ಸುರೇಶ್ ಹೆಬ್ಳೀಕರ್

ನಮ್ಮ ಸುರೇಶ್ ಹೆಬ್ಳೀಕರ್ ಯಾವಾಗಲೂ ಸುದ್ಧಿ ಮಾಡುವ ಚಿತ್ರರಂಗದಲ್ಲಿನ ಸದ್ದುಗದ್ದಲವಿಲ್ಲದ ಒಬ್ಬ ಸೂಪರ್ ಸ್ಟಾರ್. ಚಿತ್ರರಂಗದಲ್ಲಿ ಅವರೊಬ್ಬ ಯಶಸ್ವೀ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಪರಿಸರ ಸಂರಕ್ಷಣೆಯಲ್ಲಿ ನಿಷ್ಠೆಯ ಕಾರ್ಯಕರ್ತ.
ಸುರೇಶ್ ಹೆಬ್ಳೀಕರ್ 1948ರ ಫೆಬ್ರವರಿ 22ರಂದು ಜನಿಸಿದರು. ಧಾರವಾಡದ ಪ್ರೆಸೆಂಟೇಷನ್ ಕಾನ್ವೆಂಟ್, ಬಾಸೆಲ್ ಮಿಷನ್ ಶಾಲೆಗಳಲ್ಲಿ ಓದಿ, ಕರ್ನಾಟಕ ಕಾಲೇಜಿನಲ್ಲಿ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಗಳಿಸಿದರು.
ಸುರೇಶ್ ಹೆಬ್ಳೀಕರ್ ಸುರದ್ರೂಪಿ ನಾಯಕನಟರಾಗಿ ಕಂಗೊಳಿಸಿದ ಸರಳ ಸುಂದರ ಚಿತ್ರ ‘ಅಪರಿಚಿತ’ ಕನ್ನಡ ಚಿತ್ರರಂಗದ ಅವಿಸ್ಮರಣೀಯ ಚಿತ್ರಗಳಲ್ಲೊಂದು. ಬಹುಶಃ ಅವರು ಆ ಚಿತ್ರದಲ್ಲಿನ ತಮ್ಮ ನಾಯಕ ನಟನ ವರ್ಚಸ್ಸನ್ನು ಮಾತ್ರವೇ ಉಪಯೋಗಿಸಿಕೊಂಡಿದ್ದರೆ, ಹಲವು ಕಾಲ ಮಿಣ ಮಿಣ ಮಿಂಚುವ ಹೀರೋ ಅಗವುದು ಸಾಧ್ಯವಿತ್ತು. ಆದರೆ ಅವರು ಚಿತ್ರರಂಗವನ್ನು ತಮ್ಮ ಹಲವು ಅಸಕ್ತಿಗಳ ನಡುವಿನ ಒಂದು ಸಕ್ರಿಯ ಮಾಧ್ಯಮವಾಗಿಸಿಕೊಂಡು ಸಾಗಿದರು.ಸುರೇಶ್ ಹೆಬ್ಳೀಕರ್ ಚಿತ್ರಗಳು ಹಲವು ರೀತಿಯಲ್ಲಿ ವಿಶಿಷ್ಟ. ಅವರ ಪಾತ್ರ ನಿರ್ವಹಣೆಗಳು ಹೀರೋ ಆಗಿ ಕೈ, ಕಾಲು, ಮೂತಿ ತಿರುಚದೆಯೇ ಪ್ರೇಕ್ಷಕನಿಗೆ ಸಾಹಸಿ ಹೀರೋ ಜೊತೆಗಿನ ಉಪಸ್ಥಿತಿಯನ್ನು ನೀಡಿದಂತಹವು. ಅವರ ಚಿತ್ರಗಳು ಪ್ರಣಯದ ರಮ್ಯತೆಯನ್ನು, ಪರಿಸರದ ಸೊಬಗನ್ನು ಹಾಗೂ ಪ್ರೇಕ್ಷಕ ಕಥಾನಕಗಳಲ್ಲಿ ಬಯಸುವ ಕುತೂಹಲಗಳನ್ನು ಅಚ್ಚುಕಟ್ಟಾದ ಸಂವೇದನೆಗಳಲ್ಲಿ ಕಟ್ಟಿಕೊಟ್ಟಂತಹವು.