ವಸಂತ ಬರೆದನು ಒಲವಿನ ಓಲೆ……

ವಸಂತ ಪಂಚಮಿ ಜ್ಞಾನ, ಸಂಗೀತ ಮತ್ತು ವಿದ್ಯೆಗೆ ದೇವತೆಯಾಗಿರುವ ಸರಸ್ವತಿ ದೇವಿಯನ್ನು ಆರಾಧಿಸುವ ದಿನ. ಜೀವನದಲ್ಲಿ ಹೊಸತನ್ನು ಪ್ರಾರಂಭಿಸಲು ಒಂದು ಶುಭ ದಿನ.
ವಸಂತದಾಗಮನ ಕವಿಯ ಮನಸ್ಸನ್ನು ನಲಿಸುತ್ತದೆ. ವಸಂತ ಎಂದರೆ ಸುಂದರ ಕಾಲದ ಪರಿಕಲ್ಪನೆ ಮೂಡಿಸುವ ಹಲವು ಗೀತೆಗಳು ಮನದಲ್ಲಿ ಹಾದು ಹೋಗುತ್ತವೆ. ಅವುಗಳಲ್ಲಿ ಆಚಾರ್ಯ ಬಿ.ಎಂ. ಶ್ರೀ ಅವರ ‘ವಸಂತ’; ತೆರೆದ ಬಾಗಿಲು ಕವನ ಸಂಕಲನಲ್ಲಿನ ಋತುವೈಭವ ವರ್ಣನೆಯಲ್ಲಿನ ಕೆ. ಎಸ್. ನರಸಿಂಹ ಸ್ವಾಮಿಗಳ ‘ವಸಂತ ಕಾಲ’ ವರ್ಣನೆ, ಎನ್. ಎಸ್. ಲಕ್ಗ್ಮೀನಾರಾಯಣ ಭಟ್ಟರ ‘ಬಾರೋ ವಸಂತ’
ಮತ್ತು ಹಂಸಲೇಖರ “ಅಂದ ಅಂದದ ತೇರು, ಬಂದ ಜಂಭದ ಜೋರು ನೋಡಿ ವಸಂತ ಹಾಡಿದ” ನನ್ನ ಮನಕ್ಕೆ ಖುಷಿಕೊಡುವಂತಹವು. ಅವುಗಳ ಮೆಲುಕು ಇಲ್ಲಿದೆ
ವಸಂತ
– ಬಿ.ಎಂ. ಶ್ರೀ
ವಸಂತ ಬಂದ, ಋತುಗಳ ರಾಜ ತಾ ಬಂದ,
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ, ಹಕ್ಕಿಗಳುಲಿಗಳ ಚೆಂದ,
ಕೂವು, ಜಗ್ ಜಗ್, ಪುವ್ವೀ, ಟೂವಿಟ್ಟವೂ!
ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲಿ ಬೆಳದಿಂಗಳೂಟ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,
ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟವೂ!
ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು,
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟವೂ!
ಬಂದ ವಸಂತ – ನಮ್ಮಾ
ರಾಜ ವಸಂತ!
NASH (1565-1601): Spring
ಋತುವರ್ಣನೆ: ವಸಂತ
-ಕೆ. ಎಸ್. ನರಸಿಂಹಸ್ವಾಮಿ
ಪರಿಮಳದ ತಂಗಾಳಿ ಹರಿದಾಡಿತು;
ದುಂಬಿಗಳ ಸಂಗೀತ ಮೊದಲಾಯಿತು:
ಬಿರಿದರಳ ಬಣ್ಣಗಳ ಹೊಳೆ ಹರಿಯಿತು;
ಚೈತ್ರ, ವೈಶಾಖ-ವಸಂತ ಋತು.
