ಪ್ರಧಾನಿ ಹೆಚ್.ಡಿ.ದೇವೇಗೌಡರ ನೈತಿಕತೆ ಬಗ್ಗೆ ಪ್ರಶ್ನಿಸುವ ಸಿದ್ಧಹಸ್ತ.

ಬೆಂಗಳೂರು, ಏ.18-ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೈತಿಕತೆ ಬಗ್ಗೆ ಪ್ರಶ್ನಿಸುವ ಸಿದ್ಧಹಸ್ತ. ನೀವೇ ಪರ್ಸೆಂಟೇಜ್ ವ್ಯವಹಾರದ ಪಿತಾಮಹ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಆರೋಪಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದ್ದಾರೆ. ಆಪ್ತ ಶಾಸಕರಿಗೆ ಮೀಟಿಂಗ್‍ಗೆ ಇಂತಿಷ್ಟು ಎಂದು ಕೊಟ್ಟು ಕಮಿಷನ್ ಹೊಡೆದ ಕಥೆ, ಕಾದಂಬರಿ ಬರೆಯುವಷ್ಟಿದೆ. ಅರ್ಕಾವತಿ ರೀಡೂ ರಿಂಗ್ ಮಾಸ್ಟರ್‍ ಆಗಿ ಅಡ್ಡಡ್ಡ ನುಂಗಿ ನ್ಯಾ.ಕೆಂಪಣ್ಣ ಆಯೋಗದ ಕೃಪೆಯಿಂದ ಪಾರಾದ ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೇ ಎಂದಿದ್ದಾರೆ.

ನಿಮ್ಮ ಕತ್ತಲೆ ಮುಖವಾಡ ಪರ್ಸೆಂಟೇಜ್ ಪಲ್ಲಕ್ಕಿಯಲ್ಲಿ ಪವಡಿಸಿದ ನಿಮ್ಮ ನಿಜಬಣ್ಣ ಇನ್ನೇನು ಕಳಚಿ ಬೀಳಲಿದೆ. ನಿಮ್ಮ ಸುಳ್ಳು ನಿಮ್ಮನ್ನೇ ಸುಡುವ ಕಾಲ ಸನಿಹದಲ್ಲಿದೆ ಎಂದು ಹೇಳಿದ್ದಾರೆ. ಸಿದ್ಧ ಸೂತ್ರಧಾರ, ರಾಜಕೀಯ ಊಸರವಳ್ಳಿಗೆ ಚುನಾವಣೆಗೆ ಮುನ್ನವೇ ಜೆಡಿಎಸ್ ಜ್ವರ ಬಂದುಬಿಟ್ಟಿದೆ.

ಹಾಸನದಲ್ಲಿ ವೃಥಾ ಹರಿಬಿಟ್ಟ ಸತ್ಯಭಕ್ಷ ನಾಯಕನ ಆಚಾರಹೀನ ಅರಿವುಗೆಟ್ಟ ನಾಲಗೆ ಮತ್ತೆ ಹುಚ್ಚು ಕುಣಿತ ಮಾಡುತ್ತಿದೆ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲ. ಮತ್ತೆ ಮತ್ತೆ ಕೆಣಕುವ ದುಸ್ಸಾಹಸ ಬೇರೆ ಎಂದು ಟೀಕಿಸಿದ್ದಾರೆ.

ಆಪರೇಷನ್ ಕಮಲ ಬಿಜೆಪಿ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ? ಇಂಥ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್ ಪಕ್ಷ ಬಿಜೆಪಿ ಬೀ ಟಿಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಲ್ಲ? ಇದ್ಯಾವ ಸೀಮೆ ರಾಜಕೀಯ ಎಂದು ಪ್ರಶ್ನಿಸಿದ್ದಾರೆ.

ಬಹಿರಂಗದಲ್ಲಿ ಮಾತ್ರ ಬಿಜೆಪಿ ಕೋಮುವಾದಿ. ಅಂತರಂಗದಲ್ಲಿ ಅದಕ್ಕೆ ನೀವು ಅಡ್ಜೆಸ್ಟ್‍ಮೆಂಟ್‍ವಾದಿ. ನಿಮ್ಮ ರಾಜಕೀಯ ಲೀಲೆಗಳು ಒಂದಾ ಎರಡಾ ಎಂದು ವಾಗ್ದಾಳಿ ಮಾಡಿದ್ದಾರೆ.

ಕಳೆದ 2008-2009 ಶಾಸಕರ ಖರೀದಿ ಚಾಪ್ಟರ್. ಆಗ 8 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕಿತ್ತೆಸೆಯಲು ಬಿಜೆಪಿ ಜತೆ ಡೀಲ್ ಕುದುರಿಸಿಕೊಂಡು ಡಿಂಗ್ ಡಾಂಗ್ ಹಾಡಿದ್ದು ಯಾರಯ್ಯ? ಹೆಸರಿನಲ್ಲಿ ರಾಮ. ಉಂಡ ಮನೆಗೆ ಪಂಗನಾಮ. ಸ್ವಯಂ ಘೋಷಿತ ಸತ್ಯಹರಿಶ್ಚಂದ್ರ ಎಂದು ವ್ಯಂಗ್ಯವಾಡಿದ್ದಾರೆ.

