ಕುಮಾರವ್ಯಾಸನ

ಕರ್ಣಾಟ ಭಾರತ ಕಥಾಮಂಜರಿ
ಅರಣ್ಯಪರ್ವ – ಏಳನೆಯ ಸಂಧಿ
ಸೂ. ಹರನ ಪಾಶುಪತಾಸ್ತ್ರ ಲಾಭೋ
ತ್ಕರುಷ ಹರ್ಷೋತ್ಸವದಲಿಂದ್ರನ
ಪುರವ ಹೊಕ್ಕನು ಪಾರ್ಥನೆಸೆದನು ಶಕ್ರತೇಜದಲಿ
ಕೇಳು ಜನಮೇಜಯ ಧರಿತ್ರೀ
ಪಾಲ ವರ ಕೈಲಾಸವಾಸಿಯ
ಬೀಳುಗೊಂಡನು ತದ್ವಿಯೋಗದಲಿಂದ್ರ ಕೀಲದಲಿ
ಮೇಲುದುಗುಡದಲಸ್ತ್ರ ಲಾಭವ
ನಾಲಿಸದೆ ಶಂಕರ ಪದಾಂಬುಜ
ದೋಲಗದ ಸಿರಿ ತಪ್ಪಿತೆನುತುಮ್ಮಳಿಸಿದನು ಪಾರ್ಥ ೧
ಮರುಳ ದೇವಾರ್ಚನೆಯೊ ಕನಸಿನ
ಸಿರಿಯೊ ಶಿಶುವಿನ ಕೈಯ ರತ್ನವೊ
ಹರಿಯ ಹೂಮಾಲೆಯೊ ಮದೀಯ ವಿವೇಕ ವಿಭ್ರಮವೊ
ಹರನನೀ ಚರ್ಮಾಕ್ಷಿಯಲಿ ಗೋ
ಚರಿಸೆ ಬೇಡಿದುದಂಬು ಮರ್ತ್ಯದೊ
ಳಿರವು ಮಝ ಭಾಪೆನ್ನ ಪುಣ್ಯವೆನುತ್ತ ಬಿಸುಸುಯ್ದ ೨
ಅರಸ ಕೇಳದ್ಭುತವನಿತ್ತಲು
ಚರಮ ದಿಗ್ಭಾಗದಲಖಿಳ ಜಲ
ಚರ ನಿಕಾಯದ ಮುಂಗುಡಿಯಲಿಕ್ಕೆಲದ ಫಣಿಕುಲದ
ವರ ನದೀ ನದ ಕೋಟಿಗಳ ಸಾ
ಗರದ ಪರಿವಾರದಲಿ ಬಂದನು
ವರುಣನಮರೇಂದ್ರನ ಕುಮಾರನ ಕಾಂಬ ತವಕದಲಿ ೩
ವಿಕಟ ರಾಕ್ಷಸ ಯಕ್ಷಜನ ಗು
ಹ್ಯಕರು ಕಿನ್ನರಗಣ ಸಹಿತ ಪು
ಷ್ಪಕದಲೈತಂದನು ಧನೇಶ್ವರನಾ ತಪೋವನಕೆ
ಸಕಲ ಪಿತೃಗಣ ಸಹಿತ ದೂತ
ಪ್ರಕರ ಧರ್ಮಾಧ್ಯಕ್ಷರೊಡನಂ
ತಕನು ಬೆರಸಿದನಿಂದ್ರಕೀಲ ಮಹಾ ವನಾಂತರವ ೪
ಹಿಡಿಯ ಸಾಲಿನ ಸತ್ತಿಗೆಯ ಬಲ
ಕೆಡಕೆ ಕೆದರುವ ಸೀಗುರಿಯ ಮುಂ
ಗುಡಿಯ ವಿದ್ಯಾಧರ ಮಹೋರಗ ಯಕ್ಷ ರಾಕ್ಷಸರ
ಜಡಿವ ಕಹಳಾರವದ ನೆಲನು
ಗ್ಗಡಣೆಗಳ ಕೈವಾರಿಗಳ ಗಡ
ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇಂದ್ರ ೫
ಕಂಡನನಿಬರ ಬರವನೊಲಿದಿದಿ
ರ್ಗೊಂಡನವರವರುಚಿತದಲಿ ಮುಂ
ಕೊಂಡು ಮನ್ನಿಸಿ ಮನವ ಪಡೆದನು ಲೋಕಪಾಲಕರ
ಖಂಡಪರಶುವಿನಸ್ತ್ರವನು ಕೈ
ಕೊಂಡೆ ನಿನಗೇನರಿದು ನೀನು
ದ್ದಂಡ ಬಲನೆಂದನಿಬರುಪಚರಿಸಿದರು ಫಲುಗುಣನ ೬
ಆ ಮಹಾಸ್ತ್ರಕೆ ಬಳುವಳಿಯ ಕೊ
ಳ್ಳೀ ಮದೀಯಾಸ್ತ್ರವನೆನುತ ಸು
ತ್ರಾಮನಿತ್ತನು ದಿವ್ಯ ಬಾಣವನಿಂದ್ರ ಸಂಜ್ಞಕವ
ಸಾಮವರ್ತಿಕ ದಂಡ ವಾರುಣ
ತಾಮಸದ ಸಮ್ಮೋಹನವಿದೆಂ
ದಾ ಮಹಾಂತಕ ವರುಣ ಧನದರು ಕೊಟ್ಟರಂಬುಗಳ ೭
ಎಲೆ ಧನಂಜಯ ನಿನಗಿದೇನ
ಗ್ಗಳದ ಶರವೇ ನಿನ್ನ ಭಕ್ತಿಗೆ
ಸಿಲುಕಿದನು ಶಿವನಾತ ನಂಬಿದೆ ನಿನ್ನ ಸೀಮೆಯಲಿ
ಸುಲಭ ನಿನಗಿಂದಮಳ ಲಕ್ಷ್ಮೀ
ನಿಲಯ ನೀನೇ ಪೂರ್ವದಲಿ ನಿ
ರ್ಮಲಿನ ನರಋಷಿಯೆಂದು ಹರಿ ತೆಗೆದಪ್ಪಿದನು ಮಗನ ೮
ಕೃತ ತಪಸ್ಸಿಂ ಭಿನ್ನ ಖೇದ
ಕ್ಷತ ಶರೀರ ವ್ಯಥೆಯನಮರಾ
ವತಿಯೊಳಗೆ ಕಳೆ ರಥಸಹಿತ ಕಳುಹುವೆನು ಮಾತಲಿಯ
ಕ್ರತುಶತದ ಕೈಗಾಣಿಕೆ ದೀ
ಕ್ಷಿತರ ಸಿರಿಯಂತರವ ಮನವಾ
ರತೆಯದೆಂತುಂಟೊ ಕಾಣಬೇಹುದು ಪಾರ್ಥ ನೀನೆಂದ ೯
ಹೈ ಹಸಾದವು ನೂರು ಯಜ್ಞದ
ಮೇಹುಹಾಡನು ಮೆಟ್ಟಲೆಮ್ಮಿ
ಹೂಹೆಗಳಿಗಳವಡುವದೊಲ್ಲೆವೆ ನಿಮ್ಮ ಕರುಣದಲಿ
ಐಹಿಕದಲಾಮುಷ್ಮಿಕದ ಸಂ
ನ್ನಾಹ ಸಂಭವಿಸುವುದೆ ನಿಷ್ಪ್ರ
ತ್ಯೂಹವೆಂದೆರಗಿದನು ಫಲುಗುಣನಿಂದ್ರನಂಘ್ರಿಯಲಿ ೧೦
ಬೀಳುಗೊಟ್ಟನು ನರನನೀ ದಿ
ಕ್ಪಾಲರಂತರ್ಧಾನದೊಡನೆ ಸ
ಮೇಳರಾದರು ಶಕ್ರಸಾರಥಿ ಸುಳಿದನಭ್ರದಲಿ
ಜಾಳಿಗೆಯ ಮಣಿವೆಳಗುಗಳ ವೈ
ಹಾಳಿಗಳ ವೈಡೂರ್ಯದೀಪ್ತಿ ನಿ
ವಾಳಿಗಳ ಸುಪತಾಕೆ ಬೆಳಗುವ ಹೇಮರಥ ಸಹಿತ ೧೧
ಅರಸ ಕೇಳೈ ಹತ್ತು ಸಾವಿರ
ತುರಗ ನಿಕರದ ಲಳಿಯ ದಿವ್ಯಾಂ
ಬರದ ಸಿಂಧದ ಸಾಲ ಸತ್ತಿಗೆಗಳ ಪತಾಕೆಗಳ
ಖರರುಚಿಯ ಮಾರಾಂಕವೋ ಸುರ
ಗಿರಿಯ ಸೋದರವೋ ಮೃಗಾಂಕನ
ಮರುದಲೆಯೊ ಮೇಣೆನಲು ರಥ ಹೊಳೆದಿಳಿದುದಂಬರದಿ ೧೨
ಏನಿದಚ್ಚರಿ ಮೇಲೆ ಮೇಲೆ ನ
ವೀನ ದರ್ಶನವೆನ್ನ ಪುಣ್ಯ
ಸ್ಥಾನವೈ ಸಲೆಯೆನುತ ನರನಿದಿರಾದನಾ ರಥಕೆ
ನೀನಹೈ ಕಲಿ ಪಾರ್ಥನೆಂಬ ಮ
ಹಾ ನರೇಶ್ವರನೆನುತ ಮಿಗೆ ಸ
ನ್ಮಾನಿಸುತ ಸುರಪತಿಯ ಸಾರಥಿ ನಿಲಿಸಿದನು ರಥವ ೧೩
ಲಲಿತ ಹೇಷಾ ಧ್ವನಿಯ ಹಯ ಮಂ
ಡಲದ ಮೌಳಿಯ ಮೇಲು ದಾಯದ
ಲುಳಿಯ ಚೀತ್ಕೃತಿ ರವದ ಪಲಪಲ ತೆರದ ಫಳಹರದ
ಚಲತುರಗ ಖುರ ಹತಿಯ ರಭಸೋ
ಚ್ಚಲಿತ ಧೂಳೀ ಧೂಸರದ ರಥ
ದೊಳಗೆ ನಿಂದಾ ಶಕ್ರಸಾರಥಿ ನುಡಿಸಿದನು ನರನ ೧೪
ಏಳು ಫಲುಗುಣ ಹರಿ ವರೂಥದ
ಮೇಲೆ ಬಿಜಯಂಗೈವ ಬಹಳ ಫ
ಲಾಳಿಯಿದೆಲಾ ನಿನ್ನ ಪುಣ್ಯದ್ರುಮದ ಬೇರೊಡೆದು
