ಟಿ. ಎಸ್. ನಾಗಾಭರಣ ಅವರು ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ದೊಡ್ಡ ಮತ್ತು ಆಪ್ತ ಹೆಸರು.

ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು 1953ರ ಜನವರಿ 23ರಂದು ಜನಿಸಿದರು.
ಕನ್ನಡ ರಂಗಭೂಮಿ ಮತ್ತು ಸಿನಿಮಾ ರಂಗಗಳಲ್ಲಿ ಅವರು ಮಾಡಿರುವ ಅದ್ಭುತ ಸಾಧನೆಗಳು ಅವರನ್ನು ಜನ ಮನದಲ್ಲಷ್ಟೇ ಅಲ್ಲದೆ, ಹಲವಾರು ವರ್ಷಗಳವರೆಗೆ ಅವರನ್ನು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದಲ್ಲೂ ಪ್ರತಿಷ್ಟಾಪಿಸಿತ್ತು. ಕನ್ನಡ ನಾಡು ಅವರಿಗೆ ಪ್ರಸಕ್ತದಲ್ಲಿ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ವಹಿಸಿದೆ.
ಬಿ. ವಿ. ಕಾರಂತರಿಂದ ಸಂಚಲನಗೊಂಡ ‘ಬೆನಕ’ ತಂಡದಲ್ಲಿ ಮೂಡಿಬಂದ ಹಲವು ಹೊಂಗಿರಣಗಳಲ್ಲಿ ನಾಗಾಭರಣ ಪ್ರಮುಖರು. ಬೆನಕ ಎಂದರೆ ‘ಹಯವದನ’, ‘ಜೋಕುಮಾರಸ್ವಾಮಿ’, ‘ಸತ್ತವರ ನೆರಳು’, ‘ಸಂಕ್ರಾಂತಿ’ ಹೀಗೆ ಉತ್ತಮ ನಾಟಕಗಳ ಪಟ್ಟಿ ತಾನೇ ತಾನಾಗಿ ತೆರೆದುಕೊಂಡು ಅಂದಿನ ದಿನಗಳ ನಾಟಕಗಳು ನೀಡುತ್ತಿದ್ದ ಮುದ ತಂಪಾಗಿ ತೆರೆದುಕೊಳ್ಳುತ್ತದೆ. ನಾಗಾಭರಣ ರಂಗಭೂಮಿಯ ಸಾಧನೆಗಾಗಿ ರಾಷ್ಟಪ್ರಶಸ್ತಿ ಪಡೆದವರು. ಇತ್ತೀಚಿನ ದಿನಗಳಲ್ಲಿ ಅವರ ರಂಗಪ್ರಯೋಗ ‘ಬೆಂಗಳೂರು ನಾಗರತ್ನಮ್ಮ’ ಅಪಾರ ಮೆಚ್ಚುಗೆ ಗಳಿಸಿದೆ.
ಬಿ.ವಿ. ಕಾರಂತರಂತಹವರು ನಾಟಕ ಕ್ಷೇತ್ರದಿಂದ ಸಿನಿಮಾರಂಗಕ್ಕೆ ತಂದಂತಹ ತಂಗಾಳಿಯನ್ನೇ ನಾಗಾಭರಣರೂ ಕೂಡಾ ಪ್ರಾರಂಭದಲ್ಲೇ ಮೂಡಿಸಿದವರು. ನಾಗಾಭರಣರು ಸಣ್ಣ ವಯಸ್ಸಿನಲ್ಲೇ ಗಿರೀಶ್ ಕಾರ್ನಾಡರ ಪ್ರಸಿದ್ಧ ಚಿತ್ರ ‘ಕಾಡು’ ಚಿತ್ರದ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದರು. ‘ಗ್ರಹಣ’ ಚಿತ್ರಕ್ಕಾಗಿ ನಾಗಾಭರಣ ಮತ್ತು ಟಿ. ಎಸ್. ರಂಗ ಜೋಡಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಉತ್ತಮ ಚಿತ್ರಕಥೆ ಪ್ರಶಸ್ತಿ ಮತ್ತು ನರ್ಗಿಸ್ ದತ್ ಭಾವೈಕ್ಯತಾ ಪ್ರಶಸ್ತಿ ಸಂದಿತು. ಮುಂದೆ ‘ಅನ್ವೇಷಣೆ’, ‘ಆಸ್ಫೋಟ’, ‘ಬ್ಯಾಂಕರ್ ಮಾರ್ಗಯ್ಯ’, ‘ಸಂತ ಶಿಶುನಾಳ ಷರೀಫ’, ‘ಕಲ್ಲರಳಿ ಹೂವಾಗಿ’, ‘ಕಂಸಾಳೆ ಕೈಸಾಳೆ’, ‘ವಸುಂಧರ’, ‘ಅಲ್ಲಮ’ ಮುಂತಾದ ಅನೇಕ ಚಿತ್ರಗಳಲ್ಲಿ ವಿವಿಧ ರೀತಿಯ ರಾಷ್ಟ್ರಪ್ರಶಸ್ತಿಗಳು ನಾಗಾಭರಣ ಅವರದಾಗಿವೆ. ರಾಜ್ಯ ಪಶಸ್ತಿಗಳೂ ಇಪ್ಪತ್ತಕ್ಕೂ ಹೆಚ್ಚು ಬಾರಿ ಅವರ ಕೈಸೇರಿವೆ. ಅವರ ಆರು ಚಿತ್ರಗಳು ಪನೋರಮಾಗೆ ಆಯ್ಕೆಗೊಂಡಿವೆ. ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ರಾಷ್ಟ್ರೀಯಾ ಭಾವೈಕ್ಯತೆಗಾಗಿ ನೀಡುವ ನರ್ಗಿಸ್ ದತ್ ಪ್ರಶಸ್ತಿಗಳನ್ನು ಮೂರು ಬಾರಿ ಸ್ವೀಕರಿಸಿ ನಾಗಾಭರಣರು ದಾಖಲೆ ಮಾಡಿದ್ದಾರೆ.
ಪ್ರಶಸ್ತಿಗಳನ್ನೂ ಮೀರಿದ ವೈವಿಧ್ಯವನ್ನು ನಾಗಾಭರಣರ ಕೃತಿಗಳಲ್ಲಿ ಕನ್ನಡ ನಾಡು ಕಂಡಿದೆ. ಅವರ ಚಿತ್ರಗಳಲ್ಲಿ ಒಂದರಂತೆ ಇನ್ನೊಂದಿಲ್ಲ. ಪ್ರತಿಯೊಂದೂ ವೈವಿಧ್ಯ. ವಿಭಿನ್ನ ಸಾಂಸ್ಕೃತಿಕ ಸದಭಿರುಚಿ ಅವರ ಕೆಲಸಗಳಲ್ಲಿ ನಿರಂತರವಾಗಿ ಹರಿದಿದೆ. ಅವರ ಮೂವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ‘ನಾವಿದ್ದೇವೆ ಎಚ್ಚರಿಕೆ’, ‘ಚಿನ್ನಾರಿ ಮುತ್ತ’ದಂತಹ ಸುಂದರ ಮಕ್ಕಳ ಚಿತ್ರಗಳು ಕೂಡ ಇದ್ದು, ಅವು ಕೂಡ ಜನಮನವನ್ನು ಸೆಳೆದಿರುವುದು ಗಮನಾರ್ಹ.
