ಸುನೀತಾ ಗಂಗಾವತಿ

ಸುನೀತಾ ಗಂಗಾವತಿ ಹಳೆಮನೆ ಸುಶ್ರಾವ್ಯ ಸಂಗೀತಗಾರ್ತಿ ಮಾತ್ರವಲ್ಲ ಬಹುಮಖಿ ಸಂಗೀತ, ನಾಟಕ ಮತ್ತು ಧ್ವನಿ ಪ್ರತಿಭೆ. ಕನ್ನಡ, ಹಿಂದಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯಲ್ಲಾದರೂ ಸುಸ್ಪಷ್ಟ ಉಚ್ಚಾರ ಮತ್ತು ಅದಕ್ಕೆ ಹೊಂದುವಂತಹ ಸೂಕ್ತ ಸುಶ್ರಾವ್ಯ ಧ್ವನಿಭಾವ ಇವರ ಗಾಯನ ವೈಶಿಷ್ಟ್ಯತೆಯಾಗಿದೆ.
ಮಾರ್ಚ್ 10 ಸುನೀತಾ ಗಂಗಾವತಿ ಅವರ ಜನ್ಮದಿನ.. ಮೂಲತಃ ಬಳ್ಳಾರಿಯವರಾದ ಇವರು ಚಿಕ್ಕ ವಯಸ್ಸಿನಲ್ಲೆ ತಂದೆಯನ್ನು ಕಳೆದುಕೊಂಡು ಗಂಗಾವತಿಯಲ್ಲಿನ ತಾಯಿಯ ತವರಿನಲ್ಲಿ ಆಶ್ರಯ ಪಡೆದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರೇಜಂತಕಲ್ ಹಾಗೂ ಪ್ರೌಢ ಶಾಲೆ ಹಾಗೂ ಕಾಲೇಜು ವ್ಯಾಸಂಗವನ್ನು ಸರೋಜಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು.
ಶಾಲಾ ದಿನಗಳಿಂದಲೇ ಪ್ರತಿಭೆ ಮತ್ತು ಸಕ್ರಿಯ ಆಸಕ್ತಿಗಳನ್ನು ಅಭಿವ್ಯಕ್ತಿಸಿದ್ದ ಸುನೀತಾ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್’ನಲ್ಲಿ ರಾಜ್ಯಪಾಲರಾಗಿದ್ದ ರಮಾದೇವಿ ಹಾಗೂ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಚಿಕ್ಕವರಿದ್ದಾಗ ಈಟಿವಿ ವಾಹಿನಿಯಲ್ಲಿ ಹಾಡಿಗೊಂದು ಹಾಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.
ಸುನೀತಾ ಗಂಗಾವತಿ ಅವರ ಸಂಗೀತ ಪಯಣ ಅವರು ಹತ್ತು ವರ್ಷದವರಿದ್ದಾಗ ಕೆ. ಎಫ್. ಮುದ್ದಾಬಳ್ಳಿ ಅವರ ಸಂಗೀತ ಸಂಸ್ಥೆಯಲ್ಲಿ ಮಹಾದೇವಪ್ಪ ಹಾದಿಮನಿ ಗುರುಗಳಿಂದ ಆರಂಭಗೊಂಡಿತು. ಗಂಗಾವತಿಯ ಜನರ ಪ್ರೀತಿ ವಿಶ್ವಾಸಗಳಿಂದ ಗಂಗಾವತಿಯ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ವಾರ್ತಾವಾಚಕಿಯಾಗಿ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದರು. 78ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ ಸಮಿತಿಯಲ್ಲಿನ ಕಾರ್ಯನಿರ್ವಹಣೆ ಸಹಾ ಇವರ ವಿಶಿಷ್ಟ ಅನುಭವಗಳಲ್ಲಿ ಸೇರಿದೆ.
ಕನಕಗಿರಿ ‌‌ಉತ್ಸವದಲ್ಲಿ ನಾದಬ್ರಹ್ನ ಹಂಸಲೇಖ ಅವರು “ನನ್ನದೊಂದು ಸಂಗೀತ ಕಾಲೇಜು ಇದೆ. ಇಷ್ಟ ಇದ್ದವರು ಬಂದು ಸೇರಬಹುದು” ಎಂದು ನೀಡಿದ ಕರೆ ಸುನೀತಾ ಅವರ ಸಂಗೀತ ಪಯಣದಲ್ಲೊಂದು ಮಹತ್ವದ ತಿರುವು.
