ಹೊರಬಂದ ಆಘಾತಕಾರಿ ಸತ್ಯಗಳು.

ವದೆಹಲಿ: ಚೀನಾ ತನಗೆ ತೊಂದರೆ ಉಂಟುಮಾಡುತ್ತಿದ್ದಾರೆಂದು ಭಾವಿಸುವ ವಿದೇಶೀ ನಾಗರಿಕರನ್ನು ಸೆರೆಹಿಡಿಯಲು ಒಂದು ನ್ಯಾಯಸಮ್ಮತವಲ್ಲದ ಮಾರ್ಗವೊಂದನ್ನು ಕಂಡುಕೊಂಡಿದೆ ಎಂದು ಮ್ಯಾಡ್ರಿಡ್ ಮೂಲದ ಮಾನವ ಹಕ್ಕುಗಳ ಸಂಸ್ಥೆ ಸೇಫ್‌ಗಾರ್ಡ್ ಡಿಫೆಂಡರ್ಸ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.ಸಾಮಾನ್ಯವಾಗಿ ವಿದೇಶಗಳಲ್ಲಿರುವ ಅಪರಾಧಿಗಳನ್ನು ಹಿಡಿಯಲು ಸುರಕ್ಷತಾ ಸಂಸ್ಥೆಗಳು ಅಂತಾರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆಯಾದ ಇಂಟರ್‌ಪೋಲ್‌ನ ಸಹಕಾರ ಪಡೆದುಕೊಳ್ಳುತ್ತಾರೆ.ರಾಜತಾಂತ್ರಿಕವಾಗಿ 2 ದೇಶಗಳ ನಡುವೆ ಅಪರಾಧಿಗಳ ಗಡೀಪಾರು ನಡೆಸುವ ಒಪ್ಪಂದ ಇದಕ್ಕಿರುವ ಇನ್ನೊಂದು ವಿಧಾನ. ಆದರೆ ಚೀನಾ ಜಗತ್ತಿನಾದ್ಯಂತ ಪ್ರಮುಖ ನಗರಗಳಲ್ಲಿ ಸೆಕ್ಯುರಿಟಿ ಏಜೆನ್ಸಿಗಳ ಹೆಸರಿನಲ್ಲಿ ಡಜನ್‌ಗಟ್ಟಲೆ ಪೊಲೀಸ್ ಸರ್ವಿಸ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ಇದನ್ನು ಸೇಫ್‌ಗಾರ್ಡ್ ಡಿಫೆಂಡರ್ಸ್ ಸಂಸ್ಥೆ “100 ಓವರ್ ಸೀಸ್ – ಚೈನೀಸ್ ಟ್ರ್ಯಾನ್ಸಾಕ್ಷನಲ್ ಪೊಲೀಸಿಂಗ್ ಗಾನ್ ವೈಲ್ಡ್” ಹೆಸರಿನ ವರದಿ ನಮೂದಿಸಿದೆ.ಈ ವರದಿ ಚೀನಾ ಹೇಗೆ 2018ರಲ್ಲಿ ವಿದೇಶದಲ್ಲಿ ನೆಲೆಸಿರುವ ಚೀನೀ ಪ್ರಜೆಗಳು ನಡೆಸುವ ವಂಚನೆ ಮತ್ತು ಟೆಲಿಕಮ್ಯುನಿಕೇಶನ್ ವಂಚನೆಗಳನ್ನು ತಡೆಯುವ ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಿತು ಎಂಬುದನ್ನು ತೆರೆದಿಡುತ್ತದೆ. ಈಗ ಈ ‘ಸೇವಾ ಕೇಂದ್ರಗಳು’ ಅಂತಾರಾಷ್ಟ್ರೀಯ ಕಾನೂನುಗಳನ್ನೇ ಉಲ್ಲಂಘಿಸುತ್ತಿವೆ. ಚೀನಾ ಈಗಾಗಲೇ 53 ರಾಷ್ಟ್ರಗಳಲ್ಲಿ ಇಂತಹ ಪೊಲೀಸ್ ವ್ಯವಸ್ಥೆಯನ್ನು ಆರಂಭಿಸಿದೆ. ಇದು ವಿದೇಶಗಳಲ್ಲಿರುವ ತನ್ನದೇ ದೇಶದ ಭಿನ್ನಮತೀಯರನ್ನು ಗುರಿಯಾಗಿಟ್ಟು, ಅವರ ಮೇಲೆ ವಿಚಕ್ಷಣೆ ನಡೆಸುವ ಉದ್ದೇಶ ಹೊಂದಿದೆ.