ಸಾಮಾನ್ಯವಾಗಿ ಪ್ರಶಸ್ತಿ ಪಡೆದ ಚಿತ್ರಗಳು ಕಲಾತ್ಮಕ ಚಿತ್ರಗಳ ಗುಂಪಿಗೆ ಸೇರಿ, ಪ್ರಮುಖ ವಾಹಿನಿಯ ಚಿತ್ರಗಳ ಸಾಲಿನಲ್ಲಿ ವ್ಯಾವಹಾರಿಕವಾಗಿ ಕೈಗೂಡುವುದಿಲ್ಲವೆಂಬ ನಿಟ್ಟಿನಲ್ಲಿ ಗಮನಿಸಿದಾಗ, ನಾಗಾಭರಣರ ಬಹಳಷ್ಟು ಚಿತ್ರಗಳು ಈ ಎರಡೂ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ದುಡಿದಿರುವುದು ಹೆಗ್ಗಳಿಕೆಯ ಅಂಶವಾಗಿದೆ. ಅವರ ‘ಜನುಮದ ಜೋಡಿ’ ಚಿತ್ರ ಕನ್ನಡದ ಅತ್ಯಂತ ಯಶಸ್ವೀ ಚಿತ್ರಗಳ ಸಾಲಿನಲ್ಲಿ ನಿಲ್ಲುವಂತದಾಗಿದ್ದು ಎಲ್ಲ ಉತ್ತಮ ಕಲಾತ್ಮಕ ಅಂಶಗಳನ್ನೂ ತೋರಿದ ಚಿತ್ರ. ‘ಬಂಗಾರದ ಜಿಂಕೆ’, ‘ಬ್ಯಾಂಕರ್ ಮಾರ್ಗಯ್ಯ’, ‘ಸಂತ ಶಿಶುನಾಳ ಷರೀಫ’, ‘ಮೈಸೂರು ಮಲ್ಲಿಗೆ’, ‘ಚಿನ್ನಾರಿಮುತ್ತ’, ‘ಆಕಸ್ಮಿಕ’, ‘ನಾಗಮಂಡಲ’, ‘ನಮ್ಮೆಜಮಾನ್ರು’ ಚಿತ್ರಗಳು ಕೂಡ ಈ ನಿಟ್ಟಿನಲ್ಲಿ ಹೆಸರಿಸಬಹುದಾದ ನಾಗಾಭರಣರ ಪ್ರಮುಖ ಚಿತ್ರಗಳು.
ಕನ್ನಡದ ಪ್ರಮುಖ ಕೃತಿಗಳನ್ನು ಆಧರಿಸಿದ ಶಿವರಾಮ ಕಾರಂತರ ‘ಚಿಗುರಿದ ಕನಸು’, ಗೊರೂರರ ‘ಅಮೇರಿಕದಲ್ಲಿ ಗೋರೂರು’, ಕಂಬಾರರ ‘ಸಿಂಗಾರವ್ವ’, ಬಿ ಎಲ್ ವೇಣು ಅವರ ‘ಕಲ್ಲರಳಿ ಹೂವಾಗಿ’ ಮುಂತಾದ ಚಿತ್ರಗಳು ಅವುಗಳ ವ್ಯಾಪಾರಿ ಗಳಿಕೆಯ ಮೇರೆಯಾಚೆಗೆ ಉತ್ತಮ ಅಭಿರುಚಿಯ ದೃಷ್ಟಿಯಿಂದ ಸಹೃದಯರು ಮೆಚ್ಚಿರುವ ಚಿತ್ರಗಳು.
ನಾಗಾಭರಣರ ಚಿತ್ರಗಳಲ್ಲಿ ಮೂಡಿ ಬಂದ ಹಾಡುಗಳು ಇನ್ನಿಲ್ಲದಂತೆ ಕನ್ನಡ ಸಾಹಿತ್ಯದ ಕಂಪು, ಸಂಗೀತ ಸೌಗಂಧ, ದೃಶ್ಯ ವೈಭವ, ಸಾಂಸ್ಕೃತಿಕ ಶೋಭೆಗಳ ವಿಶಿಷ್ಟ ರಸದೌತಣವಾಗಿವೆ. ಮೈಸೂರು ಮಲ್ಲಿಗೆ, ನಾಗಮಂಡಲ, ಶಿಶುನಾಳ ಷರೀಫ್, ಜನುಮದ ಜೋಡಿ ಚಿತ್ರಗಳಲ್ಲಿನ ಕಥೆ ಮತ್ತು ಸಂಗೀತಗಳಲ್ಲಿನ ಬೆಸೆದುಕೊಂಡಿರುವಿಕೆ ವಿಶೇಷ ಅನುಭವವನ್ನು ನೀಡುವಂತದ್ದು. ಅವರನ್ನು ಜಿ. ವಿ. ಅಯ್ಯರ್ ಅವರ ಆದಿ ಶಂಕರಾಚಾರ್ಯ, ಶಂಕರನಾಗ್ ಅವರ ‘ಆಕ್ಸಿಡೆಂಟ್’ ಮುಂತಾದ ಹಲವು ಚಿತ್ರಗಳ ವೈಶಿಷ್ಟ್ಯ ಪೂರ್ಣರ್ಣ ಪಾತ್ರಗಳಲ್ಲಿ ಕಂಡ ನೆನಪು ಕೂಡಾ ನಮ್ಮದಾಗಿದೆ. ಹಲವಾರು ವರ್ಷಗಳವರೆಗೆ ಕನ್ನಡ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದು ಹಲವಾರು ಜನಮೆಚ್ಚುವ ಕೆಲಸವನ್ನೂ ಮಾಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷರಾಗಿಯೂ ಅವರ ಸೇವೆ ಸಂದಿದೆ.
