ವಚನ ಭಾರತ

ಮಹಾಭಾರತ ಕಥೆ ಸಹಸ್ರಾರು ವರ್ಷಗಳಿಂದ ವಿಶ್ವ ಜನಸ್ತೋಮವನ್ನು ಮನಸೂರೆಗೊಳ್ಳುತ್ತಾ ಬಂದಿದೆ. ಕನ್ನಡದಲ್ಲಿ ಲಭ್ಯವಿರುವ ಸುಂದರ ಮಹಾಭಾರತದ ಪುಸ್ತಕಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂದೆಂದೂ ಪ್ರಕಾಶಿಸುವ ಮಹನೀಯರಾದ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳ ‘ವಚನ ಭಾರತ’ ಅತ್ಯಂತ ಮಹತ್ವಪೂರ್ಣ ಗ್ರಂಥವೆನಿಸಿದೆ. ಬೃಹತ್ ಕಾವ್ಯವಾದ ಮಹಾಭಾರತವನ್ನು ಜನ ಮನಕ್ಕೆ ದಕ್ಕುವಷ್ಟು ಹಿತಮಿತವಾಗಿ, ಉಪಕಥೆ, ನೀತಿ-ಧರ್ಮ ಎಲ್ಲವನ್ನೂ ಒಳಗೊಂಡು, ಸರಳವಾಗಿ ಇಂದಿನ ಗದ್ಯದಲ್ಲಿ ಬರೆದಿರುವ ಸುಂದರ ಗ್ರಂಥವಿದು. ನಮ್ಮ ಮನೆಗಳಲ್ಲಿ ನಮ್ಮ ಹಿರಿಯರು ಮಾಡುತ್ತಿದ್ದ ರಾಮಾಯಣ, ಮಹಾಭಾರತದ ಪಾರಾಯಣಗಳಲ್ಲಿ, ಮಹಾಭಾರತದ ಪಾರಾಯಣವೆಂದರೆ ಈ ಗ್ರಂಥದ ಓದೇ. ಅವರು ಓದುತ್ತಿದ್ದ ಈ ಗ್ರಂಥ ನಮಗೂ ಆಕರ್ಷಕವಾಗಿ ಕಂಡು ನಮ್ಮ ಶಾಲೆಯ ಪುಸ್ತಕಗಳನ್ನು ಓದದಿದ್ದರೂ ಈ ಗ್ರಂಥವನ್ನು ಚಿಕ್ಕಂದಿನಿಂದ ಹಲವಾರು ಬಾರಿ ಓದಿ ಸವಿದ ನೆನಪು ನನ್ನಲ್ಲಿ ಸವಿಯ ನೆಲೆಯಾಗಿದೆ. ಇತ್ತೀಚೆಗೆ ನಾನು ಕನ್ನಡ ಸಂಪದದ ಓದುಗರಲ್ಲಿ ಪ್ರಸ್ತಾಪಿಸಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯನವರ ‘ಸಿರಿಗನ್ನಡ ಸಾರಸ್ವತರು’ ಪುಸ್ತಕದಲ್ಲಿ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳ ‘ವಚನ ಭಾರತ’ದ ಕುರಿತು ಸುಂದರ ವಿವರಣೆಯಿದೆ. ಈ ವಿವರಣೆಯನ್ನು ನನ್ನ ಅನುಭಾವಕ್ಕೊಂದಿಷ್ಟು ಬೆರೆಸಿ ತಮ್ಮಲ್ಲಿ ಈ ಪುಸ್ತಕದ ಕುರಿತು ಒಂದಷ್ಟು ವಿಚಾರವನ್ನು ಈಗ ಪ್ರಸ್ಥಾಪಿಸುತ್ತಿದ್ದೇನೆ.
ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ನಾಡಿನ ಪುಣ್ಯದಿಂದ ನವೋದಯವೆಂಬ ಹೆಸರಿನ ಚಳವಳಿಯು ಮೂಡಿಬಂದಿತು. ಜಡತೆಯಿಂದ ಕುಗ್ಗಿ ಮಲಗಿದ್ದ ಜನತೆಯನ್ನು ಎಚ್ಚರಿಸಿ ಸುಪ್ತವಾಗಿದ್ದ ಚೈತನ್ಯವನ್ನು ಚುರುಕುಗೊಳಿಸಿತು. ಕತ್ತಲೆ ಸರಿದು ಬೆಳಕಾಯಿತು. ನಾಡಿನಲ್ಲಿ ಎಲ್ಲ ಕಡೆ ಚಟುವಟಿಕೆ ಕಾಣಬಂತು. ಇಂಥ ಹೊಸ ಸ್ಪಂದನವನ್ನು ಉಂಟುಮಾಡಿದ ವ್ಯಕ್ತಿಗಳು ಯಾರು ಎಂದು ತಿಳಿದುಕೊಳ್ಳುವುದು ನಮ್ಮ ಶ್ರೇಯೋಭಿವೃದ್ಧಿಗೆ ಅತ್ಯಂತ ಸಹಕಾರಿಯಾದ ವಿಚಾರವಾಗಿದೆ. ಆ ಸಮಯದಲ್ಲಿ ಕನ್ನಡ ಭಾಷಾಸಾಹಿತ್ಯಗಳ ಉಜ್ಜೀವನಕ್ಕೆಂದು ವ್ರತಹಿಡಿದ ಉದಾತ್ತ ವ್ಯಕ್ತಿಗಳ ಪಂಕ್ತಿಯಲ್ಲಿ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳು ಪ್ರಮುಖರಾಗಿದ್ದಾರೆ.
‘ವಚನ ಭಾರತ’ವನ್ನು ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳು ಬೃಹತ್ ಸಂಸ್ಕೃತ ಮಹಾಭಾರತವನ್ನು, ಸಂಗ್ರಹ ಗದ್ಯಾನುವಾದ ರೂಪವಾಗಿ ರಚಿಸಿದ್ದಾರೆ. ಇದು ಶಾಸ್ತ್ರಿಗಳು ಕನ್ನಡಿಗರಿಗೆ ನೀಡಿರುವ ಶ್ರೇಷ್ಠ ಕೊಡುಗೆಯಾಗಿದೆ. ತಮ್ಮ ಈ ‘ವಚನ ಭಾರತ’ ಕೃತಿಯ ಬಗ್ಗೆ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳ ಮಾತು ತುಂಬಾ ಮಹತ್ವಪೂರ್ಣವಾದದ್ದಾಗಿದೆ. “ಇದರಲ್ಲಿ ನನ್ನ ಸ್ವಂತ ಭಾವನೆ ಒಂದೂ ಇಲ್ಲ. ನನ್ನ ಬುದ್ಧಿಯಿಂದ ಎಲ್ಲಾದರೂ ಉತ್ತಮಗೊಳಿಸಹೋದರೆ ಅದು ಕಾಮನಬಿಲ್ಲಿಗೆ ಬಣ್ಣ ಬಳಿದಂತೆ ಅಥವಾ ಚಿತ್ರಪಟದ ಬೊಂಬೆಗೆ ಬಟ್ಟೆ ಹೊಲಿಸಿದಂತೆ ಆದೀತೆಂದು ಹೆದರಿ ಮೂಲವನ್ನು ಅವಲಂಬಿಸಿಕೊಂಡು ಹೋಗಿದ್ದೇನೆ. ನನ್ನ ಸಮಸ್ಯೆಯೆಲ್ಲಾ ಮೂಲದಲ್ಲಿ ಯಾವುದನ್ನು ಬಿಡಬೇಕೆಂಬುಡು. ಸುಮಾರು ಐನೂರು ಪುಟಗಳಲ್ಲಿ ಮಹಾಭಾರತದ ಸಾರಾಂಶವೆಲ್ಲಾ ಇರಬೇಕು; ಸಮ ಪ್ರಮಾಣವಾಗಿರಬೇಕು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆಯುವುದಕ್ಕೆ ಮೊದಲು ಮಾಡಿದೆ”. ಈ ಮಾತಿನಲ್ಲಿ ಈ ಮಹದ್ಗ್ರಂಥ ರಚನೆಯಲ್ಲಿ ಪ್ರೊ. ಕೃಷ್ಣಶಾಸ್ತ್ರಿಗಳ ಉದಾತ್ತ ಧ್ಯೇಯ ಮತ್ತು ನಿಷ್ಠೆಗಳೇನಿದ್ದವೆಂಬುದು ನಮಗೆ ವೇದ್ಯವಾಗುತ್ತದೆ.
‘ವಚನ ಮಹಾಭಾರತ’ದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದ 91 ಪುಟಗಳಲ್ಲಿನ ಬಹುತೇಕ ಭಾಗದಲ್ಲಿ ಸಮಗ್ರವಾದ ಪೀಠಿಕೆಯಿದೆ. ಮಿಕ್ಕ 398 ಪುಟಗಳಲ್ಲಿ ಅನುಬಂಧ ಸಹಿತವಾದ ಭಾರತದ ಕಥೆಯಿದೆ. ಪೀಠಿಕೆಯನ್ನು ಸಂಗ್ರಹಿಸುವುದಕ್ಕೆ, ಶಾಸ್ತ್ರಿಗಳು ಭಾರತದ ಕಥೆಯನ್ನು ಸಂಗ್ರಹಿಸುವುದಕ್ಕಿಂತ ಹೆಚ್ಚು ಕಾಲವನ್ನೂ ಶ್ರಮವನ್ನೂ ಕೈಗೊಂಡಿರಬೇಕೆನ್ನುವುದು ಯಾರಿಗಾದರೂ ಗೋಚರವಾಗುತ್ತದೆ. ಪೀಠಿಕೆಯ ಬರವಣಿಗೆಯಲ್ಲಿ ವ್ಯಕ್ತವಾಗಿರುವ ಅವರ ವಿದ್ಯಾವೈದುಷ್ಯವು ಯಾರನ್ನಾದರೂ ಬೆರಗುಗೊಳಿಸುತ್ತದೆ. ಅದರಲ್ಲಿನ ಆಳವಾದ ವ್ಯಾಸಂಗವೂ ಸಂಶೋಧನಾತ್ಮಕವಾದ ನಿರ್ಧಾರಗಳೂ ಸತತವಾದ ಸಾರಸ್ವತ ತಪಸ್ಸಿಗೆ ಮಾತ್ರ ಸಾಧ್ಯ. ಮಹಾಭಾರತದ ಹುಟ್ಟು, ಬೆಳವಣಿಗೆ, ಕಾಲ, ಕರ್ತೃಗಳು ಮುಂತಾದ ವಿಚಾರಗಳು ಎಷ್ಟೋ ಚಚೆಗೆ ಒಳಗಾಗಿವೆ. ಆ ಜಟಿಲವಾದ ಸಮಸ್ಯೆಗಳನ್ನೆಲ್ಲಾ ಸಾಂಗವಾಗಿ ವ್ಯಾಸಂಗ ಮಾಡಿ ಸರ್ವಸಮ್ಮತವಾಗಬಹುದಾದ ನಿರ್ಧಾರಗಳನ್ನೇ ಶಾಸ್ತ್ರಿಗಳು ನಮ್ಮ ಮುಂದೆ ಇಟ್ಟಿದ್ದಾರೆ. “ಮಹಾಭಾರತದಲ್ಲಿ ಧರ್ಮ, ನೀತಿ” ಎನ್ನುವ ಭಾಗದಲ್ಲಿ ಐದು ಪುಟಗಳಲ್ಲಿ ಕೊಟ್ಟಿರುವ ರಾಜಧರ್ಮ, ಆಪದ್ಧರ್ಮ, ಮೋಕ್ಷಧರ್ಮ ಇವುಗಳ ನಿಶ್ಚಿತ ನಿರೂಪಣೆಯಂಥ ವಾಕ್ಯಸರಣಿಯಾಗಲಿ, ‘ಮಹಾಭಾರತದಲ್ಲಿ ಕಾವ್ಯಗುಣ’ ಎನ್ನುವ ಭಾಗದಲ್ಲಿ ಬರುವ ಪಾರದರ್ಶಕವಾದ ತೀಕ್ಷ್ಣಮತಿಯಾಗಲಿ ಶ್ರೇಷ್ಠಮಟ್ಟದ್ದೆನಿಸುತ್ತದೆ.
