ಉಸ್ತಾದ್ ವಿಲಾಯತ್ ಖಾನ್

ಸಂಗೀತಲೋಕದಲ್ಲಿ ಅಪಾರ ಪ್ರತಿಭಯಿಂದ ಪ್ರಕಾಶಗೊಂಡವರಲ್ಲಿ ಉಸ್ತಾದ್ ವಿಲಾಯತ್ ಖಾನ್ ಪ್ರಮುಖರು. ಇಂದು ಅವರ ಸಂಸ್ಮರಣೆ ದಿನ.
ವಿಲಾಯತ್ ಖಾನ್ 1928ರ ಆಗಸ್ಟ್ 28ರಂದು ಈಗಿನ ಬಾಂಗ್ಲಾದೇಶದ ಭಾಗವಾದ ಮೈಮೇನ್ಸಿಂಗ್ ಜಿಲ್ಲೆಯ ಗೌರಿಪುರದಲ್ಲಿ ಜನಿಸಿದರು. ಅವರದ್ದು ಸಂಗೀತವನ್ನು ಪರಂಪರಾನುಗತವಾಗಿ ಬೆಳೆಸಿಕೊಂಡು ಬಂದ ಅಪ್ರತಿಮ ಸಂಗೀತಗಾರರ ಮನೆತನ. ಇವರ ತಂದೆ ಇನಾಯತ್ ಖಾನರು ಸುಪ್ರಸಿದ್ಧ ಸಿತಾರ್ ಮತ್ತು ಸೂರಬಹಾರ್ ವಾದಕರಾಗಿದ್ದರು. ತಾತನವರಾದ ಇಮ್ದಾದ್ ಖಾನ್ ಅವರೂ ಹೀಗೆಯೇ ಪ್ರಸಿದ್ಧರಾಗಿದ್ದವರು.
ವಿಲಾಯತ್ ಖಾನರು ಪರಂಪರಾಗತವಾದ ಇಮ್ದಾದಖಾನಿ ಘರಾಣಾ ಅಥವ ಇಟಾವಾ ಘರಾಣಾ ಶೈಲಿಯಲ್ಲಿ ಸಿತಾರ್ ವಾದನವನ್ನು ಕಲಿತರು. ಇಟಾವಾ ಎಂಬುದು ತಾತಾ ಇಮ್ದಾದ್ ಖಾನರು ವಾಸಿಸುತ್ತಿದ್ದ ಆಗ್ರಾದ ಹತ್ತಿರವಿರುವ ಹಳ್ಳಿಯ ಹೆಸರು.
ತಂದೆಯವರಾದ ಇನಾಯತ್ ಖಾನರು ವಿಲಾಯತ ಖಾನರ ಮೊದಲ ಗುರುಗಳು. ಇಲಾಯತ್ ಖಾನರು ತಮ್ಮ 8ನೆಯ ವಯಸ್ಸಿನಲ್ಲಿಯೇ ಧ್ವನಿಮುದ್ರಿಕೆ ಬರುವಷ್ಟು ಪರಿಣತಿ ಸಾಧಿಸಿದ್ದರು. ತಮ್ಮ ಜೀವನದ ಕೊನೆಯ ಸಂಗೀತ ಕಛೇರಿಯನ್ನು 75ನೆಯ ವಯಸ್ಸಿನಲ್ಲಿ ನೀಡಿದ್ದರು.
ವಿಲಾಯತ್ ಖಾನ್ ಅವರಿಗೆ ಇನ್ನೂ 9 ವರ್ಷವಿದ್ದಾಗ ತಂದೆ ಇನಾಯತ್ ಖಾನರು ತೀರಿಕೊಂಡರು. ಹೀಗಾಗಿ ಇವರ ಹೆಚ್ಚಿನ ವಿದ್ಯಾಭ್ಯಾಸವು ಕುಟುಂಬದ ಇತರ ಜನರ ಮೂಲಕವಾಯಿತು. ಇವರ ಚಿಕ್ಕಪ್ಪ, ಸುಪ್ರಸಿದ್ಧ ಸಿತಾರ್ ಮತ್ತು ಸೂರಬಹಾರ್ ವಾದಕ ವಾಹಿದ್ ಖಾನ್, ಅಜ್ಜ(ತಾಯಿಯ ತಂದೆ) ಬಂದೇ ಹಸನ್ ಖಾನ್ ಮತ್ತು ತಾಯಿ ಬಶಿರನ್ ಬೇಗಮ್ ಮೊದಲಾದವರು ವಿಲಾಯತ್ ಖಾಬರ ಸಂಗೀತ ಕಲಿಕೆಗೆ ನಿರಂತರ ಪೋಷಣೆ ನೀಡಿದರು. ತಾಯಿ ತಮ್ಮ ವಂಶದ ಸಂಗೀತ ಪರಂಪರೆಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದ್ದರು. ಸೋದರ ಮಾವನಾಗಿದ್ದ ಝಿಂದೇ ಹಸನ್ ಖಾನರು ಇವರ ರಿಯಾಜಿನ ಮೇಲುಸ್ತುವಾರಿ ವಹಿಸಿದ್ದರು.
