ಸಿದ್ಧಲಿಂಗಯ್ಯ

ಸಿದ್ಧಲಿಂಗಯ್ಯನವರು ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತ ಚಿತ್ರಗಳನ್ನು ಕೊಟ್ಟವರು. ಇಂದು ಅವರ ಸಂಸ್ಮರಣೆ ದಿನ.
ಸಿದ್ಧಲಿಂಗಯ್ಯನವರು 1936ರ ಡಿಸೆಂಬರ್ 15ರಂದು ಜನಿಸಿದರು. ನವಜ್ಯೋತಿ ಸ್ಟುಡಿಯೋದಲ್ಲಿ ಲೈಟ್ ಬಾಯ್ ಆಗಿ ಸೇರಿದ ಸಿದ್ಧಲಿಂಗಯ್ಯನವರು ಬೆಳೆದು ಬಂದ ಹಾದಿ ಮಹತ್ವಪೂರ್ಣವಾದುದು. ಮುಂದೆ ಶಂಕರ ಸಿಂಗ್ ಅವರ ಬಳಿ ಸಹಾಯಕ ನಿರ್ದೇಶಕರಾದರು. ಕನ್ನಡವಲ್ಲದೆ ತಮಿಳು, ತೆಲುಗು ಭಾಷೆಗಳನ್ನೂ ಕಲಿತರು. ವಿಠ್ಠಲಾಚಾರ್ಯ ಅವರ ಸಿನಿಮಾದಲ್ಲಿ ನಟರಾಗ ಹೋಗಿದ್ದರು. ಹಾಸ್ಯನಟ ಬಾಲಕೃಷ್ಣ ಅವರ ಪ್ರೋತ್ಸಾಹದಿಂದ ನಿರ್ದೇಶಕರಾಗಿ ಕೆಲಸ ಮಾಡಿದರು. ದ್ವಾರಕೀಶ್ ನಿರ್ಮಾಪಕರಾದಾಗ ಅವರ ಮೊದಲ ಚಿತ್ರ ‘ಮೇಯರ್ ಮುತ್ತಣ್ಣ’ ನಿರ್ದೇಶಿಸಿದರು.
ಸಿದ್ಧಲಿಂಗಯ್ಯನವರ ಚಿತ್ರವಾದ ‘ಬಂಗಾರದ ಮನುಷ್ಯ’ ಕನ್ನಡದಲ್ಲಿ ಇತಿಹಾಸವನ್ನೇ ನಿರ್ಮಿಸಿತು. ಟಿ. ಕೆ.ರಾಮರಾಯರ ಕಾದಂಬರಿ ಆಧಾರಿತವಾದ ಆ ಚಿತ್ರ ಶ್ರೇಷ್ಠ ಚಿತ್ರಕಥಾ ನಿರೂಪಣೆ, ಕಥಾಮೌಲ್ಯ, ಕನ್ನಡದ ಸ್ಥಳೀಯ ಮತ್ತು ಗ್ರಾಮಾಂತರ ಪ್ರದೇಶದ ವಾತಾವರಣ, ಶ್ರೇಷ್ಠ ಹಾಡುಗಳು ಮತ್ತು ಕಲಾವಿದರ ಪರಿಶ್ರಮದಿಂದ ಒಂದು ಮರೆಯಲಾಗದ ಚಿತ್ರವಾಗಿ ಮೂಡಿಬಂತು. ಇಂತಹ ಚಿತ್ರವನ್ನು ಕನ್ನಡದ ಪ್ರೇಕ್ಷಕ ಎರಡು ವರ್ಷ ಸತತವಾಗಿ ಚಿತ್ರಮಂದಿರದಲ್ಲಿರಿಸಿಕೊಂಡಿದ್ದ ಮಾತ್ರವಲ್ಲ, ಅದು ಪ್ರತೀ ಬಾರಿ ಬಿಡುಗಡೆಯಾದಾಗಲೂ ಹೊಸ ಚಿತ್ರವನ್ನು ಸ್ವಾಗತಿಸುವಷ್ಟು ಸಂಭ್ರಮದಿಂದಲೇ ಪದೇ ಪದೇ ಸ್ವೀಕರಿಸುತ್ತಿದ್ದ.
ಸಿದ್ಧಲಿಂಗಯ್ಯನವರ ಮತ್ತೊಂದು ಶ್ರೇಷ್ಠ ಚಿತ್ರರತ್ನವೆಂದರೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥೆಯಾಧಾರಿತ ‘ಬೂತಯ್ಯನ ಮಗ ಅಯ್ಯು’. ಈ ಚಿತ್ರ ಕೂಡಾ ಚಿತ್ರನಿರ್ಮಾಣ ಮತ್ತು ಕಥಾಮೌಲ್ಯಗಳ ಶ್ರೇಷ್ಠ ಸಂಗಮವಾಗಿ ಕನ್ನಡ ಚಿತ್ರರಂಗದಲ್ಲಿ ನಾವು ನೆನೆಯುವ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ನಿರಂತರವಾಗಿ ಪ್ರಕಾಶಿಸುವ ಚಿತ್ರವಾಗಿ ಉಳಿದಿದೆ.
“ಸಿನಿಮಾದ ಚಿತ್ರಕಥೆಯ ಬಗ್ಗೆ ನಿರ್ದೇಶಕನಾದವನು ಆಳವಾದ ಅಧ್ಯಯನ ನಡೆಸಿ ಸಿನಿಮಾ ತಯಾರಿಸಿದರೆ ಹಣ ಹಾಕುವ ನಿರ್ಮಾಪಕನನ್ನು ಉಳಿಸಬಹುದು. ಪ್ರೇಕ್ಷಕರ ಮನಮುಟ್ಟುವಂಥ ಕಥೆ ಇದ್ದರೆ ಯಶಸ್ಸು ತನ್ನಷ್ಟಕ್ಕೆ ತಾನೆ ಬರುತ್ತದೆ” ಎಂಬುದು ನಿರ್ದೇಶಕ ಸಿದ್ದಲಿಂಗಯ್ಯ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.
