ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾವೆಲ್ಲ ಹೆಸರಿಡುವಂತೆ ಒತ್ತಾಯವಿದೆ?

 

ಶಿವಮೊಗ್ಗ, ಏಪ್ರಿಲ್ 25: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಮಾನ ನಿಲ್ದಾಣ ಕಾಮಗಾರಿಯ ಪರಿಶೀಲನೆ ನಡೆಸಿದರು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು

ಈ ಮಧ್ಯೆ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡಲು ಕ್ಯಾಬಿನೆಟ್‌ನಲ್ಲಿ ನಿರ್ಧಾರ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೂ ಶಿಫಾರಸು ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಮೂಲಕ ತಣ್ಣಗಾಗಿದ್ದ ‘ಹೆಸರು ಹೋರಾಟ’ಕ್ಕೆ ಮರು ಜೀವ ನೀಡಿದರು.

ಪುನರ್ ಪರಿಶೀಲನೆಗೆ ಯಡಿಯೂರಪ್ಪ ಪತ್ರ

ಈ ನಡುವೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಹೆಸರಿಡುವ ಕುರಿತ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವೆಲ್ಲದರ ಮಧ್ಯೆ ಹಲವು ಹೆಸರು ಮುನ್ನಲೆಗೆ ಬಂದಿವೆ. ಇವುಗಳ ಪೈಕಿ ಯಾವುದಾದರೂ ಒಂದು ಹೆಸರು ಇಡುವಂತೆ ಜಿಲ್ಲೆಯಲ್ಲಿ ಒತ್ತಾಯ ಕೇಳಿ ಬಂದಿವೆ.

* ಬಿ.ಎಸ್.ಯಡಿಯೂರಪ್ಪ- ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖ ಕಾರಣ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ. ಅವರು ಆಸಕ್ತಿ ವಹಿಸದೆ ಇದ್ದಿದ್ದರೆ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರಲಿಲ್ಲ ಅನ್ನುವ ಅಭಿಪ್ರಾಯವಿದೆ. ಆದ್ದರಿಂದ ಅವರ ಹಸರಿಡಬೇಕು ಎಂಬ ಒತ್ತಾಯವಿದೆ.

ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಯಡಿಯೂರಪ್ಪ ಅವರ ಹೆಸರು ಸೂಚಿಸಿದ್ದರು. ಆದರೆ ಈಗ ಯಡಿಯೂರಪ್ಪ ಸಿಎಂಗೆ ಪತ್ರ ಬರೆದು ಪುನರ್ ಪರಿಶೀಲನೆಗೆ ಸೂಚಿಸಿದ್ದಾರೆ. ಆದರೆ ಅಭಿಮಾನಿಗಳು ಯಡಿಯೂರಪ್ಪ ಅವರ ಹೆಸರನ್ನೇ ಇಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

* ಕುವೆಂಪು- ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಹಿರಿಮೆ. ರಾಷ್ಟ್ರಕವಿ ಬಿರುದು ಪಡೆದ ಮೊದಲಿಗರು. ಶಿವಮೊಗ್ಗ ಜಿಲ್ಲೆಯವರೇ ಆಗಿರುವುದರಿಂದ ಕುವೆಂಪು ಅವರ ಹೆಸರಿಡಬೇಕು ಎಂಬ ವಾದವಿದೆ.

* ಶಾಂತವೇರಿ ಗೋಪಾಲಗೌಡ- ಸಮಾಜವಾದಿ, ಹಿರಿಯ ರಾಜಕಾರಣಿ, ಇವರ ಗರಡಿಯಲ್ಲಿ ಪಳಗಿದ ಹಲವರು ವಿಧಾನಸೌಧ ಪ್ರವೇಶಿಸಿದ್ದಾರೆ. ದೊಡ್ಡ ಸಂಖ್ಯೆಯ ಶಿಷ್ಯವೃಂದ ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ. ಸರಳತೆ, ಪ್ರೌಢಿಮೆಯ ಕಾರಣದಿಂದ ಈಗಲೂ ಇವರ ಹೆಸರು ಪ್ರಚಲಿತದಲ್ಲಿದೆ. ಶಿವಮೊಗ್ಗ ಜಿಲ್ಲೆಯವರೇ ಆಗಿರುವುದರಿಂದ ಶಾಂತವೇರಿ ಗೋಪಾಲಗೌಡ ಅವರ ಹೆಸರಿಡುವಂತೆ ಒತ್ತಾಯವಿದೆ.

* ಎಸ್. ಬಂಗಾರಪ್ಪ- ಮಾಜಿ ಮುಖ್ಯಮಂತ್ರಿ, ವೈವಿಧ್ಯ ರಾಜಕೀಯಕ್ಕೆ ಹೆಸರಾದವರು. ಸೋಲಿಲ್ಲದ ಸರದಾರ ಎಂಬ ಬಿರುದು ಹೊಂದಿದ್ದಾರೆ. ಹಳ್ಳಿಯಿಂದ ದಿಲ್ಲಿವರೆಗೆ ಶಿವಮೊಗ್ಗ ಜಿಲ್ಲೆಯ ಹೆಸರು ಜನಜನಿತಗೊಳಿಸಿದ ಹಿರಿಮೆ ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಲೂ ಪ್ರಾಬಲ್ಯ ಹೊಂದಿರುವ ಹೆಸರು. ಆದ್ದರಿಂದ ಬಂಗಾರಪ್ಪ ಅವರ ಹೆಸರಿಡಿ ಎಂಬ ಆಗ್ರಹವಿದೆ.