ಸುರೇಶ್ ಹೆಬ್ಳೀಕರ್ ಅವರ ‘ಕಾಡಿನ ಬೆಂಕಿ’ ಚಿತ್ರವು ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ , ‘ಪ್ರಥಮ ಉಷಾ ಕಿರಣ’ ಚಿತ್ರವು ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಗಳಿಸಿದವು. ‘ಆಘಾತ’ ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಂದಿತು. ಇವರ ‘Shepherds on the move’ ಚಿತ್ರಕ್ಕೆ ಪ್ರತಿಷ್ಠಿತ ಓಸಿರಿಸ್ ಪ್ರಶಸ್ತಿ ಸಂದಿತು.ಸುರೇಶ್ ಹೆಬ್ಳೀಕರ್ ತಮ್ಮ ಚಿತ್ರಕತೆಗಳಲ್ಲಿ ಮನೋವಿಕಾರ ಸಮಸ್ಯೆಗಳು ಮತ್ತು ವೈಜ್ಞಾನಿಕ ಮನೋಭಾವ ಹೊರಹೊಮ್ಮಿರುವುದಕ್ಕೆ ಮನೋವಿಶ್ಲೇಷಕರೂ ನಿರ್ಮಾಪಕರೂ ಆದ ಡಾ. ಅಶೋಕ್ ಪೈ ಅವರೊಂದಿಗಿನ ತಮ್ಮ ಸಹಚರ್ಯೆ ಕಾರಣ ಎನ್ನುತ್ತಾರೆ.ಸುರೇಶ್ ಹೆಬ್ಳೀಕರ್ ಅವರ ಜೀವನ ಚರಿತ್ರೆಯ ಹೆಸರು ‘Live with Dreams’. ಇದನ್ನು ವೈದ್ಯರಾದ ಡಾ. ವೀಣಾ ಭಾರತಿ ಬರೆದಿದ್ದಾರೆ. ಸುರೇಶ್ ಹೆಬ್ಳೀಕರ್ ಅವರ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುವ ಗಿರೀಶ್ ಕಾಸರವಳ್ಳಿ “ಅವರ ಕಾರ್ಯಗಳು ಕಲೆ ಮತ್ತು ವಿಜ್ಞಾನದ ಸಂಯೋಗವಾಗಿದ್ದು, ಭಾವನೆಗಳಿಗಿಂತ ಮಿಗಿಲಾಗಿ ಹೊಸ ಚಿಂತನೆಗಳತ್ತ ಗಮನ ಹರಿಸಿದಂತಹವು” ಎನ್ನುತ್ತಾರೆ.ಸುರೇಶ್ ಹೆಬ್ಳೀಕರ್ ಅವರ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ್ದು. ಬಹಳ ಹಿಂದಿನಿಂದ ‘ಪಶ್ಚಿಮ ಘಟ್ಟ’ ಉಳಿಸಿ ಮುಂತಾದ ಅಭಿಯಾನಗಳಲ್ಲಿ ಅನೇಕ ಸಮಾನ ಮನಸ್ಕರೊಡನೆ ಭಾಗವಹಿಸುತ್ತ ಬಂದ ಅವರು, 1998ರಲ್ಲಿ ‘ಎಕೊ-ವಾಚ್’ ಎಂಬ ಪರಿಸರ ಸಂರಕ್ಷಣಾ ವೇದಿಕೆ ಹುಟ್ಟುಹಾಕಿದರು.”ನಮ್ಮ ಗುರುಗಳಾದ ಸುರೇಶ್ ಹೆಬ್ಳೀಕರ್ ಎರಡು ಲಕ್ಷಕ್ಕೂ ಹೆಚ್ಚು ಗಿಡ ನೆಟ್ಟಿದ್ದಾರೆ” ಎಂಬುದು ಅವರ ಆತ್ಮೀಯ ಶಿಷ್ಯಗಣದ ಅಂಬೋಣ.
ಸುರೇಶ್ ಹೆಬ್ಳೀಕರ್ ಅವರ ಪರಿಸರ ಕಾಳಜಿಯ ಈ ಮಾತುಗಳು ಗಮನಾರ್ಹ: “ಈಗಾಗಲೇ ವಿಶ್ವ ಜನಸಂಖ್ಯೆ 800 ಕೋಟಿಗಳನ್ನು ಮೀರಿದೆ. ಇಲ್ಲಿರುವ ಪ್ರತಿಯೋರ್ವನೂ ಒಂದು ಕಾರು ಮತ್ತು ಒಂದು ರೆಫ್ರಿಜಿರೇಟರ್ ಹೊಂದಿದ್ದೇ ಆದಲ್ಲಿ ನಮ್ಮ ಗ್ರಹವನ್ನು ನಾವು ಉಳಿಸುವುದು ಕಷ್ಟಸಾಧ್ಯ!”