ಹೀಗೆ ಹೆಚ್ಚಿನ ಸಂಗೀತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ನಾದಬ್ರಹ್ಮ ಹಂಸಲೇಖ ಗುರುಗಳ ದೇಸಿ ಕಾಲೇಜು ಸೇರಿದ ಸುನೀತಾ ಎಮ್.ಡಿ.ಎಮ್. ಕೋರ್ಸ್ ವ್ಯಾಸಂಗ ನಡೆಸಿದ್ದಲ್ಲದೆ ಗುರು ಹಂಸಲೇಖ ಅವರೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತ ಬಂದರು.
ಹೀಗೆ ಹೆಚ್ಚಿದ ಆತ್ಮವಿಶ್ವಾಸ ತುಂಬಿಕೊಂಡ ಸುನೀತಾ ಗಂಗಾವತಿ ಅವರು ಸ್ವಯಂ “ಸ್ವರ ಲೋಕ ಸಂಗೀತ ಮಹಾವಿದ್ಯಾಲಯ”ವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಿದ್ದಾರೆ. ಇಲ್ಲಿ ನೂರಾರು ಅಭ್ಯರ್ಥಿಗಳು ಸಂಗೀತಾಭ್ಯಾಸ ಮಾಡುತ್ತಿದ್ದಾರೆ
ಸಂಗೀತವನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಸುನೀತಾ ಗಂಗಾವತಿ ಅವರು ತಮ್ಮ ಈ ಸಂಗೀತದ ಹಾದಿಯಲ್ಲಿ ಜೂನಿಯರ್ ವಿದ್ಯಾಭ್ಯಾಸಕ್ಕೆ ಗುರುಳಾದ ಮಹಾದೇವಪ್ಪ ಹಾದಿಮನಿ,
ಸೀನಿಯರ್ ಮತ್ತು ವಿದ್ವತ್ ಸಾಧನೆಗೆ ಗುರುಗಳಾದ ದೊಡ್ಡಯ್ಯ ಗವಾಯಿ ಗುರುಗಳು ಮತ್ತು Masters in Desi music ಸಾಧನೆಗೆ ಹಂಸಲೇಖ ಗುರುಗಳ ಕುರಿತು ನೀಡಿದ ಬೆಳಕಿನ ಕುರಿತು ಪೂಜ್ಯಭಾವ ಹೊಂದಿದ್ದಾರೆ.
ಸುನೀತಾ ಗಂಗಾವತಿ ಅವರದ್ದು ನಾಟಕ ರಂಗದಲ್ಲೂ ಸಾಧನೆ ಇದೆ. ಗಂಗಾವತಿಯಲ್ಲಿ
ಪರಶುರಾಮ್ ಪ್ರಿಯ ಅವರ ಮಾರ್ಗದರ್ಶನದಲ್ಲಿ ಅಕ್ಕಮಹಾದೇವಿ, ಬಸವ ಮಹಾಮಾನವ, ಬೆಳಕಿನಡೆಗೆ ಮುಂತಾದ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಡಾ. ಚಂದ್ರಶೇಖರ್ ಕಂಬಾರ ರಚಿತ ‘ಮಹಾಶಿವರಾತ್ರಿ’ ಎಂಬ ಬಸವಣ್ಣನವರ ಜೀವನಾಧಾರಿತ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನೀಡಿದ್ದು ಅವರ ಜೀವನದಲ್ಲಿನ ಅವಿಸ್ಮರಣೀಯ ಕ್ಷಣಗಳಲ್ಲೊಂದು.
ಸುನೀತಾ ಗಂಗಾವತಿ ಅವರು ಚಂದನ ವಾಹಿನಿ ಮತ್ತು ವಾರ್ತಾ ಇಲಾಖೆಯ ಅನೇಕ ವ್ಯಕ್ತಿ ಚಿತ್ರಣಗಳಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಪಂಡಿತ್ ಪುಟ್ಟರಾಜ ಗುರುಗಳ ಕೃಪಾಶೀರ್ವಾದದಿಂದ ದುದುನಿಯ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಮೌನ ತಪಸ್ವಿ ಧ್ವನಿಸುರುಳಿಯನ್ನು ಹೊರ ತಂದಿದ್ದಾರೆ. ಅದರಲ್ಲಿನ ಹಲವಾರು ಹಾಡುಗಳನ್ನು ಇವರೇ ರಚಸಿದ್ದಾರೆ.
