ನಾನು ನಿರ್ದೇಶಕನಾಗಿದ್ದಾಗ ಬಹಳ ಸ್ಟ್ರಾಂಗ್‌ ಆಗಿ ಇರುತ್ತೇನೆ..: ಉಪೇಂದ್ರ

 

ಶುಕ್ರವಾರ ಬೆಳಗ್ಗೆಯಿಂದಲೇ ನಗರದ ಬಂಡೆ ಮಹಾಕಾಳಿ ದೇವಸ್ಥಾನದ ರಸ್ತೆ ಜನರಿಂದ ಕಿಕ್ಕಿರಿದಿತ್ತು. ರಸ್ತೆಯ ಎರಡೂ ಬದಿ ವಾಹನಗಳಾದರೆ, ರಸ್ತೆ ಮಧ್ಯೆಯೇ ಕುತೂಹಲದ ಕಂಗಳೊಂದಿಗೆ ಎದುರು ನೋಡುತ್ತಿದ್ದ ಅಭಿಮಾನಿಗಳು. ಉಪೇಂದ್ರ, ಶಿವರಾಜ್‌ಕುಮಾರ್‌, ಸುದೀಪ್‌, ವಿಜಯ್‌, ಡಾಲಿ ಧನಂಜಯ್‌… ಹೀಗೆ ಎಲ್ಲಾ ನಟರ ಅಭಿಮಾನಿಗಳು ಅಲ್ಲಿ ಜೊತೆಯಾಗಿದ್ದರು.

ಇದಕ್ಕೆ ಕಾರಣವಾಗಿದ್ದು, ಉಪೇಂದ್ರ ನಟನೆ, ನಿರ್ದೇಶನದ ಚಿತ್ರ.

“ಯು-ಐ’ ಚಿಹ್ನೆಯನ್ನಿಟ್ಟುಕೊಂಡು ಉಪ್ಪಿ ಏಳು ವರ್ಷಗಳ ಬಳಿಕ ನಿರ್ದೇಶನ ಮಾಡುತ್ತಿರುವ ಚಿತ್ರದ ಮುಹೂರ್ತ ಶುಕ್ರವಾರ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಉಪ್ಪಿ ಸಿನಿಮಾಕ್ಕೆ ಹಾರೈಸಲು ಶಿವರಾಜ್‌ಕುಮಾರ್‌, ಸುದೀಪ್‌, ವಿಜಯ್‌, ಡಾಲಿ ಧನಂಜಯ್‌ ಸೇರಿದಂತೆ ಚಿತ್ರರಂಗದ ಅನೇಕರು ಆಗಮಿಸಿದ್ದರಿಂದ ದೇವಸ್ಥಾನದ ಮುಂದೆ ಜಾತ್ರೆ ಸಂಭ್ರಮವೇ ಮರುಕಳಿಸಿದಂತಿತ್ತು.

ಎಲ್ಲಾ ಓಕೆ, “ಯು-ಐ’ ಸಿಂಬಲ್‌ನಲ್ಲಿ ಉಪೇಂದ್ರ ಏನು ಹೇಳಲು ಹೊರಟಿದ್ದಾರೆ ಎಂದು ನೀವು ಕೇಳಬಹುದು. ಈ ಬಾರಿಯೂ ಉಪ್ಪಿ ಈ ಪ್ರಶ್ನೆಗೆ ಬುದ್ಧಿವಂತಿಕೆಯ ಉತ್ತರ ನೀಡಿದ್ದಾರೆ. ಎಲ್ಲವನ್ನು ನೋಡುಗನ ದೃಷ್ಟಿಕೋನಕ್ಕೆ ಬಿಟ್ಟಿದ್ದಾರೆ.

“ಸಿನಿಮಾ ದೃಶ್ಯ ಮಾಧ್ಯಮ. ದೃಶ್ಯ ನೋಡಿ ಕಲ್ಪನೆ ಮಾಡಿಕೊಳ್ಳಬೇಕು. ಒಬ್ಬ ಚಿತ್ರ ಕಲಾವಿದ ಒಂದು ಚಿತ್ರ ಬರೆಯುತ್ತಾನೆ. ಅದನ್ನು ಅವನೇ ಚೆನ್ನಾಗಿದೆ ಎಂದರೆ ಚೆನ್ನಾಗಿರುತ್ತದಾ… ನೀವು ನೋಡಿ ಹೇಳಿದ್ರೆ ಅದಕ್ಕೊಂದು ಬೆಲೆ ಇರುತ್ತದೆ’ ಎಂಬ ಜಾಣ್ಮೆಯ ಉತ್ತರ ಉಪೇಂದ್ರ ಅವರದು.

