ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿನಿಯರು ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ…

 

ಬೆಂಗಳೂರು, ಫೆಬ್ರವರಿ 18: ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿನಿಯರು ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ತ್ರಿಸದಸ್ಯ ಪೀಠದಲ್ಲಿ ಇಂದು ಮತ್ತೆ ಆರಂಭಗೊಂಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.

ದೀಕ್ಷಿತ್ ಹಾಗೂ ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ರ ವಿಸ್ತೃತ ಪೀಠ ವಿಚಾರಣೆ ಆರಂಭಿಸಿದ್ದು, ಇಂದೇ ಅಂತಿಮ ತೀರ್ಪು ಪ್ರಕಟವಾಗುತ್ತಾ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.

ತರಗತಿಗಳಲ್ಲಿ ಹಿಜಾಬ್ ನಿರ್ಬಂಧ ವಿಚಾರವಾಗಿ ಹೈಕೋರ್ಟ್ ಪೂರ್ಣಪೀಠದಲ್ಲಿ ವಿಚಾರಣೆ ಆರಂಭವಾಗಿದ್ದು, ಹಿರಿಯ ವಕೀಲ ಎ.ಎಂ. ಧರ್ ವಾದಮಂಡನೆ ಮಾಡಿದರು. ಹೊಸದಾಗಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಸೋಮವಾರ ನಿಮ್ಮ ಅರ್ಜಿ ವಿಚಾರಣೆಗೆ ಸ್ವೀಕರಿಸುತ್ತೇವೆ ಎಂದು ಸಿಜೆ ಹೇಳಿದ್ದಾರೆ.

ವಕೀಲ ರಹಮತುಲ್ಲಾ ಕೊತ್ವಾಲ್ ವಾದ ಮಂಡಿಸಲಿದ್ದು, ನಿನ್ನೆ ನನ್ನ ಪಿಐಎಲ್ ವಜಾಗೊಂಡಿತ್ತು, ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದೇನೆ, ದಯಮಾಡಿ ಅದರ ವಿಚಾರಣೆ ನಡೆಸಲು ಮನವಿ ಮಾಡಿದ್ದಾರೆ. ಅದನ್ನೂ ಸೋಮವಾರ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.

* ಮೂರು ಹೊಸ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಹೊಸ ಅರ್ಜಿಗಳಿಗೆ 10 ನಿಮಿಷವಷ್ಟೇ ಸಮಯ ನೀಡಲಾಗುವುದು ಎಂದು ಸಿಜೆ ಹೇಳಿದ್ದಾರೆ. ದುಪಟ್ಟಾವನ್ನು ಹಿಜಾಬ್ ನಂತರ ಬಳಸಲು ಅನುಮತಿ ಕೋರಿಕೆ ಈ ಅರ್ಜಿ ಸಂಬಂಧ ವಿಚಾರಣೆ ನಡೆಸಲು ಹಿರಿಯ ವಕೀಲ ರವಿವರ್ಮಕುಮಾರ್ ಮನವಿ ಮಾಡಿಕೊಂಡಿದ್ದಾರೆ.

* ಇದೇ ವೇಳೆ ಯೂಟ್ಯೂಬ್ ಲೈವ್​ನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಮನವಿ ಮಾಡಿದ್ದು, ರಾಜ್ಯಾದ್ಯಾಂತ ಯೂಟ್ಯೂಬ್‌ನಿಂದ ಸಮಸ್ಯೆ ಆಗುತ್ತಿದೆ ಎಂದು ಹಿರಿಯ ವಕೀಲ ರವಿವರ್ಮಕುಮಾರ್ ಹೇಳಿದ್ದಾರೆ.

* 2013ರಲ್ಲೇ ಸಮವಸ್ತ್ರದ ನಿರ್ಣಯ ಅಂಗೀಕರಿಸಲಾಗಿದೆ ಎಂದು ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆಯೇ ಎಂದು ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು.

* ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಎಜಿ ಪ್ರಭುಲಿಂಗ ನಾವದಗಿ, ಕಾಲೇಜು ಅಭಿವೃದ್ಧಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಹಲವು ಗಣ್ಯ ವ್ಯಕ್ತಿಗಳಿರುತ್ತಾರೆ. ಶಾಸಕರಲ್ಲದೇ ಉಪನ್ಯಾಸಕರು, ವಿದ್ಯಾರ್ಥಿಗಳು, ಪ.ಪಂ, ಪ.ಜಾತಿಗೆ ಸೇರಿದ ವ್ಯಕ್ತಿಗಳಿರುತ್ತಾರೆ ಎಂದು ಉತ್ತರಿಸಿದರು.

* 2018ರಲ್ಲಿ ಹೆಣ್ಣುಮಕ್ಕಳಿಗೆ ವಸ್ತ್ರ ಸಂಹಿತೆ ರೂಪಿಸಿದೆ. ಡಿಸೆಂಬರ್ 2021ರವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಉಡುಪಿಯ ಪಿಯು ಕಾಲೇಜು ವಿದ್ಯಾರ್ಥಿನಿಯರ ಕಾಲೇಜಾಗಿದೆ. ಡಿಸೆಂಬರ್ 2021ರಲ್ಲಿ ಹಿಜಾಬ್ ಧರಿಸಿ ಬರುವುದಾಗಿ ಕೆಲವು ವಿದ್ಯಾರ್ಥಿನಿಯರು ಮನವಿ ಮಾಡಿದರು. ನಂತರ ಜನವರಿ 1, 2022ರಂದು ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಸೇರಿತು ಎಂದು ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.

* ಸಹೋದರತ್ವ ಭಾವನೆ ಇರಲೆಂದು ಸಮವಸ್ತ್ರ. ಕಾಲೇಜಿನಲ್ಲಿ ಶಿಸ್ತು, ಸಮಾನತೆ ಇರಲೆಂದು ಸಮವಸ್ತ್ರ ಸಂಹಿತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ನಡಾವಳಿಯಲ್ಲಿ ಇದೆ. 1985ರಿಂದಲೂ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ವಾದ ಮಂಡನೆ.

*ಸಮವಸ್ತ್ರ ಸಂಹಿತೆಗೆ ವಿದ್ಯಾರ್ಥಿನಿಯರು ಮತ್ತು ಪೋಷಕರು ವಿರೋಧಿಸಿದರು. ಹಾಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕಾಯಿತು. ಉನ್ನತ ಸಮಿತಿ ರಚಿಸಲು ತೀರ್ಮಾನಿಸಲಾಯಿತು ಎಂದು ಹೇಳಿದರು.

* ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ನಂತರ, ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದರೂ, ಕಾಲೇಜಿನಲ್ಲಿ ಪ್ರತಿಭಟನೆ ಮುಂದುರೆಯಿತು ಎಂದು ಪ್ರಭುಲಿಂಗ ನಾವದಗಿ ವಾದ.

* ಉನ್ನತ ಸಮಿತಿ ರಚಿಸುತ್ತೇವೆಂದರೂ ಪ್ರತಿಭಟನೆ ನಿಲ್ಲಲಿಲ್ಲ. ಉಡುಪಿ ಕಾಲೇಜಿನ ವಿವಾದ ಇಡೀ ರಾಜ್ಯಕ್ಕೆ ವ್ಯಾಪಿಸಿತು. ಹೀಗಾಗಿ ಸರ್ಕಾರ ಆದೇಶ ಹೊರಡಿಸಬೇಕಾಯಿತು ಎಂದು ಸರ್ಕಾರದ ಪರ ವಾದ ಮಂಡಿಸಿದ ಎಜಿ ಪ್ರಭುಲಿಂಗ ನಾವದಗಿ.

* ಫೆ.5ರ ಸರ್ಕಾರದ ಆದೇಶದಿಂದ ಹಿಜಾಬ್ ಅರ್ಜಿದಾರರ ಹಕ್ಕಿಗೆ ಧಕ್ಕೆಯಾಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾವಿಕಾಸ ಯೋಜನೆಯಡಿಯಲ್ಲಿ ಉಚಿತ ಸಮವಸ್ತ್ರ ನೀಡಲಾಗುತ್ತದೆ. ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರ ನಿಗದಿಪಡಿಸಲು ಸರ್ಕಾರ ಸೂಚಿಸಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.