ಮೃದು ವಸಂತದ ಮುದ್ದು ಬೆರಳು ಮೊಗ್ಗಿನ ಕಣ್ಣ
ತೆರೆದು ಅರಳಾಗಿಸುವ ವೇಳೆಯಲ್ಲಿ
ಎಳಬಿಸಿಲ ಹೊದಿಕೆಯಲಿ ನಗಲು ಚಿಗುರಿದ ತೋಟ
ಬಗೆಬಗೆಯ ಪರಿಮಳದ ಜ್ವಾಲೆಯಲ್ಲಿ,
ತಿಂಗಳೊಂದರ ಹಿಂದೆ ಹಸಿರು ಪತ್ತಲವುಟ್ಟು
ಕಂಗಳಿಗೆ ತಂಪಾಗಿ ಹೊಳೆದ ಮಾವು
ಇಂದೇಕೊ ಕೋಪದಲಿ ಕೆಂಪಿನುಡುಗೆಯನುಟ್ಟು
ವಿರಹಾಗ್ನಿಯಂತೆ ಧಗಧಗಿಸುತಿರಲು,
ಮರದ ತುದಿಯಲ್ಲಿ ಕೋಗಿಲೆ ತಂಗಿ ಹಾಡುತ್ತ
ನಲಿವಿನೊಂದಿಗೆ ನೋವ ಬೆರೆಸುತಿರಲು,
ಹೂ ಮಗುವಿನುಸಿರಂತೆ ಮೆಲುನಡೆಯ ತಂಬೆಲರು
ಹಸಿದ ಬಡವನ ಕಣ್ಣನೊರಸುತಿರಲು,
ಓ ಒಲವೆ, ನಿನ್ನ ವರ್ಷೋದಯದ ಗೀತವನು
ಕೇಳುವೆನು ಮೈಮರೆತು ನೆರಳಿನಲ್ಲಿ ;
ಹೂವ ಬಳಸುವ ದುಂಬಿದನಿಯನನುಕರಿಸುವೆನು
ಕಾಡ ಬಿದಿರಿನ ನನ್ನ ಕೊಳಲಿನಲ್ಲಿ :
ಮೃದು ವಸಂತವೆ, ನೆಲದ ಹೃದಯ ಚಿಮ್ಮಿದ ಒಲವೆ,
ಹೊಸ ವರುಷ ತೆರೆದ ತಳಿರಿನ ಬಾಗಿಲೆ, –
ಕೊರೆವ ಚಳಿಯೂ ಇರದ, ಉರಿವ ಬಿಸಿಲೂ ಇರದ
ಹರುಷವೇ, ನನ್ನೊಲವೆ, ಬಾಳ ಚೆಲುವೆ !
ಬಾರೋ ವಸಂತ
-ಎನ್. ಎಸ್.ಲಕ್ಶ್ಮಿನಾರಾಯಣ ಭಟ್ಟ
ಬಾರೋ ವಸಂತ
ಬಾರೋ ವಸಂತ ಬಾರೋ ಬಾ
ಬಾರೋ ವಸಂತ ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ
ಬಾರೋ ವಸಂತ ಬಾರೋ ಬಾ
ಬಾರೋ ಸಂಕಲೆಗಳ ಕಳಚಿ
ಹೆಜ್ಜೆಗಳಿಗೆ ಪ್ರಾಣವನುಣಿಸಿ
ದಣಿದ ಮೈಗೆ ತಂಗಾಳಿಯ ಮನಸಿಗೆ
ನಾಳೆಯ ಸುಖದೃಶ್ಯವ ಸಲಿಸಿ
ಬಾರೋ ವಸಂತ ಬಾರೋ ಬಾ
ಮಗುಚುತ ನಿನ್ನೆಯ ದುಃಖಗಳ
ತೆರೆಯುತ ಹೊಸ ಅಧ್ಯಾಯಗಳ
ಹರಸುತ ಎಲ್ಲರ ಮೇಲು ಕೀಳೆನದೆ
ಸಲಿಸುತ ಭವಿಷ್ಯದಾಸೆಗಳ
ಬಾರೋ ವಸಂತ ಬಾರೋ ಬಾ
ಎಳೆಕಂದನ ದನಿ ಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ
ಗೋಳುಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿ ಶೀಲ ಹೊಸ ಹೆಜ್ಜೆಯಲಿ
ಬಾರೋ ವಸಂತ ಬಾರೋ ಬಾ
ಬಾರೋ ವಸಂತ ಬಾರೋ
ಗೋಪಿಕೃಷ್ಣ ಚಿತ್ರದ ಗೀತೆ
– ಹಂಸಲೇಖ
ಓಹೋ..ವಸಂತ ಹೃದಯ ಅರಳೋ ಕಾಲ
ಓಹೋ..ವಸಂತ ಬಯಕೆ ಚಿಗುರೋ ಕಾಲ