ಈ ವರದಿಯ ಪ್ರಕಾರ ಏಪ್ರಿಲ್ 2021ರಿಂದ ಜುಲೈ 2022ರ ತನಕ 2,30,000 ಜನ ವಿದೇಶಗಳಲ್ಲಿ ನೆಲೆಸಿರುವ ಚೀನೀಯರನ್ನು ಚೀನಾಗೆ ಮರಳಿ, ಕ್ರಿಮಿನಲ್ ವಿಚಾರಣೆ ಎದುರಿಸುವಂತೆ ಮಾಡಲಾಗಿದೆ. “ಚೀನಾದೊಳಗೆ ಈಗಾಗಲೇ ಅವರು ಜನರನ್ನು ನಿಯಂತ್ರಿಸುತ್ತಿದ್ದಾರೆ. ಆದರೆ ಚೀನಾದಿಂದ ಹೊರಗಿರುವ ಜನರನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ. ಆದ್ದರಿಂದ ಈಗ ಚೀನಾ ಸ್ವತಂತ್ರ ದೇಶಗಳಲ್ಲಿ ವಾಸಿಸುತ್ತಿರುವ ಚೀನೀಯರನ್ನು ನಿಯಂತ್ರಿಸಲು ಬಯಸುತ್ತಿದೆ” ಎಂದು ವಿದೇಶದಲ್ಲಿ ವಾಸಿಸುತ್ತಿರುವ ಟಿಬೆಟಿಯನ್ ನಾಗರಿಕ ಥುಬ್‌ಟೆನ್ ವಾಂಗ್‌ಚೆನ್ ಹೇಳುತ್ತಾರೆ.’ಸೇಫ್‌ಗಾರ್ಡ್ ಡಿಫೆಂಡರ್ಸ್’ ತನ್ನ ವರದಿಯಲ್ಲಿ ವಿದೇಶಗಳಲ್ಲಿರುವ ಚೀನಾದ ಸಂಘಟನೆಗಳು ಹೇಗೆ ಚೀನಾ ಕಮ್ಯುನಿಸ್ಟ್ ಪಕ್ಷದ ಯುನೈಟೆಡ್ ವರ್ಕ್ ಫ್ರಂಟ್ ಡಿಪಾರ್ಟ್‌ಮೆಂಟ್ ಜೊತೆ ಸೇರಿ ಕೆಲಸ ಮಾಡುತ್ತವೆ ಎಂಬುದನ್ನೂ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಕೆಲವು ಸಂಘಟನೆಗಳನ್ನಂತೂ ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿ, ಚೀನೀ ಪೊಲೀಸರೊಡನೆ ಸಂಪರ್ಕ ಸಾಧಿಸಲು ಆರಂಭಿಸಲಾಗಿದೆ.ಚೀನಾದ ಇಂತಹ ವಿದೇಶೀ ಚಟುವಟಿಕೆಗಳು ಯುರೋಪ್, ಕೆನಡಾ ಮತ್ತು ಅಮೆರಿಕಾದ ಸುರಕ್ಷತಾ ಸಂಸ್ಥೆಗಳು ಮತ್ತು ಸರ್ಕಾರಗಳು ಗಾಬರಿಯಾಗುವಂತೆ ಮಾಡಿವೆ. ಎಫ್‌ಬಿಐ ನಿರ್ದೇಶಕರಾದ ಕ್ರಿಸ್ತೋಫರ್ ವ್ರೇ ಅವರು ಅಮೆರಿಕಾ ಈಗ ನ್ಯೂಯಾರ್ಕ್‌ ನಂತಹ ನಗರಗಳಲ್ಲಿ ಸ್ಥಾಪಿಸಲಾಗಿರುವ ಅನಧಿಕೃತ ಚೀನಾದ ಪೊಲೀಸ್ ಠಾಣೆಗಳ ಕುರಿತು ಆತಂಕಿತವಾಗಿದೆ ಎಂದಿದ್ದರು. ಇಂತಹ ಠಾಣೆಗಳು ಅಮೆರಿಕಾದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡಿ, ಅಮೆರಿಕಾದ ಕಾನೂನು ಜಾರಿ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ ಎಂಬ ಆತಂಕ ಉಂಟಾಗಿದೆ.