ರಾಜಧರ್ಮ ನಿರೂಪಣೆಯ ನಿರಾಭರಣ ಸೌಂದರ್ಯ ಆಕರ್ಷಕವಾಗಿದೆ. “ಸಂಸಾರದಲ್ಲಿ ಒಬ್ಬರು ಸೋತಾಗಲಿ, ಇಬ್ಬರು ಸೋತಾಗಲಿ, ಸ್ನೇಹ ಬೆಳೆಯಬೇಕು ಅದರಿಂದಲೇ ಚಿಂತೆ ಕಷ್ಟಗಳ ನಿವಾರಣೆ; ಸುಖ ಸಂಪಾದನೆ. ಆದ್ದರಿಂದ ವ್ಯಕ್ತಿಯ ಶೀಲ, ಅದರಲ್ಲಿಯೂ ತ್ಯಾಗ ಕ್ಷಮೆ, ಇವು ಮುಖ್ಯ; ಅದರಿಂದ ಸಂಸಾರ ಹಸನಾಗುತ್ತದೆ. ಇವುಗಳಿಗೆ ಮೂಲ ಪ್ರೀತಿ, ಪ್ರೇಮ, ವಾತ್ಸಲ್ಯ, ಭಕ್ತಿ, ಗೌರವ ಇತ್ಯಾದಿ. ಇವೆಲ್ಲಾ ಮೂಲತಃ ಒಂದೇ. ಸ್ಥಾನ ಭೇದದಿಂದ ಸ್ವಲ್ಪ ಸ್ವಲ್ಪ ಬಣ್ಣ ಬದಲಾಗಿ ಒಂದೇ ಸ್ನೇಹಭಾವನೆ ಬೇರೆ ಬೇರೆ ಹೆಸರನ್ನು ತಳೆಯುತ್ತದೆ. ಹೀಗೆ ವ್ಯಕ್ತಿಗಳು ಉತ್ತಮಗೊಂಡರೆ ಸಂಸಾರವು ಉತ್ತಮವಾಗುತ್ತದೆ. ಏಕೆಂದರೆ ಹತ್ತು ವ್ಯಕ್ತಿಗಳಿಂದ ಒಂದು ಸಂಸಾರ, ಹತ್ತು ಉತ್ತಮವಾದ ಸಂಸಾರಗಳಿಂದ ಒಂದು ಶ್ಲಾಘ್ಯವಾದ ಸಮಾಜ, ಸಮಾಜದಿಂದಲೇ ದೇಶ, ರಾಷ್ಟ್ರ ಎಲ್ಲಾ! ಆದ್ದರಿಂದ ಸಾಧಾರಣ ನೀತಿ, ಸಾಂಸಾರಿಕ ನೀತಿ, ವೈಯಕ್ತಿಕ ಗುಣಶೀಲಗಳು ಇವು ಅತ್ಯಂತ ಮುಖ್ಯವಾದವು. ವ್ಯಕ್ತಿ ಸಂಪತ್ತೇ ದೇಶ ಸಂಪತ್ತು. ಆ ಸಂಪತ್ತನ್ನು ವೃದ್ಧಿಪಡಿಸುವುದೇ ರಾಜನ ಪ್ರಥಮ ಧರ್ಮ.”
