ಸಂಘ ಪರಿವಾರದ ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ ಮಾಡಿದ್ದು ಅವಮಾನ: ಸಿದ್ದರಾಮಯ್ಯ

ಬೆಂಗಳೂರು, ಮೇ 18: ಶಿಕ್ಷಣ ಕ್ಷೇತ್ರವನ್ನು ರಾಜಕೀಯಕ್ಕಾಗಿ ಬಲಿಕೊಡುವುದು ಬೇಡ. ಆರ್‌ಎಸ್‌ಎಸ್‌ನ ಹೆಡಗೆವಾರ್ ಭಾಷಣವನ್ನು ಪಠ್ಯ ಪುಸ್ತಕದಲ್ಲಿ ಸೇರಿಸುತ್ತಿರುವುದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಕೇಳಿ ಬರುತ್ತಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯದ ಮುದ್ರಣವನ್ನು ತಕ್ಷಣ ತಡೆಹಿಡಿಯಬೇಕು.

ರಾಜ್ಯದ ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಚಿಂತಕರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಪಡಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳೇ ನಿಜವೆಂದಾದರೆ ಇದು ಅಕ್ಷಮ್ಯ ಅಪರಾಧ. ಈ ಹಿನ್ನೆಲೆಯಲ್ಲಿ ಅನಗತ್ಯ ಊಹಾಪೋಹ ಮತ್ತು ಸಂಘರ್ಷಕ್ಕೆ ಅವಕಾಶ ನೀಡದೆ ಮುಖ್ಯಮಂತ್ರಿಗಳೇ ಖುದ್ದಾಗಿ ಸ್ಪಷ್ಟೀಕರಣನೀಡಬೇಕು. ರಾಜ್ಯದಲ್ಲಿ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿರುವ ಸಾಹಿತಿಗಳು, ಚಿಂತಕರು ಮತ್ತು ಶಿಕ್ಷಣ ತಜ್ಞರಿರುವಾಗ ಸಂಘ ಪರಿವಾರಕ್ಕೆ ಸೇರಿದ ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ ಮಾಡಿಸಿರುವುದು ರಾಜ್ಯದ ಜನತೆಗೆ ಮಾಡಿರುವ ಅವಮಾನ ಎಂದಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ ಎಸಗಿದಂತೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಕ್ಷೇತ್ರವನ್ನು ರಾಜಕೀಯದ ಅಖಾಡ ಮಾಡಲು ಹೊರಟಿರುವುದು ಖಂಡನೀಯ

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನೀಡಿರುವ ಕರಡನ್ನು ತಕ್ಷಣ ವಾಪಸು ಪಡೆದು ಸಮಿತಿಯನ್ನು ಬರ್ಖಾಸ್ತುಗೊಳಿಸಬೇಕು ಮತ್ತು ನಾಡಿನ ಚಿಂತಕರು ಮತ್ತು ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಿ ಹೊಸ ಸಮಿತಿಯನ್ನು ರಚಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ. ಧರ್ಮವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿ ಅದಕ್ಕೆ ಇರುವ ಪಾವಿತ್ರ್ಯವನ್ನು ಹಾಳುಗೆಡಹಿದ ಬಿಜೆಪಿ ಈಗ ಎಳೆಯ ಮಕ್ಕಳ ಬುದ್ದಿಕೆಡಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ರಾಜಕೀಯದ ಅಖಾಡ ಮಾಡಲು ಹೊರಟಿರುವುದು ಖಂಡನೀಯ. ನಾಡಿನ ಪ್ರಜ್ಞಾವಂತರೆಲ್ಲರೂ ಇದರ ವಿರುದ್ಧ ದನಿ ಎತ್ತಬೇಕಾಗಿದೆ.