ಆಪರೇಷನ್ ಕಮಲಕ್ಕೆ ಕೈ ಜೋಡಿಸಿದ್ದಕ್ಕೆ ದಕ್ಷಿಣೆಯಾಗಿ ಮುಟ್ಟಿದ ಹಣವೆಷ್ಟು? ಕೋಟಿಗಳ ಗಂಟು ತರಲು ಯಾರನ್ನು ಕಳಿಸಿದ್ದಿರಿ? ಆ ಹಣ ಏನಾಯಿತು? ಎಲ್ಲಿಗೆ ಹೋಯಿತು? ಚುನಾವಣೆಗೆ ಖರ್ಚು ಮಾಡಿದಿರಾ, ಇಲ್ಲಾ ಜೇಬಿಗಿಳಿಸಿ ಜಲ್ಸಾ ಮಾಡಿದಿರಾ? ಅದು ರಾಮನ ಲೆಕ್ಕದಲ್ಲಿ ಇದೆಯಾ? ಅಥವಾ ಕೃಷ್ಣನ ಲೆಕ್ಕದಲ್ಲಿದೆಯಾ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಆಪರೇಷನ್ ಕಮಲ ಹಣದ ಕಥಾಪ್ರಸಂಗ ರೋಚಕ ಸಿದ್ದಸಿನಿಮಾ ಎಂಬ ಬಗ್ಗೆ ಅನುಮಾನ ಇಲ್ಲ. ಅದಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ, ಹಿಮ್ಮೇಳ-ಮುಮ್ಮೇಳ ಎಲ್ಲವೂ ನಿಮ್ಮದೆ? ಧೈರ್ಯವಿದ್ದರೆ ಅದರ ಬಗ್ಗೆ ಮಾತನಾಡಿ ಎಂದು ಸವಾಲು ಹಾಕಿದ್ದಾರೆ.

ಕನ್ನಡಿಗರೆಲ್ಲರಿಗೂ ನಿಮ್ಮ ಕಪಟತನದ ಪರಿಚಯವಾಗಲಿ. ಆಪರೇಷನ್ ಕಮಲದ ಬಾಬ್ತಿನ ಹಣ ಸ್ವೀಕರಿಸಿ ನಿಮಗೆ ತಂದುಕೊಟ್ಟ ನಿಮ್ಮ ಆ ಹಳೆಯ ಸ್ನೇಹಿತರೇ ಸ್ವತಃ ನನ್ನ ಬಳಿ ಬಿಚ್ಚಟ್ಟ ಕಟುಸತ್ಯವಿದು. ಎಷ್ಟೇ ಆದರೂ, ಸತ್ಯ ನಿಮಗೆ ಅಪಥ್ಯ ಅಲ್ಲವೇ? ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗುವುದಿಲ್ಲ ಎಂಬ ಹುಂಬುತನವೇ? ನಿಮಗೆ ನೀವೇ ಸಾಟಿ. ಪಾಪ ಕಾಂಗ್ರೆಸ್ ಎಂದು ಮರುಕ ವ್ಯಕ್ತಪಡಿಸಿದ್ದಾರೆ.

ಸುಳ್ಳುರಾಮಯ್ಯನ ಸುಳ್ಳುಗಳ ಸುಪ್ಪತ್ತಿಗೆಯ ಮೇಲೆ ಮೈಮರೆತು ತೇಲುತ್ತಿದೆ. ಮುಳುಗುವೆ ಎನ್ನುವ ಅರಿವೂ ಆ ಪಕ್ಷಕ್ಕಿಲ್ಲ. ಮುಳುಗುವ ಹಡಗಿನ ಕ್ಯಾಪ್ಟನ್ ಗೆ ಬಿಜೆಪಿ ಬಾಲಂಗೋಚಿ ಸಿದ್ದಹಸ್ತನ ಅಡ್ಜೆ¸್ಟïಮೆಂಟ್ ರಾಜಕಾರಣ ಮತ್ತು ಹಣಕ್ಕೆ ಮಾರಿಕೊಂಡ ಆ ಸುಪಾರಿ ಆಟಗಾರ ತನ್ನ ಕೈಕಚ್ಚುತ್ತಿದ್ದಾನೆ ಎಂಬ ಅರಿವೇ ಇಲ್ಲ ಎಂದು ಟೀಕಿಸಿದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು ಎಂದಿದ್ದು ಯಾರಪ್ಪಾ?

