ಭಾವನೆಗಳ ಬುತ್ತಿಯ ಪಯಣ ಹೊಂದಿಸಿ ಬರೆಯಿರಿ (ಚಿತ್ರವಿಮರ್ಶೆ-ರೇಟಿಂಗ್ : 3.5/5)

ರೇಟಿಂಗ್ : 3.5/5
ಚಿತ್ರ : ಹೊಂದಿಸಿ ಬರೆಯಿರಿ ನಿರ್ದೇಶಕ : ರಾಮೇನಹಳ್ಳಿ ಜಗನ್ನಾಥ್
ನಿರ್ಮಾಪಕರು : ಸಂಡೆ ಸಿನಿಮಾಸ್
ಸಂಗೀತ : ಜೋ ಕೋಸ್ಟಾ
ಛಾಯಾಗ್ರಹಕ : ಶಾಂತಿ ಸಾಗರ್

ತಾರಾಗಣ : ಪ್ರವೀಣ್ ತೇಜ್, ಶ್ರೀ, ನವೀನ್ ಶಂಕರ್, ಅನಿರುದ್ಧ ಆಚಾರ್ಯ, ಐಶಾನಿ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಸಂಯುಕ್ತ ಹೊರನಾಡು, ಭಾವನಾ ರಾವ್, ಅರ್ಚನಾ ಜೋಯಿಸ್ ಹಾಗೂ ಮುಂತಾದವರು.

 

ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ. ಅದರಂತೆ ಬೇರೆ ಬೇರೆ ಊರಿಂದ ಹಲವು ಕನಸುಗಳನ್ನು ಕಟ್ಟಿಕೊಂಡು ಒಂದೆಡೆಗೆ ಸೇರುವ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತುಂಟಾಟ, ತರಲೆ, ಸ್ನೇಹ, ಗುರಿ, ವೈಮನಸ್ಯ ಹಾಗೂ ಪ್ರೀತಿಯ ಪಯಣದ ನಂತರ ಎದುರಾಗುವ ಭಾವನೆಗಳ ಬೇಸುಗೆ, ಬದುಕಿನ ಏರಿಳಿತಗಳ ಹಾದಿಯ ಹಲವು ವಿಚಾರಗಳ ಸುದೀರ್ಘ ಪಯಣವಾಗಿ ಹೊರ ಬಂದಿರುವ ಚಿತ್ರ “ಹೊಂದಿಸಿ ಬರೆಯಿರಿ”. 2008ರ ಬ್ಯಾಚ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮಾಗಮ. ದೂರದ ಊರುಗಳಿಂದ ಬಂದು ಹಾಸ್ಟೆಲ್ ನಲ್ಲಿ ಇದು ವಿದ್ಯಾಭ್ಯಾಸಕ್ಕೆ ಮುಂದಾಗುವ ಗೆಳೆಯರು. ಜಗನ್‌ (ಪ್ರವೀಣ್ ತೇಜ್), ಟೈಗರ್ ಸೋಮ (ಅನಿರುದ್ಧ್ ಆಚಾರ್ಯ) ಕುಮಾರ್ (ಶ್ರೀ), ರಂಜಿತ್ (ನವೀನ್ ಶಂಕರ್) ಇವರ ನಡುವೆ ಮುದ್ದಾದ ಹುಡುಗಿ ಸನಿಹ (ಐಶಾನಿ ಶೆಟ್ಟಿ) ಹಾಗೂ ಅವಳ ಗೆಳತಿಯರು.

ಕಾಲೇಜ್ ಕ್ಯಾಂಪಸ್ ಅಂದ ಮೇಲೆ ತುಂಟಾಟ, ಗಲಾಟೆ, ಲೀಡರ್ಶಿಪ್ ಎಲ್ಲವೂ ಸಾಗುತ್ತದೆ. ಸೀನಿಯರ್ ಹಾಗೂ ಜೂನಿಯರ್ ನಡುವಿನ ಒಂದಷ್ಟು ಹೊಡೆದಾಟದ ಬದುಕಿನ ಪಾಠ, ಕನಸು ನನಸು ಮಾಡಿಕೊಳ್ಳುವ ತವಕ, ನೋವು ನಲಿವಿನ ಬುತ್ತಿಯ ಒಳಗೆ ಏನೆಲ್ಲಾ ಅಡಗಿರುತ್ತದೆ ಎಂಬುದನ್ನು ಭಾವನಾತ್ಮಕವಾಗಿ ತೆರೆದಿಡುವದರ ಜೊತೆಗೆ ಬದುಕು ಬಂದಂತೆ ಸಾಗುವುದು ಮುಖ್ಯ.

