ಟಿ. ಎನ್. ಸೀತಾರಾಂ ಪತ್ರಕರ್ತ, ಕತೆಗಾರ, ನಾಟಕಕಾರ, ಚಿತ್ರ ನಟ.

 

 

ಸದಭಿರುಚಿ, ಸೃಜನಶೀಲತೆ, ಜನಪ್ರಿಯತೆ, ಪ್ರಗತಿಪರ ಚಿಂತನೆ, ಪ್ರಯೋಗಶೀಲತೆ ಇವೆಲ್ಲ ಒಟ್ಟಿಗೆ ಮೇಳೈಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮ ಕನ್ನಡಿಗರ ರೆಡೀಮೇಡ್ ಉತ್ತರವಾಗಿ ಸದಾ ನೆನಪಿಗೆ ಬರುವವರು ಕಿರುತೆರೆಯ ಮೂಲಕ ಮನೆ ಮನೆಗಳ, ಮನಗಳ ಆಪ್ತ ಮಾತಾಗಿರುವ ಟಿ. ಎನ್. ಸೀತಾರಾಂ.
ತಳಗವಾರ ನಾರಾಯಣರಾವ್ ಸೀತಾರಾಂ ಅವರು 1948ರ ಡಿಸೆಂಬರ್ 6ರಂದು ಜನಿಸಿದರು. ಇಂದು ಕಿರುತೆರೆಯ ಧಾರಾವಾಹಿಗಳ ನಿರ್ಮಾಣ ಮತ್ತು ನಿರ್ದೇಶನಗಳ ಮೂಲಕ ಜನಪ್ರಿಯರಾಗಿರುವ ಸೀತಾರಾಂ ಪತ್ರಕರ್ತ, ಕತೆಗಾರ, ನಾಟಕಕಾರ, ಚಿತ್ರ ನಟ, ಚಿತ್ರ ನಿರ್ದೇಶಕರಾಗಿಯೂ ಛಾಪು ಹರಡಿಕೊಂಡವರು. ಮೂಲತಃ ಗೌರಿಬಿದನೂರಿನವರಾದ ಸೀತಾರಾಂ ಅವರ ಹೆಸರಿನ ಪ್ರಾರಂಭದಲ್ಲಿರುವ ‘ತಳಗವಾರ’ ಅವರ ತಂದೆಯವರ ಸ್ಥಳ. ತಂದೆಯವರು ನಾರಾಯಣರಾಯರು ಮತ್ತು ತಾಯಿ ಸುಂದರಮ್ಮನವರು. ಕೃಷಿಯನ್ನಾಶ್ರಯಿಸಿದ ಕುಟುಂಬ ಅವರದ್ದು. ಪ್ರಾರಂಭಿಕ ವಿದ್ಯಾಭ್ಯಾಸವನ್ನು ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಸೀತಾರಾಂ ಮುಂದೆ ಬೆಂಗಳೂರು ನ್ಯಾಷನಲ್ ಕಾಲೇಜಿನ ವಿದಾರ್ಥಿಯಾದರು. ಬಿ.ಎಸ್ಸಿ, ಬಿ.ಎಲ್ ಓದಿದ ಅವರು ತಾವು ತಮ್ಮ ಹಲವು ಧಾರಾವಾಹಿಗಳಲ್ಲಿ ಕಂಡಂತೆಯೇ ನ್ಯಾಯವಾದದ ಕಾಯಕವನ್ನು ಒಂದಷ್ಟು ನಡೆಸಿದರಾದರೂ, ಆಂತರ್ಯದ ತುಡಿತ ಅವರನ್ನು ಬರಹಗಾರನನ್ನಾಗಿಸಿತು. ಲೋಹಿಯಾ ತತ್ತ್ವಗಳನ್ನು ನಂಬಿದವರಾದ ಸೀತಾರಾಂ, ತಮ್ಮ ಬದುಕು ಮತ್ತು ಕಾರ್ಯ ಕ್ಷೇತ್ರಗಳೆಲ್ಲದರಲ್ಲಿ ಉತ್ತಮ ಸ್ವಾಸ್ಥ್ಯ ಕಾಪಾಡಿಕೊಂಡು ಬಂದ ಅಪೂರ್ವ ವ್ಯಕ್ತಿತ್ವದವರು.
1969ರ ಸುಮಾರಿನಲ್ಲಿ ಟಿ. ಎನ್. ಸೀತಾರಾಂ ಅವರ ಪ್ರಥಮ ಬರಹ ಪ್ರಕಟಗೊಂಡಿತು. ಸಣ್ಣಕತೆ ಮತ್ತು ನಾಟಕ ಪ್ರಕಾರಗಳಲ್ಲಿ ಚಿಗುರಿದ ಅವರ ಪ್ರಥಮ ನಾಟಕ ‘ಯಾರಾದರೇನಂತೆ?’. ನಂತರದ ದಿನಗಳಲ್ಲಿ ಮೂಡಿ ಬಂದದ್ದು ‘ಮನ್ನಿಸು ಪ್ರಭುವೆ’. ಈ ಎರಡೂ ನಾಟಕಗಳು ಅವರಿಗೆ ಹೆಸರು ಮತ್ತು ಪ್ರಶಸ್ತಿಗಳನ್ನು ತಂದಿತು. ಮುಂದೆ ಬಂದ ಅವರ ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ ನಾಟಕಗಳು ನೂರಾರು ಪ್ರಯೋಗಗಳನ್ನು ಕಂಡು ಜನಪ್ರಿಯಗೊಂಡಿವೆ. ಈ ನಾಟಕಗಳು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಿಗೆ ಅನುವಾದಗೊಂಡಷ್ಟು ವ್ಯಾಪ್ತಿ ಪಡೆದಂತಹವು. 300ಕ್ಕೂ ಹೆಚ್ಚು ಯಶಸ್ವೀ ಪ್ರಯೋಗ ಕಂಡ ‘ಆಸ್ಪೋಟ’ ನಾಟಕ, ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರವಾದ ಕೃತಿಯೂ ಹೌದು. ಅದು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿ, ದೂರದರ್ಶನದ ಟೆಲಿ ಧಾರಾವಾಹಿಯಾಗಿ ಸಹಾ ಹೆಸರಾಗಿತ್ತು. ‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕವೂ ಕೂಡ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ನಾಟಕ ಅಕಾಡೆಮಿಯ ಪ್ರಶಸ್ತಿಗಳಿಗೆ ಪಾತ್ರವಾದ ಕೃತಿ.