ಇದು ಮಾತೃ ಪಕ್ಷದ ಟರ್ಮಿನೇಟರಯ್ಯನ ಮನ್ ಕೀ ಬಾತ್. ಹೃದಯದಲ್ಲೇ ಹೆಪ್ಪುಗಟ್ಟಿದ್ದ ಕಾರ್ಕೋಟಕ ವಿಷವನ್ನೇ ಸ್ವಪಕ್ಷದ ಮೇಲೆ ಕಾರಿಕೊಂಡ ನೀವು ಈಗ ಯಾವ ಟೀಮು? ಬಿಜೆಪಿ ಬೀ ಟೀಮು ತಾನೇ ಎಂದು ಜರಿದಿದ್ದಾರೆ. 2018ರಲ್ಲಿ ಒಳ್ಳೇ ಆಡಳಿತ ನಡೆಸಲೆಂದು ಕುಮಾರಸ್ವಾಮಿಗೆ ಅಕಾರ ಕೊಟ್ಟೆವು ಎಂದಿದ್ದೀರಿ. ಆ ಮುನ್ನ 5 ವರ್ಷ ಕೆಟ್ಟ ಆಡಳಿತ ಕೊಟ್ಟೆ ಎಂದು ನೀವೇ ಒಪ್ಪಿಕೊಂಡ ಹಾಗಾಯಿತಲ್ಲ ಎಂದಿದ್ದಾರೆ.

ಜೆಡಿಎಸ್ 30 ಸೀಟಿನ ಪಕ್ಷವಲ್ಲ,123 ಕ್ಷೇತ್ರಗಳ ಸವಾಲು ಸ್ವೀಕರಿಸಿ ಹೊರಟ ಪಕ್ಷ. ಇದು ಗೊತ್ತಾಗಿಯೇ ಪಕ್ಷವಾತ ಬಂದ ಹಾಗೆ ನೀವು ಚಡಪಡಿಸುತ್ತಿದ್ದೀರಿ. ಕದ್ದಮಾಲು ಕೈಗೆ ಕಟ್ಟಿ ಸಿಎಂ ಕುರ್ಚಿಯಲ್ಲಿ ನಿರ್ಲಜ್ಜವಾಗಿ ಮೆರೆದ ನಿಮ್ಮ ಕತ್ತಲೆಚಾರಿತ್ರ್ಯ ಕೊಳೆತು ನಾರುತ್ತಿದೆ. ನಿಮ್ಮ ಕೈಲಿ ಮಿರಮಿರ ಮಿಂಚಿದ ಹ್ಯೂಬ್ಲೆಟ್ ವಾಚ್ ಎಲ್ಲಿಂದಾ ಬಂತು? ಕಳ್ಳಮಾಲು ಮಾಲೀಕನಿಗೆ ಸೇರದೆ ನಿಮ್ಮ ಅಮೃತಹಸ್ತ ಅಲಂಕರಿಸಿದ್ದು ಹೇಗೆ? ಆ ವಾಚ್ ತಂದ್ಕೊಟ್ಟ ಪೊಲೀಸಯ್ಯನಿಗೆ ವರ್ಗಾವಣೆ ಕೃಪೆ ಕರುಣಿಸಿದಿರಾ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಮಾಜಿ ಸಚಿವ ಈಶ್ವರಪ್ಪ ವಿಷಯದಲ್ಲಿ ಡಿವೈಎಸ್‍ಪಿ ಗಣಪತಿ ಅವರ ಹೆಸರು ಎಳೆದು ತಂದಿದ್ದೀರಿ. ನಾನು ಹೇಳಿದ್ದು ಕಲ್ಲಪ್ಪ ಹಂಡೀಭಾಗ್ ಬಗ್ಗೆ. ಹಿಂದುಳಿದ ಸಮುದಾಯಕ್ಕೆ ಸೇರಿದ್ದ ಆ ಪ್ರಾಮಾಣಿಕ ಅಕಾರಿಗೆ ಇನ್ನಿಲ್ಲದ ಕಿರುಕುಳ ಕೊಟ್ಟು ಮುಗಿಸಿದಿರಿ. ಇಲಾಖೆಯಲ್ಲಿ ಒಳ್ಳೇ ಭವಿಷ್ಯವಿದ್ದ ಅವರ ಜೀವಕ್ಕೆ ಎರವಾದಿರಿ. ಅವರ ಸಾವಿಗೆ ನಿಮ್ಮ ಸರ್ಕಾರ ಕಾರಣ ಅಲ್ಲವೇ ಎಂದು ಹೆಚ್‍ಡಿಕೆ ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಧಿಕಾರಕ್ಕೆ ಬಂದೇಬಿಟ್ಟೆವು ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್!

Mon Apr 18 , 2022
ಬೆಂಗಳೂರು,ಏ.18- ಅಧಿಕಾರಕ್ಕೆ ಬಂದೇಬಿಟ್ಟೆವು ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರ ಜೊತೆ ಕೆಲ ಹಿತಶತ್ರುಗಳು ಕೈ ಜೋಡಿಸಿ ಷಡ್ಯಂತ್ರ ನಡೆಸಿರುವ ಎಲ್ಲ ಮಾಹಿತಿ ಇದೆ. ಇವರ ಮುಖವಾಡಗಳನ್ನು ಕಳಚಿ ಬೆತ್ತಲು ಮಾಡುವ ದಿನ ದೂರವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಒಳ್ಳೆ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲು ಕಾಂಗ್ರೆಸ್‍ಗೆ […]

Advertisement

Wordpress Social Share Plugin powered by Ultimatelysocial