ಸ್ಟೀವ್ ಜಾಬ್ಸ್ ಅಮೇರಿಕನ್ ವಾಣಿಜ್ಯೋದ್ಯಮಿ

ಸ್ಟೀವ್ ಜಾಬ್ಸ್ ನೆನೆದಾಗಲೆಲ್ಲಾ ಎಂತದ್ದೋ ಹೃದ್ಭಾವ ಮೂಡುತ್ತದೆ. ಅವ ಮಾಡಿದ್ದೆಲ್ಲಾ ಹೊಸ ಹೊಸದು. ಆತ ಎಲ್ಲೋ ಮಾಡಿದ್ದ ಭಾಷಣ ನೆನೆದಾಗ ಮತ್ತಷ್ಟು ಹೃದಯ ತುಂಬುತ್ತದೆ. ಆ ಭಾಷಣದಲ್ಲಿ ಆತ ಹೇಳಿದ್ದು ಚೆನ್ನಾಗಿ ನೆನಪಿರೋದು ಇಷ್ಟು. ಆತ ಕಾಲೇಜು ಅರ್ಧಕ್ಕೆ ಬಿಟ್ಟ. ಆದ್ರೂ ಏನನ್ನಾದರೂ ಮಾಡ್ಬೇಕು ಅಂತ ತಲೇಲಿ ಕೊರೀತಾನೇ ಇರ್ತಿತ್ತು. ಕೈಯಲ್ಲಿ ದುಡ್ಡಿಲ್ಲ, ಊಟಕ್ಕೆ ಏನು ಮಾಡೋದು? ಅವನಿಗೆ ಗೊತ್ತಾಯ್ತು. ಅವನಿರೋ ಜಾಗದಿಂದ ಒಂದೈದು ಮೈಲಿ ನಡೆದರೆ ಅಲ್ಲಿದ್ದ ಇಸ್ಕಾನ್ ದೇವಸ್ಥಾನದಲ್ಲಿ ಊಟ ಹಾಕ್ತಾರೆ ಅಂತ. ಒಂದಷ್ಟು ದಿವಸ ದಿನಾಲೂ ನಡೆದುಕೊಂಡು ಹೋಗ್ತಾ ಇದ್ದ. ಅದಕ್ಕೇ ಇರ್ಬೇಕು ಅವನಿಗೆ ಭಾರತದ ಆಧ್ಯಾತ್ಮ ಕಂಡ್ರೆ ಇಷ್ಟ!
ಒಮ್ಮೆ ಅವನ ಸ್ನೇಹಿತ ಒಬ್ಬನ್ನ ಕರ್ಕೊಂಡು ಭಾರತದಲ್ಲಿದ್ದ ನೀಮ್ ಕರೋಲಿ ಬಾಬಾ ಎಂಬ ಸಂತರನ್ನು ಹುಡುಕಿಕೊಂಡು ಬಂದ. ಇಲ್ಲಿ ಬಂದಾಗ ಗೊತ್ತಾಯ್ತು ಅವರು ಹೋಗಿಬಿಟ್ರು ಅಂತ. ಪುಣ್ಯ, ಒಬ್ಬ ಅಥವಾ ಇಬ್ಬರು ವಿದೇಶಿ ಸ್ವಾಮಿಗಳು ನಮ್ಮ ದೇಶಕ್ಕೆ ಕಡಿಮೆ ಆದ್ರು! ವಿಶ್ವಕ್ಕೆ ಹೊಸ ಹೊಸ ನಮೂನೆಯ ಮ್ಯಾಕು, ಐ-ಮ್ಯಾಕು, ಐಪಾಡು, ಐ-ಫೋನು, ಐಪ್ಯಾಡು ಹೀಗೆ ವಿವಿಧ ಹಾಡುಗಳು, ಪಾಡುಗಳು, ಪ್ಯಾಡುಗಳು, ಫೋನುಗಳು ಜನರ ಹಣೆಯಲ್ಲಿ ಬರೆದಿರೋದನ್ನ ತಪ್ಸೋದು ಹ್ಯಾಗೆ!ಅದೆಲ್ಲಾ ಇರ್ಲಿ. ಅವನು ಭಾಷಣದಲ್ಲಿ ಹೇಳಿದ ಒಂದು ಮಾತು ನನಗೆ ತುಂಬಾ ತುಂಬಾ ಇಷ್ಟ ಆಯ್ತು. “ಮೊದಲು ನಿನ್ನ ಪ್ರೀತಿ ಏನು, ನಿನಗೆ ಏನು ಇಷ್ಟ, ಅದನ್ನು ಮೊದಲು ಕಂಡುಕೋ”. ನನಗೊತ್ತು. ನಮ್ಮ ಇಂದಿನ ಕಾಲದಲ್ಲಿ ನಮ್ಮ ಹುಡುಗರು ಹುಡುಗೀರೆಲ್ಲಾ ಯಾರು ಯಾರನ್ನೋ ಇಷ್ಟ ಪಡ್ತಾರೆ, ಸಿಕ್ಕಿದ ವಸ್ತೂನೆಲ್ಲಾ ಇಷ್ಟ ಪಡ್ತಾರೆ. ನಮ್ಮ ಕಾಲದವರೇನ್ ಕಮ್ಮಿ ಇಲ್ಲ ಅನ್ನಿ. ಆದ್ರೆ ಸ್ಟೀವ್ ಜಾಬ್ಸ್ ಹೇಳಿದ್ದು ಅದನ್ನಲ್ಲ. “ನಿಮಗೆ ಏನು ಕೆಲಸ ಮಾಡಲಿಕ್ಕೆ ಇಷ್ಟಾನೋ ಅದನ್ನು ಕಂಡ್ಕೊಂಡು, ಮೊದಲು ಅದನ್ನು ಮಾಡಿ” ಅಂತ. ಇದನ್ನೇ ಐನ್ ಸ್ಟೀನ್ ಸಾಹೇಬ್ರು ಕೂಡಾ ಹೇಳಿದ್ರು. “Don’t tie yourself to a person or a thing, tie yourself to a purpose” ಅಂತ. ಸ್ಟೀವ್ ಜಾಬ್ಸ್ ಹೇಳಿದ ಹಾಗೆ ನಾವೆಲ್ಲಾ ಕೇಳಿದ್ದಿದ್ರೆ ಅವನು ಮಾಡಿದ ಆ ಪಾಡು, ಫೋನು, ಪ್ಯಾಡು, ಮ್ಯಾಕುಗಳನ್ನೆಲ್ಲಾ ಕೊಂಡುಕೋಬೇಕು ಅಂತ ಆಸೆ ಪಡೋವ್ರು ತಾನೇ ಯಾರಿರ್ತಾ ಇದ್ರು. ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್ ಅಂತಹವರು ಸಕ್ಸಸ್ ಆಗೋಕೆ ಹೇಗಾಗ್ತಾ ಇತ್ತು! ನಮ್ಮಂತಹ ಹಿಂದಿನ ಸಾಲಿನ ಹುಡುಗರಿಂದಲೇ ಅಂತಹ ಮೇಧಾವಿಗಳು ಅಲ್ವ?.ಇಷ್ಟು ಮಾತ್ರ ಸತ್ಯ. ಸ್ಟೀವ್ ಜಾಬ್ಸ್ ಮಾತ್ರ ಅವನ ಕೈಯಲ್ಲಿರೋ ‘job’ನ್ನ ನಮ್ಮ ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೇಳಿದ ಹಾಗೆ ಪ್ರೀತಿಯಿಂದ ಶ್ರದ್ಧೆಯಿಂದ ಮಾಡ್ತಾ ಬಂದ. ಹೆಚ್ಚಿಗೆ ಕೃಷ್ಣ ಲೀಲೆ ಆಡ್ಲಿಲ್ಲ. ಆದ್ರೂ ಈ ಬುದ್ಧಿವಂತರಿದ್ದಾರಲ್ಲ ಅವರದ್ದು ಸ್ವಲ್ಪ ಕಷ್ಟದ ಸಹವಾಸ. ಅವರು ಚೆನ್ನಾಗಿದ್ರೆ ಅವರ ಜೊತೆಯವರು ಚೆನ್ನಾಗಿರೋಲ್ಲ, ಜೊತೆಯವರು ಚೆನ್ನಾಗಿದ್ರೆ ಇವರು ಚೆನ್ನಾಗಿರೋಲ್ಲ. ಆಪಲ್ ಸಂಸ್ಥೆಯಲ್ಲಿ ಸ್ಟೀವ್ ಜಾಬ್ಸ್ ಯಾರನ್ನು ಕರೆತಂದಿದ್ನೋ ಅವನೇ ಇವನನ್ನು ಒಂದು ದಿನ ಮನೆಗೆ ಕಳಿಸಿಬಿಟ್ಟ. ಸ್ಟೀವ್ ‘ನೆಕ್ಸ್ಟ್’ ಅಂತ ಮತ್ತೊಂದು ಸಂಸ್ಥೆ ಪ್ರಾರಂಭ ಮಾಡ್ದ, ಅದು ಬುದ್ಧಿವಂತಿಕೆಯಿಂದ ತುಂಬಿ ತುಳುಕುತ್ತಿದ್ರೂ ವ್ಯವಹಾರದಲ್ಲಿ ಮಾತ್ರ ಕುಂಟು. ಆತ ಕಷ್ಟದಲ್ಲಿದ್ದಾಗ ಆತನ ಸಾಮರ್ಥ್ಯವನ್ನರಿತು ಆತನಿಗೆ ಎಲ್ಲ ರೀತಿಯಲ್ಲೂ ಬೆಂಗಾವಲಾದವನು ಮತ್ತೊಬ್ಬ ಪ್ರತಿಭಾವಂತ ಬಿಲ್ ಗೇಟ್ಸ್. ಮುಂದೆ ಸ್ಟೀವ್ ಜಾಬ್ಸ್ ‘ಪಿಕ್ಸರ್’ ಅಂತ ಆನಿಮೇಶನ್ ಸಂಸ್ಥೆ ಪ್ರಾರಂಭ ಮಾಡ್ದ. ಅದರಿಂದ ವಾಲ್ಟ್ ಡಿಸ್ನಿಗೆ ಅದೃಷ್ಟ ಖುಲಾಯಿಸ್ತು. ಸ್ಟೀವ್ ಜಾಬ್ಸ್ ಗೆ ಕೂಡಾ. ಅಷ್ಟರಲ್ಲೇ ಆಪಲ್ ಸಂಸ್ಥೆ ಪುನಃ ಸ್ಟೀವ್ ಜಾಬ್ಸ್ ಕಾಲಿಗೆ ಬಿತ್ತು. ನಾನು ನೀನು ಅಕ್ಕಪಕ್ಕದ ‘ನೆಕ್ಸ್ಟ್’ ಆಗಿರೋದು ಬೇಡ. ಒಂದೇ ಆಗೋಣ ಬಾ ಅಂತ, ಅವನನ್ನೇ ಮುಖ್ಯಸ್ಥ ಅಂತ ಮಾಡ್ತು. ಒಂದಾದ ಮೇಲೆ ಒಂದು ಯಶಸ್ಸೋ ಯಶಸ್ಸು. ನಮ್ಮ ಸ್ಟೀವ್ ಜಾಬ್ಸನಿಗೆ ಡಿಮಾಂಡಪ್ಪೋ ಡಿಮಾಂಡು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನಂತ ಪೈ ಭಾರತೀಯ ಕಾಮಿಕ್ಸ್‌ನಲ್ಲಿ ಪ್ರವರ್ತಕ

Fri Feb 24 , 2023
  ನಮ್ಮ ಪೀಳಿಗೆಯ ಹಿಂದಿನ ಕಾಲದಲ್ಲಿ ಕಥೆ ಅಂದ್ರೆ ರಾಮಾಯಣ, ಮಹಾಭಾರತ, ಭಾಗವತ ಅನ್ನೋವ್ರು. ಇಂದಿನ ಕಾಲದಲ್ಲಿ ಮಕ್ಕಳು ಸ್ಪೈಡರ್ ಮ್ಯಾನ್, ಹ್ಯಾರಿ ಪಾಟರ್, ಕ್ಯಾಪ್ಟನ್ ಅಮೆರಿಕ, Ant ಮ್ಯಾನ್ ಇತ್ಯಾದಿ ಹೇಳ್ತಾರೆ. ಕನ್ನಡದಲ್ಲಿ ಕಥೆಗಳು ಅನ್ನೋದನ್ನ ಮಕ್ಕಳು ಇಂದಿನ ದಿನಗಳಲ್ಲಿ ಕೇಳ್ತಾರ. ನಂಗೊತ್ತಿಲ್ಲ. ನಮ್ಮ ಕಾಲದಲ್ಲಿ ಕಥೆಯ ದೊಡ್ಡದೊಂದು ಯುಗ ಇತ್ತು. ಅದು ‘ಅಮರ ಚಿತ್ರ ಕಥಾ ಯುಗ’. ಆ ಯುಗದ ಪ್ರವರ್ತಕರೇ ‘ಅನಂತ’ ಪೈ.ಇಂದು ಅವರ ಸಂಸ್ಮರಣಾ […]

Advertisement

Wordpress Social Share Plugin powered by Ultimatelysocial