ಸುನೀತಾ ಗಂಗಾವತಿ ಜೀವನದಲ್ಲಿ ಕಷ್ಟಪಟ್ಟು ನೋವು, ಅಪಮಾನಗಳುಂಡರೂ ಶ್ರದ್ಧೆಯಿಂದ ತಮ್ಮ ಸಾಧನೆಯತ್ತ ಗಮನ ಹರಿಸಿದವರು. ತಮಗೆ ಹಲವು ಬಗೆಯಾಗಿ ಬೆಂಬಲಕ್ಕೆ ನಿಂತವರ ಹೆಸರುಗಳನ್ನು ತಮ್ಮ ಸ್ಮರಣೆಯಲ್ಲಿ ಸದಾ ಪೋಣಿಸಿಕೊಂಡು ಸಾಧನೆಯತ್ತ ಮೊಗ ಮಾಡಿದವರು. ಕಲಿಕೆಗೆ ಕೊನೆ-ಎಲ್ಲೆಗಳಿಲ್ಲ ಎಂದು ನಂಬಿರುವ ಸುನೀತಾ ಖ್ಯಾತ ತಬಲಾ ವಾದಕರಾದ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಶರಣ್ ಕುಮಾರ್ ಹೂಗಾರ್ ಅವರ ಬಳಿ ತಬಲ ಅಭ್ಯಾಸವನ್ನೂ ಮಾಡುತ್ತಿದ್ದಾರೆ.
ಸುನೀತಾ ಗಂಗಾವತಿ ಅವರ ಪ್ರಸಿದ್ಧ ಸಂಗೀತ ಕಾರ್ಯಕ್ರಮಗಳಲ್ಲಿ ಕೊಪ್ಪಳ ಗವಿ ಮಠದಲ್ಲಿ ಬೆಳಕಿನೆಡೆಗೆ ಕಾರ್ಯಕ್ರಮದಲ್ಲಿ ಸಂಗೀತ ನೀಡಿ ಶ್ರೀ ಗಳ ಮೆಚ್ಚುಗೆಗೆ ಪಡೆದಿರುವುದೂ ಒಂದು. ಮಹಾನ್ ಗಾಯಕಿ ಎಸ್. ಜಾನಕಿ ಅವರ ಮುಂದೆ ಹಾಡಿ ಅಕ್ಕರೆಯ ಆಶೀರ್ವಾದ ಸಂಪಾದಿಸಿರುವ ಸಂತೋಷವೂ ಇವರ ಜೊತೆಗಿದೆ.
ಸುನೀತಾ ಗಂಗಾವತಿ ಅವರಿಗೆ ಬಸವ ರತ್ನ ಪ್ರಶಸ್ತಿ, ಉತ್ತಮ ಮಾಧ್ಯಮ ಸಮಿತಿ ನಿರ್ವಹಣೆ ಗೌರವ ಮತ್ತು ಉತ್ತಮ ಸಮಾಜ ಸೇವಕಿ ಗೌರವಗಳು ಸಂದಿವೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೊ. ಯು. ಆರ್. ರಾವ್

Thu Mar 10 , 2022
ಇಂದು ಪ್ರೊ. ಉಡುಪಿ ರಾಮಚಂದ್ರ ರಾವ್ ಬಾಹ್ಯಾಕಾಶ ವಿಜ್ಞಾನಿಗಳಾಗಿ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ, ಭಾರತ ದೇಶ ಇಂದು ಬಾಹ್ಯಾಕಾಶ ಯುಗದಲ್ಲಿ ಗಳಿಸಿರುವ ಪ್ರತಿಷ್ಠಿತ ಸ್ಥಾನಕ್ಕೆ ಪ್ರಮುಖ ಕೊಡುಗೆದಾರರು. 2004ರ ವರ್ಷದಲ್ಲಿ ಅಂತರರಾಷ್ಟ್ರೀಯ ಪ್ರತಿಷ್ಠಿತ ‘ಸ್ಪೇಸ್ ಮಾಗಜೈನ್’ ಬಾಹ್ಯಾಕಾಶ ವಿಜ್ಞಾನದಲ್ಲಿ 1989-2004 ವರ್ಷದ ವರೆಗಿನ ಅವಧಿಯ ಸಾಧನೆಯ ಆಧಾರದ ಮೇಲೆ ಬಾಹ್ಯಾಕಾಶ ವಿಜ್ಞಾನ ಸಾಧನೆಯ ಹತ್ತು ಪ್ರಮುಖ ಸಾಧಕರಲ್ಲಿ ಯು. ಆರ್. ರಾವ್ ಅವರನ್ನು ಒಬ್ಬ ಪ್ರಮುಖರೆಂದು ಪರಿಗಣಿಸಿತು. […]

Advertisement

Wordpress Social Share Plugin powered by Ultimatelysocial