ಸಯೀದ್ ಜಾಫ್ರಿ ಒಬ್ಬ ಮಹಾನ್ ಚಲನಚಿತ್ರ ಕಲಾವಿದ.

ಸಯೀದ್ ಜಾಫ್ರಿ ಎಂದಾಗ ನೆನಪಾಗುವುದು ಅವರ ವಿಶಿಷ್ಟವಾದ ಧ್ವನಿ ಮತ್ತು ಮಧುರ ಸಂಭಾಷಣಾ ಶೈಲಿ. “ಶತರಂಜ್ ಕೇ ಖಿಲಾಡಿ” ಚಿತ್ರದಲ್ಲಿನ ಅವರ ಪಾತ್ರ ಅವಿಸ್ಮರಣೀಯ. ಅವಧ್ ಪ್ರಾಂತದಲ್ಲಿ ನವಾಬನಾದ ವಾಜಿದ್ ಅಲಿ ಶಾಹ್ ಒಬ್ಬ ವಿಲಾಸಿ ರಾಜ. ಅವನಿಗೆ ಮೂರು ಹೊತ್ತೂ ಶಾಯರಿ-ನೃತ್ಯ-ಗೀತೆಗಳಲ್ಲೇ ಮೋಹ. ಸ್ವಂತ ಕವಿ ಕೂಡ! ಯಥಾ ರಾಜಾ ತಥಾ ಪ್ರಜಾ! ಜನರಿಗೂ ಇಂಥದ್ದೇ ಶೋಕಿಗಳು. ಈ ಚಿತ್ರದಲ್ಲಿ ಸಜ್ಜದ್ ಅಲಿ ಮತ್ತು ರೋಷನ್ ಅಲಿ ಎಂಬ ಇಬ್ಬರು ಶ್ರೀಮಂತರ ಪಾತ್ರಗಳು ಬರುತ್ತವೆ. ಸಯೀದ್ ಜಾಫ್ರಿ ಮತ್ತು ಸಂಜೀವ್ ಕುಮಾರ್ ಈ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಇಬ್ಬರೂ ಶ್ರೀಮಂತರಿಗೆ ಶತರಂಜ್ ಆಡುವ ಶೋಕಿ. ಅದರಲ್ಲೇ ಮೂರು ಹೊತ್ತೂ ಮಗ್ನರಾಗಿರುವ ಇವರಿಗೆ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗಮನವೇ ಇರುವುದಿಲ್ಲ. ಒಬ್ಬ ಶ್ರೀಮಂತನ ಹೆಂಡತಿ ವಿರಹದಲ್ಲಿ ಬೇಯುತ್ತಾ ಹುಚ್ಚಿಯಂತಾಗಿದ್ದಾಳೆ. ಇನ್ನೊಬ್ಬನ ಹೆಂಡತಿ ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ! ಇತ್ತ ಈಸ್ಟ್ ಇಂಡಿಯಾ ಕಂಪನಿ ಅವಧ್ ಮೇಲೆ ಕಣ್ಣಿಟ್ಟಿದೆ. ಶತ್ರುಗಳು ಬಂದಾಗ ವಾಜಿದ್ ಅಲಿ ಶಾಹ್ ಯಾವುದೇ ಹೋರಾಟವಿಲ್ಲದೆ ತನ್ನ ತಲೆಯ ಮೇಲಿನ ಮುಕುಟವನ್ನು ಎತ್ತಿ ಕೆಳಕ್ಕಿಟ್ಟುಬಿಡುತ್ತಾನೆ. ಯುದ್ಧಕ್ಕೆ ಹೆದರಿದ ಶ್ರೀಮಂತರು ಓಡಿ ಒಂದು ಸ್ಮಶಾನದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಅಲ್ಲೂ ಅವರಿಗೆ ಶತರಂಜ್ ಶೋಕಿ ಬಿಡದು. ತಮ್ಮ ಪಗಡೆ ಹಾಸನ್ನು ಜೊತೆಗೇ ತೆಗೆದುಕೊಂಡು ಹೋಗುತ್ತಾರೆ! ಆಟದಲ್ಲಿ ಮೋಸ ಮಾಡಿದನೆಂಬ ಕಾರಣಕ್ಕಾಗಿ ಇಬ್ಬರಿಗೂ ಜಗಳವಾಗುತ್ತದೆ. ಇದಕ್ಕಾಗಿ ಒಬ್ಬರನ್ನೊಬ್ಬರು ಖೂನಿ ಮಾಡಲೂ ಅವರು ತಯಾರು! ಆದರೆ ತಮ್ಮ ಜೊತೆ ಪಗಡೆ ಆಡಲಾದರೂ ಯಾರಾದರೂ ಬೇಕಲ್ಲ! ಹೀಗಾಗಿ ಪರಸ್ಪರರನ್ನು ಕ್ಷಮಿಸುತ್ತಾರೆ. ಸತ್ಯಜಿತ್ ರೇ ಅವರ ನಿರ್ದೇಶನದಲ್ಲಿ ಸಂಜೀವ್ ಕುಮಾರ್ ಮತ್ತು ಸಯೀದ್ ಜಾಫ್ರಿ ಅವರ ಅಭಿನಯ ಮನೋಜ್ಞವಾಗಿದೆ. ಈ ಪಾತ್ರಗಳನ್ನು ಕಂಡು ನಗು, ಕೋಪ, ಹೇಸಿಕೆ, ಅನುಕಂಪ ಎಲ್ಲವೂ ಉಂಟಾಗುತ್ತದೆ! ಪ್ರೇಮ್ ಚಂದ್ ತಮ್ಮ ಕತೆಯನ್ನು ಇವರಿಬ್ಬರಿಗಾಗಿಯೇ ಬರೆದರು ಎಂಬಷ್ಟು ಸಹಜವಾಗಿ ಈ ನಟರು ಅಭಿನಯಿಸಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯ ಜೆನೆರಲ್ ಊಟ್ರಮ್ ಪಾತ್ರದಲ್ಲಿ ರಿಚರ್ಡ್ ಆಟೆನ್ ಬರೋ ನಟಿಸಿದ್ದಾರೆ.
ಸಯೀದ್ ಜಾಫ್ರಿ ಅವರು ಹಲವಾರು ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದ ಮ್ಯಾನ್ ಹೂ ವುಡ್ ಬಿ ಕಿಂಗ್ ಎಂಬುದು ರಡ್ಯಾರ್ಡ್ ಕಿಪ್ಲಿಂಗ್ ಬರೆದ ಕಥೆಯನ್ನು ಆಧರಿಸಿದ ಚಿತ್ರ. ಇದರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಲ್ಲಿ ಕೆಲಸಕ್ಕಿದ್ದ ಇಬ್ಬರು ಮೋಸಗಾರ ಸೈನಿಕರ ಕಥೆ ಬರುತ್ತದೆ. ಇವರು ಯಾವುದೋ ಕೆಟ್ಟ ಕೆಲಸ ಮಾಡಿ ತಪ್ಪಿಸಿಕೊಂಡು ಓಡಿ ಹೋಗುತ್ತಾರೆ. ಅವರು ಉತ್ತರ ಭಾರತದ ಒಂದು ಬೆಟ್ಟಪ್ರದೇಶದ ರಾಜ್ಯಕ್ಕೆ ಬಂದು ಸೇರುತ್ತಾರೆ. ಇವರಲ್ಲಿ ಒಬ್ಬನನ್ನು (ಶಾನ್ ಕಾನರಿ) ಇಲ್ಲಿಯ ಜನ ಸೂರ್ಯ ಭಗವಂತನ ಅವತಾರವೆಂದು ಸ್ವೀಕರಿಸುತ್ತಾರೆ. ಈ ನಾಲಾಯಕ್ಕುಗಳಿಗೆ ಎಲ್ಲಿಲ್ಲದ ಆದರ-ಸತ್ಕಾರಗಳು ನಡೆಯುತ್ತವೆ. ಮುಂದೆ ಇವರ ಗುಟ್ಟು ರಟ್ಟಾದಾಗ ಅದೇ ಮುಗ್ಧ ಜನ ಇವರನ್ನು ಒಂದು ಹಗ್ಗದ ಸೇತುವೆಯ ಮೇಲೆ ತಪ್ಪಿಸಿಕೊಂಡು ಹೋಗುವಾಗ ಸೇತುವೆಯನ್ನು ಕಡಿದುಹಾಕುತ್ತಾರೆ. ಶಾನ್ ಕಾನರಿಯ ಜೊತೆಗಾರನಾಗಿ ಸಯೀದ್ ಜಾಫ್ರಿಯವರ ಅಭಿನಯ ನೆನಪಿನಲ್ಲಿ ನಿಲ್ಲುವಂಥದು.
