ಜಕೀರ್ ಹುಸೇನ್ ಭಾರತದ ಮೂರನೆಯ ರಾಷ್ಟ್ರಪತಿಗಳು ಮತ್ತು ಶ್ರೇಷ್ಠ ಶಿಕ್ಷಣ ತಜ್ಞರು.

ಜಕೀರ್ ಹುಸೇನ್ ಹೈದರಾಬಾದಿನಲ್ಲಿ 1897 ಫೆಬ್ರವರಿ 8ರಂದು ಶ್ರೀಮಂತ ಪಠಾಣ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೇ ಅಪಾರ ಪ್ರತಿಭಾವಂತರಾಗಿದ್ದ ಇವರು ಉತ್ತರಪ್ರದೇಶದ ಎಲವಾದ ಇಸ್ಲಾಮಿಯ ಪ್ರೌಢಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು ಮುಗಿಸಿ ಅನಂತರ ಅಲೀಘಡದ ಎಂ.ಎ.ಒ. ಕಾಲೇಜಿಗೆ ಸೇರಿ ಎಂ.ಎ. ಪದವೀಧರರಾದರು. ಈ ಸಮಯದಲ್ಲಿ ಖಿಲಾಫತ್ ಚಳವಳಿ ಆರಂಭವಾದಾಗ ಕಾಲೇಜಿನಿಂದ ಹೊರಬಂದರು. ಆ ವೇಳೆಗೆ ಇವರು ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ವಲಯದಲ್ಲಿ ಜನಪ್ರಿಯರಾಗಿದ್ದರು. ಅಲೀಘಡದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಒತ್ತಾಸೆ ನೀಡಿದರು.1920 ಅಕ್ಟೋಬರ್ 29ರಂದು ಜಾಮಿಯ ಮಿಲಿಯ ಇಸ್ಲಾಮಿಯ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು.ಅಸಹಕಾರ ಚಳವಳಿ ಮುಗಿದ ಅನಂತರ ಜರ್ಮನಿಗೆ ತೆರಳಿದ ಜಕೀರ್ ಹುಸೇನ್ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಂಡರು. ಮೂರು ವರ್ಷಗಳ ತರುವಾಯ ಅರ್ಥಶಾಸ್ತ್ರದಲ್ಲಿ ಡಾಕ್ಟೊರೇಟ್ ಪದವಿ ಪಡೆದು ಭಾರತಕ್ಕೆ ಹಿಂದಿರುಗಿದರು. ಶಿಕ್ಷಣ ಕ್ಷೇತ್ರದಲ್ಲಿ ಇವರಿಗಿದ್ದ ಮೂಲಭೂತ ಆಸಕ್ತಿಯಿಂದಾಗಿ ಆ ಕ್ಷೇತ್ರದಲ್ಲಿ ಹಲವಾರು ಹುದ್ದೆಗಳು ಇವರನ್ನು ಅರಸಿ ಬಂದುವು.ವಿದೇಶದಿಂದ ಹಿಂತಿರುಗಿದ ಕೂಡಲೇ ಜಕೀರ್ ಹುಸೇನ್ ಅವರು ಅಲೀಘಡದ ಮುಸ್ಲಿಮ್ ವಿಶ್ವವಿದ್ಯಾಲಯದ ಕುಲಪತಿಯಾದರು. ಅನಂತರ ಮೂಲ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆದ್ಯ ಪ್ರವರ್ತಕರಾದರು (1931). ಹಿಂದುಸ್ತಾನಿ ತಾಲಿಮಿ ಸಂಘ ಮತ್ತು ಸೇವಾಗ್ರಾಮದ ಅಧ್ಯಕ್ಷರಾಗಿದ್ದರು (1938-48). ಪುನಃ ಅಲೀಘಡ ಮುಸ್ಲಿಮ್ ವಿಶ್ವವಿದ್ಯಾಲಯದ ಕುಲಪತಿಯಾದರು(1948). ಯು.ಜಿ.ಸಿ. ಸದಸ್ಯ(1948-49), ಭಾರತೀಯ ವಿಶ್ವವಿದ್ಯಾಲಯ ಆಯೋಗದ ಸದಸ್ಯರಾಗಿದ್ದರು. ಅನಂತರ ಪ್ರಪಂಚ ವಿಶ್ವವಿದ್ಯಾಲಯ ಸೇವಾ ಸಂಸ್ಥೆಯು ಇವರನ್ನು ಭಾರತೀಯ ರಾಷ್ಟ್ರೀಯ ಸಮಿತಿಯ ಸಭಾಧ್ಯಕ್ಷರನ್ನಾಗಿ ನೇಮಿಸಿತು. ಈ ಸಂಸ್ಥೆಗೆ ಅಧ್ಯಕ್ಷರಾಗಿದ್ದುದು ಇವರ ಮತ್ತೊಂದು ಸಾಧನೆ(1954). ಇವರು ಅಲಂಕರಿಸಿದ ಹುದ್ದೆಗಳು ಹಲವಾರು. ಯುನೆಸ್ಕೋದ ಕಾರ್ಯಕಾರಿ ಸಮಿತಿಯ ಭಾರತೀಯ ಪ್ರತಿನಿಧಿ(1956-58), ಪ್ರೌಢಶಾಲಾ ವಿದ್ಯಾಭ್ಯಾಸದ ಕೇಂದ್ರ ಸಮಿತಿಯ ಸದಸ್ಯ(1957), ಬಿಹಾರ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ವಿದ್ಯಾಭ್ಯಾಸ ಪುನಾರಚನಾ ಸಮಿತಿಯ ಸದಸ್ಯರಾಗಿ ಸಹಾ ಇವರು ಕಾರ್ಯನಿರ್ವಹಿಸಿದರು. ಇವರ ಸೇವೆ ಕೇವಲ ಶಿಕ್ಷಣಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಇವರ ಸಾಧನೆಗಳನ್ನು ಪರಿಗಣಿಸಿ ರಾಜ್ಯಸಭೆಗೆ ನಾಮಕರಣ ಮಾಡಲಾಯಿತು. ಬಿಹಾರಿನ ರಾಜ್ಯಪಾಲರಾಗಿ ಖ್ಯಾತಿಗಳಿಸಿದರು(1957-64). ಅನಂತರ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿ ಸೇವೆಸಲ್ಲಿಸಿದರು(1962-69).ಇವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನೂ(1954) ಭಾರತರತ್ನ ಪ್ರಶಸ್ತಿಯನ್ನೂ(1963) ನೀಡಿ ಗೌರವಿಸಿತು. ದೆಹಲಿ, ಕಲ್ಕತ್ತ, ಅಲೀಘಡ, ಅಲಹಾಬಾದ್ ಮತ್ತು ಕೈರೋ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಿ.ಲಿಟ್. ಪದವಿ ನೀಡಿ ಗೌರವಿಸಿದವು.ಜಕೀರ್ ಹುಸೇನ್ ಅವರಿಗೆ ಶೈಕ್ಷಣಿಕ ಆಸಕ್ತಿ ಅಪಾರವಾಗಿತ್ತು. ಇವರು ಪ್ಲೇಟೋವಿನ ರಿಪಬ್ಲಿಕ್ ಮತ್ತು ಕ್ಯಾನನ್ನ ಎಲಿಮೆಂಟರಿ ಪೊಲಿಟಿಕಲ್ ಎಕಾನಮಿ ಗ್ರಂಥಗಳನ್ನು ಉರ್ದುವಿಗೆ ಭಾಷಾಂತರಿಸಿದ್ದರು (1920). ಜರ್ಮನಿಯಲ್ಲಿದ್ದಾಗ ಗಾಂಧೀಜಿಯವರ ಜೀವನಚರಿತ್ರೆಯನ್ನು ಜರ್ಮನ್ ಭಾಷೆಯಲ್ಲಿ ರಚಿಸಿದರು. ಉತ್ತಮ ವಾಗ್ಮಿಯಾಗಿದ್ದ ಇವರ ನೂರಾರು ಉಪನ್ಯಾಸಗಳು ಪ್ರಸಿದ್ಧವಾಗಿವೆ. ಇವರು ನೀಡಿದ ವಿಶ್ವವಿದ್ಯಾಲಯಗಳ ಘಟಿಕೋತ್ಸವ ಭಾಷಣಗಳನ್ನು ದಿ ಡೈನಮಿಕ್ ಯೂನಿವರ್ಸಿಟಿ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಇವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿಗಳು ಜನಪ್ರಿಯವಾಗಿವೆ.ಜಕೀರ್ ಹುಸೇನರು ಸೂಫಿ ಪಂಥದ ಉದಾರವಾದವನ್ನು ನಂಬಿದ್ದವರು. ಇವರು 1969ಮೇ 3ರಂದು ನಿಧನ ಹೊಂದಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

“ಅದ್ದೂರಿ ಲವರ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್.

Wed Feb 16 , 2022
“ಅದ್ದೂರಿ ಲವರ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial