ಪೂರ್ವ ಆಫ್ರಿಕಾದಲ್ಲಿ ಬರಗಾಲದಿಂದ 22 ದಶಲಕ್ಷ ಜನರಿಗೆ ಆಹಾರದ ಕೊರತೆ: ವಿಶ್ವಸಂಸ್ಥೆ

ರಿಯಾದ್, ಫೆ.26: ಪೂರ್ವ ಆಫ್ರಿಕಾ ವಲಯದಲ್ಲಿ ತೀವ್ರ ಬರಗಾಲದ ಸಮಸ್ಯೆಯಿಂದಾಗಿ ಲಕ್ಷಾಂತರ ಜನರು ಉಪವಾಸ ಬೀಳುವ ಪರಿಸ್ಥಿತಿಯಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಮೈಕೆಲ್ ಡನ್ಫೋರ್ಡ್ ಹೇಳಿದ್ದಾರೆ.

ಸೊಮಾಲಿಯಾ ಸೇರಿದಂತೆ ಪೂರ್ವ ಆಫ್ರಿಕಾದಲ್ಲಿ ಪ್ರಸ್ತುತ ಪರಿಸ್ಥಿತಿಯು ಇತ್ತೀಚಿನ ಇತಿಹಾಸದಲ್ಲಿ ನಾವು ನೋಡಿದ ಆಹಾರ ಅಭದ್ರತೆಯಲ್ಲಿ ಅತ್ಯಂತ ಭೀಕರವಾಗಿದೆ ಎಂದು ವಿಶ್ವಸಂಸ್ಥೆ ಆಹಾರ ಯೋಜನೆಯ ಪೂರ್ವ ಆಫ್ರಿಕಾ ವಲಯದ ನಿರ್ದೇಶಕ ಡನ್ಫೋರ್ಡ್ ಕಳವಳ ವ್ಯಕ್ತಪಡಿಸಿದ್ದಾರೆ.

ಪೂರ್ವ ಆಫ್ರಿಕಾದಲ್ಲಿ 60 ವರ್ಷಗಳಲ್ಲೇ ಅತ್ಯಂತ ತೀವ್ರ ಬರಗಾಲದ ಪರಿಸ್ಥಿತಿಯಿದೆ. ಈ ವಲಯವು 5 ವಿಫಲ ಮಳೆಗಾಲವನ್ನು ಕಂಡಿದ್ದು 6ನೇ ವರ್ಷದ ಮಳೆಗಾಲವೂ ಕಡಿಮೆ ಪ್ರಮಾಣದಲ್ಲಿ ಇರಲಿದೆ ಎಂಬ ವರದಿಯಿದೆ. ಇದರರ್ಥ 22 ದಶಲಕ್ಷಕ್ಕೂ ಅಧಿಕ ಜನರು ಬರಗಾಲದಿಂದ ಪ್ರಭಾವಿತರಾಗಿದ್ದಾರೆ ಎಂದು ಡನ್ಫೋರ್ಡ್ ಹೇಳಿದ್ದಾರೆ. ಈ ವಾರ ರಿಯಾದ್ನಲ್ಲಿ ನಡೆದ ಮೂರನೇ ರಿಯಾದ್ ಅಂತರಾಷ್ಟ್ರೀಯ ಮಾನವೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಡನ್ಫೋರ್ಡ್, ‘ಅರಬ್ ನ್ಯೂಸ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪೂರ್ವ ಆಫ್ರಿಕಾದ ಬರ ಪರಿಸ್ಥಿತಿಯ ಬಗ್ಗೆ ಅಂಕಿಅಂಶ ಸಹಿತ ವಿವರಿಸಿದರು. ಇಥಿಯೋಪಿಯಾ, ಉತ್ತರ ಕೆನ್ಯಾ ಮತ್ತು ಸೊಮಾಲಿಯಾ ಬಿಕ್ಕಟ್ಟನ್ನು ಎದುರಿಸುತ್ತಿವೆ. ಸೊಮಾಲಿಯಾದ ಜನಸಂಖ್ಯೆಯ 50%ಕ್ಕೂ ಹೆಚ್ಚುಮಂದಿಗೆ ಮಾನವೀಯ ನೆರವಿನ ಅಗತ್ಯವಿದೆ. 2022ರಲ್ಲಿ ವಿಶ್ವ ಆಹಾರ ಯೋಜನೆಯ(ಡಬ್ಲ್ಯೂಇಎಫ್) ಕಾರ್ಯಾಚರಣೆ ಗಮನಾರ್ಹವಾಗಿ ಹೆಚ್ಚಿದೆ. ನಾವು ಈಗಾಗಲೇ 5 ದಶಲಕ್ಷ ಜನರನ್ನು ತಲುಪಿದ್ದೇವೆ. ಆದರೆ ಈ ವರ್ಷವೂ ಮಳೆ ಬಾರದಿದ್ದರೆ ಪರಿಸ್ಥಿತಿ ತೀವ್ರ ಹದಗೆಡಲಿದೆ ಎಂದವರು ಹೇಳಿದ್ದಾರೆ.

