳಗೊಂಡಂತೆ ಮಹತ್ವದ ಕೃತಿಗಳನ್ನು ಬೆಳಕಿಗೆ ತಂದ ಮಹಾನ್ ವಿದ್ವಾಂಸ ಮತ್ತು ಹಲವು ಮಹತ್ವದ ಪ್ರತಿಭೆಗಳ ಸಂಗಮರಾಗಿದ್ದ ಆರ್. ಶಾಮಾಶಾಸ್ತ್ರಿಗಳು 1868ರ ಜನವರಿ 12ರಂದು ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ ಜನಿಸಿದರು. ಶಾಸ್ತ್ರಿಗಳಿಗೆ ಕನ್ನಡ, ಇಂಗ್ಲಿಷ್‌, ಸಂಸ್ಕೃತ ಭಾಷೆಗಳ ಜೊತೆಗೆ ಜ್ಯೋತಿಷ ಶಾಸ್ತ್ರದಲ್ಲೂ ಅಪಾರ ಪಾಂಡಿತ್ಯವಿತ್ತು.
ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರೂ ಸ್ವಪ್ರಯತ್ನದಿಂದ ಮುಂದೆ ಬಂದ ಶಾಮಾಶಾಸ್ತ್ರಿಗಳು ಮೈಸೂರು ಸಂಸ್ಕೃತ ಕಾಲೇಜಿನಲ್ಲಿ ವಿದ್ವತ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಂದಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರು ಇವರ ಪಾಂಡಿತ್ಯಕ್ಕೆ ಮೆಚ್ಚಿ ತಮ್ಮ ಮನೆಯಲ್ಲಿಯೇ ಊಟ, ವಸತಿಗೆ ವ್ಯವಸ್ಥೆ ಮಾಡಿ ಇಂಗ್ಲಿಷ್‌ ಕಲಿಯಲು ಪ್ರೋತ್ಸಾಹಿಸಿದರು. ಇಂಗ್ಲಿಷ್‌, ಸಂಸ್ಕೃತದ ಜೊತೆಗೆ ಭೌತಶಾಸ್ತ್ರವನ್ನೂ ಕಲಿತು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಓದಿ ಮದರಾಸು ವಿಶ್ವವಿದ್ಯಾಲಯದ ಮೂಲಕ ಬಿ..ಎ. ಪದವಿ ಗಳಿಸಿದರು. 1918ರಲ್ಲಿ ಮೈಸೂರಿನ ಪ್ರಾಚ್ಯ ಪುಸ್ತಕ ಭಂಡಾರದಲ್ಲಿ ಶಾಮ ಶಾಸ್ತ್ರಿಗಳಿಗೆ ಉದ್ಯೋಗ ದೊರಕಿತು.
ಶಾಮಾಶಾಸ್ತ್ರಿಗಳು ಹಸ್ತಪ್ರತಿಗಳ ಗ್ರಂಥ ಸೂಚಿಯನ್ನು ಸಿದ್ಧಗೊಳಿಸುತ್ತಿದ್ದಾಗ ದೊರೆತ ಕೌಟಿಲ್ಯನ ಅರ್ಥಶಾಸ್ತ್ರವನ್ನು ಪರಿಷ್ಕರಿಸಿ ಸಂಸ್ಕೃತ ಹಾಗೂ ಇಂಗ್ಲಿಷ್‌ನಲ್ಲಿ ಪ್ರಕಟಿಸಿದರು. ಅವರು 1912 ರಿಂದ 1918 ಅವಧಿಯಲ್ಲಿ ಬೆಂಗಳೂರಿನ ಸಂಸ್ಕೃತ ಮಹಾ ಪಾಠಶಾಲೆಯ ಅಧ್ಯಕ್ಷರ ಜವಾಬ್ದಾರಿಯನ್ನು ಹೊತ್ತಿದ್ದರು. 1918ರಲ್ಲಿ ಮೈಸೂರಿನ ಪ್ರಾಚ್ಯ ಪುಸ್ತಕ ಭಂಡಾರದ ಕ್ಯೂರೇಟರಾಗಿದ್ದು, 1922ರಲ್ಲಿ ಪ್ರಾಚ್ಯ ಸಂಶೋಧನ ಇಲಾಖೆಯ ನಿರ್ದೇಶಕರಾದರು. ಕ್ಯೂರೇಟರ್ ಆಗಿದ್ದ ಸಂದರ್ಭದಲ್ಲಿ ಹಲವಾರು ಸಂಸ್ಕೃತ ಗ್ರಂಥಗಳನ್ನು ಸಂಶೋಧಿಸಿ ಪ್ರಕಟಿಸಿದರು. ಬ್ರಹ್ಮಸೂತ್ರ ಭಾಷ್ಯ, ಬೋಧಾಯನ ಗೃಹಸೂತ್ರ, ಸ್ಮೃತಿಚಂದ್ರಿಕಾ, ತೈತ್ತರೀಯ ಬ್ರಾಹ್ಮಣ, ತೈತ್ತರೀಯ ಬ್ರಾಹ್ಮಣ (ಅಷ್ಟಕ) ಭಾಗ – ೨, ಭಟ್ಟ ಭಾಸ್ಕರ ಮತ್ತು ಸಾಯಣ ಭಾಷ್ಯಗಳೊಡನೆ ಅಲಂಕಾರ ಭಾಗ ಮಣಿಹಾರ ಭಾಗ – ೨, ಬ್ರಹ್ಮಸೂತ್ರಭಾಷ್ಯ (ಆನಂದತೀರ್ಥೀಯ) ತಾತ್ಪರ್ಯಚಂದ್ರಿಕೆಯೊಡನೆ ಭಾಗ – ೪, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಅರ್ಥಶಾಸ್ತ್ರದ ಪದಸೂಚಿ, ಸರಸ್ವತಿ ವಿಲಾಸ ಮುಂತಾದ ಮಹತ್ವದ ಗ್ರಂಥಗಳನ್ನು ಪ್ರಕಟಿಸಿದರು.
ಶಾಮಾಶಾಸ್ತ್ರಿಗಳು ಸಂಸ್ಕೃತ ಗ್ರಂಥಗಳೇ ಅಲ್ಲದೆ ಕನ್ನಡದಲ್ಲೂ ಹಲವಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು. ಲಿಂಗಣ್ಣನ ಕೆಳದಿಯ ನೃಪವಿಜಯ, ಸೋಮರಾಜನ ಉದ್ಭಟ ಕಾವ್ಯ, ರುದ್ರಭಟ್ಟನ ಜಗನ್ನಾಥ ವಿಜಯ, ಕುಮಾರವ್ಯಾಸ ಮಹಾಭಾರತದ ವಿರಾಟಪರ್ವ ಮತ್ತು ಉದ್ಯೋಗಪರ್ವ, ಸೋಮನಾಥನ ಅಕ್ರೂರ ಚರಿತೆ, ನಯಸೇನನ ಧರ್ಮಾಮೃತ ಭಾಗ-೧, ಕಂಠೀರವ ನರಸರಾಜ ವಿಜಯ, ನಯಸೇನನ ಧರ್ಮಾಮೃತ ಭಾಗ-೨ ಮೊದಲಾದ ಹತ್ತಾರು ಕೃತಿಗಳನ್ನು ಬೆಳಕಿಗೆ ತಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರ ಮೇಲೆ ತಾಲೀಬಾನ್‌ ನಿರ್ಬಂಧ.