ಸಾಲಕುರಿದರಿಹಿಗಳ ಕರ್ಮದ
ಕೂಲಿಗರ ಜಡ ಜಂಝ ಪೂಗರ
ಜಾಲ ಸಿರಿಯನಿಮಿಷರ ಪುರಿ ವಶವಾಯ್ತು ನಿನಗೆಂದ ೧೫
ಬಲ್ಲರಾರದನಶ್ವಮೇಧದ
ಮಲ್ಲರನು ಕೃತ ರಾಜಸೂಯರು
ಬಲ್ಲರೇ ಕಡೆಬೀಡ ಕೋಟೆಯ ಗುಡಿಯ ಬೊಡ್ಡಿಯರ
ಎಲ್ಲಿಯಮರಾವತಿ ನರಾಧಮ
ರೆಲ್ಲಿ ನಾವೀಶ್ವರನ ಕರುಣದ
ಭುಲ್ಲವಣೆಯಲಿ ಭಾಗ್ಯನೆಂದನು ನಗುತ ಕಲಿಪಾರ್ಥ ೧೬
ಎನುತ ತೇರಿನೊಳೊಂದು ಕಾಲಿ
ಟ್ಟನು ಧನಂಜಯನಿಂದ್ರಕೀಲದ
ವನಕೆ ಕೈಮುಗಿದೆರಗಿದನು ಮಧುರ ವಚನದಲಿ
ಮುನಿಜನವೆ ಪರ್ವತವೆ ಪಂಕಜ
ವನವೆ ತರು ಲತೆ ಗುಲ್ಮ ಖಗ ಮೃಗ
ವನಚರವೆ ನಾಹೋಗಿಬಹೆನೀ ನಿಮ್ಮನುಜ್ಞೆಯಲಿ ೧೭
ಎಂದು ರಥವೇರಿದನು ಪಾರ್ಥ ಪು
ರಂದರನ ಸಾರಥಿ ಗುಣೌಘವ
ನೊಂದು ನಾಲಗೆಯಿಂದ ಹೊಗಳಿದನಾ ಧನಂಜಯನ
ಗೊಂದಣದ ವಾಘೆಗಳನೆಲ್ಲವ
ನೊಂದುಗೂಡಿ ಕಿರಟಿ ದೃಢವಾ
ಗೆಂದು ಮಾತಲಿ ಚಪ್ಪರಿಸಿದನು ಚಪಲ ವಾಜಿಗಳ ೧೮
ಆವ ಜವವೇನೆಂಬ ಗತಿ ಮೇ
ಣಾವ ದೃಢ ವೇಗಾಯ್ಲತನ ತಾ
ನಾವ ಸೂಟಿಯದಾರು ಬಲ್ಲರು ವಹಿಲ ವಿವರಣವ
ತೀವಿತಾಕಾಶವನು ಹೇಷಾ
ರಾವ ಸೂತನ ಹುಂಕೃತಿ ಧ್ವನಿ
ಯೀವಿಗಡ ರಥಚಕ್ರ ಚೀತ್ಕೃತಿ ಚಪಲ ನಿರ್ಘೋಷ ೧೯
ತೇರು ಮೇಲಕ್ಕಡರೆ ನುಡಿದನು
ಸಾರಿಥಿಗೆ ಕಲಿ ಪಾರ್ಥ ವಿವರಿಸು
ಧಾರುಣಿಯ ಪರ್ವತ ಸಮುದ್ರ ದ್ವೀಪ ನದನದಿಯ
ತೋರುವೀ ಲೋಕಂಗಳಳತೆಯ
ಸೂರಿಯನ ರಥಗತಿಯನೆಸೆವಾ
ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆಂದ ೨೦
ಧರೆಯನಾಂತವರಾರು ಧಾರುಣಿ
ಯಿರವದೇತರ ಮೇಲೆ ದಿಗ್ದೇ
ವರ ಪುರಂಗಳವೆಲ್ಲಿಹವು ಬೊಮ್ಮಾಂಡವೆನಿತಗಲ
ಉರುತರ ಗ್ರಹರಾಶಿಯಾ ಧ್ರುವ
ನಿರವು ಮೇಲೆನಿತೆನಿತು ಯೋಜನ
ವರುಹೆನಲು ಪಾರ್ಥಂಗೆ ಮಾತಲಿ ನಗುತ ವಿವರಿಸಿದ ೨೧
ಕೇಳು ನೀನೆಲೆ ಪಾರ್ಥ ತಾರಾ
ಮಾಲೆಗಳ ವಿವರವನು ರವಿರಥ
ಕಾಲಚಕ್ರವನೈದಿ ಗಗನಾಂಗಣದಿ ಚರಿಯಿಪುದ
ಲೀಲೆಯಿಂದಬುಜೋದರನು ಸಲೆ
ಪಾಲಿಸುವ ಲೋಕಗಳನೆಂದವ
ಶೂಲಿಯಂಘ್ರಿಯ ನೆನೆದು ಪೇಳಿದ ಭುವನ ಕೋಶವನು ೨೨
ಕೆಳಗಣಂಡ ಕಟಾಹ ತೊಡಗಿಯೆ
ಜಲವು ತುಂಬಿಹುದದರ ಘಾತವು
ತಿಳಿಯಲಿಪ್ಪತ್ತೈದು ಕೋಟಿಯ ಪವಣ ಪಡೆದಿಹುದು
ಇಳೆಯದರ ಮೇಲೊಂದು ಕೋಟಿಯ
ದಳದಲಿಹುದಲ್ಲಿಂದ ಮೇಲಣ
ದಳತೆಯದು ಚವ್ವೀಸ ಕೋಟಿಯಜಾಂಡ ಪರಿಯಂತ ೨೩
ಹತ್ತಿರೆಯಲಿಹುದತಳವಲ್ಲಿಂ
ದತ್ತ ವಿತಳ ಸುತಳ ತಳಾತಳ
ದೊತ್ತಿನ ಮಹಾತಳ ರಸಾತಳ ಕೆಳಗೆ ಪಾತಾಳ
ಬಿತ್ತರದ ಲೋಕಂಗಳೇಳು ಧ
ರಿತ್ರಿಯೊಳಗೊಂದೊಂದರಂತರ
ಹತ್ತು ಹತ್ತು ಸಹಸ್ರ ಯೋಜನ ಪಾರ್ಥ ಕೇಳೆಂದ ೨೪
ಉತ್ತಮವು ಭೂಲೋಕವಲ್ಲಿಂ
ದತ್ತ ಭುವ ಸುವ ಲೋಕವಲ್ಲಿಂ
ದತ್ತ ಮಹಜನ ಲೋಕವಲ್ಲಿಂದತ್ತ ತಪಲೋಕ
ಉತ್ತಮೋತ್ತಮವಿವಕೆ ಮೇಲಣ
ಸತ್ಯಲೋಕಾದಿಗಳ ನೋಡಿ ಧ
ರಿತ್ರಿಯಲಿ ಬಲುಗಾಹಕೊಟ್ಟನು ಲೋಕ ಪಾಲಕರ ೨೫
ತರವಿಡಿದ ಮೇಲಣ ಜಗಂಗಳು
ತರಣಿ ಮಂಡಲ ತೊಡಗಿಯತಿ ವಿ
ಸ್ತರವೆನಿಸಿ ಬೊಮ್ಮಾಂಡ ಪರಿಯಂತಡಕಿಲಾಗಿಹವು
ಮರುತನಾಧಾರದಲಿ ಲಕ್ಷ್ಮೀ
ಕರವೆನಿಸಿ ದೇವರುಗಳಿಂದವೆ
ಭರಿತವಾಗಿಹವವರ ಮಹಿಮೆಯ ಹೇಳಲರಿದೆಂದ ೨೬
ಧಾರುಣಿಯನಹ ತಾಳ್ದನಾತನ
ವೀರ ಕಮಠನು ಹೊತ್ತನನಿತರ
ಭಾರವನು ನಿಜಶಕ್ತಿ ಧರಿಸಿಹಳೊಂದು ಲೀಲೆಯಲಿ
ತೋರ ಗಿರಿಗಳವೆರಸಿದಿಳೆ ತಾ
ನೀರೊಳದ್ದು ವದೆಂದು ಸಲೆ ಮದ
ವಾರಣಂಗಳು ಧರಿಸಿಕೊಂಡಿಹವೆಂಟು ದಿಕ್ಕಿನಲಿ ೨೭
ಧರಣಿ ತಾನೈವತ್ತು ಕೋಟಿಯ
ಹರಹು ಸಪ್ತ ಸಮುದ್ರ ಹೊರಗಾ
ವರಿಸಿ ಜಂಬೂದ್ವೀಪ ನಡುವಿಹುದಲ್ಲಿ ಭದ್ರಾಶ್ವ
ವರುಷ ಭಾರತ ಕೇತುಮಾಲವು
ಕುರುವರುಷವಿವು ಪತ್ರವಾ ಸುರ
ಗಿರಿಯ ಹೊರಗಾಗಿಹವು ಕರ್ಣಿಕೆಯಂತೆ ಕನಕಾದ್ರಿ ೨೮
ಲಕ್ಕದೊಳು ಹದಿನಾರು ಸಾವಿರ
ಮಿಕ್ಕ ವಸುಧೆಯೊಳಾಳುಗೊಂಡುದು
ಮಿಕ್ಕ ಚೌರಾಶೀತಿ ಸಾಸಿರ ಯೋಜನದ ನಿಲವು
ಲೆಕ್ಕಿಸಲು ಗಿರಿ ಶಿಖರದಗಲವ
ದಕ್ಕು ಮೂವತ್ತೆರಡು ಸಾವಿರ
ದಿಕ್ಕಿನೊಡೆಯರಿಗೆಂಟು ಪಟ್ಟಣವದರ ಮೇಲಿಹವು ೨೯
ನಡುವೆ ಚತುರಾನನ ಪಟ್ಟಣ
ದೆಡೆದೆರವು ಹದಿನಾರು ಸಾವಿರ
ಕಡು ಚೆಲುವಿನಿಂದೆಸೆವ ಮಿಸುನಿಯ ಕೋಟೆ ನವರತ್ನ
ಎಡೆಗೆಡೆಗೆ ಕೇವಣಿಸಿದಂಗಡಿ
ಗಡಣೆಯಿಲ್ಲದ ಹರ್ಮ್ಯ ನಿಚಯಕೆ
ಪಡಿ ಚತುರ್ದಶ ಭುವನದೊಳಗಿಲ್ಲೆನಿಸಿ ಮೆರೆದಿಹುದು ೩೦
