ಎಸ್. ಜಿ. ವಾಸುದೇವ್

ಎಸ್. ಜಿ. ವಾಸುದೇವ್ ನಮ್ಮ ನಾಡಿನ ಅಪೂರ್ವ ಕಲಾವಿದರು.
ಎಸ್. ಜಿ. ವಾಸುದೇವ್ ಅವರು, ಎಸ್ ಕೆ. ಗೋಪಾಲ್ ಮತ್ತು ರತ್ನಮ್ಮ ದಂಪತಿಗಳ ಮಗನಾಗಿ 1941ರ ಮಾರ್ಚ್ 3ರಂದು ಮೈಸೂರಿನಲ್ಲಿ ಜನಿಸಿದರು.
ಉತ್ತಮ ಭವಿಷ್ಯಕ್ಕಾಗಿ ವಿಜ್ಞಾನವನ್ನೇ ಓದಬೇಕಾಗಿದ್ದ ಒತ್ತಡವನ್ನು ವಾಸುದೇವ್ ಅವರೂ ಎದುರಿಸಿದ್ದರು. ಅನಿವಾರ್ಯವಾಗಿ ಬಿ.ಎಸ್‌ಸಿಗೆ ಸೇರಿದ್ದರು. ಆದರೆ ಚಿತ್ರ ಬಿಡಿಸುವಲ್ಲಿ ಇವರಿಗಿದ್ದ ಪ್ರತಿಭೆಯನ್ನು ಮನಗಂಡ ಕಲಾ ವಿಮರ್ಶಕ ಜಿ. ವೆಂಕಟಾಚಲಂ, ವಾಸು ಅವರ ತಂದೆತಾಯಿಗಳ ಮನ ಒಲಿಸಿದರು. ಜೊತೆಗೆ, ಅವರ ಮಾರ್ಗದರ್ಶನದಿಂದ ಮದ್ರಾಸಿನ ಸರ್ಕಾರಿ ಕಲೆ ಮತ್ತು ಕರಕುಶಲ ಕಾಲೇಜಿಗೆ ಸೇರುವುದು ವಾಸುದೇವ್ ಅವರಿಗೆ ಸಾಧ್ಯವಾಯಿತು. ಅಲ್ಲಿ ಕೆ.ಸಿ.ಎಸ್. ಫಣಿಕ್ಕರ್ ಅವರಂತಹ ದಿಗ್ಗಜ ಗುರುಗಳು ದೊರೆತರು. ರಾಷ್ಟ್ರೀಯ ವಿದ್ಯಾರ್ಥಿ ವೇತನವೂ ದೊರೆಯಿತು. ಸಣ್ಣಪುಟ್ಟ ಕಲಾ ಕೆಲಸಗಳನ್ನು ಮಾಡುತ್ತಾ ಕಾಲೇಜಿನ ಖರ್ಚುವೆಚ್ಚಗಳನ್ನು ಸರಿದೂಗಿಸುತ್ತಿದ್ದ ವಾಸುದೇವ್ ಕಾಲೇಜಿನ ತಮ್ಮ ಖರ್ಚುವೆಚ್ಚಗಳಿಗೆ ಹಣ ಕಳಿಸುವುದು ಬೇಡವೆಂದು ತಂದೆಗೆ ತಿಳಿಸಿದ್ದರು.
