ಟಿ. ಎಸ್. ಸತ್ಯನ್ ಅಂತರರಾಷ್ಟ್ರೀಯ ಮಟ್ಟದ ಶ್ರೇಷ್ಠ ಛಾಯಾಗ್ರಾಹಕ

ಟಿ. ಎಸ್. ಸತ್ಯನ್ ಅಂತರರಾಷ್ಟ್ರೀಯ ಮಟ್ಟದ ಶ್ರೇಷ್ಠ ಛಾಯಾಗ್ರಾಹಕರಾಗಿ ಸುಪ್ರಸಿದ್ಧರು.ತಂಬ್ರಹಳ್ಳಿ ಸುಬ್ರಮಣ್ಯ ಸತ್ಯನಾರಾಯಣ ಅಯ್ಯರ್ 1923ರ ಡಿಸೆಂಬರ್ 18 ರಂದು ಮೈಸೂರಿನಲ್ಲಿ ಜನಿಸಿದರು. ಮೈಸೂರಿನ ಬನುಮಯ್ಯ ಪ್ರೌಢಶಾಲೆ ಹಾಗೂ ಮಹಾರಾಜ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ 1944ರಲ್ಲಿ ಬಿ.ಎ. ಪದವಿ ಗಳಿಸಿದರು.ಛಾಯಾಚಿತ್ರಕಲೆಯಲ್ಲಿ ಆಸಕ್ತಿ ತಾಳಿದ ಸತ್ಯನ್ ಅತ್ಯಂತ ಯಶಸ್ವೀ ಛಾಯಾಗ್ರಾಹಕ-ಪತ್ರಕರ್ತರಾದರು. ಸತ್ಯನ್ ಜಗತ್ತಿನಾದ್ಯಂತ ಹಲವಾರು ವರ್ತಮಾನ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಛಾಯಾ ಚಿತ್ರಗಳನ್ನು ಮತ್ತು ಲೇಖನಗಳನ್ನು ನೀಡಿದರು. ಸಮಕಾಲೀನ ಭಾರತದ ಚಿತ್ರವನ್ನು ಸಾಗರಾಂತರ ಜನತೆಗೆ ನೀಡುವಲ್ಲಿ ಅವರು ಶ್ಲಾಘ್ಯ ಕೆಲಸ ಮಾಡಿದರು. ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪತ್ರಿಕಾ ಬಳಗ 1948ರಲ್ಲಿ ಆರಂಭವಾದಾಗ ಅದರ ಆರಂಭಿಕ ಸಿಬ್ಬಂದಿ ವರ್ಗದಲ್ಲಿದ್ದವರಲ್ಲಿ ಸತ್ಯನ್ ಅವರೂ ಒಬ್ಬರು.ಸತ್ಯನ್ 1948ರಿಂದಲೂ ನ್ಯೂಯಾರ್ಕಿನ ಬ್ಲಾಕ್ ಸ್ಟಾರ್ ಇಂಟರ್ ನ್ಯಾಷನಲ್ ಫೋಟೊ ಏಜೆನ್ಸಿಯ ಪ್ರತಿನಿಧಿಗಳಾಗಿದ್ದರು. 1950ರಲ್ಲಿ ಅವರು ಮುಂಬೈನ ಇಲಸ್ಟ್ರೇಟಡ್ ವೀಕ್ಲಿ ಆಫ್ ಇಂಡಿಯ ಪತ್ರಿಕೆಯಲ್ಲಿ ಲೇಖಕರಾಗಿ ಕೆಲಸ ಮಾಡಿದ್ದರು. ನ್ಯೂಯಾರ್ಕಿನಿಂದ ಹೊರಡುತ್ತಿದ್ದ ಪ್ರತಿಷ್ಠಿತ ಲೈಫ್ ಪತ್ರಿಕೆಗಾಗಿ 1955-65ರ ವರೆಗೆ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರು. ಈ ಪತ್ರಿಕೆಯಲ್ಲಿ ಅತ್ಯಂತ ಹೆಚ್ಚು ಛಾಯಾಚಿತ್ರಗಳನ್ನು ಪ್ರಕಟಿಸಿದ ಭಾರತೀಯರೆಂದರೆ ಸತ್ಯನ್. ಲೈಫ್ ಸಂಸ್ಥೆ ಹಾಗೂ ಅಮೆರಿಕದ ಜಿಯೋಗ್ರಾಫಿಕ್ ಮ್ಯಾಗಜೈನ್ ಸಂಸ್ಥೆಗಳು ಪ್ರಕಟಿಸಿದ ಅನೇಕ ಸಂಚಿಕೆಗಳಲ್ಲಿ ಸತ್ಯನ್ ಅವರ ಛಾಯಾಚಿತ್ರಗಳಿವೆ.ಸತ್ಯನ್ ಅವರ ಛಾಯಾಚಿತ್ರ ಪ್ರದರ್ಶನಗಳು ನವದೆಹಲಿ, ಮುಂಬಯಿ, ಕಾನ್ಪುರ, ಬೆಂಗಳೂರು, ಮೈಸೂರು, ಸಿಂಗಪೂರ್ ಮತ್ತು ಕೌಲಲಂಪೂರ್ ಮುಂತಾದ ಕಡೆಗಳಲ್ಲಿ ನಡೆದವು. ಇವರ ಕೃತಿಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದೂರದರ್ಶನಗಳಲ್ಲಿ ಪ್ರದರ್ಶಿಸಲಾಯಿತು.ಸತ್ಯನ್ ತಮ್ಮ ಪ್ರಿಯ ವಿಷಯವಾದ ಛಾಯಾಚಿತ್ರ ಪತ್ರಿಕೋದ್ಯಮದ ಕುರಿತು ದೇಶವಿದೇಶಗಳಲ್ಲಿ ಉಪನ್ಯಾಸ ಮಾಡಿದ್ದರು; ಅನೇಕ ರೇಡಿಯೊ ಮತ್ತು ದೂರದರ್ಶನ ಕಾರ್ಯಕ್ರಮಗಳನ್ನೂ ನೀಡಿದ್ದರು. ಇವರು ನವದೆಹಲಿಯ ಪ್ರೆಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ನಲ್ಲಿ ಗೌರವ ಅಧ್ಯಾಪಕರೂ, ಕೇಂದ್ರ ಲೋಕಸೇವಾ ಆಯೋಗಕ್ಕೆ ಛಾಯಾಗ್ರಹಣ ಮತ್ತು ಛಾಯಾಚಿತ್ರ ಪತ್ರಿಕೋದ್ಯ ಸಲಹೆಗಾರರೂ ಆಗಿದ್ದರು.ಭಾರತದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದ ಆದ್ಯಪ್ರವರ್ತಕರಲ್ಲಿ ಒಬ್ಬರಾದ ಸತ್ಯನ್ ಅವರ ಕಾರ್ಯಕುಶಲತೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪತ್ರಿಕಾ ವಲಯಗಳಲ್ಲಿ ಅಪಾರ ಮೆಚ್ಚುಗೆ ಗಳಿಸಿತ್ತು. ವಿಶ್ವಸಂಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳೂ ಇವರ ಕೆಲಸಕ್ಕೆ ಪುರಸ್ಕಾರ ನೀಡಿದ್ದವು. ವಿಶ್ವಸಂಸ್ಥೆಯ ಮಕ್ಕಳ ನಿಧಿಗೆ ಸತ್ಯನ್ ಛಾಯಾಚಿತ್ರ ಪತ್ರಿಕೋದ್ಯಮ ಸಲಹೆಗಾರರಾಗಿದ್ದರು.ಛಾಯಾಗ್ರಹಣ ಕ್ಷೇತ್ರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಸತ್ಯನ್ ಬೆಂಗಳೂರು-ಮೈಸೂರು ಫೋಟೋಗ್ರಫಿ ಸೊಸೈಟಿಯ ಸ್ಥಾಪಕ ಸದಸ್ಯರು. 1950ರಲ್ಲಿ ಅದರ ಕಾರ್ಯದರ್ಶಿಯೂ ಆಗಿದ್ದರು. ಜೊತೆಗೆ ನವದೆಹಲಿಯ ಕ್ಯಾಮರ ಸೊಸೈಟಿ ಆಫ್ ಇಂಡಿಯ ಹಾಗೂ ನ್ಯೂಸ್ ಕ್ಯಾಮೆರಾಮೆನ್ಸ್ ಅಸೋಸಿಯೇಷನ್ನ ಸದಸ್ಯರಾಗಿ ಪ್ರಪಂಚದಾದ್ಯಂತ ವಿಪುಲ ಪ್ರವಾಸ ಮಾಡಿದ್ದ ಸತ್ಯನ್ ಅಮೆರಿಕ, ಬ್ರಿಟನ್, ಫ್ರಾನ್ಸ್, ಜಪಾನ್, ಪಶ್ಚಿಮ ಜರ್ಮನಿ, ಮಲೇಷಿಯ, ಸಿಂಗಪೂರ್, ಶ್ರೀಲಂಕಾ, ಆಫ್ಘಾನಿಸ್ತಾನ, ನೇಪಾಳ ಹಾಗೂ ಭೂತಾನಗಳಿಗೆ ವಿಶೇಷ ಆಹ್ವಾನಿತರಾಗಿ ಹೋಗಿ ಬಂದಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಅಡ್ಯನಡ್ಕ ಕೃಷ್ಣಭಟ್ಟ ಲೇಖಕ