ಚೀನಾದ ಇಂತಹ ರಹಸ್ಯ ಠಾಣೆಗಳ ಕುರಿತು ವಿಚಾರಣೆ ನಡೆಸಲು ಅಮೆರಿಕಾದೊಡನೆ ಕೆನಡಾ ಮತ್ತು ನೆದರ್‌ಲ್ಯಾಂಡ್ಸ್ ಸಹ ಮುಂದಾಗಿವೆ. “ನಾವು ಕೆನಡಾದಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗೆ ಆತಂಕ ಉಂಟುಮಾಡುವ ವಿಚಾರಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ಕೆನಡಾದಲ್ಲಿ ವಾಸವಾಗಿರುವ ವಿದೇಶೀ ಪ್ರಜೆಗಳಿಗೆ ಅಥವಾ ಸಮುದಾಯಗಳಿಗೆ ವಿದೇಶಗಳು ಹಾನಿ ಉಂಟುಮಾಡುವ ಸಾಧ್ಯತೆಗಳಿವೆ ಎಂಬುದು ನಮ್ಮ ಅರಿವಿಗೂ ಬಂದಿದೆ” ಎಂದು ರಾಯಲ್ ಕೆನೆಡಿಯನ್ ಮೌಂಟೆಡ್ ಪೊಲೀಸ್ ವಿಭಾಗ ಹೇಳಿಕೆ ನೀಡಿದೆ. “ಜನರಲ್ಲಿ ಗಾಬರಿ ಉಂಟುಮಾಡುವ ಮೂಲಕ ಅಥವಾ ಇನ್ನಾವುದೋ ವಿಧಾನವನ್ನು ಬಳಸಿ ಅವರು ಚೀನಾಗೆ ಮರಳುವಂತೆ ಮಾಡಲಾಗುತ್ತಿದೆ” ಎಂದು ವರ್ಲ್ಡ್ ಉಯ್ಘರ್ ಕಾಂಗ್ರೆಸ್ ಸಂಘಟನೆಯ ಸದಸ್ಯರಾಗಿರುವ, ಇಂಗ್ಲೆಂಡ್ ನಲ್ಲಿ ನೆಲೆಸಿರುವ ರಹೀಮ್ ಹೇಳಿಕೆ ನೀಡಿದ್ದಾರೆ.ಬೀಜಿಂಗ್ ತಾನು ಗುರಿಯಾಗಿಸುವ ಜನರ ಅಥವಾ ಅವರ ಕುಟುಂಬಸ್ತರ ವಿರುದ್ಧ ಅಕ್ರಮ, ಕಾನೂನು ವಿರೋಧಿ ಕ್ರಮಗಳನ್ನು ಕೈಗೊಳ್ಳುವ ಕುರಿತು ದೂರುಗಳು ಬಂದಿವೆ. ಇದು ಆರೋಪಿಗಳಿಗೆ ಕನಿಷ್ಠ ಹಕ್ಕುಗಳೂ ಇಲ್ಲವಾಗುವಂತೆ ಮಾಡುತ್ತವೆ. ಅದರೊಡನೆ ಚೀನಾದ ಇಂತಹ ವರ್ತನೆ ಅದು ರಾಜತಾಂತ್ರಿಕ ಸಂಬಂಧಗಳ ಮೂಲಕ ಇಂತಹ ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳನ್ನು ಎಷ್ಟು ತಿರಸ್ಕರಿಸುತ್ತದೆ ಎನ್ನುವುದೂ ಕಾಣುತ್ತದೆ.ಚೀನಾ ತನಗೆ ಅಗತ್ಯವಿರುವ, ವಿದ್ರೋಹ ನಡೆಸಿದಂತಹ ವ್ಯಕ್ತಿಗಳ ಗಡೀಪಾರಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಕೈಗೊಳ್ಳಲು ಅಥವಾ ನ್ಯಾಯಾಂಗ ಸಹಕಾರ ಹೊಂದಿರುವ ಇತರ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನ ನಡೆಸಿದರೂ, ಅದರ ಪ್ರಯತ್ನಗಳು ಚೀನಾದ ಕಮ್ಯುನಿಸ್ಟ್ ಪಕ್ಷದ ಉದ್ದೇಶಗಳನ್ನೇ ಜಾರಿಗೊಳಿಸುವ ಉದ್ದೇಶ ಹೊಂದಿರುತ್ತವೆ. ಇದರ ಪರಿಣಾಮವಾಗಿ ಚೀನಾದ ನಾಗರಿಕರಲ್ಲಿ ಇನ್ನಷ್ಟು ಭಯ ಉಂಟಾಗಿ, ಅಲ್ಲಿಂದ ಪಲಾಯನ ಮಾಡುವ ನಾಗರಿಕರ ಸಂಖ್ಯೆ ಇನ್ನಷ್ಟು ಹೆಚ್ಚಳ ಕಂಡಿದೆ. ಆದ್ದರಿಂದ ಚೀನಾ ಈಗ ಕಾನೂನುಬದ್ಧ ಅಂತಾರಾಷ್ಟ್ರೀಯ ಕ್ರಮಗಳನ್ನು ಉಪಯೋಗಿಸುವುದೇ ಅಪರೂಪವಾಗಿದೆ.ಸ್ಥಳೀಯ ಆಡಳಿತದೊಡನೆ ಸಹಕಾರ ನಡೆಸಿ, ಆ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸಿ ಕ್ರಮ ಕೈಗೊಳ್ಳುವ ಬದಲು ಚೀನಾ ತಾನು ಯಾರ ಕೈಗೂ ಸಿಗದಷ್ಟು ಎತ್ತರದಲ್ಲಿದ್ದೇನೆಂಬ ಭ್ರಮೆ ಹೊಂದಿದೆ. ಆದ್ದರಿಂದಲೇ ಅದು ಬೇರೆ ರಾಷ್ಟ್ರಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದೆ. ಚೀನಾ ವಿರುದ್ಧದ ವಿಚಾರಣೆಗಳು ಹೆಚ್ಚಾಗುತ್ತಿರುವ ಹಾಗೆ ಜಗತ್ತು ಈಗ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಅಪರಾಧಿಗಳಿಗಾಗಿ ಚೀನಾವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ ಎಂಬ ಆಶಾಭಾವನೆ ಹೊಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ್ ಗೆ ರೈತ ಸಂಘ ಬೆಂಬಲ...

Mon Jan 9 , 2023
ಗುಂಡ್ಲುಪೇಟೆ : 2023 ರ ಸಾರ್ವತ್ರಿಕ ಚುನಾವಣೆಗೆ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಕಡಬೂರು ಮಂಜುನಾಥ್ ಅವರಿಗೆ ತಾಲೂಕು ರೈತ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಜಿಲ್ಲಾ ರೈತ ಸಂಘ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ತಿಳಿಸಿದರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.15 ವರ್ಷಗಳಿಂದ ರೈತ ಸಂಘಟನೆಯಲ್ಲಿ ತೊಡಗಿಸಿಕೊಂಡು ಹೋರಾಟದ ಮೂಲಕ ಜನಪರ ಕೆಲಸಗಳನ್ನು ಮಾಡುತ್ತ ರೈತಪರ ಹೋರಾಟಗಾರ ಕಡಬೂರು ಮಂಜುನಾಥ್ ಅವರನ್ನ […]

Advertisement

Wordpress Social Share Plugin powered by Ultimatelysocial