ಹರಳುಗಳ ಕೇವಣದ ಮಂಗಳ
ತರವೆನಿಪ ತೊಡಿಗೆಗಳ ದಿವ್ಯಾಂ
ಬರದಿ ಬೆಳಗುವ ತನುಲತೆಯ ನವಮಣಿಯ ಮೌಳಿಗಳ
ತರಳ ಲೋಚನದಿಂದುವದನದ
ಪರಮ ಸೌಭಾಗ್ಯದ ವಿಲಾಸದ
ಪರಿಜನಂಗಳು ಕಮಲಭವ ಪುರದಲ್ಲಿ ನೆಲಸಿಹರು ೩೧
ಹಲವು ನೆಲೆ ಚೆಲುವಿಕೆಗೆ ಸಲೆ ಹೊಂ
ಗಲಶ ಲೋಕಕೆ ವಿಲಸ ಹೇಮದ
ಕೆಲಸ ಗತಿಯಲಿ ಚೆಲುವೆನಿಸಿದುಪ್ಪರಿಗೆ ನೋಳ್ಪರಿಗೆ
ಹೊಳಹಿನಲಿ ಥಳಥಳಿಸುತಿಹುದದು
ನಳಿನಪೀಠನ ಭವನ ನಭದಿಂ
ದಿಳಿವ ಗಂಗೆಯ ಧಾರೆ ಮೆರೆದುದು ಪುರದ ಬಾಹೆಯಲಿ ೩೨
ಮೇರೆಯಿಲ್ಲದ ದೇವ ತತಿಗಳ
ಭಾರದಿಂ ಜಗ ಜರಿವುದೆಂದಾ
ಮೇರುವಿಂಗಾನಿಸಿದ ರಜತ ಸ್ತಂಭವೋ ಮೇಣು
ಸಾರತರ ಸುಕೃತವನು ಸಂಚಿಸಿ
ಧೀರರೈದುವ ಸತ್ಯಲೋಕದ
ದಾರಿಯೆಂಬಂದದಲಿ ಗಂಗೆಯ ಧಾರೆ ಮೆರೆದಿಹುದು ೩೩
ನರಸುರರು ಮೊದಲಾದ ಸಚರಾ
ಚರದ ಜೀವರಘಂಗಳನು ಸಂ
ಹರಿಸಲೋಸುಗ ಸತ್ಯಲೋಕದಿನಿಳಿದು ಬಹ ಗಂಗೆ
ಧರೆ ಧರಿಸಲರಿದೆಂದು ಕನಕದ
ಗಿರಿಯ ಶಿಖರದ ನಡುವೆ ಬರುತಿಹ
ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ ೩೪
ಅಳಕನಂದೆ ಸುಚಕ್ಷು ನಿರ್ಮಲ
ಜಲದ ಭದ್ರೆಯು ಸತ್ಯೆಯೆಂಬಿವು
ತಿಳಿಯೆ ದಕ್ಷಿಣವಾದಿಯಾಗಿ ಪ್ರದಕ್ಷಿಣಾರ್ಧದಲಿ
ಸುಳಿದು ಮೇರುವಿನಿಂದ ಕುಲಗಿರಿ
ಗಿಳಿದು ಜಾಹ್ನವಿ ನಾಲ್ಕು ದಿಕ್ಕಿನ
ಜಲನಿಧಿಯ ಬೆರೆಸಿದಳು ಕೇಳ್ ಜಗದಘವನಪಹರಿಸಿ ೩೫
ಸುರಗಿರಿಯ ಮೊದಲಲ್ಲಿ ಕೀಲಕ
ಗಿರಿಯು ನಾಲ್ಕವರಲ್ಲಿ ಕೇಸರ
ಸರಸಿ ನಾಲ್ಕರುಣೋದೆ ಭದ್ರೆ ಸಿತೋದೆ ಮಾನಸದ
ಹೊರಗೆ ನಾಲ್ಕುದ್ಯಾನ ಕೀಲಕ
ಗಿರಿಯುದಯವೈವತ್ತು ಯೋಜನ
ಹರಹು ತಾನು ಸಹಸ್ರ ಯೋಜನವದರ ಶಿಖರದಲಿ ೩೬
ಸುರಪತಿಯ ದಿಕ್ಕಿನಲಿ ಬೆಳೆದಿಹು
ದರಳಿ ಜಂಬೂವೃಕ್ಷ ತೆಂಕಲು
ಹಿರಿದೆನಿಪ ತನಿವಣ್ಣ ರಸ ನದಿಯಾಗಿ ಹರಿದಿಹುದು
ವರುಣನಿಹ ದೆಸೆಯಲಿ ಕದಂಬವು
ಹರಸಖನ ದಿಕ್ಕಿನಲಿ ವಟಕುಜ
ಸುರರಿಗಾಶ್ರಯವೆನಿಸಿ ಕೀಲಕ ಗಿರಿಯ ಮೇಲಿಹುದು ೩೭
ಮಂದರಾಚಲ ಮೂಡ ತೆಂಕಲು
ಗಂಧಮಾದನ ವಿಮಳ ಪಶ್ಚಿಮ
ದಿಂದ ಬಡಗ ಸುಪಾರ್ಶ್ವವೆಂಬಿವು ಕೀಲಕಾದ್ರಿಗಳು
ನಂದನವು ಬಡಗಣದು ಪಡುವಣ
ಚಂದವಹ ವೈಭ್ರಾಜ ತೆಂಕಲು
ಗಂಧಮಾದನ ಚೈತ್ರರಥ ಮೂಡಣದು ಕೇಳೆಂದ ೩೮
ಸೀತಳಾಂತಕ ಕುಂಡ ಮಳಯ ಕು
ರಾತಿ ವೈರಂತಕವು ಮೂಡಲು
ನೀತಿವಿದನೆ ತ್ರಿಕೂಟ ಶಿಶಿರಪತಂಗರುಚಿ ನಿಷಧ
ಖ್ಯಾತವಿವು ತೆಂಕಣದು ಕಪಿಲನ
ಜಾತಿವಾರಿಧಿ ಗಂಧಮಾದನ
ತಾತವಿವು ಸುಖವಾಸ ಮಿಗೆ ವೈಡೂರ್ಯ ಪಶ್ವಿಮದಿ ೩೯
ನಾಗ ಕಾಲಾಂಜನವು ಹಂಸನು
ಮೇಗೆ ವೃಷಭನು ಶಂಖ ಕೂಟವ
ನೀಗಳೀಕ್ಷಿಸು ಬಡಗ ಲೆಕ್ಕಕೆ ನಾಲ್ಕುವನು ಬಳಿಕ
ಮೇಗೆ ಕೇಳೀರೈದು ದೆಸೆಗಳ
ಲಾ ಗಿರಿಯ ಹೊರಗಿಹರು ಸುರಜನ
ಯೋಗಿಸಿದ್ಧನಿಷೇವಿತರು ತಾವಾಗಿ ವಿಭವದಲಿ ೪೦
ಧಾರುಣಿಯ ನಡುವಳಸಿ ಬೆಳೆದಿಹ
ಮೇರು ಗಿರಿಯನು ಬಳಸಿ ವೃತ್ತಾ
ಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ
ಮೇರೆಯಾಗಿಹ ಗಿರಿಕುಲಂಗಳ
ತೋರದಗಲವನುನ್ನತಂಗಳ
ಸಾರಹೃದಯನೆ ನಿನಗೆ ಕಲಿಮಲದೂರ ತಿಳುಹುವೆನು ೪೧
ಕುರು ಹಿರಣ್ಮಯ ರಮ್ಯಕವು ಸುರ
ಗಿರಿಯನೊಳಕೊಂಡಿಪ್ಪಿಳಾವೃತ
ಹರಿವರುಷ ಕಿಂಪುರುಷ ಭಾರತವುತ್ತರಾದಿಗಳು
ಪಿರಿಯ ಶೃಂಗಶ್ವೇತ ನೀಲದ
ಗಿರಿ ನಿಷಧವಾ ಹೇಮ ಕೂಟದ
ಗಿರಿ ಹಿಮಾಲಯವಾಗಪರಜಲಧಿಯನು ಮುಟ್ಟಿಹವು ೪೨
ಸುರಗಿರಿಯ ಬಳಸಿಪ್ಪಿಳಾವೃತ
ವರುಷದಿಂದವೆ ಮೂಡಲೊಪ್ಪುವ
ಪಿರಿಯ ಗಿರಿ ಮಾಲ್ಯವತ ಜಲನಿಧಿ ತನಕ ಭದ್ರಾಶ್ವ
ವರುಷ ಪಡುವಣ ಗಂಧಮಾದನ
ಗಿರಿ ತೊಡಗಿಯಾ ಪಶ್ಚಿಮಾಶಾ
ಶರಧಿ ಪರಿಯಂತಿಪ್ಪ ವರುಷವು ಕೇತುಮಾಲವದು ೪೩
ವರುಷ ಮಧ್ಯದ ಪರ್ವತಂಗಳ
ಹರಹು ತಾನೆರಡೆರಡು ಸಾವಿರ
ವರುಷ ನವನವ ನವಸಹಸ್ರವದಾರು ಮಧ್ಯದಲಿ
ವರುಷವದು ಮೂವತ್ತನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರಂತೆ ಮೆರೆವುದು ಹೊರಗೆ ಲವಣಾಬ್ಧಿ ೪೪
ದೇವ ಕೂಟದ ಜಠರವೆಂಬಿವು
ಭಾವಿಸಲು ಮಾಲ್ಯವತದಿಕ್ಕೆಲ
ನಾ ವಿಧದಿ ಕೈಲಾಸ ಪರ್ವತ ಗಂಧಮಾದನವು
ಕೋವಿದನೆ ಕೇಳ್ ಭೂಮಿ ವಲಯದೊ
ಳಾ ವಿಶಾಲದ ಪಾರಿಯಾತ್ರದ
ದೇವಯೋಗ್ಯದ ಗಿರಿಗಳಿಕ್ಕೆಲ ನಿಷಧ ಪರ್ವತಕೆ ೪೫
