ಅಮ್ಮಾ ಎಂದರೆ ಏನೋ ಹರುಷವೋ

ಅಮ್ಮ… ಜೀವನದಲ್ಲಿ ಈ ಹೆಸರು ನಾವು ಮೊದಲು ಕೇಳಿರೋದು, ಹೇಳಿರೋದು. ನಾವು ಅತ್ತರೆ ಕಣ್ಣೀರು ಹಾಕೋಳು ಅಮ್ಮ. ನಮಗೆ ನೋವಾದರೆ ನೋವು ಅನುಭವಿಸುವವಳು ಆಕೆ. ಜೀವನದಲ್ಲಿ ನಮಗೆ ಒಲಿಯುವ ಅದ್ಭುತವಾದ ಸಂಬಂಧ ಅವಳೊಂದಿಗಿನದು. ನಿಷ್ಕಲ್ಮಶ ಪ್ರೀತಿಗೆ ಇನ್ನೊಂದು ರೂಪವೇ ಅಮ್ಮ. ನಿನಗೆ ಈ ದಿನ, ತಾಯಂದಿರ ದಿನದ ಶುಭಾಶಯಗಳು.
ಜಾಗತಿಕವಾಗಿ ೨ ಲಕ್ಷ ಜೀವಗಳನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಜಗತ್ತಿನಲ್ಲಿ ಮುಂದುವರಿಯುತ್ತಿದೆ. ಈ ಸಂದರ್ಭ ಅನೇಕ ತಾಯಂದಿರು ತಮ್ಮ ಕುಟುಂಬ ಮಾತ್ರವಲ್ಲದೇ ಸಮಾಜದ ಬಗೆಗೂ ತೋರಿದ ಪ್ರೀತಿ, ಆದರ್ಶ, ಧೈರ್ಯ, ದೃಢ ನಿಶ್ಚಯಗಳು ಮಾತೃ ಹೃದಯ ಏನೆಂಬುವುದನ್ನು ಮತ್ತೆ ಜಗತ್ತಿಗೆ ಸಾರಿದೆ.
ತಾಯಿಯ ಗುಡಿ ಕಟ್ಟಿಸಿದ ಸಹೋದರರು
ಇಂದು ವಿಶ್ವ ತಾಯಂದಿರ ದಿನ. ಇದರ ಅಂಗವಾಗಿ ಬಹುತೇಕರು ತಮ್ಮ ತಾಯಿಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ರಾಮನಗರ ಜಿಲ್ಲೆ ಸಾತನೂರಿನ ಕೆಮ್ಮಾಳೆ ಗ್ರಾಮದವರಾದ ಗೋಪಾಲ್ ತಮ್ಮ ಸಹೋದರರೊಂದಿಗೆ ಸೇರಿ ತಾಯಿಗಾಗಿ ದೇಗುಲವನ್ನೇ ಕಟ್ಟಿಸಿದ್ದಾರೆ.
ಇವರ ತಾಯಿ ಚೆನ್ನಾಜಮ್ಮ ೨೦೦೭ರ ಸೆಪ್ಟೆಂಬರ್ ೯ರಂದು ನಿಧನರಾಗಿದ್ದು, ಹೀಗಾಗಿ ಕೆಮ್ಮಾಳೆ ಗ್ರಾಮದಲ್ಲಿನ ಮೂರು ಎಕರೆ ಜಮೀನಿನಲ್ಲಿ ಪಾರ್ಕ್ ನಿರ್ಮಿಸಿ ಅದರೊಳಗೆ ಈ ದೇಗುಲ ಕಟ್ಟಿಸಿದ್ದಾರೆ. ಅಲ್ಲದೆ ತಾಯಿ ಹೆಸರಿನಲ್ಲಿ ದತ್ತಿ ಪ್ರತಿಷ್ಠಾನ ಸ್ಥಾಪಿಸಿ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಸುಮಾರು ೩೫ ಸಾವಿರ ಜನರ ಕಣ್ಣಿನ ಸರ್ಜರಿಗೆ ನೆರವು ನೀಡಿದ್ದಾರೆ. ತಮಗೆ ತಾಯಿ ಕಲಿಸಿದ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ನೆನಪಿಸುವ ಉದ್ದೇಶದಿಂದ ಈ ದೇಗುಲವನ್ನು ಸ್ಥಾಪಿಸಿದ್ದೇವೆ ಎಂದು ಹೇಳುವ ಗೋಪಾಲ್, ತಾಯಿಯ ನೆನಪಿನಲ್ಲಿ ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.
ಅಮ್ಮ ಬೇಕೆಂದು ಅಳುತ್ತಿರುವ ಮಗು ಕಂಡು ಮರುಗಿದ ನರ್ಸ್
ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ನಿಂತಿರುವ ತನ್ನ ತಾಯಿಯನ್ನು ನೋಡಿ ತನ್ನ ತಂದೆಯ ಮೋಟಾರ್ ಸೈಕಲ್‌ನಲ್ಲಿ ಮುಂದೆ ಕುಳಿತಿದ್ದ ಪುಟ್ಟ ಹುಡುಗಿ ಕೈ ಬೀಸುತ್ತಾ ಅಳುತ್ತಿರುವ ದೃಶ್ಯವನ್ನು ಮೊನ್ನೆ ತಾನೆ ನಾವೆಲ್ಲರೂ ನೋಡಿದ್ದೇವೆ. ಆ ತಾಯಿ ದಾದಿಯಾಗಿದ್ದು, ಅವರು ಕೊರೊನಾ ವಿರುದ್ಧದ ಯುದ್ಧದಲ್ಲಿ ಹೋರಾಟಗಾರ್ತಿಯಾಗಿದ್ದರು. ಆ ಹೋರಾಟ ಗೆಲ್ಲುವ ಪಣ ತೊಟ್ಟಿದ್ದ ಆಕೆ ಮನೆಗೂ ಹೋಗದೆ ೧೫ ದಿನಗಳಿಂದ ಕುಟುಂಬವನ್ನು ತೊರೆದು ಅಜ್ಞಾತಳಾಗಿದ್ದಳು. ಅಸಹಾಯಕ ಆ ತಾಯಿ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗದೆ ಒಳಗೇ ಕುಸಿದಿದ್ದಳು. ಆದರೂ ಆಕೆ ತನ್ನ ಮಗುವನ್ನು ದೂರದಿಂದಲೇ ಕಂಡು ಸಂತೋಷಪಡುವುದು ಕಣ್ಣಂಚನ್ನು ನೀರಾಗಿಸಿತ್ತು.ಈ ವಿಡಿಯೋವನ್ನು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಟ್ವೀಟ್ ಮಾಡಿದ್ದರು.
ಮಗನಿಗಾಗಿ ೧,೪೦೦ ಕಿ.ಮೀ. ಸ್ಕೂಟರ್‌ನಲ್ಲಿ ಪಯಣಿಸಿದಳು ತಾಯಿ
ತೆಲಂಗಾಣದ ನಿಜಾಮಾಬಾದ್ ಪ್ರದೇಶದಲ್ಲಿ ವಾಸಿಸುತ್ತಿರುವ ಶಿಕ್ಷಕಿ ರಜಿಯಾ ಬೇಗಂ, ಕಠಿಣವಾದ ಲಾಕ್‌ಡೌನ್ ಮಧ್ಯೆಯೇ ಲಾಕ್‌ಡೌನ್ ಮಾನದಂಡಗಳನ್ನು ಪಾಲಿಸಿ, ಧೈರ್ಯ ಮಾಡಿ, ತನ್ನ ಮಗನನ್ನು ಮನೆಗೆ ಕರೆತರಲು ೧,೪೦೦ ಕಿ.ಮೀ. ತನ್ನ ದ್ವಿಚಕ್ರ ವಾಹನದಲ್ಲಿ ಕ್ರಮಿಸಿ ದೂರದ ನೆರೆಯ ಆಂಧ್ರಪ್ರದೇಶದಿಂದ ಕರೆತಂದಿದ್ದಳು.