ಇನ್ನು, ಉಪ್ಪಿ ನಿರ್ದೇಶನ ಮಾಡುತ್ತಾರೆ ಎಂದಾಗ ಪ್ರತಿ ಬಾರಿ ಕೇಳಿಬರುವ ಒಂದು ಮಾತೆಂದರೆ, ಪ್ರೇಕ್ಷಕರನ್ನು ಕನ್‌ಫ್ಯೂಸ್‌ ಮಾಡುತ್ತಾರೆ ಎಂದು. ಈ ಪ್ರಶ್ನೆಗೂ ಉಪೇಂದ್ರ ಉತ್ತರಿಸಿದ್ದಾರೆ. “ನಾನು ಸಿನಿಮಾ ಮಾಡೋದು ಕನ್ವಿನ್ಸ್‌ ಮಾಡೋಕೆ. ಆದರೆ, ಅನೇಕರು ನಾನು ಕನ್‌ಫ್ಯೂಸ್‌ ಮಾಡುತ್ತೇನೆ ಎಂದುಕೊಳ್ಳುತ್ತಾರೆ. ಈಗ ಸತ್ಯನೇ ಗೊಂದಲವಾಗಿದೆ. ಅದು ನನ್ನ ತಪ್ಪಲ್ಲ. ಕನ್ವಿನ್ಸ್‌ ಆಗುವವರಿಗೆ ಕನ್ವಿನ್ಸ್‌ ಮಾಡುತ್ತೇನೆ. ಕನ್‌ಫ್ಯೂಸ್‌ ಆಗುವವರು ಹಾಗೇ ಇರುತ್ತಾರೆ. ಅದಕ್ಕೆ ನಾನು ಹೊಣೆಯಲ್ಲ’ ಎಂದು ಖಡಕ್‌ ಉತ್ತರ ನೀಡುತ್ತಾರೆ ಉಪೇಂದ್ರ.

ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬರುವ ವಿಭಿನ್ನ ಕಾನ್ಸೆಪ್ಟ್ಗಳನ್ನು ನೋಡಿದವರು, “ನಿಮ್ಮ ತಲೆ ಸ್ಪೆಷಲ್‌ ಆಗಿ ಓಡುತ್ತದೆ, ಹೇಗೆ’ ಎಂದು ಹೊಗಳುತ್ತಾರಂತೆ. ಇದಕ್ಕೆ ಉಪ್ಪಿ ಹೇಳುವುದು ಹೀಗೆ, ” ದೇವರಾಣೆ ಏನೂ ಓಡುವುದಿಲ್ಲ. ನಾನು ತಲೆಯನ್ನು ಖಾಲಿ ಇಟ್ಟುಕೊಳ್ಳುತ್ತೀನಿ. ಖಾಲಿ ಇಟ್ಟುಕೊಂಡರೆ ಏನೇನೋ ಐಡಿಯಾಗಳು ಬರುತ್ತವೆ. ಆದರೆ ನಾವು ನಾವು ಖಾಲಿ ಇಟ್ಟುಕೊಳ್ಳುವುದಿಲ್ಲ. ಏನೇನೋ ವಿಷಯಗಳನ್ನು ತುಂಬುಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ’ ಎನ್ನುವುದು ಉಪ್ಪಿ ಮಾತು.

ನಟರಾಗಿ ತುಂಬಾ ಜಾಲಿಯಾಗಿ, ನಿರ್ದೇಶಕರ ಕನಸಿಗೆ ಜೀವ ತುಂಬುವ ಸ್ಟಾರ್‌ ಆಗಿರುವ ಉಪೇಂದ್ರ, ನಿರ್ದೇಶಕರಾಗಿ ಹೇಗೆ ಎಂಬ ಕುತೂಹಲ ಸಹಜ. ಇದಕ್ಕೆ ಉಪ್ಪಿ ನೇರವಾಗಿ ಉತ್ತರಿಸಿದ್ದಾರೆ. “ಇಡೀ ಚಿತ್ರ ನಿರ್ದೇಶಕರ ಸ್ಟೈಲ್‌ನಲ್ಲಿರುತ್ತದೆ. ನಾನು ನಿರ್ದೇಶಕನಾಗಿದ್ದಾಗ ಬಹಳ ಸ್ಟ್ರಾಂಗ್‌ ಆಗಿ ಇರುತ್ತೇನೆ. ತುಂಬಾ ಕಮಾಂಡಿಂಗ್‌ ಆಗಿ ಇರುತ್ತೇನೆ. ಟ್ರೂಥ್‌ಫ‌ುಲ್‌ ಆಗಿರುತ್ತೇನೆ. ಕಲಾವಿದನಾಗಿದ್ದಾಗ ಬೇರೆ. ನನಗೆ ಬಂದು ಕಥೆ ಹೇಳುತ್ತಾರೆ, ನಾನು ಅವರನ್ನು ನಂಬುತ್ತೇನೆ. ಹೇಳಿದಂತೆ ಮಾಡಲಿಲ್ಲ ಅಂದಾಗಲೂ ಬೇಸರ ನುಂಗಿಕೊಂಡು ಸುಮ್ಮನಿರುತ್ತೇನೆ. ಒಬ್ಬ ನಿರ್ದೇಶಕನಾಗಿದ್ದಾಗ, ನಾನು ಏನು ಅಂದು ಕೊಂಡಿದ್ದೇನೋ ಅದನ್ನೇ ಮಾಡುತ್ತೇನೆ. ಅದಕ್ಕೇ ಜನ ನನ್ನ ಬಗ್ಗೆ ಅಷ್ಟು ನಂಬಿಕೆ ಇಟ್ಟಿರುತ್ತಾರೆ. ನಾನು ಅದನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಹೀಗಿದ್ದರೆ ಸಿನಿಮಾ ಮಾಡೋಣ. ಇಲ್ಲವಾದರೆ ಬೇಡ ಎಂದು ಮೊದಲೇ ಹೇಳಿಬಿಡುತ್ತೇನೆ. ಆಗ ಎಲ್ಲರಿಗೂ ಒಳ್ಳೆಯದು. ಪ್ರಾಮಾಣಿಕವಾಗಿರುವುದಕ್ಕಿಂತ ಇನ್ನೊಂದು ಯಶಸ್ಸು ಇಲ್ಲ’ ಎನ್ನುವುದು ಉಪ್ಪಿ ನುಡಿ.