ನೀಲ ಗಿರಿಯಿಕ್ಕೆಲಕೆ ವಾರಿಧಿ
ಮೇಲೆ ನಿಷ್ಪ್ರತಿ ಶೃಂಗವಿವು ಮೈ
ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹವು
ಹೇಳಿದೆಂಟುಪ ಪರ್ವತಾಗ್ರ ವಿ
ಶಾಲ ತಾನೆಂಬತ್ತು ಯೋಜನ
ಕೇಳಿಳಾವೃತ ಮೇಲೆಯಾಗಿಹ ಗಿರಿಯ ಲೆಕ್ಕವನು ೪೬
ವರುಷದೊಡೆಯನಿಳಾವೃತಕೆ ಸಂ
ಕರುಷಣನು ಭದ್ರಾಶ್ವದೊಳು ಹಯ
ಶಿರನು ಹರಿವರುಷಕ್ಕೆ ನರಹರಿ ಕೇತುಮಾಲದಲಿ
ಸಿರಿಯರಸ ರಮ್ಯಕಕೆ ಮತ್ಸ್ಯನು
ಪಿರಿಯ ಕಮಠ ಹಿರಣ್ಮಯಕೆ ಕುರು
ವರುಷದಲ್ಲಿ ಮಹಾ ವರಾಹನು ಪಾರ್ಥ ಕೇಳೆಂದ ೪೭
ರಾಮ ಕಿಂಪುರುಷಕ್ಕೆ ಭಾರತ
ಭೂಮಿ ನರ ನಾರಾಯಣನು ತಿಳಿ
ನಾಮಧಾರಕ ಹನುಮ ವಸುಧಾದೇವಿ ನಾರದನು
ಆ ಮನು ಜಗಚ್ಚಕ್ಷು ಲಕ್ಷ್ಮೀ
ಪ್ರೇಮದಿಂ ಪ್ರಹ್ಲಾದ ನಿಜ ನಿ
ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು ೪೮
ವರುಷವನು ಗಿರಿಗಳನು ಬಳಸಿಹ
ಪಿರಿಯ ಲವಣ ಸಮುದ್ರ ತದನಂ
ತರದಿ ದೀಪಪ್ಲಕ್ಷಯಿಕ್ಷು ಸಮುದ್ರವಲ್ಲಿಂದ
ಇರಲು ಶಾಲ್ಮಲವದರ ಹೊರಗಣ
ಸುರೆಯ ಶರಧಿಯನೊಂದನೊಂದಾ
ವರಿಸಿ ಪರಿಭಾವಿಸಲು ತದ್ದ್ವಿಗುಣಂಗಳಾಗಿಹವು ೪೯
ತಿಳಿವೊಡಾ ಸುರೆಯಿಂದ ಕುಶಘೃತ
ಜಲಧಿ ಕ್ರೌಂಚ ದ್ವೀಪವೆಂಬಿವ
ರಳತೆಗಿಮ್ಮಡಿಯಾಗಿ ದಧಿಯ ಸಮುದ್ರವಲ್ಲಿಂದ
ಇಳೆಯ ಮೇಲೆಸೆದಿಪ್ಪ ಶಾಕದ
ಬಳಿಯ ದುಗ್ಧವಿದೊಂದನೊಂದನು
ಬಳಸಿಕೊಂಡಿಹವಬುಜನಾಭನ ನಿಳಯವದ ನೋಡ ೫೦
ಚೆಲುವಿಕೆಗೆ ನೆಲೆಯೆನಿಸಿ ಮೆರೆವುದು
ಪ್ರಳಯವೆಂದೂಯಿಲ್ಲ ಲಕ್ಷ್ಮೀ
ನಿಳಯನಿಹನನವರತ ಸುಳಿಯವು ಮೃತ್ಯು ಮಾಯೆಗಳು
ಬಳಕೆ ಸಲ್ಲದು ಕಲಿಯ ಕಾಲದ
ಹೊಲಬು ಹೊದ್ದದು ಹರಿಯ ರೂಪನು
ತಳೆದ ಪುರವನು ಕ್ಷೀರವಾರಿಧಿ ಬಳಸಿಕೊಂಡಿಹುದು ೫೧
ಯೋಗಿಗಳ ನೆಲೆವೀಡು ಬೊಮ್ಮದ
ಸಾಗರವು ಸನಕಾದಿ ಮುನಿಗಳ
ಭೋಗಭೂಮಿಯನಂತವೆನಿಸಿರ್ದುಪನಿಪತ್ತುಗಳ
ಆಗರವು ಮೂಲೋಕ ದರ್ಪಣ
ವಾಗಿ ದುಗ್ಧೋದಧಿಯೊಳೆಸೆವುದು
ಶ್ರೀಗಧೀಶನ ನಗರ ನೋಡೆಲೆ ಪಾರ್ಥ ನೀನೆಂದ ೫೨
ನಳಿನನಾಭನ ದುಗ್ಧ ಶರಧಿಯ
ಬಳಸಿಕೊಂಡಿಹ ಪುಷ್ಕರದ ಹೊರ
ವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಶಿ
ಇಳೆಗೆ ಕೋಟೆಯನಿಕ್ಕಿದಂತಿರೆ
ಬೆಳೆದ ಲೋಕಾಲೋಕ ಪರ್ವತ
ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರಿಯಂತ ೫೩
ಲಕ್ಕ ಜಂಬೂದ್ವೀಪವಾ ಪರಿ
ಲಕ್ಕ ಲವಣ ಸಮುದ್ರ ನಾಲುಕು
ಲಕ್ಕ ದ್ವೀಪ ಪ್ಲಕ್ಷವಿಕ್ಷು ಸಮುದ್ರವೊಂದಾಗಿ
ಲಕ್ಕವೆಂಟು ಸುಶಾಲ್ಮಲಿಯು ಸುರೆ
ಲಕ್ಕ ಷೋಡಶಕುಶ ಘೃತಂಗಳು
ಲಕ್ಕ ಮೂವತ್ತೆರಡು ಕ್ರೌಂಚದ್ವೀಪ ದಧಿಗೂಡಿ ೫೪
ಲಕ್ಕ ತಾನರವತ್ತು ನಾಲ್ಕು
ಗಿಕ್ಕು ಶಾಕ ಕ್ಷೀರ ಕೋಟಿಯ
ಲಕ್ಕವಿಪ್ಪತ್ತೆಂಟು ಪುಷ್ಕರ ಸುಜಲವೊಂದಾಗಿ
ಮಿಕ್ಕ ಕೋಟಿ ದ್ವಯದ ಮೇಲಣ
ಲಕ್ಕ ವೈವತ್ತಾರು ಯೋಜನ
ವಕ್ಕು ಹೇಮದ ಭೂಮಿ ಲೋಕಾಲೋಕ ಗಿರಿಸಹಿತ ೫೫
ಹತ್ತು ಲಕ್ಕವು ಹೀನವಾಗಿ
ಪ್ಪತ್ತು ಕೋಟಿ ತಮಂಧದುರ್ವರೆ
ಸುತ್ತುವರೆ ಬೆಳೆದಿಹುದು ಗರ್ಭೋದಕದ ಪರಿಯಂತ
ಇತ್ತ ಸುರಗಿರಿಯಿಂದ ಹಿಂದಿ
ಪ್ಪತ್ತು ಕೋಟಿಯ ಕೂಡಿ ನೋಡೆ ಧ
ರಿತ್ರಿ ತಾನೈವತ್ತು ಕೋಟಿಯ ಲೆಕ್ಕ ನೋಡೆಂದ ೫೬
ವರುಷವೊಂಬತ್ತಾಗಿಹುದುಯ ವಿ
ಸ್ತರದ ಜಂಬೂದ್ವೀಪವೊಂದೇ
ವರುಷವೇಳಾಗಿಹವು ತಾ ಶತಸಂಖ್ಯೆಯಾ ದ್ವೀಪ
ನಿರುತ ಕಡೆಯದ್ವೀಪವೆಂಬುದು
ವರುಷವೆರಡಾಗಿರಲು ಮಾನಸ
ಗಿರಿಯದರ ಮೇಲಿಹುದು ಚಕ್ರದ ಕಂಬಿಯಂದದಲಿ ೫೭
ವರುಷವೆರಡಾಗೊಪ್ಪುತಿಹ ಪು
ಷ್ಕರದ ನಡುವಣ ಮಾನಸೋತ್ತರ
ಗಿರಿಯುದಯವೈವತ್ತು ಸಾವಿರ ಹರಹು ತದ್ದ್ವಗುಣ
ಪಿರಿದು ಪುಣ್ಯಶ್ಲೊಖ ಕೇಳಾ
ಗಿರಿಯ ಶಿಖರದ ಮೇಲೆ ದಿಗ್ದೇ
ವರ ಪುರಂಗಳು ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು ೫೮
ಸುರಪನದುವೇ ಸ್ವರ್ಗ ಸಾರವು
ನಿರುತದಲಿ ಸಂಯಮನಿಯೆಂಬಾ
ಪುರವು ಕಾಲನ ನಗರಿ ತೆಂಕಲು ಪಶ್ಚಿಮಾದ್ರಿಯಲಿ
ವರುಣನದು ಶುದ್ಧಿಮತಿ ಯಕ್ಷೇ
ಶ್ವರಗೆ ಸೇವಾಕಾಂತಿ ಮತಿ ಶಿಖಿ
ನಿರುತಿ ಮರುದೀಶಾನ್ಯರಿಗೆಯವರವರ ನಾಮದಲಿ ೫೯
ಉರಗ ನಾಳಾಂಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗಂಗಳು ಬಳಸಿ ಕೇಸರದಂತೆ ಸೊಗಯಿಪವು