* ಅಕ್ಕಮಹಾದೇವಿ- ಕನ್ನಡದ ಮೊದಲ ಕವಯತ್ರಿ, ವಚನ ಸಾಹಿತ್ಯದ ಪ್ರಮುಖ ಹೆಸರು. ಶರಣೆ ಅಕ್ಕಮಹಾದೇವಿ ಅವರು ಶಿವಮೊಗ್ಗ ಜಿಲ್ಲೆಯವರೆ. ಶಿಕಾರಿಪುರ ತಾಲೂಕು ಉಡುತಡಿ ಅಕ್ಕನ ಹುಟ್ಟೂರು. ಅಕ್ಮಮಹಾದೇವಿ ಅವರ ಹೆಸರನ್ನೇ ಇಡುವಂತೆ ಒತ್ತಾಯವಿದೆ.

* ಕೆಳದಿ ಶಿವಪ್ಪನಾಯಕ- ಕೆಳದಿ ಸಂಸ್ಥಾನದ ಪ್ರಮುಖ ನಾಯಕರಲ್ಲಿ ಒಬ್ಬರು ಶಿವಪ್ಪನಾಯಕ. ತೆರಿಗೆ ಸುಧಾರಣೆ ಕಾರಣಕ್ಕೆ ಇವರ ಹೆಸರು ಜನಜನಿತವಾಗಿದೆ. ಕೆಳದಿ ಶಿವಪ್ಪನಾಯಕ ಅವರ ಹೆಸರನ್ನು ಇಡಬೇಕು ಎಂಬ ಆಗ್ರಹವಿದೆ.

* ಮಲೆನಾಡು ಅಥವಾ ಶಿವಮೊಗ್ಗ- ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡುವುದು ಬೇಡ. ಅದರ ಬದಲು ಶಿವಮೊಗ್ಗ ವಿಮಾನ ನಿಲ್ದಾಣ ಅಥವಾ ಮಲೆನಾಡು ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಒತ್ತಾಯವಿದೆ. ಜಿಲ್ಲೆಗೆ ಬರುವ ಪ್ರವಾಸಿಗರು ಶಿವಮೊಗ್ಗ ವಿಮಾನ ನಿಲ್ದಾಣ ಎಂದೇ ಕರೆಯುತ್ತಾರೆ. ಆದ್ದರಿಂದ ಜಿಲ್ಲೆಯ ಹೆಸರನ್ನೇ ಇಡಬೇಕು ಎಂಬ ಅಭಿಪ್ರಾಯವಿದೆ.

ಸದ್ಯ ಪ್ರಚಲಿತದಲ್ಲಿರುವ ಹೆಸರುಗಳ ಮಧ್ಯೆ ಸ್ವಾತಂತ್ರ್ಯ ಹೋರಾಟಗಾರರು, ಜಿಲ್ಲೆಯ ಪ್ರಮುಖ ರಾಜಕಾರಣಿಗಳು, ಸಾಹಿತಿಗಳು, ಕಲಾವಿದರ ಹೆಸರುಗಳು ನಿಧಾನಕ್ಕೆ ಮುನ್ನಲೆಗೆ ಬರುತ್ತಿವೆ. ಕೇಂದ್ರ ಸರ್ಕಾರ ಯಾವ ಹೆಸರಿಗೆ ಅಂತಿಮ ಮುದ್ರೆ ಒತ್ತಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಪ್ರವೇಶಿಸಲು ತಯಾರಾದ ಸಚಿನ್ ಪುತ್ರಿ ಸಾರಾ!

Tue Apr 26 , 2022
ವಿಶ್ವ ಕಂಡ ಅಪ್ರತಿಮ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಈಗ ವಿಶ್ರಾಂತ ಜೀವನ ಕಳೆಯುತ್ತಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕುಟುಂಬ, ಗೆಳೆಯರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಐಪಿಎಲ್ ಸಮಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಸಹ ಕ್ರಿಕೆಟ್‌ ಆಟಗಾರರಾಗಿದ್ದು, ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಹೆಚ್ಚುವರಿ ಆಟಗಾರರಾಗಿದ್ದಾರೆ. ಬೌಲರ್ ಆಗಿರುವ ಅರ್ಜುನ್‌ಗೆ ಈವರೆಗೆ ಯಾವುದೇ ಐಪಿಎಲ್ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿಲ್ಲ. ಅರ್ಜುನ್ ತೆಂಡೂಲ್ಕರ್ […]

Advertisement

Wordpress Social Share Plugin powered by Ultimatelysocial