ದ್ರೌಪದಿಯ ಚಿತ್ರದ ಸಂಪೂರ್ಣತೆ ಒಂದೇ ವಾಕ್ಯವೃಂದದಲ್ಲಿ ಬಂದುಬಿಡುತ್ತದೆ. “ಪಾಂಡವರ ಜೊತೆಗೆ ಹೆಂಗಸರಲ್ಲಿ ದ್ರೌಪದಿಯೊಬ್ಬಳು ಸ್ವರ್ಗಕ್ಕೆ ಹೋದಳೆಂದು ತೋರುತ್ತದೆ. ಅವಳು ಯುದ್ಧದಲ್ಲಿ ಕಾದದೆ ಇದ್ದರೂ, ಕಾದಿದವರನ್ನು ಉಸಿರಾಡುವುದಕ್ಕೆ ಅವಕಾಶವಿಲ್ಲದಂತೆ ಪ್ರೇರಿಸಿದವಳು, ಮೂದಲಿಸಿದವಳು, ಹಠಮಾಡಿದವಳು. ಅವಳು ಪಟ್ಟ ಕಷ್ಟ ನಿಷ್ಠುರಗಳೂ ಹಾಗೆಯೇ ಇದ್ದುವೆನ್ನೋಣ! ಕುಂತಿ ಕಷ್ಟಪಡಲಿಲ್ಲವೇ? ಅಂಬೆ, ಅಂಬಿಕೆ, ಅಂಬಾಲಿಕೆಯರೂ ಕಷ್ಟಪಡಲಿಲ್ಲವೇ! ಆದರೆ ಅವರದು ಯಾರದ್ದೂ ಅಷ್ಟು ಆರ್ಭಟವಿಲ್ಲ! ಅವರು ಯಾರೂ ಅಷ್ಟು ರಾಜಸರಲ್ಲ! ‘ಮಹಾಭಾರತದಲ್ಲಿ ಯಾರಾದರೂ ಗಂಡಸಿದ್ದರೆ ಅದು ದ್ರೌಪದಿ!’ ಎಂದು ಯಾರೋ ಒಬ್ಬರು ಹೇಳಿದ್ದಾರೆ. ಆದ್ದರಿಂದ ಅವಳು ಕಾದಿ ಮಡಿಯದೆ ಇದ್ದರೂ ಗಂಡಂದಿರ ಜೊತೆಯಲ್ಲಿ ವೀರಸ್ವರ್ಗವನ್ನು ಅನುಭವಿಸಿದಳೆಂದು ತೋರುತ್ತದೆ! ಮಿಕ್ಕ ಹೆಂಗಸರಿಗೆ ಬೆಂಕಿ, ಇಲ್ಲ, ಕಾಡು ಇದೇ ಕೊನೆ!”
ಶಾಸ್ತ್ರಿಗಳು ಬರೆದಿರುವ ಪೀಠಿಕೆಯಲ್ಲಿ ಅದೆಷ್ಟು ಗಾದೆಯಂತಹ ಮಾತುಗಳು! ಒಂದೊಂದೂ ಉತ್ತಮವಾದ ‘ಎಪಿಗ್ರಂ’ಗಳು.
“ಸಾಂಖ್ಯವು ಪ್ರತಿಪಾದಿಸುವುದು ಸತ್ ಕಾರ್ಯವಾದ, ಪರಿಣಾಮವಾದ.”
“ಶೀಲಭ್ರಷ್ಟನು ಯೋಗದಲ್ಲಿ ಮುಂದುವರಿಯಲಾರನು.”
“ಭಾರತದ ತುಂಬಾ ಇರುವುದು ಕೃಷ್ಣಧರ್ಮವೇ.”
“ಸುಖವನ್ನು ತ್ಯಾಗಮಾಡದ ಹೊರತು ಸುಖ ದೊರಕದು. ಇದು ವಿಚಿತ್ರವೆನ್ನಿಸಬಹುದು, ಆದರೂ ನಿಜ.”
ಇಂದಿನ ಪ್ರಪಂಚಕ್ಕೆ ಭಾರತದ ಸಂದೇಶವೇನೆಂದು ವಿವರಿಸುವ ಕೃಷ್ಣಶಾಸ್ತ್ರಿಗಳ ಈ ವಾಕ್ಯವೃಂದವಂತೂ ಕನ್ನಡದ ವಚನಶೈಲಿಗೆ ಕಳಶದಂತಿದೆ.
