ತಮಿಳು ನಾಡಿನ ಕಲ್ಲಕುರಿಚಿಯಲ್ಲಿ ತೀವ್ರ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಶಾಲಾ ಬಸ್ಸು, ಪೊಲೀಸ್ ವಾಹನಗಳಿಗೆ ಬೆಂಕಿ,

ಕಲ್ಲಕುರಿಚಿ(ತಮಿಳು ನಾಡು):ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪ್ರತಿಭಟನಾಕಾರರು ಶಾಲಾ ಆವರಣಕ್ಕೆ ನುಗ್ಗಿ ಶಾಲಾ ಬಸ್ಸು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಘಟನೆ ತಮಿಳು ನಾಡಿನ ಕಲ್ಲಕುರಿಚಿ ಜಿಲ್ಲೆಯ ಕನ್ನಿಯಮೂರಿನಲ್ಲಿ ಭಾನುವಾರ ನಡೆದಿದೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕರ ಕಿರುಕುಳ ತಾಳಲಾರದೆ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದ್ದು, ತಮಿಳು ನಾಡು ಶಾಲಾ ಶಿಕ್ಷಣ ಇಲಾಖೆ ಘಟನೆಗೆ ಸಂಬಂಧಿಸಿದಂತೆ ವಿವರವಾದ ವರದಿ ನೀಡುವಂತೆ ಮುಖ್ಯ ಶಿಕ್ಷಣಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಕಲ್ಲಕುರಿಚಿಯ ಚಿನ್ನಸಲೇಂ ಎಂಬಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಪ್ರತಿಭಟನಾಕಾರರು ಶಾಲೆಯ ಅವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ನಿಲ್ಲಿಸಿದ್ದ ಶಾಲಾ ಬಸ್ಸುಗಳ ಕಿಟಕಿ ಗಾಜುಗಳನ್ನು ಮುರಿದು ಬೆಂಕಿ ಹಚ್ಚಿದರು. ಬಸ್ಸಿನ ಮೇಲೆ ಏರಿ ಕೇಕೆ ಹಾಕುತ್ತಾ, ಆಕ್ರೋಶ ವ್ಯಕ್ತಿಪಡಿಸುತ್ತಾ ಧ್ವಂಸ ಮಾಡಿದರು. ಹಲವು ಬಸ್ಸುಗಳು ತಲೆಕೆಳಗಾಗಿ ಬಿದ್ದವು. ಬೆಂಕಿ ಹಚ್ಚಿದ್ದರಿಂದ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತು.

ಪರಿಸ್ಥಿತಿಯನ್ನು ತಿಳಿಗೊಳಿಸಲು ಕಲ್ಲಕುರಿಚಿ ಜಿಲ್ಲಾ ಪೊಲೀಸರು ಲಾಠಿಪ್ರಹಾರ ಮಾಡಿದರು. ಆಶ್ರುವಾಯು ಸಿಡಿಸಿದರು. ಆಗ ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಡಿಐಜಿ ಎಂ ಪಾಂಡಿಯಾನ್ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. 13ಕ್ಕೂ ಹೆಚ್ಚು ಬಸ್ಸುಗಳಿಗೆ ಬೆಂಕಿ ಹಚ್ಚಿ ಕೆಲವು ಬಸ್ಸುಗಳನ್ನು ಜಖಂಗೊಳಿಸಿದ್ದಾರೆ.

ಶಾಲೆಯ ಕಿಟಕಿ,ಗಾಜುಗಳನ್ನು ಮುರಿದು ತರಗತಿಯೊಳಗೆ, ಶಿಕ್ಷಕರು, ಪ್ರಾಂಶುಪಾಲರ ಕೊಠಡಿಯೊಳಗೆ ನುಗ್ಗಿ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೃಹ ಇಲಾಖೆ ಕಾರ್ಯದರ್ಶಿಗಳು ಮತ್ತು ಡಿಜಿಪಿಯವರಿಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.