ಅಂದಹಾಗೆ, ಉಪೇಂದ್ರ ಈ ಕಥೆಯನ್ನು 15-20 ವರ್ಷಗಳ ಹಿಂದೆಯೇ ಮಾಡಿಟ್ಟುಕೊಂಡಿದ್ದರಂತೆ. ಈ ಬಗ್ಗೆ ಮಾತನಾಡುವ ಅವರು, “ಈ ಕಥೆ ನಾನು ಮಾಡಿದ್ದು 15-20 ವರ್ಷಗಳ ಹಿಂದೆ. ಒಂದು ಲೈನ್‌ ಇಟ್ಟುಕೊಂಡಿದ್ದೆ. ಕೆಲವೊಮ್ಮೆ ಎಷ್ಟು ಅಂದುಕೊಂಡರೂ ಆಗುವುದಿಲ್ಲ. ಕೆಲವೊಮ್ಮೆ ಬೇಡ ಎಂದರೂ ಆಗಿಬಿಡುತ್ತದೆ. ಈ ಕಥೆ ನಾನು ಎಷ್ಟು ಜನರಿಗೆ ಹೇಳಿದ್ದೇನೆ ಎಂದರೆ, ಇದು ನಂದು ಅಂತ ಯಾರು ಬರುತ್ತಾರೋ ಗೊತ್ತಿಲ್ಲ. ಆದರೆ, ಅವರಿಗೆ ಗೊತ್ತಿಲ್ಲ, ನಿನ್ನೆ ಹೇಳಿರುವುದು, ನಾಳೆ ಬದಲಾಗುತ್ತದೆ ಎಂದು’ ಎನ್ನುವುದು ಉಪೇಂದ್ರ ಮಾತು.

ಉಪೇಂದ್ರ ನಿರ್ದೇಶನದ ಚಿತ್ರವನ್ನು ಲಹರಿ ಸಂಸ್ಥೆಯ ಮನೋಹರನ್‌ ಹಾಗೂ ಕೆ.ಪಿ. ಶ್ರೀಕಾಂತ್‌ ನಿರ್ಮಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಮ್ರಾಟ್ ಪ್ರಥ್ವಿರಾಜ್ ಚಿತ್ರಕ್ಕೆ ನಿಷೇಧ ಹೇರಿದ ಕುವೈತ್, ಒಮಾನ್‌

Sat Jun 4 , 2022
  ಮುಂಬಯಿ : ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವ “ಸಾಮ್ರಾಟ್ ಪ್ರಥ್ವಿರಾಜ್” ಚಿತ್ರವನ್ನು ಅರಬ್ ರಾಷ್ಟ್ರಗಳಾದ ಕುವೈತ್ ಮತ್ತು ಒಮಾನ್‌ನಲ್ಲಿ ನಿಷೇಧಿಸಲಾಗಿದೆ ಮತ್ತು ಕತಾರ್‌ನಲ್ಲಿ ತಡೆಹಿಡಿಯಲಾಗಿದೆ ಎಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ”ಸಾಮ್ರಾಟ್ ಪೃಥ್ವಿರಾಜ್” ನಿರ್ಭೀತ ಮತ್ತು ಬಲಿಷ್ಠ ರಾಜ ”ಪೃಥ್ವಿರಾಜ್ ಚೌಹಾಣ್” ಅವರ ಜೀವನ ಮತ್ತು ಶೌರ್ಯವನ್ನು ಆಧರಿಸಿದೆ. ಅಕ್ಷಯ್ ಆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ವರದಿಯ ಬೆನ್ನಲ್ಲೇ, ಅರಬ್ ದೇಶಗಳಲ್ಲಿ ಚಿತ್ರವನ್ನು ಅನಗತ್ಯವಾಗಿ […]

Advertisement

Wordpress Social Share Plugin powered by Ultimatelysocial