*ಸರ್ಕಾರಿ ಆದೇಶದಲ್ಲಿ ಹಿಜಾಬ್ ಕಡ್ಡಾಯವಲ್ಲವೆಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು.

* ನಾವು ಹಿಜಾಬ್ ವಿಚಾರವನ್ನೂ ಕಾಲೇಜು ಅಭಿವೃದ್ಧಿ ಸಮಿತಿಗೆ ನೀಡಿದ್ದೇವೆ ಎಂದು ಎಜಿ ವಾದ ಮಂಡನೆಗೆ, ಒಂದು ವೇಳೆ ಕಾಲೇಜು ಅಭಿವೃದ್ದಿ ಸಮಿತಿ ಅನುಮತಿ ನೀಡಬಹುದು. ಹಿಜಾಬ್‌ಗೆ ಅನುಮತಿ ನೀಡಿದರೆ ನಿಮ್ಮ ಆಕ್ಷೇಪವಿಲ್ಲವೇ ಎಂದು ಸಿಜೆ ಪ್ರಶ್ನಿಸಿದ್ದಾರೆ. ಅಂತಹ ದೂರುಗಳು ಬಂದರೆ ಸರ್ಕಾರ ಪರಿಗಣಿಸಲಿದೆ ಎಂದು ಎಜಿ ನಾವದಗಿ ಹೇಳಿದರು. ಸಾವಿರಾರು ಅರ್ಜಿಗಳು ದಾಖಲಾಗಬೇಕೆಂದು ಬಯಸುತ್ತೀರಾ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಹಿಜಾಬ್ ಬಗ್ಗೆ ಸರ್ಕಾರ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.

*ಸರ್ಕಾರ ಧಾರ್ಮಿಕ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸಿರಲಿಲ್ಲ ಎಂದು ಎಜಿ ಹೇಳಿದ್ದು, ಸರ್ಕಾರ ಕಾಲೇಜು ಅಭಿವೃದ್ದಿ ಸಮಿತಿಗೆ ಅಧಿಕಾರ ನೀಡಿದೆ ಎಂದಿದ್ದೀರಿ ಆದರೂ ಹೈಕೋರ್ಟ್ ತೀರ್ಪುಗಳ ಉಲ್ಲೇಖದ ಅಗತ್ಯವೇನಿತ್ತು ಎಂದು ಸಿಜೆ ಪ್ರಶ್ನಿಸಿದ್ದಾರೆ.

* ಸರ್ಕಾರದ ಆದೇಶದಲ್ಲಿರುವ ವಿವರಣೆ ಉಪೇಕ್ಷಿಸಿ ಸಮಿತಿ ನಿರ್ಧರಿಸಬಹುದೇ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಕೇಳಿದ್ದಾರೆ. ನಾವು ಆ ತೀರ್ಪುಗಳನ್ನು ಉಲ್ಲೇಖಿಸದೇ ಇರಬಹುದಿತ್ತು. ಅಧಿಕಾರಿಗಳು ಏಕೆ ಉಲ್ಲೇಖಿಸಿದರೋ ತಿಳಿದಿಲ್ಲ. ಆದರೆ ಸರ್ಕಾರದ ನಿರ್ಧಾರ ಸ್ಪಷ್ಟವಾಗಿದೆ. ಸಮವಸ್ತ್ರದ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ ಎಂದು ಎಜಿ ಹೇಳಿದ್ದಾರೆ. ಸರ್ಕಾರದ ಆದೇಶಗಳು ವೈನ್​ನಂತಲ್ಲ, ಹಳೆಯದಾದಂತೆ ಅವು ಉತ್ತಮಗೊಳ್ಳುವುದಿಲ್ಲ ಎಂದು ನ್ಯಾ.ಕೃಷ್ಣ ದೀಕ್ಷಿತ್ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ್ದಾರೆ.