Thu Dec 22 , 2022
  ಇಂದು ಕನ್ನಡದಲ್ಲಿ ವಿಜ್ಞಾನ ಬರಹಗಳಿಗೆ ಪ್ರಖ್ಯಾತರಾಗಿದ್ದ ಅಡ್ಯನಡ್ಕ ಕೃಷ್ಣಭಟ್ಟರ ಸಂಸ್ಮರಣಾ ದಿನ. ಲೇಖಕರಾಗಿ, ವಿಜ್ಞಾನ ಪತ್ರಿಕಾ ಸಂಪಾದಕರಾಗಿ ಮತ್ತು ಭೌತವಿಜ್ಞಾನದ ಶ್ರೇಷ್ಠ ಅಧ್ಯಾಪಕರಾಗಿ ಅಪಾರ ಕಾರ್ಯಮಾಡಿದ್ದ ಕೃಷ್ಣಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ಕಾಸರಗೋಡಿಗೆ ಹೋಗುವ ಹಾದಿಯಲ್ಲಿರುವ ಪ್ರಾಕೃತಿಕ ಸೌಂದರ್ಯದ ನಿಧಿಯಂತಿರುವ ಅಡ್ಯನಡ್ಕ ಎಂಬಲ್ಲಿ 1938ರ ಮಾರ್ಚ್ 15ರಂದು ಜನಿಸಿದರು. ತಂದೆ ತಿಮ್ಮಣ್ಣ ಭಟ್ಟರು ಮತ್ತು ತಾಯಿ ಲಕ್ಷ್ಮಿ ಅಮ್ಮ ಅವರು. ಅಡ್ಯನಡ್ಕದ ಶಾಲೆಯಲ್ಲಿ ಕೃಷ್ಣಭಟ್ಟರ ಪ್ರಾಥಮಿಕ ವಿದ್ಯಾಭ್ಯಾಸ […]

Advertisement

Wordpress Social Share Plugin powered by Ultimatelysocial