ರಾಜಕೀಯ ಪಕ್ಷಗಳಿಗೆ ತಮಗೆ ಸರಿ ಕಂಡ ವ್ಯಕ್ತಿಗಳನ್ನು ಆರಾಧಿಸುವ, ಅವರ ಚಿಂತನೆಗಳನ್ನು ಪ್ರಚಾರಮಾಡುವ ಅಧಿಕಾರವಿದೆ, ಆದರೆ ಶಿಕ್ಷಣ ಕ್ಷೇತ್ರವನ್ನು ಸ್ವಾರ್ಥ ರಾಜಕೀಯದ ರಾಡಿಯಿಂದ ಮಲಿನಗೊಳಿಸಬಾರದು.

ಮಹಾನ್ ಚೇತನಗಳನ್ನು ಸ್ವಾರ್ಥ ರಾಜಕೀಯಕ್ಕೆ ದುರ್ಬಳಕೆ ಬೇಡ

ನಮ್ಮ ದೇಶ, ರಾಜ್ಯದಲ್ಲಿ ಬುದ್ದ, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಜಾತಿ,ಧರ್ಮ, ಪಕ್ಷ, ಪಂಥಗಳನ್ನು ಮೀರಿದ ಚೇತನಗಳು. ಇವರನ್ನು ಸ್ವಾರ್ಥ ರಾಜಕೀಯಕ್ಕೆ ದುರ್ಬಳಕೆ ಮಾಡಬಾರದು. ರಾಜಕೀಯ ದುರುದ್ದೇಶದಿಂದ ಮಾಡುವ ಈ ರೀತಿಯ ಅವಮಾನವನ್ನು ಸಹಿಸಲಾಗದು ಎಂದು ಸಿದ್ದರಾಮಯ್ಯ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪಕ್ಷದ ವೇದಿಕೆಯಲ್ಲಿ ಮೆರೆಯಿಸಿ

ಹೆಡಗೆವಾರ್, ಗೋಲ್ವಾಲ್ಕರ್, ಗೋಡ್ಸೆ ಮೊದಲಾದವರನ್ನು ತಮ್ಮ ಪಕ್ಷದ ವೇದಿಕೆಯಲ್ಲಿ ಮೆರೆದಾಡಿಸಲಿ, ಇವರ ಚಿತ್ರಗಳನ್ನೇ ಪ್ರದರ್ಶಿಸಿ ಚುನಾವಣೆಗಳಲ್ಲಿ ಮತ ಕೇಳಲಿ. ಪ್ರಜ್ಞಾವಂತ ಜನರು ತಪ್ಪು-ಸರಿಗಳನ್ನು ನಿರ್ಧರಿಸುತ್ತಾರೆ. ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಲಿಕೊಡಬೇಡಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು: ಪೈಪ್‌ನಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು ̤̤̤

Wed May 18 , 2022
  ಬೆಂಗಳೂರು: ನಗರದಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಉಲ್ಲಾಳ ಕೆರೆ ಸಮೀಪದ ಉಪಕಾರ್‌ ಲೇಔಟ್‌ ಬಸ್‌ನಿಲ್ದಾಣದ ಬಳಿ ಪೈಪ್‌ಲೈನ್‌ ಕಾಮಗಾರಿಯಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ‘ಬಿಹಾರದ ದೇವ್‌ಭರತ್‌ ಹಾಗೂ ಉತ್ತರಪ್ರದೇಶದ ಅಂಕಿತ್‌ಕುಮಾರ್‌ ಮೃತಪಟ್ಟವರು. ತ್ರಿಲೋಕ್‌ ಎಂಬುವರು ಅಪಾಯದಿಂದ ಪಾರಾಗಿದ್ದಾರೆ’ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ. ‘ಉಪಕಾರ್‌ ಲೇಔಟ್‌ ಬಸ್‌ನಿಲ್ದಾಣದ ಬಳಿ ಕಾವೇರಿ 5ನೇ ಹಂತದ ನೀರು ಸರಬರಾಜು ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಸ್ಥಳದಲ್ಲಿ ಮೂವರು […]

Advertisement

Wordpress Social Share Plugin powered by Ultimatelysocial