 ತಿಂಗಳ ಮಗುವಿನೊಂದಿಗೆ ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ
ಗ್ರೇಟರ್ ವಿಶಾಖಪಟ್ಟಣಂ ಮಹಾನಗರ ಪಾಲಿಕೆ ಆಯುಕ್ತೆ ಜಿ.ಸೃಜನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಗೆ ಸ್ವಲ್ಪ ಮುಂಚೆ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಈ ಐಎಎಸ್ ಅಧಿಕಾರಿ ತಮ್ಮ ಹೆರಿಗೆಯ ಬಳಿಕ ೨೨ ದಿನಗಳಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಕೆಲಸಕ್ಕೆ ಮರಳಿ ಸೈ ಎನಿಸಿಕೊಂಡಿದ್ದರು.ಆಕೆ ಯಾವುದೇ ಕ್ಷೇತ್ರದಲ್ಲಿದ್ದರೂ ತನ್ನ ಮಾತೃ ಗುಣವನ್ನು ಮರೆಯುವುದಿಲ್ಲ.
ನಿತ್ಯ ಆಕೆ ಮಾಡುವ ತ್ಯಾಗವು ನಮಗೆ ಕಾಣದೇ ಇರಬಹುದು, ಆದ್ರೆ ಅವಳಿಗೆ ಅವಳೇ ಸಾಟಿ. ಜಗತ್ತಿನಲ್ಲಿ ಆಕೆಯ ಪಾತ್ರವನ್ನು ಪದಗಳಲ್ಲಿ ಕಟ್ಟಿ ಕೊಡಲು ಖಂಡಿತವಾಗಿಯೂ ಸಾಧ್ಯವಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ನಕ್ಸ್ಲ್ ಪಾತ್ರದಲ್ಲಿ ಸಾಯಿ ಪಲ್ಲವಿ

Sun May 10 , 2020
ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯ ಹುಟ್ಟುಹಬ್ಬದ ಪ್ರಯುಕ್ತ ಸಾಯಿ ಪಲ್ಲವಿ ನಟನೆಯ ವಿರಾಟ ಪರ್ವಂ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಫಸ್ಟ್ ಲುಕ್‌ನಲ್ಲೆ ಮಾವೋ ಹೋರಾಟದ ಕಿಡಿ ಕಾಣುತ್ತಿದೆ. ಹುತಾತ್ಮರ ಸ್ಮಾರಕದ ಮುಂದೆ ಸಾಯಿ ಪಲ್ಲವಿ ಪೆನ್ನು, ಡೈರಿ ಹಿಡಿದು ಕೂತಿರೊ ಪೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಪೊಲೀಟಿಕಲ್ ಡ್ರಾಮಾ ಇರುವಂತಹ ಸಿನಿಮಾವಾಗಿದ್ದು, ಪಲ್ಲವಿ ನಕ್ಸಲ್ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ರಾಣಾ […]

Advertisement

Wordpress Social Share Plugin powered by Ultimatelysocial