“ಮೈ ಬ್ಯೂಟಿಫುಲ್ ಲಾಂಡ್ರೆಟ್” ಎಂಬುದು ಹನೀಫ್ ಕುರೇಷಿ ಅವರ ಕಥೆಯನ್ನು ಆಧರಿಸಿದ ಚಿತ್ರ. ಇಂಗ್ಲೆಂಡಿನಲ್ಲಿ ನೆಲೆಸಿದ ಪಾಕೀಸ್ತಾನ್ ಮೂಲದ ಒಂದು ಮುಸ್ಲಿಂ ಸಂಸಾರದ ಕಥೆ ಇದರಲ್ಲಿ ಬರುತ್ತದೆ. ಒಮರ್ ಅಲಿ ಎಂಬ ನವಯುವಕನ ತಂದೆ ಹಾಸಿಗೆ ಹಿಡಿದಿದ್ದಾನೆ. ಅಲಿಯ ಚಿಕ್ಕಪ್ಪ ಒಬ್ಬ ಇಂಗ್ಲಿಷ್ ಹೆಣ್ಣನ್ನು ರಖಾವಾಗಿ ಇಟ್ಟುಕೊಂಡಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಟೀಫನ್ ಹಾಕಿಂಗ್ ಯುವ ವಿಜ್ಞಾನಿ

Sun Jan 8 , 2023
1962ನೇ ಇಸ್ವಿಯಲ್ಲಿ ಸ್ಟೀಫನ್ ಹಾಕಿಂಗ್‌ಗೆ ಇಪ್ಪತ್ತೊಂದು ವರ್ಷ. ಅನಾರೋಗ್ಯವೆಂದು ತಪಾಸಣೆಗೆ ಹೋದಾಗ ಬರಸಿಡಿಲಿನಂಥ ವಿಷಯವನ್ನು ವೈದ್ಯರು ತಿಳಿಸಿದರು. ಅದು ಅವರ ಜೀವನದ ಗತಿಯನ್ನೇ ಬದಲಿಸಿತು. ವೈದ್ಯರ ತೀರ್ಮಾನದಂತೆ ಹಾಕಿಂಗ್‌ಗೆ ಆದದ್ದು ಅಮಿಯೋಟ್ರಾಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್. ಅದರ ಹೆಸರು ಎಷ್ಟು ಕ್ಲಿಷ್ಟವೋ ರೋಗವೂ ಅಷ್ಟೇ ಕ್ಲಿಷ್ಟ. ಅದು ನಿಧಾನವಾಗಿ ದೇಹವನ್ನು ಅಶಕ್ತ ಮಾಡುತ್ತ, ಶಕ್ತಿಯನ್ನು ಹೀರುವ, ಪರಿಹಾರವಿಲ್ಲದ, ಖಚಿತವಾಗಿ ತ್ವರಿತ ಸಾವಿಗೆ ದೂಡುವ ರೋಗ. ವೈದ್ಯರು ಕೇವಲ ಒಂದೆರಡು ವರ್ಷಗಳ ಬದುಕು […]

Advertisement

Wordpress Social Share Plugin powered by Ultimatelysocial