ಡಬ್ಲ್ಯೂಇಎಫ್ ಕಳೆದ ವರ್ಷ 4.6 ಶತಕೋಟಿ ಡಾಲರ್ ನೆರವಿನ ನಿಧಿ ಸಂಗ್ರಹಿಸಿದ್ದು ಇದರಲ್ಲಿ ಅಮೆರಿಕದ ದೇಣಿಗೆ ಅಧಿಕವಾಗಿದೆ. ಆದರೆ ಇನ್ನಷ್ಟು ನಿಧಿ ಸಂಗ್ರಹಿಸುವ ಅಗತ್ಯವಿದ್ದು ನೆರವು ಮುಂದುವರಿಯಬೇಕಿದ್ದರೆ ಮುಂದಿನ 6 ತಿಂಗಳಲ್ಲಿ 455 ದಶಲಕ್ಷ ಡಾಲರ್ಗೂ ಅಧಿಕ ನಿಧಿಯ ಅಗತ್ಯವಿದೆ. ಆದ್ದರಿಂದ ಇನ್ನಷ್ಟು ದೇಶಗಳಿಂದ ನೆರವನ್ನು ಎದುರು ನೋಡುತ್ತಿದ್ದೇವೆ. ಕಳೆದ 5 ವರ್ಷದಲ್ಲಿ ಸೌದಿ ಅರೆಬಿಯಾ 1 ಶತಕೋಟಿ ಡಾಲರ್ಗೂ ಅಧಿಕ ನೆರವು ಒದಗಿಸಿದೆ. ಸೌದಿ ಅರೆಬಿಯಾದ ‘ಕಿಂಗ್ ಸಲ್ಮಾನ್ ಸೆಂಟರ್ ಫಾರ್ ರಿಲೀಫ್ ಆಯಂಡ್ ಹ್ಯುಮಾನಿಟೇರಿಯನ್ ಏಯ್ಡ್’ ಸಂಸ್ಥೆ ಸೊಮಾಲಿಯಾಕ್ಕೆ ನೆರವಿನ ದೇಣಿಗೆ ನೀಡಿದೆ ಎಂದವರು ಹೇಳಿದರು.

ಪೂರ್ವ ಆಫ್ರಿಕಾ ವಲಯದ ಮೇಲೆ ಹವಾಮಾನ ಬದಲಾವಣೆ ಸಮಸ್ಯೆಯೂ ಪ್ರಭಾವ ಬೀರಿದೆ. 2011ರಲ್ಲಿ 2 ವಿಫಲ ಮಳೆಗಾಲದಿಂದ ಉಂಟಾದ ಕ್ಷಾಮದ ಬಳಿಕ ಈ ವಲಯದಲ್ಲಿ 2,60,000 ಜನತೆ ಸಾವನ್ನಪ್ಪಿದ್ದರು. ಆದರೆ ಈ ಬಾರಿ 5 ಮಳೆಗಾಲ ವಿಫಲವಾಗಿದ್ದರೂ, ನೆರವಿನ ದೇಣಿಗೆ ಹಾಗೂ ನೆರವನ್ನು ತಲುಪಿಸುವ ಕಾರ್ಯಕ್ರಮದಿಂದಾಗಿ ಸೊಮಾಲಿಯಾದಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಆದರೆ ದಕ್ಷಿಣ ಸುಡಾನ್ನಲ್ಲಿ ಈಗ 22 ದಶಲಕ್ಷ ಜನತೆ ಬರಗಾಲದಿಂದ ಸಮಸ್ಯೆಗೆ ಒಳಗಾಗಿದ್ದರೆ, ಇನ್ನೊಂದೆಡೆ 4 ವರ್ಷದಿಂದ ಭಾರೀ ಮಳೆ ಹಾಗೂ ಪ್ರವಾಹದಿಂದ ಮತ್ತೂ 1 ದಶಲಕ್ಷ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಹವಾಮಾನದ ಆಘಾತವನ್ನು ಎದುರಿಸಲು ಇಲ್ಲಿನ ಜನರನ್ನು ಸಜ್ಜುಗೊಳಿಸುವ ಅನಿವಾರ್ಯತೆಯಿದೆ ಎಂದು ಡನ್ಫೋರ್ಡ್ ಹೇಳಿದ್ದಾರೆ.