ಕರಕುಶಲತೆಗೆ (ಕ್ರಾಫ್ಟ್) ಕಲೆಯನ್ನು ವಿಸ್ತರಿಸುವ ಆಶಯದೊಂದಿಗೆ ಮದ್ರಾಸ್‌ನಲ್ಲಿ ಒಂದಷ್ಟು ಕಲಾವಿದರು ಬಾಟಿಕ್ ಅನ್ನು ಹಣ ಸಂಪಾದನೆಯ ಮಾರ್ಗವಾಗಿಸಿಕೊಂಡು ಯಶಸ್ವಿಯಾದದ್ದನ್ನೂ ವಾಸು ಸ್ಮರಿಸುತ್ತಾರೆ. 1965-66ರಲ್ಲಿ ಚೋಳಮಂಡಲ ಕಲಾವಿದರ ಗ್ರಾಮ ರೂಪು ತಳೆಯಿತು. ಇದರ ಸಂಸ್ಥಾಪಕರಲ್ಲಿ ವಾಸುದೇವ್ ಅವರೂ ಒಬ್ಬರು. ಈಗಲೂ ಇದು ರಾಷ್ಟ್ರದಲ್ಲೇ ಏಕೈಕ ಕಲಾವಿದರ ಗ್ರಾಮ. ಭೂಮಿಯ ಒಡೆತನ ಹೊಂದಿರುವ ಕಲಾವಿದರು ಕಲಾನ್ವೇಷಣೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ತಾಣ. ಕಾಲೇಜಿನ ಗೆಳತಿ ಮದ್ರಾಸ್ ಪಾರ್ಸಿ ಹುಡುಗಿ ಅರ್ನಾವಾಜ್ ಜೊತೆ ವಿವಾಹದ ನಂತರ ಚೋಳಮಂಡಲದಲ್ಲಿ ಬದುಕಿನ ಜೊತೆಗೆ ಕಲಾಯಾತ್ರೆಯೂ ಆರಂಭವಾಗಿತ್ತು. ಮಗನ ಜನನವಾಯಿತು. ರಾಷ್ಟ್ರದ ಕಲಾ ಸಮುದಾಯದಲ್ಲಿ ಚೋಳಮಂಡಲಂ ಚಳವಳಿ ಹಲವಾರು ಚರ್ಚೆಗಳನ್ನು ಸೃಷ್ಟಿಸಿತ್ತು.
1988ರಲ್ಲಿ ಅರ್ನಾವಾಜ್ ಕ್ಯಾನ್ಸರ್‌ನಿಂದ ತೀರಿಕೊಂಡರು. ಈ ನೋವಿನಲ್ಲಿ ಕೆಲ ಕಾಲ ವಾಸುದೇವ್ ಅವರ ಚಿತ್ರರಚನೆ ಸ್ಥಗಿತಗೊಂಡಿತು. ನಂತರ ನೋವು ಮರೆಯಲು ನೆರವಾದದ್ದು ಗೆರೆಗಳೇ. ಬೆಂಗಳೂರಿಗೆ ವಾಸು ಅವರ ನೆಲೆ ಸ್ಥಳಾಂತರಗೊಂಡಿತು. ಅರ್ನಾವಾಜ್ ವಾಸುದೇವ್ ಚಾರಿಟೀಸ್ ಟ್ರಸ್ಟ್ ಯುವ ಕಲಾವಿದರಿಗೆ ಹಣಕಾಸು ನೆರವು ನೀಡುತ್ತಾ ಅರ್ನಾವಾಜ್ ನೆನಪನ್ನು ಜೀವಂತವಾಗಿರಿಸಿದೆ.
ಮುಂದೆ ಪತ್ರಕರ್ತೆ ಅಮ್ಮು ಜೋಸೆಫ್ ಭೇಟಿಯಾಗಿ, ಎರಡು ಪ್ರಬುದ್ಧ ಸ್ವತಂತ್ರ ಮನಸ್ಸುಗಳ ಸಮ್ಮಿಲನಕ್ಕೆ ನಾಂದಿಯಾಯಿತು. ‘ಎಲ್ಲಾ ಪುರುಷರು ತಾವು ವಿವಾಹವಾಗುವ ಮಹಿಳೆಯರಲ್ಲಿ ಅಮ್ಮಂದಿರ ಗುಣ ಹುಡುಕುತ್ತಾ ಇರುತ್ತಾರೆ ಎನಿಸುತ್ತದೆ. ವಾಸುದೇವ್ ವಿಚಾರದಲ್ಲೂ ಅದೇ ಆಗಿದೆ. ಅರ್ನಾವಾಜ್ ಹಾಗೂ ಅಮ್ಮು ಅವರಲ್ಲಿ ಆ ಸಶಕ್ತ ಸ್ವತಂತ್ರ ನೇರ ಗುಣಗಳನ್ನು ನಾನು ಕಂಡಿದ್ದೇನೆ` ಎನ್ನುತ್ತಿದ್ದರು ಗಿರೀಶ ಕಾರ್ನಾಡ್.