ಸರಸಿರುಹ ಸಂಭವನು ಮಧ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾವಿಷ್ಣುವಿನ ನಾಭೀಕಮಲದಂದದಲಿ ೬೦
ಧರೆಯ ವರುಷ ದ್ವೀಪ ಗಿರಿಗಳ
ಶರಧಿಗಳ ಸುರ ಶೈದಗ್ರದ
ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು
ಸರಸಿರುಹ ಬಂಧುವಿನ ರಥವಿಹ
ಪರಿಯ ಚರಿಸುವ ಪಥವ ತಾರೆಗ
ಳಿರವ ನೀ ಕೇಳೆಂದು ಮಾತಲಿ ನುಡಿದನರ್ಜುನಗೆ ೬೧
ಗಾಲಿ ಮಾನಸ ಗಿರಿಯ ಶಿಖರದ
ಮೇಲೆ ತಿರುಗುವುದೊಂದು ಕಡೆ ಸುರ
ಶೈಲದಲಿ ಬಿಗಿದಚ್ಚು ಕೋಟಿಯ ಮೇಲೆಯೈವತ್ತು
ಏಳು ಲಕ್ಕದ ನೀಳ ರಥದ ವಿ
ಶಾಲವದು ಮುವ್ವತ್ತು ಸಾವಿರ
ಮೇಲೆ ಧ್ರುವ ಮಂಡಲಕೆ ಬಿಗಿದಿಹುದನಿಲ ಪಾಶದಲಿ ೬೨
ಹರಿಯ ಗಾಲಿಯ ನಾಭಿ ಮೂರ
ಚ್ಚರಿಯ ಚಾತುರ್ಮಾಸಗಳು ಘನ
ತರದ ಷಡುಋತು ಬಳೆ ಷಡಂಗವೆ ನೇಮಿ ಚತುರಯುಗ
ತರವಿಡಿದ ಸಂವತ್ಸರವಿದಾ ವ
ತ್ಸರವು ವಿದ್ವತ್ಸರವು ವತ್ಸರವೆನಿಪ ಮೊಳೆಯಾಯ್ತು ೬೩
ಉರಗ ನಾಳದ ಹೊರಜೆ ನವ ಸಾ
ವಿರದ ಕುರಿಗುಣಿಯೀಸುಗಳು ತಾ
ವೆರಡು ಮಡಿ ತೊಂಬತ್ತುವೊಂದು ಸಹಸ್ರದರ್ಧವದು
ಪರಿಯ ನೊಗನದರನಿತು ಸಂಖ್ಯೆಗೆ
ಸರಿಯೆನಿಪ ಮೇಲಚ್ಚು ಮಂಗಳ
ತರವೆನಿಪ ನವರತ್ನ ರಚನೆಯ ಚಿತ್ರರಥವೆಂದ ೬೪
ಕರಸಹಸ್ರನ ರಥಕೆ ಹೂಡಿದ
ತುರಗ ಛಂದೋಮಯವು ಸಾರಥಿ
ಯರುಣ ಕಾಲವೆ ಗಾಲಿ ನವಕೋಟಿಯನು ಚರಿಯಿಸುಗು
ವರ ವರೂಥದ ಮಧ್ಯದಲಿ ವಿ
ಸ್ತರದ ಮಣಿಪೀಠದಲಿ ಮಿಗೆ ದಿನ
ಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು ೬೫
ಹರಿ ತರಣಿಗಿಂದುವಿಗೆ ಕರ್ಕಟ
ಧರಣಿಜಂಗಜ ವೃಶ್ಚಿಕವು ಹಿಮ
ಕರನ ತನಯಗೆ ಮಿಥುನ ಕನ್ಯೆ ಬೃಹಸ್ಪತಿಗೆ ಚಾಪ
ಪಿರಿಯ ಝಷತುಲೆ ವೃಷಭದಾನವ
ಗುರುವಿನವು ಮೃಗಕುಂಭ ಮಂದಂ
ಗಿರವು ನಿಜಗೃಹ ರಾಹುಕೇತುಗಳವರ ಕೂಡಿಹರು ೬೬
ಲಕ್ಕ ಉರ್ವಿಗೆ ರವಿಯ ಪಥ ಶಶಿ
ಲಕ್ಕವೆರಡು ತ್ರಿಲಕ್ಕ ಯೋಜನ
ಲೆಕ್ಕಿಸಲು ನಕ್ಷತ್ರ ಬುಧನಿಹನೈದು ಲಕ್ಕದಲಿ
ಲಕ್ಕವೇಳಾ ಶುಕ್ರ ಕುಜ ನವ
ಲಕ್ಕ ಗುರು ಹನ್ನೊಂದು ಲಕ್ಕವು
ಮಿಕ್ಕ ವಸುಧಾತಳಕೆ ಶನಿ ಹದಿಮೂರುವರೆ ಲಕ್ಕ ೬೭
ವಿದಿತವಿಂತಿದು ಸಪ್ತಋಷಿಗಳ
ಸದನವದು ಹದಿನಾಲ್ಕು ಲಕ್ಕವು
ಮುದದಿ ನೆಲಸಿಹ ಧ್ರುವನು ತಾ ಹದಿನೈದು ಲಕ್ಷದಲಿ
ಅದರ ಮೇಲಿಹ ವಿಷ್ಣುಪದದಲಿ
ಸದಮಳಾತ್ಮಕ ಶಿಂಶುಮಾರನು
ಪದುಳದಲಿ ಸಕಲಕ್ಕೆ ಸಲೆಯಾಧಾರವಾಗಿಹನು ೬೮
ವರ ಕುಮಾರಕ ನೀನು ಕೇಳೈ
ಪಿರಿಯ ಲೋಕಾಲೋಕವೆಂಬಾ
ಗಿರಿಯ ಬಳಸಿದ ಕಾಳಗತ್ತಲೆಯೊಳಗೆ ಮೆರೆದಿಪ್ಪ
ಧರೆಯೊಳರುಣ ದ್ವೀಪವದರೊಳು
ನೆರೆದ ಮಂದೇಹರುಗಳೆಂದ
ಚ್ಚರಿಯದಲಿ ಸರಸಿರುಹದಾಸನನಿಂದ ಜನಿಸಿದರು ೬೯
ಹರಿಹರ ವಿರಿಂಚಿಗಳು ಮೊದಲಾ
ದುರುವ ದೇವರುಗಳೊಳು ಮತ್ತಾ
ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ
ತರಣಿಯತಿ ಬಲವಂತನೆಂಬುದ
ನರಿದು ಮಂದೇಹಾಸುರರು ಸಾ
ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು ೭೦
ಪರಿಕಿಸಲು ಪರಮಾತ್ಮ ದಿನಕರ
ಹರಿಹರ ವಿರಿಂಚಿಗಳು ಸೂರ್ಯನ
ನೆರೆದು ಸುತಿ ಕೈವಾರಿಸುತ್ತಿರೆ ಘನಮಹಾಮಹಿಮ
ಕಿರಣದುರಿಯ ಮಹಾ ಪ್ರತಾಪನು
ತರಣಿಯೆಂದಾತನೊಳು ಕಾದಲು
ಸರಸಿರುಹಸಂಭವನ ಮೆಚ್ಚಿಸಿ ವರವ ಪಡೆದಿಹರು ೭೧
ಕಾಲವೆಂಬುದು ರವಿಯ ಗಾಲಿಯ
ಕಾಲಗತಿಯೈ ಸಲೆ ಕೃತಾಂತಗೆ
ಲೀಲೆ ಸೃಷ್ಟಿಗೆ ಲಯವು ಸಚರಾಚರಗಳೆಂಬಿವನು
ಕಾಲ ಚಕ್ರದ ಖಚರ ಗತಿಯಲಿ
ಕಾಳಗತ್ತಲೆಯನು ನಿವಾರಿಸಿ
ಪಾಲಿಸುವ ಲೋಕಂಗಳಿನಿತುವ ಪಾರ್ಥ ನೋಡೆಂದ ೭೨
ಅನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನ ಕೋಶದ ಸನ್ನಿವೇಶವನದ್ರಿ ಜಲಧಿಗಳ
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾ ದ್ವೀಪಂಗಳಿವು ಮಾ
ನವರ ಧರಣೀ ಸ್ವರ್ಗ ಮೇಲಿನ್ನಿತ್ತ ನೋಡೆಂದ ೭೩
ಈ ವಿಮಾನದ ಸಾಲ ಸಂದಣಿ
ತೀವಿಕೊಂಡಿದೆ ಗಗನ ತಳದಲಿ
ದೇವಕನ್ಯಾ ಶತಸಹಸ್ರದ ಖೇಳಮೇಳದಲಿ
ಭೂವಳಯದಲಿ ಸುಕೃತಿಗಳು ನಾ
ನಾ ವಿಧದ ಜಪ ಯಜ್ಞ ದಾನ ತ
ಪೋ ವಿಧಾನದಲೊದಗಿದವರನು ಪಾರ್ಥ ನೋಡೆಂದ ೭೪