ಚಿಕ್ಕವರಾಗಿದ್ದಾಗ ವಿಲಾಯತ್ ಖಾನ್ ಅವರಿಗೆ ಗಾಯಕನಾಗಬೇಕೆಂಬ ಹಂಬಲವಿತ್ತು, ಆದರೆ ಸ್ವತಃ ಗಾಯಕರ ವಂಶದಿಂದ ಬಂದಂಥ ಇವರ ತಾಯಿ ಬಶಿರನ್ ಬೇಗಮ್ ಅವರಿಗೆ ಮಗ ತನ್ನ ಮನೆತನದ ಪಾರಂಪರಿಕ ಸಿತಾರ್ ವಾದನದ ಪ್ರಸಿದ್ಧಿಯನ್ನೇ ಮುಂದುವರೆಸಬೇಕು ಎಂಬ ಆಶಯ ಇತ್ತು. ಆದರೂ ನುಡಿಸುವಂತೆಯೇ ಹಾಡುವ ‘ಗಾಯಕಿ’ ಕಲೆಯಲ್ಲಿ ಇವರಿಗಿದ್ದ ಪ್ರೀತಿ ಇವರನ್ನು ಸಿತಾರದಲ್ಲಿ ಗಾಯಕಿ ಅಂಗವನ್ನು ಅಭಿವ್ಯಕ್ತಿಸಲು ಪ್ರೇರೇಪಿಸಿತು. ಇವರು ತಮ್ಮ ಜೀವನದ ಕೊನೆಯ ಕೆಲ ವರ್ಷ ಸಂಗೀತ ಕಛೇರಿಗಳಲ್ಲಿ, ಅನೇಕ ಬಾರಿ ಕೆಲವು ಚೀಜ್ಗಳನ್ನು ಹಾಡಿ, ಅದನ್ನೇ ನುಡಿಸಿ ತೋರಿಸುತ್ತಿದ್ದರು. ಇವರ ಪುತ್ರರಾದ ಶುಜಾತ್ ಖಾನರು ಕೂಡ ಈ ಶೈಲಿಯನ್ನು ಮುಂದುವರೆಸಿಕೊಂದು ಬಂದಿದ್ದಾರೆ.
ವಿಲಾಯತ್ ಖಾನರು ತಮ್ಮ ಮೊದಲ ಕಛೇರಿಯನ್ನು ಅಖಿಲ ಬೆಂಗಾಲ್ ಸಂಗೀತ ಸಮ್ಮೇಳನದಲ್ಲಿ ನೀಡಿದರು. 1944ರಲ್ಲಿ ಮುಂಬೈನ ವಿಕ್ರಮಾದಿತ್ಯ ಸಂಗೀತ ಪರಿಷತ್ತಿನಲ್ಲಿ ಇವರು ನೀಡಿದ ಸಂಗೀತ ಕಛೇರಿಯ ಕುರಿತು “Electrifying Sitar”ಎಂಬ ಪತ್ರಿಕೆಯ ಹೊಗಳಿಕೆಗಳು ಹೊರಹೊಮ್ಮಿದವು. ಐವತ್ತರ ದಶಕದಲ್ಲಿ ವಿಲಾಯತ್ ಖಾನರು ಸಿತಾರ್ ನಿರ್ಮಾಣ ಮಾಡುವ ಸಂಗೀತ ಸಂಸ್ಥೆಗಳೊಡನೆ ಸಿತಾರ್ ಅನ್ನು ಉತ್ತಮಪಡಿಸುವುದರಲ್ಲಿ ಸಹಯೋಗ ನೀಡಿದರು.
ವಿಲಾಯತ್ ಖಾನರು ಭಣ್ಕರ್, ಜೈಜೈವಂತಿ ಮುಂತಾದ ರಾಗಗಳಿಗೆ ಹೊಸ ಅಭಿವ್ಯಕ್ತಿ ನೀಡಿದರೆ, ಇನಾಯಕ್ತಾನಿ ಕನಾಡ, ಸಂಝ್ ಸರಾವಳಿ, ಕಲಾವಂತಿ, ಮಂದ್ ಭೈರವ್ ಮುಂತಾದವುಗಳನ್ನು ಸೃಜಿಸಿದರು. ಜೊತೆಗೆ ಮೂಲ ರಾಗಗಳಾದ ಯಮನ್, ಶ್ರೀ, ತೋಡಿ, ದರ್ಬಾರಿ ಮತ್ತು ಭೈರವಿಗಳನ್ನು ಅತ್ಯಂತ ಸಾಂಪ್ರದಾಯಿಕ ಶಿಸ್ತುಬದ್ಧತೆಯಲ್ಲಿ ಪ್ರಸ್ತುತ ಪಡಿಸಿದ ಪ್ರಮುಖರಲ್ಲೂ ಪ್ರಥಮ ಸಾಲಿನವರಾಗಿದ್ದರು.
ವಿಲಾಯತ್ ಖಾನರು ಸತ್ಯಜಿತ್ ರೇ ಅವರ ಬಂಗಾಳಿ ಚಿತ್ರ ‘ಜಲ್ಸಾಘರ್’ (1958), ಮರ್ಚಂಟ್ ಐವರಿ ಅವರ ನಿರ್ಮಾಣದ ‘ದಿ ಗುರು'(1969) ಮತ್ತು ಮಧುಸೂದನ್ ಕುಮಾರ್ ಅವರ ‘ಕಾದಂಬರಿ’ (1976) ಹಿಂದಿ ಚಲನಚಿತ್ರಕ್ಕೆ ಸಂಗೀತ ನೀಡಿದ್ದರು.
‘ಕೋಮಲ್ ಗಾಂಧಾರ’ ಇದು ವಿಲಾಯತ್ ಖಾನರ ಜೀವನ ಚರಿತ್ರೆ. ಇದನ್ನು ಖಾನಸಾಹೇಬರು ಶಂಕರಲಾಲ್ ಭಟ್ಟಾಚಾರ್ಜಿಯವರ ಜೊತೆಗೆ ಬರೆದಿದ್ದಾರೆ.
ವಿಲಾಯತ್ ಖಾನ್ ಅವರು ತಮಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಮತ್ತು ಕೇಂದ್ರ ಸಂಗೀತ ನಾಟಕ ಮುಂತಾದ ಪ್ರಶಸ್ತಿಗಳನ್ನು ಘೋಷಿಸಿದಾಗ, ಅವು ತಮಗೆ ಸಲ್ಲಬೇಕಾದ ಸೂಕ್ತ ಗೌರವಗಳಾಗಿಲ್ಲ, ಸೂಕ್ತ ಜ್ಞಾನ ಉಳ್ಳವರು ಸಮಿತಿಯಲ್ಲಿರಲಿಲ್ಲ ಎಂಬಂತಹ ಕಾರಣಗಳನ್ನು ಹೇಳಿ ನಿರಾಕರಿಸಿದರು.