* ಸಮವಸ್ತ್ರ ನಿರ್ಧಾರವನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ ಅಧಿಕಾರ ನೀಡಿದ್ದೇವೆ ಎಂದು ಹೇಳಿದ್ದೀರಿ, ಇನ್ನೊಂದು ಕಡೆ ಸರ್ಕಾರ ಉನ್ನತ ಸಮಿತಿ ರಚನೆ ಮಾಡುತ್ತೇವೆ ಎಂದು ಹೇಳುತ್ತೀರಿ. ಇದು ವಿರೋಧಾಭಾಸ ಹೇಳಿಕೆಯಲ್ಲವೇ? ಸರ್ಕಾರಕ್ಕೆ ಇದರ ಬಗ್ಗೆ ಸ್ಪಷ್ಟನೆ ಇಲ್ಲ ಎಂದು ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು.

* ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಕಾಯ್ದೆ ಜಾರಿಗೆ ತರಲಾಯಿತು. ಕಾಯ್ದೆಯ ನಿಯಮ 11ರಲ್ಲಿ ಸಮವಸ್ತ್ರ ಸಂಹಿತೆ ಇದೆ. ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆಗೆ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ. ಶಾಲೆಗಳಿಗೆ ನಿರ್ವಹಣಾ ಸಮಿತಿ ಇದೆ. ಆದರೆ ಕಾಲೇಜಿನಲ್ಲಿ ನಿರ್ವಹಣಾ ಸಮಿತಿ ಇರುವುದಿಲ್ಲ. 2014ರಿಂದಲೂ ಕಾಲೇಜು ಅಭಿವೃದ್ಧಿ ಸಮಿತಿಗಳಿವೆ ಎಂದು ಎಜಿ ವಾದ ಮಂಡನೆ.

* ಶಿಕ್ಷಣ ಕಾಯ್ದೆ ಸೆಕ್ಷನ್ 133ರಡಿ ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರವಿದ್ದು, ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಸಮಾಜದ ಎಲ್ಲ ವರ್ಗದ ಪ್ರತಿನಿಧಿಗಳಿದ್ದಾರೆ ಎಂದು ಎಜಿ ವಾದ ಮಂಡಿಸಿದರು. ಆಗ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಮೂಲಕ ಸಮಿತಿಗೆ ಅನುಮತಿಸಬಹುದೇ ಎಂದು ಸಿಜೆ ಕೇಳಿದರು.

* ಅಧೀನ ಕಾರ್ಯದರ್ಶಿ ಸಚಿವರ ಅನುಮೋದನೆ ನಂತರವೇ ಆದೇಶ ಹೊರಡಿಸುತ್ತಾರೆ. ಹೀಗಾಗಿ ಇದನ್ನು ಸರ್ಕಾರದ ಆದೇಶ ಎಂದು ಪರಿಗಣಿಸಬಹುದು ಎಂದು ಎಜಿ ನಾವದಗಿ ಹೇಳಿದ್ದಾರೆ.

* ಸರ್ಕಾರದ ಕಾರ್ಯನಿರ್ವಹಣೆ ನಿಯಮದಡಿ ಆದೇಶ ಹೊರಡಿಸಬಹುದೇ? ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಬಹುದೇ ಪರಿಶೀಲಿಸಿ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು. ಆಗ ನಾನು ಮೂಲ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ನೀಡುತ್ತೇನೆ. ಸಾಮಾನ್ಯವಾಗಿ ಸರ್ಕಾರದ ಕಾರ್ಯನಿರ್ವಹಣೆ ನಿಯಮದಡಿಯೇ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ಎಜಿ ಹೇಳಿದ್ದಾರೆ.

* ಒಂದೊಂದು ಬಾರಿ ಒಂದೊಂದು ಪಕ್ಷದವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಶಾಸಕರಾದವರನ್ನು ಸಮಿತಿ ಅಧ್ಯಕ್ಷರಾಗಿ ಮಾಡಬಹುದೇ? ಅವರ ರಾಜಕೀಯ ಚಿಂತನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲವೇ? ಎಂದು ರಾಜ್ಯ ಸರ್ಕಾರಕ್ಕೆ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದರು.