ಭೂತ ದಯೆಯಲಿ ನಡೆವನೀ ತೋ
ರ್ಪಾತ ನಿರ್ಮಳ ಸತ್ಯಭಾಷಿತ
ನೀತ ತೀರ್ಥವಿಹಾರಿ ಸಜ್ಜನನೀತ ಗುಣಿಯೀತ
ಈತ ನಿರ್ಮತ್ಸರನಸೂಯಾ
ತೀತನಿವನತಿ ವಿಪ್ರ ಪೂಜಕ
ನೀತ ಮಾತಾಪಿತರ ಭಕ್ತನು ಪಾರ್ಥ ನೋಡೆಂದ ೭೫
ಇತ್ತ ನೋಡೈ ಸ್ವಾಮಿ ಕಾರ್ಯಕೆ
ತೆತ್ತನೊಡಲನು ವರ ರಣಾಗ್ರದೊ
ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ
ಇತ್ತವನು ಸತ್ಪುತ್ರನನು ತಾ
ಹೆತ್ತವನು ಗೋ ವಿಪ್ರ ಬಾಧೆಗೆ
ಸತ್ತವನನೆಲೆ ಪಾರ್ಥ ನೋಡುತ್ತಮ ವಿಮಾನದಲಿ ೭೭
ಮೇಲೆ ಮೇಲೈದರೆ ಸುತಾರಾ
ಮಾಲೆಗಳವೊಲು ರಾಜಸೂಯದ
ಮೇಲು ಯಜ್ಞದ ವಾಜಿಮೇಧದ ಭೂರಿ ಸುಕೃತಿಗಳು
ಕಾಳಗದೊಳರಿ ಸುಭಟ ಸಿತಕರ
ವಾಲ ಧಾರಾತೀರ್ಥಸೇವಿ ನೃ
ಪಾಲರೈದರೆ ದೀಪ್ಯಮಾನ ವಿಮಾನ ಮಧ್ಯದಲಿ ೭೮
ಈತ ಭರತನು ದೂರದಲಿ ತೋ
ರ್ಪಾತನು ಹರಿಶ್ಚಂದ್ರ ನಳ ನೃಗ
ರೀತಗಳು ಪುರು ಕುತ್ಸನೀತ ಮರುತ್ತ ನೃಪನೀತ
ಈತ ಹೈಹಯ ದುಂದುಮಾರಕ
ನೀತ ನಹುಷ ದಿಳೀಪ ದಶರಥ
ನೀತ ರಘು ತಾನೀತ ಶಂತನು ಪಾರ್ಥ ನೋಡೆಂದ ೭೯
ಇದೆಯಸಂಖ್ಯಾತ ಕ್ಷಿತೀಶ್ವರ
ರುದಿತ ಕೃತಪುಣ್ಯೋಪಚಯ ಭೋ
ಗದಲಿ ಭಾರತ ವರುಷ ನಿಮ್ಮದು ಪುಣ್ಯ ಭೂಮಿ ಕಣ
ಇದರೊಳಗೆ ಜಪ ಯಜ್ಞದಾನಾ
ಭ್ಯುದಯ ವೈದಿಕ ಕರ್ಮನಿಷ್ಠರ
ಪದವಿಗಳ ಪರುಠವಣೆಯನು ಕಲಿಪಾರ್ಥ ನೋಡೆಂದ ೮೦
ಹೊಳವುತಿದೆ ದೂರದಲಿ ರಜತಾ
ಚಲವ ಕಂಡಂದದಲಿ ಕೆಲದಲಿ
ಬಲವಿರೋಧಿಯ ಪಟ್ಟದಾನೆ ಸುರೇಂದ್ರ ನಂದನನೆ
ನಿಳಯವದೆನೆ ಸುದೂರದಲಿ ತಳ
ತಳಿಸುವಮಲ ಮುನಿಪ್ರಭಾ ಪರಿ
ವಳಯ ರಶ್ಮಿ ನಿಬದ್ಧವಮರಾವತಿಯ ನೋಡೆಂದ ೮೧
ಹೊಕ್ಕನಮರಾವತಿಯನರ್ಜುನ
ನೆಕ್ಕ ಸರದಲುಪಾರ್ಜಿಸಿದ ಪು
ಣ್ಯಕ್ಕೆ ಸರಿಯೇ ನಳ ನಹುಷ ಭರತಾದಿ ಭೂಮಿಪರು
ಉಕ್ಕಿದವು ಪರಿಮಳದ ತೇಜದ
ತೆಕ್ಕೆಗಳು ಲಾವಣ್ಯ ಲಹರಿಯ
ಸೊಕ್ಕುಗಳ ಸುರ ಸೂಳೆಗೇರಿಗಳೊಳಗೆ ನಡೆ ತಂದ ೮೨
ಇಳಿದು ರಥವನು ದಿವಿಜರಾಯನ
ನಿಳಯವನು ಹೊಕ್ಕನು ಕಿರೀಟಿಯ
ನಳವಿಯಲಿ ಕಂಡಿದಿರು ಬಂದನು ನಗುತ ಶತಮನ್ಯು
ಸೆಳೆದು ಬಿಗಿಯಪ್ಪಿದನು ಕರದಲಿ
ತುಳುಕಿ ಕರವನು ತಂದು ತನ್ನಯ
ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ ೮೩
ನೂರು ಪಶುಗೆಡಹಿಗೆ ಸುರೇಂದ್ರನು
ಮಾರುವನು ಗದ್ದುಗೆಯ ಬರಿದೇ
ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ
ಮೂರು ಯುಗದರಸುಗಳೊಳೀತಗೆ
ತೋರಲೆಣೆಯಿಲ್ಲೆನಲು ಶಕ್ರನ
ನೂರು ಮಡಿ ತೇಜದಲಿ ತೊಳ ತೊಳಗಿದನು ಕಲಿಪಾರ್ಥ ೮೪
ನುಸಿಗಳಿವದಿರು ಮರ್ತ್ಯರೆಂಬವ
ರೊಸಗೆಯಮರಾವತಿಯೊಳೇನಿದು
ಹೊಸತಲಾ ಬಂದಾತನಾರೋ ಪೂತುರೇ ಯೆನುತ
ವಸುಗಳಾದಿತ್ಯರು ಭುಜಂಗಮ
ವಿಸರ ಗಂಧರ್ವಾದಿ ದೇವ
ಪ್ರಸರ ಬಂದುದು ಕಾಣಿಕೆಗೆ ಪುರುಹೂತ ನಂದನನ ೮೫
ಅಂದಿನುತ್ಸವದಮರ ನಿಕರದ
ಸಂದಣಿಯನೇನೆಂಬೆನಿಂದ್ರನ
ಮಂದಿರದೊಳೊತ್ತೊತ್ತೆಯಾದುದು ಜನದ ದೊಂಬಿಯಲಿ
ಮಂದಿ ತೊಲಗಲಿ ತೆರಹುಗೊಡು ಹೊಯ್
ಮುಂದಣವರನು ಗಜಬಜವ ಮಾ
ಣೆಂದು ಗರ್ಜಿಸಿತಿಂದ್ರನಾಸ್ಥಾನದಲಿ ಸುರನಿಕರ ೮೬
ನೂಕು ಬಾಗಿಲ ಚಾಚು ಬಣಗು ದಿ
ವೌಕಸರ ನಿಲಿಸಲ್ಪಪುಣ್ಯರ
ನೇಕೆ ಹೊಗಿಸಿದೆ ಬಹಳ ದಾನ ತಪೋವಿವರ್ಜಿತರ
ಓಕುಳಿಯ ನೆವದಿಂದ ತೆಕ್ಕೆಯ
ಬಾಕುಳಿಗಳುರವಣಿಸಿತೇ ತಮ
ಗೇಕೆ ರಂಭಾದಿಗಳ ಸೋಂಕೆಂದುದು ಸುರಸ್ತೋಮ ೮೭
ತೊಲಗಿಸೋ ಮಂದಿಯನು ತೆಗೆ ಬಾ
ಗಿಲನೆನಲು ಕವಿದುದು ಸುರೇಂದ್ರನ
ಲಲನೆಯರು ಲಾವಣ್ಯ ಲಹರಿಯ ಲಲಿತ ವಿಭ್ರಮದ
ಸುಳಿಗುರುಳ ನಿಟ್ಟೆಸಳುಗಂಗಳ
ಹೊಳೆವ ಕದಪಿನ ನುಣ್ಗೊರಳ ಬಲು
ಮೊಲೆಯ ಮೋಹರ ನೂಕಿತಮರೀ ವಾರನಾರಿಯರ ೮೮
ಉಗಿದರೋ ಕತ್ತುರಿಯ ತವಲಾ
ಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳಸಾರ ಪೂರವಿಸೆ
ಹೊಗರಲಗು ಹೊಳಹುಗಳ ಕಡೆಗ
ಣ್ಣುಗಳ ಬಲುಗರುವಾಯಿ ಮುಸುಕಿನ
ಬಿಗುಹುಗಳ ಬಿರಿದಂಕಕಾತಿಯರಿಂದ್ರನೋಲಗದ ೮೯
ನೇವುರದ ನುಣ್ದನಿಯ ಕಾಂಚಿಯ
ಕೇವಣದ ಕಿಂಕಿಣಿಯ ರಭಸದ
ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ
ಭಾವದುಬ್ಬಿನ ಚೆಲ್ಲಗಂಗಳ
ಡಾವರದ ಡೊಳ್ಳಾಸಕಾತಿಯ
ರಾ ವಿಬುಧಪತಿಯೋಲಗವ ಹೊಕ್ಕರು ನವಾಯಿಯಲಿ ೯೦