ಹೀಗೆ ಮಹೋನ್ನತ ಸಾಧನೆಗಳ ಹರಿಕಾರರಾಗಿರುವ ನಾಗಭರಣರಿಗೆ ಅವರ ಜನ್ಮದಿನದಂದು ಶುಭ ಹಾರೈಸಿ ಅವರ ಈ ಸಾಧನೆಗಳು ಮುಂದೆಯೂ ನಿರಂತರವಾಗಿ ಹರಿದು ಬರಲಿ ಎಂದು ಆಶಿಸೋಣ. ಅವರ ಎಲ್ಲಾ ಯೋಜನೆಗಳೂ ನಿರ್ವಿಘ್ನವಾಗಿ ಕೈಗೂಡಲಿ ಅವರ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಕೈಗೂಡಲಿ ಜೊತೆಗೆ ಉತ್ತಮ ಚಿತ್ರಗಳ ಯುಗಗಳು ಕನ್ನಡದಲ್ಲಿ ಮೂಡಿಬರಲಿ ಎಂದು ಹಾರೈಸೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀನಿವಾಸ್‌ ಜಿ ಕಪ್ಪಣ್ಣನವರು ರಂಗ ಚಳವಳಿ, ರಂಗಯಾತ್ರೆ, ರಂಗಭೂಮಿ ಮತ್ತು ಪ್ರಮುಖ ಸಾಂಸ್ಕೃತಿಕ ಸಂಘಟಕರೆಂದು ಖ್ಯಾತರಾಗಿದ್ದಾರೆ.

Fri Feb 18 , 2022
ಶ್ರೀನಿವಾಸ್‌ ಜಿ ಕಪ್ಪಣ್ಣನವರು 1948ರ ಫೆಬ್ರುವರಿ 13ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಗಿರಿಯಪ್ಪನವರು. ತಾಯಿ ಶ್ರೀಮತಿ ಜಯಮ್ಮನವರು. ನ್ಯಾಷನಲ್ ಕಾಲೇಜಿನಿಂದ ಪದವಿ ಪಡೆದ ಕಪ್ಪಣ್ಣನವರು ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಶಾಲಾ ದಿನಗಳಿಂದಲೇ ನಾಟಕದತ್ತ ಒಲವು ಮೂಡಿಸಿಕೊಂಡ ಶ್ರೀನಿವಾಸ ಕಪ್ಪಣ್ಣನವರು, 1964ರ ವರ್ಷದಲ್ಲಿ ನ್ಯಾಷನಲ್ ಕಾಲೇಜಿನ ಹಿಸ್ಟ್ರಿಯಾನಿಕ್ ಕ್ಲಬ್‌ ಮೂಲಕ ತಮ್ಮ ಮೊದಲ ರಂಗ ಚಟುವಟಿಕೆಗಳನ್ನು ಪ್ರಾರಂಭಿಸಿದರು. ನಾಟಕಗಳಿಗೆ ರಂಗಸಜ್ಜಿಕೆ, ಬೆಳಕು ವಿನ್ಯಾಸ ಮುಂತಾದ ಕ್ಷೇತ್ರಗಳಲ್ಲಿ ಅವರದ್ದು […]

Advertisement

Wordpress Social Share Plugin powered by Ultimatelysocial