“ಇಂದು ಪ್ರಪಂಚವೇ ಒಂದು ಕುರುಕ್ಷೇತ್ರವಾಗಿದೆ. ಕೌರವ ಪಾಂಡವರಂತೆ ಎರಡು ಪಕ್ಷಗಳು ಕತ್ತಿ ಹಿರಿದು – ಅಲ್ಲ ಆಟಂಬಾಂಬು ಹಿಡಿದು – ಯುದ್ಧಕ್ಕೆ ಸಿದ್ಧರಾಗಿದ್ದಾರೆ. ಸಂಧಿ ಮಾಡಿಸಿ ನೋಡೋಣ, ಲೋಕ ಹಿಂಸೆ ತಪ್ಪಿದರೆ ತಪ್ಪಲಿ, ಪ್ರತಿ ಪಕ್ಷದವರಲ್ಲಿ ಹೋಗಿ ನಿರ್ವಂಚನೆಯಾಗಿ ಪ್ರಯತ್ನಪಡುತ್ತೇನೆ ಎಂದು ಹೇಳುವ ಸತ್ವ ಸಾಹಾಸಗಳುಳ್ಳ ಕೃಷ್ಣನಂಥ ವ್ಯಕ್ತಿಯೂ ಇಂದು ಯಾರೂ ಕಾಣಿಸುವುದಿಲ್ಲ. ಯುದ್ಧ ಸಿದ್ಧತೆಯೇ ಶಾಂತಿಗೆ ಮಾರ್ಗ, ಶತ್ರು ನಿರ್ಗ್ರಹವೇ ಆತ್ಮರಕ್ಷಣೆಯ ರೂಪ ಎಂದು ನಂಬಿ, ಅನ್ನಬಟ್ಟೆ ವಸತಿ ಮುಂತಾದ ಶಾಂತ ಜೀವನ ಸೌಕರ್ಯಗಳಿಗಿಂತಲೂ ಸೇನೆ, ಮದ್ದುಗುಂಡು, ರಕ್ಷಣ ಸಾಧನೆ, ನಾಶಕ ಸಾಮಗ್ರಿ ಇವುಗಳಿಗೆ ಜನ ಗಮನ ಕೊಡುತ್ತಿದ್ದಾರೆ. ಪರಸ್ಪರ ಅಪನಂಬಿಕೆ, ಹೆದರಿಕೆ ಇವುಗಳಿಂದ ಮನಸ್ಸು ಕೆಡುತ್ತಿದೆ. ಈ ಸಮಯದಲ್ಲಿ ಉಪಚಾರಕ್ಕೋ, ಮರ್ಯಾದೆಗೋ, ಇಲ್ಲ ನಿಜವಾಗಿಯೋ ಕೆಲವರು ಪ್ರಪಂಚ ಶಾಂತಿ ದೊರಕಬೇಕಾದರೆ ನೈತಿಕ ಧಾರ್ಮಿಕ ಮಾರ್ಗದಿಂದಲೇ ಎಂದು ಹೇಳುತ್ತಿದ್ದಾರೆ. ಭರತಖಂಡದಿಂದಲೇ ಈ ಶಾಂತಿಮಾರ್ಗ ಕಾಣಬೇಕು. ಅದರ ಸಂಸ್ಕೃತಿಯೇ ಸಾಧಕವಾಗಬೇಕು ಎಂದೂ ಹೇಳುತ್ತಿದ್ದಾರೆ. ಐದನೆಯ ವೇದವಾದ, ಎರಡು ಸಾವಿರ ವರ್ಷಗಳಿಗೂ ಪ್ರಾಚೀನವಾದ ಭಾರತವು ಸದಾಕಾಲಕ್ಕೂ ತೋಳೆತ್ತಿ ಕೂಗಿಹೇಳುವ ಶಾಂತಿಮಾರ್ಗ ಇದೇ. ಆದರೆ ಅದನ್ನು ಯಾರು ಕೇಳುತ್ತಾರೋ ತಿಳಿಯದು – ಧರ್ಮಾದರ್ಥಶ್ಚಕಾಮಶ್ಚ ಸಕಿಮರ್ಥಂನ ಸೇವ್ಯತೇ! ದುರ್ಯೋಧನನು ವಿಧರ್ಮಿಯಾದನು. ನ್ಯಾಯಕ್ಕೆ ಒಪ್ಪಲಿಲ್ಲ. ಯುದ್ಧ ಅನಿವಾರ್ಯವಾಯಿತು. ತಾನೂ ಹಾಳಾಗಿ, ಸಾವಿರಾರು ಜನ ರಾಜರನ್ನೂ ಹದಿನೆಂಟು ಅಕ್ಷೋಹಿಣಿ ಸೇನೆಯನ್ನೂ ಬಲಿಕೊಟ್ಟನು, ಲೋಕದಲ್ಲಿ ಎಲ್ಲೆಲ್ಲೂ ಹೆಂಗಸರ ಮಕ್ಕಳ ದಿಕ್ಕಿಲ್ಲದವರ ಹಾಹಾಕಾರ, ಗೋಳು ಇದೇ ತುಂಬಿಹೋಯಿತು. ಅವನಿಗೂ ಪಾಂಡವರಿಗೂ ವೀರಸ್ವರ್ಗ ಕಾದಿತ್ತೋ ಏನೋ; ಅವರನ್ನು ನಂಬಿದ್ದ ಪ್ರಜೆಗಳಿಗಂತೂ ವೀರ ನರಕವೇ.”