ವಿಲಾಯತ್ ಖಾನ್ 2004 ವರ್ಷದ ಮಾರ್ಚ್ 13ರಂದು ನಿಧನರಾದರು. ತಮ್ಮ 75 ವರ್ಷ ಆಯುಷ್ಯದಲ್ಲಿ ಅವರು 65 ವರ್ಷಗಳ ಕಾಲ ಆಕಾಶವಾಣಿ ಮತ್ತು ಧ್ವನಿಮುದ್ರಿಕೆಗಳಲ್ಲಿ ನಿರಂತರ ಸಂಗೀತ ಸಂಪರ್ಕ ಬೆಸೆದಿದ್ದರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ

Sun Mar 13 , 2022
ದುರ್ಯೋಧನನ ಪ್ರಾಯೋಪವೇಶ ಸಂಕಲ್ಪ ಪ್ರಸಂಗ. ಪಾರ್ಥ ದುರ್ಯೋದನನನ್ನು ಕರೆತಂದು ಧರ್ಮಜನ ಚರಣಗಳಲ್ಲಿ ಹಾಕಿದನು. ಚಿತ್ರಸೇನನನ್ನುಕಳಿಸಿಕೊಟ್ಟು ದ್ರೌಪದಿಯನ್ನು ಕರೆದು ದುರ್ಯೋಧನನ ಕಟ್ಟುಗಳನ್ನು ಬಿಚ್ಚಿ ಉಪಚರಿಸುವಂತೆ ಧರ್ಮಜನು ಹೇಳಿದನು. ಅವಳು ತನ್ನ ಜೊತೆಯ ಹೆಣ್ಣುಮಕ್ಕಳ ಸಹಾಯದಿಂದ ಎಲ್ಲವನ್ನೂ ಬಿಡಿಸಿದಳು. ನಿಮ್ಮ ಅರಮನೆಯ ಸೌಲಭ್ಯಗಳನ್ನು ಇಲ್ಲಿ ನೀಡಲಾರೆವು. ಇಲ್ಲಿ ಇವೇ ನಮಗೆಸಿಂಹಾಸನಗಳು ಎಂದು ಹೇಳುತ್ತಾ ನಕ್ಕಳು. ಅವಳ ವ್ಯಂಗ್ಯದ ನುಡಿಗಳು, ಭೀಮನ ಹುಸಿ ನಗು ಮುಂತಾದುವುಗಳಿಂದ ದುರ್ಯೋಧನನಿಗೆ ಅಪಮಾನವಾಯಿತು. ಭಾನುಮತಿ ಬಂದು ನಮಿಸಿದಳು. ಎಲ್ಲರಿಂದ […]

Advertisement

Wordpress Social Share Plugin powered by Ultimatelysocial