ಕವಿ ದೊಡ್ಡರಂಗೇಗೌಡರು “ನನಗೆ ಸುರೇಶ್ ಹೆಬ್ಳೀಕರ್ ಮತ್ತೊಂದು ರೀತಿಯಲ್ಲಿ ಮಣ್ಣಿನ ಮಗ, ಅವರೊಬ್ಬ ‘ಡೌನ್ ಟು ಅರ್ಥ್’ ಸರಳ ವ್ಯಕ್ತಿ” ಎನ್ನುತ್ತಾರೆ.ಸುರೇಶ್ ಹೆಬ್ಳೀಕರ್ ಅವರ ಮೊದಲ ಚಿತ್ರ 1975ರ ಎಂಬಿಎಸ್ ಪ್ರಸಾದ್ ಅವರ ‘ಕಂಕಣ’. ಮುಂದೆ ಋಷ್ಯಶೃಂಗ, ಅಪರಿಚಿತ, ಖಂಡವಿದೆಕೊ ಮಾಂಸವಿದೆಕೊ, ವಾತ್ಸಲ್ಯ ಪಥ, ಆಲೆಮನೆ, ಅಮರ ಮಧುರ ಪ್ರೇಮ, ಜ್ಯೋತಿ, ಪಲ್ಲವಿ ಅನುಪಲ್ಲವಿ, ಅಂತರಾಳ, ಮತ್ತೆ ವಸಂತ, ಕಾನೂನಿಗೆ ಸವಾಲ್, ಎಲ್ಲಿಂದಲೋ ಬಂದವರು,ಆಗಂತುಕ, ಹಾವು ಏಣಿ ಆಟ, ಕಾಡಿನ ಬೆಂಕಿ, ಪ್ರಥಮ ಉಷಾಕಿರಣ, ಬಣ್ಣದ ಗೆಜ್ಜೆ, ನೆಡುವೀರ್ಪ್ಪುಕಲ್, ಚುಕ್ಕಿ ಚಂದ್ರಮ, ಚಮತ್ಕಾರ,ಆಘಾತ, ತಾಯಿ ಸಾಹೇಬ,ಆಶಾ ಜ್ಯೋತಿ, ಸೂರಪ್ಪ, ಗಪ್ಚುಪ್, ಚಾಮುಂಡಿ, ನನ್ನ ಪ್ರೀತಿಯ ಹುಡುಗಿ, ಮೈಲಾರಿ, ಮನ ಮಂಥನ, ಬೀರಬಲ್ ಟ್ರೈಲಾಜಿ ಮುಂತಾದ ಅನೇಕ ವೈವಿಧ್ಯಪೂರ್ಣ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. Ecology of the Western Ghats, Energy 1984, Smoking Tuna, ಪಾದಚಾರಿ ಮಾರ್ಗದ ಆರೈಕೆ ಮುಂತಾದ ಸಾಮಾಜಿಕ ಕಳಕಳಿಯ ಸಾಕ್ಷ್ಯಚಿತ್ರಗಳ ಭಾಗವೂ ಆಗಿದ್ದಾರೆ. ಅನೇಕವನ್ನು ನಿರ್ಮಿಸಿ, ಕೆಲವನ್ನು ನಿರ್ದೇಶಿಸಿದ್ದಾರೆ.ಅಚ್ಚುಕಟ್ಟಾದ ಕೆಲಸ, ಪರಿಸರ ಪ್ರೇಮ, ಮಾಡುತ್ತಲೇ ಇರಬೇಕು ಹುಮ್ಮಸ್ಸು ಇರುವಾಗ ಮತ್ತಿನ್ನೇನು ಬೇಕು. ಇದು ನಮ್ಮ ಸುರೇಶ್ ಹೆಬ್ಳೀಕರ್ ಅವರ ‘Live with Dreams’ ಎಂಬ ಅವರ ಆತ್ಮಚರಿತ್ರೆ ಮಾತ್ರವಲ್ಲ, ಅವರ ನಿಜ ಜೀವನದ ಬದುಕು ಕೂಡ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ,

Wed Feb 23 , 2022
  ಕೊಲೆಗಾರರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಬುಧವಾರವೂ ರಾಜ್ಯಾದ್ಯಂತ ಹಿಂದುಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈಗಾಗಲೇ ಕೊಲೆ ಪ್ರಕರಣ ಸಂಬಂಧ ಪೊಲೀಸರು 12 ಮಂದಿಯನ್ನು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ಬೂದಿ ಮುಚ್ಚಿದ ಕೆಂಡದಂತಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.ಅರಸೀಕೆರೆ ಬಂದ್: ಹಾಸನ ಜಿಲ್ಲೆ ಅರಸೀಕೆರೆ ಬಂದ್​ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ. ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಬೃಹತ್​ ಪ್ರತಿಭಟನಾ ಮೆರವಣಿಗೆ […]

Advertisement

Wordpress Social Share Plugin powered by Ultimatelysocial