ವರ ತಿಲೋತ್ತಮೆ ರಂಭೆ ಮಧುರ
ಸ್ವರೆ ಘೃತಾಚಿ ಸುಕೇಶಿ ಗೌರೀ
ಶ್ವರೀ ವರೂಥಿನಿ ಪೂರ್ವಚಿತ್ತಿ ಸುಲೇಖೆ ಚಿತ್ರರಥಿ
ಸುರಭಿಗಂಧಿನಿ ಚಾರುಮುಖಿ ಸೌಂ
ದರಿಯನಿಧಿಯೂರ್ವಶಿ ಸುಲೋಚನೆ
ಸುರಸೆಯೆನಿಪಂಗನೆಯರೈದಿತು ಕೋಟಿ ಸಂಖ್ಯೆಯಲಿ ೯೧
ಏನನೆಂಬೆನು ಜೀಯ ಶಕ್ರಾ
ಸ್ಥಾನವಲ್ಲಾ ದಿವ್ಯವಾದ್ಯ ಸು
ಗಾನ ನರ್ತನ ವಿಮಳ ತೂರ್ಯತ್ರಯದ ಮೇಳವದ
ಆ ನಿತಂಬಿನಿಯರ ಸುರೇಖಾ
ಸ್ಥಾನಕದ ನಿರುಗೆಯ ಸುಢಾಳದ
ನೂನ ಸಮ್ಮೋಹನದ ತೂಕದ ಭಾವಭಂಗಿಗಳ ೯೨
ರಸದ ಸಂಸ್ಥಾಪನೆಯ ಭಾವದ
ಬೆಸುಗೆಗಳ ಹಸ್ತಾಭಿನಯ ದೃ
ಕ್ಪ್ರಸರಣದವರ ಸಾತ್ವಿಕಾಂಗಿಕ ಸುಗತಿ ವಿಭ್ರಮದ
ವಿಷಮ ಸಮಕರಣದ ಕಳಾಪದ
ಕುಸುರಿಗಳ ವರಲಾಸ್ಯ ತಾಂಡವ
ವೆಸೆದುದೈ ರಂಭಾದಿ ನರ್ತಕಿಯರಲಿ ಹೊಸತೆನಿಸಿ ೯೩
ಗಾನ ರಸದಲಿ ಮುಳುಗಿತಮರಾ
ಸ್ಥಾನವೆತ್ತಣ ವಾದ್ಯ ನರ್ತನ
ಗಾನ ನರ್ತನವೆನಲು ಸಮ್ಮೋಹಿಸಿತು ಘನವಾದ್ಯ
ಗಾನ ವಾದ್ಯವಿದೆತ್ತ ನೃತ್ಯರ
ಸಾನುಭವ ಭಾರವಿಸಿತನ್ಯೋ
ನ್ಯಾನು ರಂಜಕವಾಯ್ತು ತೂರ್ಯತ್ರಯದ ಮೇಳಾಪ ೯೪
ಈಯಮಾನುಷ ನೃತ್ಯವಾದ್ಯ ಸು
ಗೇಯ ರಸದಲಿ ಮುಳುಗಿ ಕರಣದ
ಲಾಯ ತೊಡಕದೆ ಪಾರ್ಥನಿದ್ದನು ಧೈರ್ಯಶಿಖರದಲಿ
ಈ ಯುವತಿ ತಾನಾವಳೋ ಕುಸು
ಮಾಯುಧನ ಖಂಡೆಯವಲಾ ಮಝ
ಮಾಯೆಯೆನುತೂರ್ವಶಿಯನೆವೆಯಿಕ್ಕದೆ ನಿರೀಕ್ಷಿಸಿದ ೯೫
ಪಾರುಖಾಣೆಯವಿತ್ತನಾ ಜಂ
ಭಾರಿಯೂರ್ವಶಿ ರಂಭೆ ಮೇನಕೆ
ಗೌರಿ ಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ
ನಾರಿಯರು ನಿಖಿಳಾಮರರು ಬೀ
ಡಾರಕೈದಿತು ಹರೆದುದೋಲಗ
ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ ೯೬
ಅರಸ ಕೇಳಾರೋಗಿಸಿದರಿ
ಬ್ಬರು ಸಮೇಳದಲಿದ್ದು ಬೇರೊಂ
ದರಮನೆಗೆ ಕಳುಹಿದನು ಪವಡಿಸುವೊಡೆ ನಿಜಾತ್ಮಜನ
ಸುರಪನಿತ್ತಲು ಚಿತ್ರಸೇನನ
ಕರೆಸಿದನು ಫಲುಗುಣನ ಭಾವವ
ನರುಹಿದನು ನಮ್ಮೂರ್ವಶಿಯ ಕಳುಹೆಂದು ನೇಮಿಸಿದ ೯೭
ಇನಿಬರಿರೆ ರಂಭಾದಿ ಸೀಮಂ
ತಿನಿಯರೊಳಗೂರ್ವಶಿಯೊಳಾದುದು
ಮನ ಧನಂಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ
ವನಿತೆಯನು ಕಳುಹೇಳು ನೀನೆಂ
ದೆನೆ ಹಸಾದವೆನುತ್ತ ದೇವಾಂ
ಗನೆಯ ಭವನಕೆ ಬಂದನೀತನು ಹರಿಯ ನೇಮದಲಿ ೯೮
ತಾಯೆ ಚಿತ್ತೈಸರಮನೆಯ ಸೂ
ಳಾಯಿತನು ಬಂದೈದನೆನೆ ಕಮ
ಲಾಯತಾಂಬಕಿ ಚಿತ್ರಸೇನನ ಕರೆಸಿದಳು ನಗುತ
ತಾಯೆನುತ ವಸ್ತ್ರಾಭರಣದ ಪ
ಸಾಯವಿತ್ತಳು ಪರಿಮಳದ ತವ
ಲಾಯಿಗಳ ನೂಕಿದಳು ವರಕತ್ತುರಿಯ ಕರ್ಪುರದ ೯೯
ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯ ಗತಿಗಳ
ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆಂ
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ ೧೦೦
ಎಮಗೆ ಮಗನರ್ಜುನನು ನೀನಿಂ
ದೆಮಗೆ ಸೊಸೆಯಹುದಾತನಂತ
ಸ್ತಿಮಿರವನು ಕಳೆ ನಿನ್ನ ಕುಚಯುಗ ಕಾಂತಿ ಲಹರಿಯಲಿ
ಕಮಲಮುಖಿ ನೀ ಕಮಲವಾತನು
ಭ್ರಮರ ನೀ ಸುರವನದ ಸಿರಿಮಧು
ಸಮಯವರ್ಜುನನೆಂದು ಬೆಸಸಿದನಮರಪತಿಯೆಂದ ೧೦೧
ಕೇಳುತವೆ ರೋಮಾಂಚ ಲಜ್ಜೆಯ
ಜೋಳಿಯೆದ್ದುದು ಝೋಂಪಿಸಿತು ಪುಳ
ಕಾಳಿ ಭಯವನು ಪಂಟಿಸಿದುದನುರಾಗದಭಿಮಮಾನ
ಮೇಲೆ ಮೇಲಭಿಲಾಷೆ ಧೈರ್ಯವ
ಚಾಳವಿಸೆ ಪರಿತೋಷ ಪೂರಣ
ದೇಳುಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ ೧೦೨
ಆತನುತ್ತಮ ನಾಯಕನು ವಿ
ಖ್ಯಾತೆ ನೀ ಸುರಲೋಕದಲಿ ಲ
ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ
ಸೋತಡೆಯು ದಿಟ ಭಂಗವಲ್ಲ ಪು
ರಾತನದ ನಳ ನಹುಷ ಭರತ ಯ
ಯಾಯತಿ ನೃಪರೊಳಗೀತನಗ್ಗಳನಬಲೆ ಕೇಳೆಂದ ೧೦೩
ರಾಯನಟ್ಟಿದ ನೇಮ ಗಡ ಕಮ
ನೀಯವಲ್ಲಾ ನಿನ್ನ ನುಡಿ ರಮ
ಣೀಯತರವಿದು ನಿನ್ನ ರಚನೆ ಮಹಾನುಭಾವವಲೆ
ಆಯಿತಿದು ನೀ ಹೋಗೆನುತಲಬು
ಜಾಯತಾಕ್ಷಿ ಮಹೋತ್ಸವದಿ ನಾ
ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ ೧೦೪
ಸಂಕ್ಷಿಪ್ತ ಭಾವ
ಅರ್ಜುನನು ಇಂದ್ರನಲ್ಲಿಗೆ ಹೊರಟು ದಾರಿಯುದ್ದಕ್ಕೂ ನೋಡಿದ ಸ್ಥಳಗಳ ವಿವರಣೆ.