* ಈ ಪಕ್ಷ ಆ ಪಕ್ಷ ಎಂದು ಹೇಳುತ್ತಿಲ್ಲ, ಶಾಸಕ ಅಧ್ಯಕ್ಷರಾದರೆ ಉಳಿದ ಸದಸ್ಯರ ಕಥೆಯೇನು. ಕಾಫಿ, ಟೀ ಕುಡಿಯುವುದಲ್ಲದೇ ಅಡಳಿತದಲ್ಲೂ ಭಾಗವಹಿಸಲು ಸಾಧ್ಯವೇ? ಎಂದು ರಾಜ್ಯ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು. ಇದು ಖಂಡಿತಾ ಚಿಂತಿಸಬೇಕಾದ, ಚರ್ಚಿಸಬೇಕಾದ ವಿಚಾರವಾಗಿದೆ ಎಂದು ಎಜಿ ಹೇಳಿದ್ದಾರೆ. ಸಮಿತಿಯ ಸದಸ್ಯರನ್ನು ಯಾರು ನೇಮಿಸುತ್ತಾರೆ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದರು.

* ಸಂವಿಧಾನದ 25(1) ಪರಿಪೂರ್ಣ ಹಕ್ಕಲ್ಲ. ಧಾರ್ಮಿಕ ಸ್ವಾತಂತ್ರ್ಯವನ್ನು ಮೂರು ರೀತಿಯಲ್ಲಿ ಪರೀಕ್ಷಿಸಬೇಕು ಎಂದು ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.

* ಸಾರ್ವಜಿನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ವಿರುದ್ಧವಾಗಿದೆಯೇ ಎಂದು ಪರೀಕ್ಷಿಸಬೇಕು. ಕೋವಿಡ್ ಸಮಯದಲ್ಲಿ ಆರೋಗ್ಯ ದೃಷ್ಟಿಯಿಂದ ದೇವಾಲಯ, ಚರ್ಚ್, ಮಸೀದಿಗಳನ್ನು ಮುಚ್ಚಲಾಗಿತ್ತು. ಸರ್ಕಾರಕ್ಕೆ ನಿರ್ಬಂಧಿಸುವ ಅಧಿಕಾರವಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ವಾದಿಸಿದರು.

* ಆತ್ಮಸಾಕ್ಷಿ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂ ತೀರ್ಪಿದೆ. ಕೆಲವರಿಗೆ ಯಾವುದೇ ಶಕ್ತಿಯ ಬಗ್ಗೆಯೇ ನಂಬಿಕೆ ಇರದಿರಬಹುದು. ದೇವರಿಲ್ಲ ಎಂಬ ಭಾವನೆಗೆ ಸಂವಿಧಾನದಲ್ಲಿ ಸ್ಥಾನವಿದೆ ಎಂದು ಎಜಿ ವಾದಿಸಿದರು.

* ಹಿಜಾಬ್ ವಿಚಾರಣೆಯನ್ನು ಫೆ.21ರ ಸೋಮವಾರಕ್ಕೆ ಮುಂದೂಡಿ ಹೈಕೋರ್ಟ್ ಆದೇಶಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಟಕಲೋಕದಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಹೆಸರು ಅಜರಾಮರವಾದದ್ದು.

Fri Feb 18 , 2022
ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು 1934ರ ಫೆಬ್ರವರಿ 15ರಂದು ಮೈಸೂರಿನಲ್ಲಿ ಜನಿಸಿದರು. ಅವರು ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. 1952ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. 1953ರಲ್ಲಿ ತಂದೆಯವರು ನಿಧನರಾದಾಗ, ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು.ಮಾಸ್ಟರ್ ಹಿರಣ್ಣಯ್ಯನವರು ನಾಟಕಗಳಲ್ಲಿ ಪ್ರಖ್ಯಾತರಾಗಿ, ತಮ್ಮ ನಾಟಕಗಳ ಮೂಲಕ ಸಾರ್ವಜನಿಕ ವಲಯದಲ್ಲಿ, […]

Advertisement

Wordpress Social Share Plugin powered by Ultimatelysocial