‘ಖುಷಿ’ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಎರಡು ದಿನ ಉತ್ತಮವಾಗಿ ಪ್ರದರ್ಶನ ಕಂಡಿದೆ.
ನಟ ವಿಜಯ್ ದೇವರಕೊಂಡ ಅವರು ‘ಖುಷಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಸೆಪ್ಟೆಂಬರ್ 1ರಂದು ಅದ್ದೂರಿಯಾಗಿ ಈ ಚಿತ್ರ ರಿಲೀಸ್ ಆಯಿತು. ತೆಲುಗಿನ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿದ್ದು, ಭಾರತದಲ್ಲಿ ಮಾತ್ರವಲ್ಲದೇ ವಿದೇಶದ ಅನೇಕ ಕಡೆಗಳಲ್ಲಿ ‘ಖುಷಿ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. 2 ದಿನಕ್ಕೆ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬರೋಬ್ಬರಿ 51 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ ಎಂದು ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಹೇಳಿಕೊಂಡಿದೆ. ಈ ಸುದ್ದಿ ಕೇಳಿ ವಿಜಯ್ ದೇವರಕೊಂಡ ಅಭಿಮಾನಿಗಳು ಖುಷಿಯಾಗಿದ್ದಾರೆ.
‘ಖುಷಿ’ ಸಿನಿಮಾಗೆ ಶಿವ ನಿರ್ವಾಣ ಅವರು ನಿರ್ದೇಶನ ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಸಮಂತಾ ರುತ್ ಪ್ರಭು ನಟಿಸಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಒಂದು ಹೊಸ ಪ್ರೇಮಕಥೆಯನ್ನು ಈ ಸಿನಿಮಾದ ಮೂಲಕ ಹೇಳಲಾಗಿದೆ. ಫ್ಯಾಮಿಲಿ ಪ್ರೇಕ್ಷಕರಿಗೆ ‘ಖುಷಿ’ ಸಿನಿಮಾ ಹೆಚ್ಚು ಇಷ್ಟವಾಗಿದೆ. ಹಾಗಾಗಿ ಇದನ್ನು ‘ಬ್ಲಾಕ್ ಬಸ್ಟರ್ ಫ್ಯಾಮಿಲಿ ಎಂಟರ್ಟೇನರ್’ ಎಂದು ನಿರ್ಮಾಪಕರು ಹೇಳಿದ್ದಾರೆ. ಮತ್ತು ಹಾಡುಗಳು ಕೂಡ ಸಿನಿಮಾದ ಗೆಲುವಿಗೆ ಕಾರಣ ಎಂದರೆ ತಪ್ಪಾಗಲಾರದು.