‘ವಚನ ಭಾರತ’ದ ಪೀಠಿಕೆಯ ಸ್ವಾರಸ್ಯ, ಪ್ರಯೋಜನಗಳನ್ನು ಬಲ್ಲವರಿಗೆ ಅದರ ಶ್ರೇಷ್ಠತೆಯ ಅವಶ್ಯಕತೆಗಳು ಗೊತ್ತಾಗುತ್ತವೆ. ಅದನ್ನು ಅರ್ಥಮಾಡಿಕೊಳ್ಳಲಾರದೆ ಕೇವಲ ಕಥೆಯನ್ನೇ ಬಯಸುವವರಿಗೆ ಕೂಡ ಈ ಗ್ರಂಥದಲ್ಲಿ ಮುಂದೆ ಒಂದು ದೊಡ್ಡ ಔತಣವೇ ಕಾದಿದೆ. ‘ವಚನ ಭಾರತ’ವೊಂದು ಸವಿಯೂಟ; ರಸದೂಟ. ಕಥೆಯು ಎಲ್ಲಿಯೂ ವಿಳಂಬಿಸುವುದಿಲ್ಲ. ಓದುಗನ ಆಸಕ್ತಿ ಎಲ್ಲೂ ಕುಂದುವುದಿಲ್ಲ; ಕಥೆಯ ಸ್ವಾರಸ್ಯ ಎಲ್ಲೂ ಕಡಿಮೆಯಾಗುವುದಿಲ್ಲ. ಓದಿ ಪೂರೈಸಿ ಮುಚ್ಚಿದಾಗಲೇ ಮನಸ್ಸಿಗೆ ತೃಪ್ತಿ, ನೆಮ್ಮದಿ. ಕನ್ನಡನಾಡಿನ ಎಷ್ಟು ಜನ ಇದನ್ನು ಒಂದೇ ದಿನದಲ್ಲಿ ಪೂರೈಸಿದ್ದಾರೋ!
ಕಥನ ಕ್ರಮದಲ್ಲಿನ ಕೆಲವು ಗುಣಗಳಂತೂ ಶಾಸ್ತ್ರಿಗಳವರಿಗೆ ಮಾತ್ರ ದತ್ತವಾದುವು. ಮೂಲದಿಂದ ಅವರು ಆರಿಸಿರುವ ಅಣಿಮುತ್ತುಗಳಂತಹ ಉಪಮಾನಗಳು, ನೀರಸಭಾಗಗಳನ್ನು ಬಿಟ್ಟು ರಸವನ್ನೇ ಅರಸುವ ಸಂಗ್ರಹಶೀಲತೆ, ಜನರಿಗೆ ಬೇಕಾದ ಯಾವ ವಿವರವನ್ನೂ ಬಿಡದ ಔಚಿತ್ಯ ದೃಷ್ಟಿ, ಎಲ್ಲದರಲ್ಲಿಯೂ ಒಂದೇ ಹಿಡಿತ. ವಿಚಾರ ಸಂಗ್ರಹಣ, ಕಥನ ನಿರ್ವಹಣ ಎರಡರಲ್ಲಿಯೂ ಒಂದೇ ಉದಾತ್ತತೆ. ಭಾರತದ ಶೈಲಿಯಂತೆ ಈ ಗ್ರಂಥದ ಶೈಲಿಯೂ ಗಂಭೀರವಾಗಿದೆ, ಸ್ಪಷ್ಟವಾಗಿದೆ, ಶಕ್ತಿಯುತವಾಗಿದೆ, ಶುಚಿಯಾಗಿದೆ, ಉದಾತ್ತವಾಗಿದೆ. ಶಾಸ್ತ್ರಿಗಳೇ ಹೇಳುವಂತೆ, ‘ಭಾಷೆ ಬಿಗಿಯಾಗಿ, ತಿಳಿಯಾಗಿ’ ಇದೆ. ಕಾವ್ಯದೃಷ್ಟಿ ಸಾಹಿತ್ಯದೃಷ್ಟಿ ಅಚ್ಚುಕಟ್ಟಾಗಿ ಒಡಮೂಡಿದೆ. ‘ವಿದುರ ನೀತಿ’, ‘ಯಕ್ಷಪ್ರಶ್ನೆ’ಗಳಂತಹ ಭಾಗಗಳನ್ನು ಅವರು ನಿರ್ವಹಿಸುವ ಔಚಿತ್ಯಜ್ಞಾನವಂತೂ ಯಾವ ಸಾಹಿತಿಗಾದರೂ ಅವರ ಮೇಲೆ ಅಸೂಯೆಯನ್ನುಂಟುಮಾಡುತ್ತದೆ.