Fri Jan 13 , 2023
ಅಪ್ಘಾನಿಸ್ತಾನದಲ್ಲಿ ಎನ್‌ ಜಿ ಒ ಗಳಲ್ಲಿ ಕೆಲಸ ಮಾಡದಂತೆ ಮಹಿಳೆಯರ ಮೇಲೆ ನಿರ್ಬಂಧ ವಿಧಿಸಿರುವ ತಾಲೀಬಾನ್‌ ನಿರ್ಣಯವನ್ನು ಇಸ್ಲಾಮಿಕ್‌ ರಾಷ್ಟ್ರಗಳ ಒಕ್ಕೂಟ ಒಐಸಿ ಖಂಡಿಸಿದ್ದು ಇದು ಇಸ್ಲಾಂ ಕಾನೂನುಗಳ ಉದ್ದೇಶದ ಉಲ್ಲಂಘನೆ ಎಂದು ಹೇಳಿದೆ. ಮಹಿಳೆಯರ ಮೇಲಿನ ನಿರ್ಬಂಧದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒಐಸಿ ಕರೆ ನೀಡಿದೆ. ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಮತ್ತು ಹುಡುಗಿಯರಿಗೆ ಮಾಧ್ಯಮಿಕ ಶಿಕ್ಷಣವನ್ನು ನಿಷೇಧಿಸುವುದರೊಂದಿಗೆ ಅಫ್ಘಾನಿಸ್ತಾನದ ತಾಲಿಬಾನ್‌ ಚಾಲಿತ ಆಡಳಿತವು ಕಳೆದ ವರ್ಷ ಎಲ್ಲಾ ಸ್ಥಳೀಯ ಮತ್ತು […]

Advertisement

Wordpress Social Share Plugin powered by Ultimatelysocial