ಭೃಂಗದ ಮೇಲೆ ಬಂದಳು ಬಾಲೆ
ಮಲ್ಲಿಗೆಯ ಹೂವಾಗಿ ಮೋಹಿಸುವ ಹೆಣ್ಣಾಗಿ
ಅಂದ ಅಂದದ ತೇರು, ಬಂದ ಜಂಭದ ಜೋರು
ನೋಡಿ ವಸಂತ ಹಾಡಿದ
ತಂಪು ತಂಗಾಳಿ ಬೀಸಿ, ಕಂಪು ಕಸ್ತೂರಿ ಸೂಸಿ
ಹಾಡಿ ಸ್ವಾಗತ ಹೇಳಿದ
ನೂರಾರು ಸುಮ ಸೇರಿ ಹೆಣ್ಣಾಗಿ ಬಂದಳಮ್ಮ
ಮಂದಾರ ಮದನಾರಿ ಸ್ವರ್ಗಾನೆ ತಂದಳಮ್ಮ
ಅಂದ ಅಂದದ ತೇರು ಬಂದ ಜಂಭದ ಜೋರು
ನೋಡಿ ವಸಂತ ಹಾಡಿದ
ಓಹೋ…ವಸಂತ ಕವನ ಕಡೆವ ಕಾಲ
ಓಹೋ…ವಸಂತ ಮದನ ಮದುವೆ ಕಾಲ
ಹೋಲಿಕೆಯಲ್ಲೂ ಸುಂದರ ಸುಳ್ಳು
ಬಣ್ಣಿಸಿದ ಕವಿಯಾಗಿ, ಚುಂಬಿಸಿದ ಸವಿಯಾಗಿ
ಅಂದ ಅಂದದ ತೇರು ಬಂದ ಜಂಭದ ಜೋರು
ನೋಡಿ ವಸಂತ ಹಾಡಿದ
ಓಹೋ…ವಸಂತ ಬಿಸಿಲು ಸವಿಯೋ ಕಾಲ
ಓಹೋ…ವಸಂತ ಹಸಿರು ನೆರೆಯೋ ಕಾಲ
ಬೆಚ್ಚನೆ ತೋಳು ಹಚ್ಚನೆ ಬಾಳು
ಸಂಧಿಸಿದೆ ಸುಖವಾಗಿ
ಬಂಧಿಸಿದೆ ಪ್ರಿಯವಾಗಿ
ಅಂದ ಅಂದದ ತೇರು ಬಂದ ಜಂಭದ ಜೋರು
ನೋಡಿ ವಸಂತ ಹಾಡಿದ
ತಂಪು ತಂಗಾಳಿ ಬೀಸಿ ಕಂಪು ಕಸ್ತೂರಿ ಸೂಸಿ
ಹಾಡಿ ಸ್ವಾಗತ ಹೇಳಿದ
ನೂರಾರು ಸುಮ ಸೇರಿ ಹೆಣ್ಣಾಗಿ ಬಂದಳಮ್ಮ
ಮಂದಾರ ಮದನಾರಿ ಸ್ವರ್ಗಾನೆ ತಂದಳಮ್ಮ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ಅತ್ಯುತ್ತಮ ಬಿರಿಯಾನಿ, ನಗರದ ಟಾಪ್ ಆಹಾರಪ್ರೇಮಿ!

Mon Feb 21 , 2022
ಭಾರತದಾದ್ಯಂತ ಪ್ರತಿಯೊಬ್ಬರೂ ತಿನ್ನಲು ಬಯಸುವ ಒಂದು ಖಾದ್ಯವಿದ್ದರೆ ಅದು ಬಿರಿಯಾನಿ. ಮತ್ತು ಬೆಂಗಳೂರು ಇದಕ್ಕೆ ಹೊರತಾಗಿಲ್ಲ. ಈ ಬಹುಮುಖಿ ಖಾದ್ಯವನ್ನು ಈ ದೇಶದ ಉದ್ದ ಮತ್ತು ಅಗಲದಲ್ಲಿ ವಿಭಿನ್ನವಾಗಿ ತಯಾರಿಸಲಾಗುತ್ತದೆ, ಆದರೆ ಇದು ವೈಯಕ್ತಿಕ ಮೆಚ್ಚಿನವುಗಳಿಗೆ ಬಂದಾಗ, ನಾವೆಲ್ಲರೂ ಕೇವಲ ಒಂದನ್ನು ಹೊಂದಿದ್ದೇವೆ. ಬೆಂಗಳೂರು ತನ್ನ ಎಲ್ಲಾ ಬಿರಿಯಾನಿ ಆಯ್ಕೆಗಳನ್ನು ಹಾಳು ಮಾಡುತ್ತದೆ, ಆದ್ದರಿಂದ ನಿಮ್ಮ ಪಾಕಶಾಲೆಯ ವಿಜಯದಲ್ಲಿ ನಿಮಗೆ ಸಹಾಯ ಮಾಡಲು ನಾವು ನಗರದ ಉನ್ನತ ಆಹಾರ ತಜ್ಞರ […]

Advertisement

Wordpress Social Share Plugin powered by Ultimatelysocial