ಕುಸಿದ ಮಾಯಾವತಿ ಪ್ರಭಾವ: ದಲಿತ ಮತಬ್ಯಾಂಕ್‌ ಮೇಲೆ ಕಾಂಗ್ರೆಸ್‌ ಕಣ್ಣು- ಉತ್ತರ ಪ್ರದೇಶದಿಂದ ಮಲ್ಲಿಕಾರ್ಜುನ ಖರ್ಗೆ ಕಣಕ್ಕೆ?

ವದೆಹಲಿ, ಸೆಪ್ಟೆಂಬರ್‌ 13: ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸಿವೆ. ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮೇಲೆ ರಾಷ್ಟ್ರೀಯ ಪಕ್ಷಗಳ ಕಣ್ಣು ನೆಟ್ಟಿದೆ. ಪ್ರಧಾನಿ ಮೋದಿ ಅವರು ವಾರಣಾಸಿಯಿಂದ ಮತ್ತೆ ಸ್ಪರ್ಧಿಸುವ ನಿರೀಕ್ಷೆ ಇದೆ.

ಅವರ ಪ್ರಭಾವವನ್ನು ತಗ್ಗಿಸಲು ಕಾಂಗ್ರೆಸ್‌ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ದಲಿತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರನ್ನು ಯುಪಿಯಿಂದ ಕಣಕ್ಕಿಳಿಸಲು ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಉತ್ತರ ಪ್ರದೇಶದ ದಲಿತ ವೋಟ್‌ಬ್ಯಾಂಕ್‌ ಮೇಲೆ ಬಿಎಸ್‌ಪಿ ಪ್ರಭಾವವಿದೆ. ಇದು ಕಾಂಗ್ರೆಸ್‌ಗೆ ಹಿನ್ನೆಡೆ ಉಂಟು ಮಾಡುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ಪ್ರದೇಶದ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಬೇಕೆಂದು ಯುಪಿ ಕಾಂಗ್ರೆಸ್ ನಾಯಕರು ಬಯಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ನೆಲಕಚ್ಚಿದೆ. ದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಮರುಜೀವ ನೀಡಬೇಕೆಂದು ನಾಯಕರ ಒತ್ತಾಸೆಯಾಗಿದೆ. ದಲಿತರು ಹಾಗೂ ಮುಸ್ಲಿಮರ ಮತಗಳನ್ನು ಸೆಳೆಯುವ ಮೂಲಕ ಪಕ್ಷಕ್ಕೆ ಬಲ ತುಂಬಲು ನಾಯಕರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಬೆಂಬಲದೊಂದಿಗೆ ಖರ್ಗೆ ಅವರನ್ನು ಮೀಸಲು ಕ್ಷೇತ್ರಗಳಾದ ಇಟಾವಾ ಅಥವಾ ಬಾರಾಬಂಕಿಯಿಂದ ಕಣಕ್ಕಿಳಿಸಲು ಪಕ್ಷ ಬಯಸಿದೆ ಎಂದು ಯುಪಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮತ್ತು ಎಸ್‌ಪಿ ಎರಡೂ ಪಕ್ಷಗಳು ಇಂಡಿಯಾ ಮೈತ್ರಿಕೂಟದ ಭಾಗವಾಗಿವೆ. ಲೋಕಸಭೆ ಚುನಾವಣೆಯಲ್ಲಿ ಇವೆರಡೂ ಪಕ್ಷಗಳ ನಡುವೆ ಟಿಕೆಟ್‌ ಹಂಚಿಕೆ ನಡೆಯಲಿದೆ.

ಖರ್ಗೆಯವರ ಉಮೇದುವಾರಿಕೆಯಿಂದ ಉತ್ತರ ಪ್ರದೇಶದ ದಲಿತ ಮತದಾರರನ್ನು ಸೆಳೆಯಬೇಕೆಂಬ ಚರ್ಚೆಗಳು ಕಾಂಗ್ರೆಸ್‌ನಲ್ಲಿ ಮುನ್ನೆಲೆಗೆ ಬಂದಿವೆ. ಇದು ರಾಜ್ಯದಲ್ಲಿ ಎಸ್‌ಪಿ ಮತ್ತು ಇತರ ಮಿತ್ರಪಕ್ಷಗಳಿಗೆ ಸಹಾಯ ಮಾಡಬಹುದು ಎಂದು ಹೇಳಲಾಗುತ್ತಿದೆ.

ಈ ವಿಚಾರವಾಗಿ ಮಾತನಾಡಿರುವ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರು, ದಲಿತರ ಮೇಲೆ ಮಾಯಾವತಿಯವರ ಪ್ರಭಾವವು ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ದಲಿತರಿಗೆ ಕಾಂಗ್ರೆಸ್‌ ಪಕ್ಷವು ಉತ್ತಮ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದಿರುವ ಘೋಸಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿ ಜಯಸಾಧಿಸಿದ್ದಾರೆ. ಈ ಫಲಿತಾಂಶದ ಕುರಿತು ಮಾತನಾಡಿರುವ ಅಜಯ್‌ ರೈ, ‘ಘೋಸಿ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ 42 ಸಾವಿರಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಮಾಯಾವತಿ ದಲಿತರಿಗೆ ನೋಟಾ ಬಟನ್ ಒತ್ತಿರಿ ಎಂದು ಕರೆ ನೀಡಿದ್ದರು. ನೋಟಾ ಪರವಾಗಿ ಕೇವಲ 1700 ಮತಗಳು ಚಲಾವಣೆಯಾಗಿವೆ’ ಎಂದು ಅವರು ತಿಳಿಸಿದ್ದಾರೆ.

‘ದಲಿತರು ಘೋಸಿ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ. ಆದರೆ, ಅವರು ಸಮಾಜವಾದಿ ಪಕ್ಷದ ಪರ ಮತ ಹಾಕಿದ್ದಾರೆ. ಇಂಡಿಯಾ ಮೈತ್ರಿಕೂಟದ ಪರ ದಲಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ’ ಎಂದು ಅವರು ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ರೈ ಹೇಳಿದ್ದಾರೆ.

2009 ಮತ್ತು 2014ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಹುಲ್, 2019ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಎದುರು ಸೋತಿದ್ದರು.

ವಾರಣಾಸಿಯಿಂದ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸಿದರೆ ಕಾಂಗ್ರೆಸ್‌ ಕಾರ್ಯಕರ್ತರು ಅವರ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ರೈ ಹೇಳಿದ್ದಾರೆ.

ಒಂದು ವೇಳೆ, ಉತ್ತರ ಪ್ರದೇಶದ ರಾಯಬರೇಲಿಯಿಂದ ಸೋನಿಯಾ ಗಾಂಧಿ ಅವರು ಸ್ಪರ್ಧಿಸಲು ನಿರಾಕರಿಸಿದರೆ, ಆ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಸ್ಟಿಂಗ್‌: ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ ಅರೆಸ್ಟ್‌ !

Wed Sep 13 , 2023
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಕೈಗಾರಿಕೋದ್ಯಮಿಗೆ  ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನವಾಗಿದೆ. MLA ಟಿಕೆಟ್‌ ಕೊಡಿಸುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಚೈತ್ರಾ ಕುಂದಾಪುರ ತನ್ನ ಸಹಚರರ ಜತೆ ಸೇರಿ ಬೈಂದೂರಿನ ಉದ್ಯಮಿಯೊಬ್ಬರಿಗೆ […]

Advertisement

Wordpress Social Share Plugin powered by Ultimatelysocial