ಸ್ವಾತಂತ್ರ್ಯೋತ್ತರ ಕಲಾವಿದರ ಮೊದಲ ಪೀಳಿಗೆಯ ಕಲಾವಿದರಲ್ಲಿ ವಾಸುದೇವ್ ಪ್ರಮುಖರು. ಬೆಂಗಳೂರಿನಲ್ಲಿ ‘ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್’ ಸ್ಥಾಪನೆ ಹಾಗೂ ಬೆಂಗಳೂರು ವಿ.ವಿ.ಯಲ್ಲಿ ಕಲಾಪಠ್ಯ ಅಳವಡಿಕೆಗೆ ವಾಸುದೇವರು ಶ್ರಮಿಸಿದರು. ‘ರಂಗಶಂಕರ’ದ ಲೋಗೊ ರಚನೆಯಲ್ಲಿ ಈ ಹಿರಿಯ ಕಲಾವಿದ ನೀಡಿದ ಸ್ನೇಹಪೂರ್ಣ ಸಹಕಾರವನ್ನು ಕಲಾವಿದೆ ಅರುಂಧತಿ ನಾಗ್ ಸ್ಮರಿಸಿಕೊಳ್ಳುತ್ತಾರೆ.
ವಾಸುದೇವ್ ಅವರ ಕಲಾಯಾತ್ರೆ ನಾಲ್ಕು ದಶಕಗಳಿಗೂ ಹೆಚ್ಚಿನದು. ಪೇಂಟಿಂಗ್, ರೇಖಾಚಿತ್ರ. ಲೋಹ (ತಾಮ್ರ), ಜವಳಿ (ಟ್ಯಾಪೆಸ್ಟ್ರಿ) – ಹೀಗೆ ವಿವಿಧ ಮಾಧ್ಯಮಗಳಲ್ಲಿ ಅವರ ಕಲಾಭಿವ್ಯಕ್ತಿ ಹರಡಿಕೊಂಡಿದೆ. ನುರಿತ ಕುಶಲಕರ್ಮಿಗಳ ನೆರವಿನಿಂದ ತಾಮ್ರದಲ್ಲಿ ಹಾಗೂ ವಸ್ತ್ರಗಳಲ್ಲಿ (ಟ್ಯಾಪೆಸ್ಟ್ರಿ) ಕಲಾಕೃತಿಗಳನ್ನು ವಾಸುದೇವ್ ಮೂಡಿಸುವ ಬಗೆಯೂ ಅವರ ಕುರಿತಾದ ‘ದಿ ಓಪನ್ ಫ್ರೇಂ’ ಎಂಬ ಸಾಕ್ಷಚಿತ್ರದಲ್ಲಿ ಬಿಂಬಿತಗೊಂಡಿದೆ. ಚೇತನ್ ಷಾ ಅವರು ಈ ಸಾಕ್ಷಚಿತ್ರವನ್ನು ಮೂಡಿಸಿದ್ದಾರೆ.