ತುಮಕೂರಿನ ಗ್ರಾಮೀಣ ಭಾಗದಿಂದ ಬಂದವರು ಸಿದ್ದಲಿಂಗಯ್ಯ. ಹಾಗಾಗಿಯೇ ಅವರು ಗ್ರಾಮೀಣ ಕಥೆಯಾಧಾರಿತ ಸಿನಿಮಾಗಳಿಗೆ ಒತ್ತುಕೊಟ್ಟರು. ಅವರಂತೆ ಕನ್ನಡದ ಗ್ರಾಮೀಣ ಪ್ರದೇಶಗಳ ಕಥೆಯನ್ನು ಕೊಟ್ಟವರು ಕಡಿಮೆ ಎಂದರೂ ತಪ್ಪಿಲ್ಲ. ಈಗಿನ ಕಾಲದಲ್ಲಿ ಗ್ರಾಮೀಣ ಚಿತ್ರ ಎಂದರೆ ಮೂಗು ಮುರಿಯುತ್ತಾರೆ. ಇಲ್ಲವೇ ಪಕ್ಕದ ರಾಜ್ಯಗಳಿಂದ ತಂದ ಸರಕನ್ನು ನಮ್ಮತನ ಸ್ವಲ್ಪವೂ ಇಲ್ಲದಂತೆ ಹಾಗೆ ಹಾಗೆಯೇ ಉಣಬಡಿಸುತ್ತಾರೆ. ಈ ನಿಟ್ಟಿನಲ್ಲಿ ಸಿದ್ಧಲಿಂಗಯ್ಯನವರ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಎಂದೆಂದೂ ರಾರಾಜಿಸುವಂತದ್ದು.
ರಾಜ್ ಕುಮಾರ್, ಎನ್ ಟಿ ರಾಮರಾವ್, ವಿಷ್ಣುವರ್ಧನ ಅಂತಹವರಿಗೆ ಉತ್ತಮ ಪಾತ್ರಗಳ ಚಿತ್ರಗಳನ್ನು ನೀಡಿ ಅವರ ತಾರಾಮೌಲ್ಯವನ್ನು ಬೆಳಗಿಸಿದವರು ಸಿದ್ಧಲಿಂಗಯ್ಯನವರು. ಲೋಕೇಶ್, ಚರಣ್ ರಾಜ್, ಮುರಳಿ, ಶ್ರೀನಿವಾಸಮೂರ್ತಿ ಅಂತಹ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪ್ರಧಾನವಾಗಿ ಪರಿಚಯಿಸಿದ್ದು ಸಹಾ ಸಿದ್ಧಲಿಂಗಯ್ಯನವರು.
‘ಕನ್ನಡ ಸಿನಿಮಾಗಳಿಗೆ ಸರ್ಕಾರ ನೀಡುವ ಸಬ್ಸಿಡಿ ನಿಲ್ಲಬೇಕು. ಅದರ ಬದಲು ಮನರಂಜನಾ ತೆರಿಗೆ ತೆಗೆದುಹಾಕಬೇಕು. ಆಗ ಚಿತ್ರರಂಗಕ್ಕೆ ಪ್ರಯೋಜನ ಸಿಗುತ್ತದೆ. ಬೆರಳೆಣಿಕೆಯಷ್ಟು ಸಿನಿಮಾಗಳಿಗೆ ಸಬ್ಸಿಡಿ ಕೊಟ್ಟರೆ ಚಿತ್ರರಂಗ ಉದ್ಧಾರ ಆಗದು’ ಎಂಬುದು ಸಿದ್ದಲಿಂಗಯ್ಯನವರ ನೇರ ನುಡಿಯಾಗಿತ್ತು.
ಸುಮಾರು 35 ಸಿನಿಮಾಗಳನ್ನು ನಿರ್ದೇಶಿಸಿದ್ದ ಸಿದ್ಧಲಿಂಗಯ್ಯನವರು ಕನ್ನಡ, ತಮಿಳು, ತೆಲುಗು ಚಿತ್ರರಂಗದ ದಿಗ್ಗಜರೊಂದಿಗೆ ಸಹಾ ಕೆಲಸ ಮಾಡಿದ್ದಾರೆ. ಮೇಲೆ ಹೇಳಿದ ಚಿತ್ರಗಳಲ್ಲದೆ ಸಿದ್ಧಲಿಂಗಯ್ಯನವರ ಇತರ ಚಿತ್ರಗಳೆಂದರೆ ನಮ್ಮ ಸಂಸಾರ, ನ್ಯಾಯವೇ ದೇವರು, ದೂರದ ಬೆಟ್ಟ, ಹೇಮಾವತಿ, ಪ್ರೇಮ ಪರ್ವ, ನಾರದ ವಿಜಯ, ಕೂಡಿ ಬಾಳಿದರೆ ಸ್ವರ್ಗ ಸುಖ, ಬಿಳಿಗಿರಿಯ ಬನದಲ್ಲಿ ಮುಂತಾದವು.
ಕಳೆದ ದಶಕದಲ್ಲಿ ಅಕಾಲ ಮರಣಕ್ಕೆ ತುತ್ತಾದ ಸಿದ್ಧಲಿಂಗಯನವರ ಪುತ್ರ ಮುರಳಿ ಪ್ರಾರಂಭದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸಿ ನಂತರದಲ್ಲಿ ತಮಿಳು ಚಿತ್ರರಂಗದಲ್ಲಿ ಅಪಾರ ಬೇಡಿಕೆ ಪಡೆದಿದ್ದರು. ಸಿದ್ಧಲಿಂಗಯ್ಯನವರ ಮೊಮ್ಮಗ ಸಹಾ ಚಿತ್ರರಂಗದಲ್ಲಿದ್ದಾನೆ.

ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತ ಚಿತ್ರಗಳನ್ನು ಕೊಟ್ಟ ಸಿದ್ಧಲಿಂಗಯ್ಯನವರು 2015ರ ಮಾರ್ಚ್ 12ರಂದು ಬೆಂಗಳೂರಿನಲ್ಲಿ ನಿಧನರಾದರು. ತಮ್ಮ ಅತ್ಯುತ್ತಮ ಚಿತ್ರಗಳ ಮೂಲಕ ಅವರು ಸದಾ ಅಮರರಾಗಿದ್ದಾರೆ. ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ. ವಿ. ಸೀತಾರಾಮಯ್ಯ

Sun Mar 13 , 2022
ರಾಘವ, ಮೈ.ವೆಂ.ಸೀ. ಮುಂತಾದ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ವಿದ್ವಾಂಸರು ಪ್ರೊ. ಎಂ.ವಿ.ಸೀತಾರಾಮಯ್ಯನವರು. ಇಂದುಈ ಮಹನೀಯರ ಸಂಸ್ಮರಣೆ ದಿನ. ಎಂ. ವಿ. ಸೀತಾರಾಮಯ್ಯನವರು 1910ರ ಸೆಪ್ಟೆಂಬರ್ 9ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ವೆಂಕಟದಾಸಪ್ಪ. ತಾಯಿ ಸಾವಿತ್ರಮ್ಮ. ಮೈಸೂರಿನ ಬನುಮಯ್ಯ ಪ್ರೌಢಶಾಲೆ, ಇಂಟರ್ ಮೀಡಿಯೆಟ್ ಕಾಲೇಜು ಮತ್ತು ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪಡೆದ ಎಂ. ವಿ. ಸೀತಾರಾಮಯ್ಯನವರು ಕನ್ನಡದಲ್ಲಿ ಎಂ.ಎ. ಪದವಿ ಗಳಿಸಿದರು. ಸೀತಾರಾಮಯ್ಯನವರು ಓದುವ ದಿನಗಳಲ್ಲಿ ದೀರ್ಘ ಕವಿತೆಗಾಗಿ ಬಿ.ಎಂ.ಶ್ರೀ. ಸ್ವರ್ಣಪದಕ ಪಡೆದಿದ್ದರು. […]

Advertisement

Wordpress Social Share Plugin powered by Ultimatelysocial