ಸೀತಾರಾಂ ಅವರ 22 ಸಣ್ಣ ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ‘ಕ್ರೌರ್ಯ’ ಸಣ್ಣ ಕತೆಯನ್ನು ಅದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿ ನಿರ್ಮಿಸಿದ್ದರು. ಅದಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.
ಎಲ್ಲೆಲ್ಲಿಯೂ ಸಂದ ಸೀತಾರಾಂ ರಂಗಭೂಮಿ, ಚಲನಚಿತ್ರ, ಕಿರುತೆರೆಯ ನಟರಾಗಿಯೂ ಸಾಕಷ್ಟು ಹೆಸರು ಮಾಡಿದವರು. ಆದ್ದಾಗ್ಯೂ ಪಿ. ಲಂಕೇಶರನ್ನು ಗುರುಗಳನ್ನಾಗಿ ಭಾವಿಸಿದ್ದ ಸೀತಾರಾಂ, ಲಂಕೇಶರ ಮಾರ್ಗದರ್ಶನದಂತೆ ತಮ್ಮನ್ನು ವ್ಯಾಪಾರೀ ಚಲನಚಿತ್ರಗಳಲ್ಲಿ ಕಳೆದುಹೋಗದಂತೆ ಎಚ್ಚರವಹಿಸಿಕೊಂಡವರು. ಲಂಕೇಶ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಪಲ್ಲವಿ’ ಚಿತ್ರದ ನಾಯಕರಾಗಿ ಅಭಿನಯಿಸಿದ್ದ ಸೀತಾರಾಂ, ಆ ಚಿತ್ರಕ್ಕೆ ಲಂಕೇಶರೊಂದಿಗೆ ಚಿತ್ರಕತೆ ಮತ್ತು ಸಂಭಾಷಣೆ ರಚನೆಯಲ್ಲೂ ಕಾರ್ಯನಿರ್ವಹಿಸಿದ್ದರು.
ಸೀತಾರಾಂ ಪುಟ್ಟಣ್ಣ ಕಣಗಾಲರ ಮೂರು ಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಗಳನ್ನು ರಚಿಸಿದ ಕೀರ್ತಿಗೆ ಪಾತ್ರರಾದವರು. ಪುಟ್ಟಣ್ಣನವರ ‘ಮಾನಸ ಸರೋವರ’ ಹಾಗೂ ಪಿ.ಎಚ್.ವಿಶ್ವನಾಥ್ ನಿರ್ದೇಶನದ ‘ಪಂಚಮವೇದ’ ಚಿತ್ರಗಳ ಸಂಭಾಷಣೆಗಾಗಿ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು. ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಆರ್. ಕೆ ನಾರಾಯಣ್ ಅವರ ಇಂಗ್ಲಿಷ್ ಕಾದಂಬರಿ ಆಧಾರಿತ ‘ಬ್ಯಾಂಕರ್ ಮಾರ್ಗಯ್ಯ’ ಚಿತ್ರಕ್ಕೂ ಸೀತಾರಾಂ ಅವರ ಸಂಭಾಷಣೆಯಿತ್ತು. 1991ರಲ್ಲಿ ಆ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಸಾವಿತ್ರಿ ಚಲನಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ.

Sat Dec 24 , 2022
  ಸಾವಿತ್ರಿ ಚಲನಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ. ಆಕೆ ಪ್ರತಿಭೆ ಮತ್ತು ಶೋಭೆಗಳ ಅಪೂರ್ವ ಸಂಗಮದಂತಿದ್ದವರು. ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿ, ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿಯೂ ಆಕೆ ಕಾರ್ಯನಿರ್ವಹಿಸಿದ್ದರು. ಮಾಯಾ ಬಜಾರ್ ಅಂತಹ ಪ್ರಸಿದ್ಧ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದ್ದು. ಸಾವಿತ್ರಿ 1936ರ ಡಿಸೆಂಬರ್ 6ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿರ್ರವೂರು ಎಂಬಲ್ಲಿ ಜನಿಸಿದರು. ತಂದೆ ನಿಸ್ಸಂಕರ ಗುರುವಯ್ಯ. ತಾಯಿ ಸುಭದ್ರಮ್ಮ. ಸಾವಿತ್ರಿಗೆ ಇನ್ನೂ 6 ವರ್ಷ ಇದ್ದಾಗಲೇ ತಂದೆ ನಿಧನರಾದರು. […]

Advertisement

Wordpress Social Share Plugin powered by Ultimatelysocial