ಶಿವನು ಹೊರಟ ನಂತರ ಅವನ ಬಗ್ಗೆಯೇ ಚಿಂತಿಸುತ್ತಿದ್ದ ಅರ್ಜುನನಲ್ಲಿಗೆ ಇಂದ್ರ ಮೊದಲಾದ ದೇವತೆಗಳು ಬಂದು ಕಾಣಿಸಿಕೊಂಡರು. ವರುಣ, ಕುಬೇರ, ನಿರುತಿ ಮೊದಲಾದವರು ಇವನಿಗೆ ವಿವಿಧ ಶಸ್ತ್ರಾಸ್ತ್ರಗಳ ಉಪದೇಶವನ್ನು ಮಾಡಿದರು. ತನ್ನ ಸಾರಥಿಯನ್ನು ಕಳಿಸುವುದಾಗಿಯೂ ಅಮರಾವತಿಗೆ ಬರಬೇಕೆಂದೂ ಹೇಳಿ ಇಂದ್ರನು ಮಗನನ್ನು ಬಿಗಿದಪ್ಪಿದನು.
ಇಂದ್ರನ ಸಾರಥಿ ಮಾತಲಿಯು ರಥವನ್ನು ತೆಗೆದುಕೊಂಡು ಬಂದನು. ಅತ್ಯಂತ ವೈಭವಯುತವಾದ ರಥವದು. ಅರ್ಜುನನು ಇಂದ್ರಕೀಲದ ನೆಲ, ಜಲ, ಪ್ರಕೃತಿ ಎಲ್ಲಕ್ಕೂ ನಮಿಸಿ ಹೊರಟನು. ದಾರಿಯಲ್ಲಿ ಕಾಣುವ ಸ್ಥಳಗಳನ್ನು ಪರಿಚಯ ಮಾಡಿಕೊಡಬೇಕು ಎಂದು ಮಾತಲಿಯಲ್ಲಿ ಕೇಳಿಕೊಂಡನು.
ಇಲ್ಲಿ ವರ್ಣಿಸಿರುವ ಭೂಗೋಳದ ವರ್ಣನೆ ಮನಸೆಳೆಯುತ್ತದೆ. ಇಡೀ ಬ್ರಹ್ಮಾಂಡ, ಕುಲಪರ್ವತಗಳು, ವಿವಿಧ ಲೋಕಗಳು, ಅವುಗಳಿರುವ ಸ್ಥಳ, ಸಪ್ತ ಸಮುದ್ರಗಳು, ಅವುಗಳ ವಿಸ್ತೃತ ವಿವರಗಳು, ದಿಕ್ಪಾಲಕರ ಪಟ್ಟಣಗಳು, ಅಷ್ಟದಿಕ್ಕುಗಳಲ್ಲಿಯೂ ಆವರಿಸಿರುವ ಭೂಮಿ ಮುಂತಾದ ಸ್ಥಳಗಳು…ನಿಜಕ್ಕೂ ಕುಮಾರವ್ಯಾಸ ತನ್ನ ಆರಾಧ್ಯದೈವ ನಾರಾಯಣನ ಕೃಪೆಯಿಂದ ಇದೆಲ್ಲವನ್ನೂ ಕಂಡಿರಬಹುದು. ಅಷ್ಟು ವಿವರವಾಗಿ, ಅಳತೆಯಾದಿಯಾಗಿ ನೀಡಿರುವ ಈ ಭಾಗದ ಪದ್ಯಗಳು ಆಕರ್ಷಕವಾಗಿವೆ.
ಅಂತರಿಕ್ಷದಿಂದ ಕಾಣುವ ಜಂಬೂದ್ವೀಪ, ಭರತವರ್ಷ, ಇಲ್ಲಿನ ಪುಣ್ಯಸ್ಥಳಗಳು, ಋಷಿಮುನಿಗಳು..ಎಲ್ಲ ವಿವರಣೆ ನೀಡಿದ ಮಾತಲಿ ಮುಂದೆ ಸೂರ್ಯನ ರಥ, ಅವನ ಚಲನೆ, ಅವನ ಮಹಿಮೆ ಇವುಗಳನ್ನು ವರ್ಣಿಸುತ್ತಾನೆ. ಕೊನೆಗೆ ಅಮರಾವತಿಯನ್ನು ತಲುಪುತ್ತಾರೆ. ಭವ್ಯವಾದ ಸ್ವಾಗತ, ಸತ್ಕಾರ ಆಗುತ್ತದೆ.
ಇಂದ್ರನ ಸಿಂಹಾಸನದಲ್ಲಿ ಜೊತೆಯಲ್ಲಿ ಕುಳಿತ ಅರ್ಜುನನಿಗೆ ಎಲ್ಲರಿಂದ ಮರ್ಯಾದೆ, ಹೊಗಳಿಕೆ ಸಿಗುತ್ತದೆ. ರಂಭೆ, ಊರ್ವಶಿ ಮೊದಲಾದವರಿಂದ ನೃತ್ಯ ಏರ್ಪಾಡಾಗುತ್ತದೆ. ಅರ್ಜುನನು ಊರ್ವಶಿಯ ಕಡೆ ನೋಡಿದ್ದನ್ನು ಕಂಡ ಇಂದ್ರನು ಅವಳನ್ನು ಅರ್ಜುನನ ಸೇವೆ ಮಾಡಲು ಸೂಚಿಸುವಂತೆ ಚಿತ್ರಸೇನನಿಗೆ ತಿಳಿಸುವನು. ಅದರಂತೆ ಅವನು ಊರ್ವಶಿಗೆ ಹೇಳಿದಾಗ ಅವಳು ಅರ್ಜುನನನ್ನು ಮನದಲ್ಲಿ ನೆನೆದಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಶ್ಚಿಮದಲ್ಲಿ ಹವಾಮಾನ ಬದಲಾವಣೆಯೊಂದಿಗೆ ಮನರಂಜನೆಯು ಹೇಗೆ ಬದಲಾಗುತ್ತದೆ?

Sun Feb 27 , 2022
ಬದಲಾವಣೆಯು ಕಷ್ಟಕರವಾಗಿರುತ್ತದೆ, ವಿಶೇಷವಾಗಿ ಬೇಸಿಗೆಯ ಉಷ್ಣತೆ, ಮೆಗಾ-ಬರಗಳು, ಆಕ್ರಮಣಕಾರಿ ಪ್ರಭೇದಗಳು ಮತ್ತು ಹವಾಮಾನ ಬದಲಾವಣೆಯ ಅಹಿತಕರ ಫಲಿತಾಂಶಗಳ ಪಟ್ಟಿಯಿಂದ ಇತರ ವಸ್ತುಗಳನ್ನು ಒಳಗೊಂಡಿರುವಾಗ. ಬದಲಾಗುತ್ತಿರುವ ಹವಾಮಾನದಿಂದ ಅಸಂಖ್ಯಾತ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳಿವೆ – ಆದರೆ ಪಾಶ್ಚಿಮಾತ್ಯ US ನಲ್ಲಿ ಸ್ಕೀಯಿಂಗ್, ಹೈಕಿಂಗ್, ಬೈಕಿಂಗ್, ಬೇಟೆಯಾಡುವುದು ಮತ್ತು ಇತರ ರೀತಿಯ ಹೊರಾಂಗಣ ಮನರಂಜನೆಯು ಅನೇಕ ಜನರ ಜೀವನಕ್ಕೆ ಪ್ರಮುಖವಾಗಿದೆ ಮತ್ತು ಸ್ಥಳೀಯ ಆರ್ಥಿಕತೆಗಳು ಈ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಆದಾಯವನ್ನು ಅವಲಂಬಿಸಿವೆ. […]

Advertisement

Wordpress Social Share Plugin powered by Ultimatelysocial