ಜೀವನದಲ್ಲಿ ನಾವೊಂದು ಬಯಸಿದರೆ. ವಿಧಿ ಮತ್ತೊಂದನ್ನು ನೀಡುತ್ತದೆ ಎಂಬ ಸೂಕ್ಷ್ಮವನ್ನು ಹಲವು ಪಾತ್ರಧಾರಿಗಳ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದು, ಕ್ಲೈಮಾಕ್ಸ್ ಹಲವು ದೃಷ್ಟಿಕೋನಗಳಿಗೆ ಒಂದು ಉತ್ತರವನ್ನು ನೀಡುವುದರಲ್ಲಿ ಗಮನ ಸೆಳೆದಿದೆ.ಈ ಚಿತ್ರದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಬಹಳ ವಿಸ್ತಾರವಾಗಿ ಕಾಲೇಜು ವಿದ್ಯಾರ್ಥಿಗಳ ತುಂಟಾಟ, ತರಲೆ, ತಮಾಷೆ, ತ್ಯಾಗ, ಹೆತ್ತವರ ಸಂಕಟದ ಜೊತೆಗೆಭಾವನಾತ್ಮಕವಾಗಿ ಸೂಕ್ಷ್ಮತೆಯನ್ನು ಮನಮುಟ್ಟುವಂತೆ ತೆರೆದಿಡುವ ಪ್ರಯತ್ನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಚಿತ್ರದ ಮೊದಲ ಭಾಗ ಕಾಲೇಜು ವಿದ್ಯಾರ್ಥಿಗಳ ಗೆಳೆತನ, ತರಲೆ, ತಮಾಷೆಯೊಂದಿಗೆ ಸಾಗಿದರೆ. ಎರಡನೇ ಭಾಗ ಭಾವನಾತ್ಮಕ ವಿಚಾರದೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸುವಂಥ ಹಾದಿಯತ್ತ ಸಾಗುತ್ತದೆ. ಆದರೆ ಇದು ಸುಧೀರ್ಘ ಪಯಣ, ಇನ್ನಷ್ಟು ಮೊಟಕು ಮಾಡಿಕೊಂಡು ವೇಗವಾಗಿ ಚಿತ್ರಕಥೆ ಸಾಗಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದ ಹೈಲೈಟ್ ಸಂಭಾಷಣೆ ಹೆಚ್ಚು ಪೂರಕವಾಗಿದೆ. ಛಾಯಾಗ್ರಾಹಕರ ಕೆಲಸವು ಕೂಡ ಸೊಗಸಾಗಿ ಮೂಡಿಬಂದಿದೆ. ಇನ್ನು ಹಾಡುಗಳು ಗಮನ ಸೆಳೆಯುವಂತಿದೆ. ಇಂತಹ ಒಂದು ಚಿತ್ರಕ್ಕೆ ಗೆಳೆಯರು ಕೈಜೋಡಿಸಿರುವುದು ಮೆಚ್ಚಲೇಬೇಕು.

ಇನ್ನು ತಮಗೆ ಸಿಕ್ಕ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನವೀನ್ ಶಂಕರ್‌, ಶ್ರೀ , ಪ್ರವೀಣ್ ತೇಜ್ ಜೀವ ತುಂಬಿ ನಟಿಸಿದ್ದಾರೆ. ಇನ್ನು ತನ್ನ ಮಾತಿನ ಭರಾಟೆಯ ಮೂಲಕ ಯುವ ಪ್ರತಿಭೆ ಅನಿರುದ್ಧ ಆಚಾರ್ಯ ಗಮನ ಸೆಳೆಯುತ್ತಾರೆ. ಅದೇ ರೀತಿ ಐಶಾನಿ ಶೆಟ್ಟಿಗೂ ಮಹತ್ವದ ಪಾತ್ರವೇ ಸಿಕ್ಕಿದೆ. ಅರ್ಚನಾ ಕೊಟ್ಟಿಗೆ, ಭಾವನಾ ರಾವ್ ಹಾಗೂ ಸಂಯುಕ್ತ ಹೊರನಾಡು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ವಿಶೇಷವಾಗಿ ಬರುವ ಅರ್ಚನಾ ಜೋಯಿಸ್ ಚಿತ್ರದ ಕೇಂದ್ರ ಬಿಂದುವಾಗಿ ಕಾಣಿಸಿಕೊಳ್ಳುತ್ತಾರೆ. ಪ್ರಿನ್ಸಿಪಾಲ್ ಪಾತ್ರದಲ್ಲಿ ಹನುಮಂತೇಗೌಡ ಇಷ್ಟವಾಗುತ್ತಾರೆ.ಸುಧಾ ನರಸಿಂಹರಾಜು, ಧರ್ಮೇಂದ್ರ ಅರಸ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಂದು ಅರ್ಥಪೂರ್ಣ ವಿಚಾರಗಳನ್ನು ಬೆಸೆದುಕೊಂಡು ಮನೋರಂಜನೆಯ ದೃಷ್ಟಿಯೊಂದಿಗೆ ಹೊರಬಂದಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Advertisement

Wordpress Social Share Plugin powered by Ultimatelysocial