ನಡೆದ ಘಟನೆಯೇನು?ಕಲ್ಲಕುರಿಚಿ ಜಿಲ್ಲೆಯಲ್ಲಿರುವ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯ ಶವವನ್ನು ಕಲ್ಲಕುರಿಚಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶವಪರೀಕ್ಷೆಗೆ ವರ್ಗಾಯಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ, ವಿದ್ಯಾರ್ಥಿನಿಯ ಪೋಷಕರು ಮತ್ತು ವಿದ್ಯಾರ್ಥಿನಿಯರು ರಸ್ತೆ ತಡೆ ನಡೆಸಿ ಆಕೆಯ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿನಿಯ ಶವ ಪಡೆಯಲು ನಿರಾಕರಿಸಿದ್ದರು. ಇಂದು ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಚಿನ್ನ ಸಲೇಂ-ಕಲ್ಲಕುರಿಚಿ ರಸ್ತೆಯನ್ನು ತಡೆದು ಕಣಿಯಮೂರಿನ ಖಾಸಗಿ ಶಾಲೆಯತ್ತ ಹೋಗಲು ಮುಂದಾದರು. ಆಗ ಪೊಲೀಸರು ತಡೆಯಲು ನೋಡಿದರು. ಪ್ರತಿಭಟನಾಕಾರರು ಪೊಲೀಸರೆಡೆಗೆ ಕಲ್ಲು ತೂರಾಟ ನಡೆಸಿ ಶಾಲೆಯ ಆವರಣದತ್ತ ನುಗ್ಗಿದರು.

ಹಿಂಸಾಚಾರ ಮಾಡದಂತೆ ಪೋಷಕರ ಒತ್ತಾಯ: ಈ ಮಧ್ಯೆ, ವಿದ್ಯಾರ್ಥಿನಿಯ ಪೋಷಕರು ಪ್ರತಿಭಟನಾಕಾರರು ಹಿಂಸಾಚಾರ ನಡೆಸದಂತೆ ಮನವಿ ಮಾಡಿಕೊಂಡಿದ್ದರು. ಡಿಜಿಪಿಯವರು ವಿದ್ಯಾರ್ಥಿಗಳು ಮತ್ತು ಸ್ಥಳೀಯರಿಗೆ ಎಚ್ಚರಿಸಿದ ಪ್ರಸಂಗ ಕೂಡ ನಡೆಯಿತು.

ಸೆಕ್ಷನ್ 144 ಜಾರಿ:ಇನ್ನು ಕಲ್ಲಕುರಿಚಿ, ಚಿನ್ನಸಲೇಂ, ನೈನಾರ್, ಪಲಾಯಮ್ ತಾಲ್ಲೂಕುಗಳಲ್ಲಿ ಜು.31ರವರೆಗೆ ಸೆಕ್ಷನ್ 144 ಜಾರಿ ಮಾಡಿ ಜಿಲ್ಲಾಧಿಕಾರಿ ಪಿ ಎನ್ ಶ್ರೀಧರ್ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಳೆ ತಗ್ಗಿದರೂ ನಿಲ್ಲದ ಅವಾಂತರ

Sun Jul 17 , 2022
  ಉತ್ತರ ಕನ್ನಡದಲ್ಲಿ ವರುಣನ ಅಬ್ಬರ ಕೊಂಚ ಕಡಿಮೆಯಾಗಿದೆ..ಮಳೆ ಕಡಿಮೆಯಾದ್ರೂ ಕುಮಟ, ಹೊನ್ನಾವರ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಆತಂಕ ತಣ್ಣಗಾಗಿಲ್ಲ. ಧಾರಾಕಾರ ಮಳೆಯಿಂದ ಅಘನಾಶಿನಿ, ಶರಾವತಿ ನದಿಗಳು ಉಕ್ಕಿ ಹರಿಯುತ್ತಿವೆ..ಕೊನ್ನಳ್ಳಿ, ಊರಕೇರಿ,ಮೂರೂರು ಗ್ರಾಮದಲ್ಲಿ ಮನೆಗಳಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಇನ್ನು, ತೋಟ, ಗದ್ದೆಗಳಿಗೆ‌ ಪ್ರವಾಹದ ನೀರು ನುಗ್ಗಿ ಕೃಷಿ ಜಮೀನುಗಳು ಜಲಾವೃತಗೊಂಡಿವೆ..ಇತ್ತ, ಹಾವೇರಿ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯಾಗ್ತಿದ್ದು, ನೋಡು ನೋಡುತ್ತಿದ್ದಂತೆ ಮನೆಯ ಗೋಡೆ ಕುಸಿದು ಬಿದ್ದಿದೆ.. ಹಿರೆಕೇರೂರು […]

Advertisement

Wordpress Social Share Plugin powered by Ultimatelysocial