ವಾಸುದೇವ್ ಅವರ ಕೃತಿಗಳು ಭಾರತ ಹಾಗೂ ಹೊರದೇಶಗಳಲ್ಲಿನ ಅನೇಕ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಕಾರ್ಪೊರೆಟ್ ಸಂಗ್ರಹಗಳಲ್ಲಿ ರಾರಾಜಿಸುತ್ತಿವೆ. ವೃಕ್ಷ, ಮಿಥುನ, ಅವನು-ಅವಳು ಸರಣಿಗಳ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟಿವೆ. ಕನ್ನಡ ಸಾಹಿತ್ಯದೊಂದಿಗಿನ ನಂಟು ಅವರ ಕೃತಿಗಳಿಗೆ ಹೊಸ ಅರ್ಥವಂತಿಕೆ ನೀಡಿವೆ. ಎ.ಕೆ. ರಾಮಾನುಜನ್, ಗಿರೀಶ ಕಾರ್ನಾಡರೊಂದಿಗೆ ಒಡನಾಟ ಹೊಂದಿದ್ದ ವಾಸುದೇವ್ ಅವರು ಭಾರತೀಯ ಜಾನಪದ, ಐತಿಹ್ಯ ಪುರಾಣಗಳ ಮೂಲದ್ರವ್ಯಗಳಿಂದ ಸ್ಫೂರ್ತಿ ಪಡೆದಿದ್ದಾರೆ. ಭಾರತೀಯ ಕಲೆ ಅನೇಕ ಕಾಲ್ಪನಿಕತೆಗಳನ್ನು ಹೊಂದಿದೆ. ಫ್ಯಾಂಟಸಿ ಎಂಬುದು ವಾಸುದೇವ್ ಶೈಲಿಯ ಉಸಿರು. ಯು.ಆರ್.ಅನಂತಮೂರ್ತಿ ಅವರ ಕಾದಂಬರಿ ಆಧಾರಿತ ‘ಸಂಸ್ಕಾರ` ಚಿತ್ರಕ್ಕೆ ಕಲಾ ನಿರ್ದೇಶಕರಾಗಿ ದುಡಿದ ಅನುಭವವೂ ಅವರ ಜೊತೆಗಿದೆ.
ನಮ್ಮ ನಾಡಿನ ಈ ಮಹಾನ್ ಕಲಾವಿದರಿಗೆ ನಮ್ಮ ಅನಂತನಮನ.
ಆಧಾರ: ದಿ ಓಪನ್ ಫ್ರೇಂ ಎಂಬ ಎಸ್. ಜಿ. ವಾಸುದೇವ್ ಅವರ ಕುರಿತಾದ ಸಾಕ್ಷಚಿತ್ರದ ಬಗ್ಗೆ ಪ್ರಜಾವಾಣಿಯಲ್ಲಿ ಮೂಡಿಬಂದ ಮಂಜುಳಾ ಅವರ ಲೇಖನ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಮ್ಸೇಟ್ಜಿ ಟಾಟಾ

Thu Mar 3 , 2022
ಜೆಮ್ಸೇಟ್ಜಿ ಟಾಟಾ ಭಾರತೀಯ ಕೈಗಾರಿಕಾ ಪಿತಾಮಹರು. ಜೆಮ್ಸೇಟ್ಜಿ ನಸರ್ವಾನ್ಜಿ ಟಾಟಾ 1839ರ ಮಾರ್ಚ್ 3ರಂದು ಜನಿಸಿದರು. ಇಂದು ಭಾರತದಲ್ಲೇ ಅಲ್ಲದೆ ವಿಶ್ವವ್ಯಾಪಾರಿ ಸಮುದಾಯದಲ್ಲಿ ವೈಶಿಷ್ಟ್ಯಪೂರ್ಣ ಹೆಸರಾದ ಟಾಟಾ ಸಮೂಹಕ್ಕೆ ಅಡಿಪಾಯವನ್ನು ಒದಗಿಸಿದ ಮಹಾಪುರುಷರೀತ. ಅಷ್ಟು ಮಾತ್ರವಲ್ಲದೆ ಜೆಮ್ಸೇಟ್ಜಿ ಟಾಟಾ ಅವರು ಭಾರತವನ್ನು ಕೈಗಾರಿಕರಂಗಕ್ಕೆ ಕೈಹಿಡಿದು ಕರೆತಂದ ಅವಿಸ್ಮರಣೀಯರೂ ಹೌದು. ಜ್ಹೊರಾಷ್ಟ್ರಿಯನ್ ಪೂಜಾರಿಗಳ ವಂಶದಲ್ಲಿ ಜನಿಸಿದ ಜೆಮ್ಸೇಟ್ಜಿ ಟಾಟಾ ಅವರ ತಂದೆ ನುಸ್ಸೇರ್ವಾನ್ಜಿ ಅವರು ತಮ್ಮ ವಂಶದಲ್ಲಿ ವ್ಯಾಪಾರದ ಹಾದಿ ಹಿಡಿದ […]

Advertisement

Wordpress Social Share Plugin powered by Ultimatelysocial