‘ವಚನ ಭಾರತ’ ಸಾಕ್ಷಾತ್ಕಾರವನ್ನು ಪಡೆದು ಕನ್ನಡಕ್ಕೆ ‘ಕಥಾಮೃತ’ದ ಗದ್ಯಗಂಗೆಯನ್ನು ತಂದ ಭಗೀರಥರು ಶ್ರೀ ಕೃಷ್ಣಶಾಸ್ತ್ರಿಗಳು. ಕನ್ನಡಕ್ಕೆ ಅವರ ಗ್ರಂಥ ‘ವಚನ ಭಾರತ’. ಕನ್ನಡಕ್ಕೆ ಅವರು ವಚನವ್ಯಾಸರು. ಈ ಮಹಾನ್ ಕೃತಿಯನ್ನು ನಿರಂತರವಾಗಿ ಸವಿಯುವ ಭಾಗ್ಯ ನಮ್ಮೆಲ್ಲರದಾಗಿರಲಿ.
ನಮನಗಳು: ಎ. ಆರ್. ಕೃಷ್ಣಶಾಸ್ತ್ರಿಗಳ ‘ವಚನ ಭಾರತ’ಕ್ಕೆ ಮತ್ತು ಈ ಗ್ರಂಥದ ಕುರಿತು ಹೆಚ್ಚಿನ ಹೊಳಹನ್ನು ನೀಡಿರುವ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ.🌷🙏🌷

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿತ್ರ­ವೀ­ಣಾ ರವಿ­ಕಿ­ರಣ | On the birthday of Chitraveena musician N. Ravikiran |

Fri Mar 4 , 2022
ನಾನೀಗ ಸಂಗೀತಲೋಕದಲ್ಲಿ ಪ್ರಸಿದ್ಧ ಹೆಸರಾದ ಎನ್. ರವಿಕಿರಣರ ಬಗ್ಗೆ ಹೇಳಲಿದ್ದೇನೆ. ಇದಕ್ಕೆ ಮುಂಚೆ ಕೆಲವು ನೆನಪುಗಳನ್ನು ಹೇಳುತ್ತೇನೆ. ಕನ್ನಡದಲ್ಲಿ ವಿಜ್ಞಾನ ಬರಹಗಳಿಗೆ ಪ್ರಸಿದ್ಧರಾದ ಜಿ.ಟಿ. ನಾರಾಯಣರಾಯರು ಪ್ರಸಿದ್ಧ ಸಂಗೀತ ವಿಮರ್ಶಕರೂ ಆಗಿದ್ದವರು. ಹೀಗಾಗಿ ಅವರಿಗೆ ತುಂಬಾ ಜನ ಸಂಗೀತಗಾರರ ನಿಕಟ ಪರಿಚಯವಿತ್ತು. ಐವತ್ತರ ದಶಕದಲ್ಲಿ ಮಂಗಳೂರಿನಲ್ಲಿ ಜಿ.ಟಿ.ಎನ್. ಪ್ರಾಧ್ಯಾಪಕರಾಗಿದ್ದಾಗ ಒಂದು ದಿನ ಅವರ ಕಾಲೇಜಿಗೆ ಒಬ್ಬ ತೇಜಸ್ವಿ ತರುಣರೊಬ್ಬರು ಕಾಣಲು ಬಂದರು. ತನ್ನ ಹೆಸರು ನರಸಿಂಹನ್ ಎಂದೂ, ತಾನು ಗೋಟುವಾದ್ಯ […]

Advertisement

Wordpress Social Share Plugin powered by Ultimatelysocial