ಸೊಮಾಲಿಯಾದಿಂದ 1.3 ದಶಲಕ್ಷ ಜನರ ಪಲಾಯನಕಳೆದ 2 ವರ್ಷಗಳಲ್ಲಿ ನಿರಂತರ ಮಳೆಕೊರತೆಯಿಂದ ಸೊಮಾಲಿಯಾ, ಕೆನ್ಯಾ ಮತ್ತು ಇಥಿಯೋಪಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆನಷ್ಟವಾದ ಕಾರಣ ಆದಾಯದ ಮೂಲ ನಷ್ಟವಾಗಿ ಲಕ್ಷಾಂತರ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವಲಯದಲ್ಲಿ 3 ದಶಲಕ್ಷಕ್ಕೂ ಅಧಿಕ ಜನತೆ ತೀವ್ರ ಆಹಾರ ಅಭದ್ರತೆ ಎದುರಿಸುತ್ತಿದ್ದು ಬಹುತೇಕ ಪ್ರತೀದಿನ ಉಪವಾಸ ಇರುವ ಪರಿಸ್ಥಿತಿಯಿದೆ. ಇದರಿಂದಾಗಿ ತಮ್ಮ ಮನೆ, ಆಸ್ತಿ ಅಥವಾ ಬೆಲೆಬಾಳುವ ವಸ್ತುಗಳನ್ನು ಸಿಕ್ಕಿದ ಬೆಲೆಗೆ ಮಾರುವ ಪರಿಸ್ಥಿತಿಗೆ ಸಿಲುಕಿದ್ದಾರೆ ಎಂದು 16 ಅಂತರಾಷ್ಟ್ರೀಯ ಮಾನವೀಯ ನೆರವಿನ ಸಂಘಟನೆಗಳ ಒಕ್ಕೂಟ ವರದಿ ಮಾಡಿದೆ. ಸೊಮಾಲಿಯಾದಲ್ಲಿ 1.3 ದಶಲಕ್ಷ ಜನ ತಮ್ಮ ಕೃಷಿ ಭೂಮಿ ಮತ್ತು ಮನೆಯನ್ನು ತ್ಯಜಿಸಿ ನಿರಾಶ್ರಿತರ ಶಿಬಿರಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ: ಬುಮ್ರಾ ಐಪಿಎಲ್‌ನಲ್ಲಿ ಆಡೋದೆ ಅನುಮಾನ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಅಲಭ್ಯ?

Mon Feb 27 , 2023
ಭಾರತ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತಕಾರಿ ಸುದ್ದಿ ಸಿಕ್ಕಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಫಿಟ್ ಆಗಲು ಇನ್ನೂ ಹೆಚ್ಚಿನ ಸಮಯ ಬೇಕಿದ್ದು, ಈ ಬಾರಿ ಐಪಿಎಲ್‌ನಲ್ಲಿ ಆಡುವುದೇ ಅನುಮಾನ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ವೇಳೆಗೂ ಬುಮ್ರಾ ಫಿಟ್ ಆಗುವುದು ಅನುಮಾನ ಎನ್ನಲಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಬುಮ್ರಾ ಫಿಟ್ ಆಗದ ಕಾರಣ ಆಸ್ಟ್ರೇಲಿಯಾ ವಿರುದ್ಧ […]

Advertisement

Wordpress Social Share Plugin powered by Ultimatelysocial