ನಂಬಿದ ಭಕ್ತರ ಸಂಕಷ್ಟಹರ,

 

 

ಲೋಕೇಶ್ ಎಂ. ಐಹೊಳೆ ಜಗಳೂರು: ದಾವಣಗೆರೆ ಜಿಲ್ಲೆಯಲ್ಲೇ ಪ್ರಸಿದ್ಧವಾಗಿರುವ ತಾಲೂಕಿನ ಶ್ರೀ ಕ್ಷೇತ್ರ ಕೊಡದಗುಡ್ಡ ವೀರಭದ್ರೇಶ್ವರ ಸ್ವಾಮಿ ನಂಬಿ ಬಂದ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ದೈವ.ಕೊಡದಗುಡ್ಡ ಪ್ರದೇಶದ ತುತ್ತ ತುದಿಯಲ್ಲಿ ವೀರಭದ್ರಸ್ವಾಮಿ ನೆಲೆಸಿದ್ದು, ತನ್ನ ಬಳಿ ಬರುವ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿದ್ದು, ಈ ದೇವರನ್ನು ಕಣ್ತುಂಬಿಕೊಳ್ಳಬೇಕು ಎಂದರೆ 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಸಾಗಬೇಕು.ಅರ್ಧ ಬೆಟ್ಟವನ್ನು ಹತ್ತುತ್ತಿದ್ದ ಹಾಗೆಯೇ ಗಣಪತಿ ಹಾಗೂ ನವಗ್ರಹ ಗುಡಿಗಳ ದರ್ಶನ ಆಗುತ್ತವೆ. ಪ್ರಕೃತಿಯ ವಿಹಂಗಮ ನೋಟ ನೋಡುತ್ತ ದೇವರ ಸನ್ನಿಧಾನಕ್ಕೆ ತಲುಪಿದರೆ ಮನಸ್ಸು ಶಾಂತವಾಗುತ್ತದೆ.ಪಾಳೇಗಾರರು ನಿರ್ಮಿಸಿದ ದೇಗುಲ: ಅಂದಾಜು 800ರಿಂದ 1000 ವರ್ಷಗಳ ಪುರಾತನವಾದ ಈ ದೇಗುಲವನ್ನು ಹರಪನಹಳ್ಳಿ ಪಾಳೇಗಾರರು ನಿರ್ಮಿಸಿದ್ದರು ಎಂದು ಹೇಳಲಾಗುತ್ತಿದೆ. ದೇಗುಲವು ಗೋಪುರ, ಗರ್ಭಗುಡಿ ಮತ್ತು ಪ್ರಾಂಗಣವನ್ನು ಒಳಗೊಂಡಿದೆ. ಗರ್ಭಗುಡಿಯಲ್ಲಿ ಸುಮಾರು 8 ಅಡಿ ಎತ್ತರದ ವೀರಭದ್ರಸ್ವಾಮಿ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು.

ಈ ದೇಗುಲಕ್ಕೆ ಬರುವ ಭಕ್ತರು ಭಕ್ತಿಯಿಂದ ಬೇಡಿಕೊಂಡರೆ ಮನಸ್ಸಿನ ಕೋರಿಕೆಗಳೆಲ್ಲವು ಸಿದ್ಧಿಸುತ್ತವೆ ಎಂಬ ಪ್ರತೀತಿ ಇದೆ. ಅಂತೆಯೇ ಸಾಕಷ್ಟು ಮಂದಿ ದೃಷ್ಟಿದೋಷ, ವಾಮಾಚಾರ ಮತ್ತಿತರ ಸಮಸ್ಯೆಗಳಿಂದ ಪಾರಾಗಲು ದೇಗುಲಕ್ಕೆ ಬಂದು ತಾಯಿತ ಕಟ್ಟಿಸಿಕೊಂಡು ಹೋಗುತ್ತಾರೆ.ಈ ಕ್ಷೇತ್ರದಲ್ಲಿ ವೀರಭದ್ರಸ್ವಾಮಿ ಜತೆಗೆ ಅಮ್ಮನವರು ಹನುಮಂತ ದೇವರ ವಿಗ್ರಹಗಳನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಕೊಟ್ಟೂರಿನಲ್ಲಿ ನೆಲೆಸಿದ್ದ ವೀರಭದ್ರಸ್ವಾಮಿಯು ಈ ಕ್ಷೇತ್ರಕ್ಕೆ ಬಂದು ನೆಲೆಸಲು ಒಂದು ಹಿನ್ನೆಲೆಯೂ ಇದೆ.ಕಾರ್ತಿಕ ಮಾಸದಲ್ಲಿ ವೀರಭದ್ರಸ್ವಾಮಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಪ್ರತಿ ವರ್ಷ ಮಾರ್ಚ್‌ನಲ್ಲಿ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ.ನಿತ್ಯ ಈ ದೇವನ ಪೂಜೆ ನೆರವೇರುತ್ತದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೂ ದರ್ಶನಾವಕಾಶವಿರುತ್ತದೆ. ಬರುವ ಭಕ್ತರು ಅಭಿಷೇಕ ಸೇವೆ, ಅಲಂಕಾರ ಸೇವೆ, ಪಂಚಾಮೃತ ಸೇವೆ ಇನ್ನು ಮುಂತಾದ ಸೇವೆಗಳನ್ನು ಮಾಡಿಸಬಹುದಾಗಿದೆ.

ಐತಿಹಾಸಿಕ ಹಿನ್ನೆಲೆ: ಒಂದು ಬಾರಿ ಪಂಚಗಣಾಧೀಶರಲ್ಲೊಬ್ಬರಾದ ಕೊಟ್ಟೂರೇಶ್ವರ ಸ್ವಾಮಿ ಊರೂರು ತಿರುಗುತ್ತ ಕೊಟ್ಟೂರಿಗೆ ಬಂದಾಗ ರಾತ್ರಿ ಆಗಿದ್ದರಿಂದ ಅದೇ ಊರಿನಲ್ಲಿ ನೆಲೆಸಿದ ವೀರಭದ್ರಸ್ವಾಮಿ ಬಳಿ ಸ್ವಲ್ಪ ಜಾಗ ಕೇಳಿದಾಗ ವೀರಭದ್ರಸ್ವಾಮಿ ಒಪ್ಪಿಗೆ ಕೊಟ್ಟರು. ಮರುದಿನ ಬೆಳಗಾವುದರೊಳಗೆ ಕೊಟ್ಟೂರೇಶ್ವರ ಎಲ್ಲ ಜಾಗ ಆವರಿಸಿಕೊಂಡು ವೀರಭದ್ರಸ್ವಾಮಿಗೆ ಜಾಗವಿಲ್ಲದಂತೆ ಮಾಡಿದ್ದರು. ಇದನ್ನು ಪ್ರಶ್ನಿಸಿದ ವೀರಭದ್ರಸ್ವಾಮಿಗೆ ಕೊಟ್ಟೂರೇಶ್ವರ ಇದರಲ್ಲಿ ನನ್ನ ಪಾತ್ರ ಏನಿಲ್ಲ. ಎಲ್ಲ ಶಿವನ ಇಚ್ಛೆ, ಇನ್ನು ಮುಂದೆ ನೀನು ಕೊಡದಗುಡ್ಡದಲ್ಲಿ ನೆಲೆಸಿ ಸಕಲವನ್ನು ಅನುಗ್ರಹಿಸು ಎಂದು ಹೇಳಿದ್ದರಿಂದ ವೀರಭದ್ರಸ್ವಾಮಿ ಕೊಡದಗುಡ್ಡಕ್ಕೆ ಬಂದು ನೆಲೆಸಿದನು ಎಂದು ಇಲ್ಲಿನ ಸ್ಥಳ ಪುರಾಣಗಳು ತಿಳಿಸುತ್ತವೆ.ದೇಗುಲಕ್ಕೆ ಮಾರ್ಗ: ಈ ಪುಣ್ಯ ಕ್ಷೇತ್ರ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕೊಡದಗುಡ್ಡದ ಸ್ಥಳದಲ್ಲಿದೆ. ಈ ದೇಗುಲವು ದಾವಣಗೆರೆಯಿಂದ 42 ಕಿ.ಮೀ, ಜಗಳೂರಿನಿಂದ 15 ಕಿ.ಮೀ. ಬೆಂಗಳೂರಿನಿಂದ 256 ಕಿ.ಮೀ ಚಿತ್ರದುರ್ಗದಿಂದ 56 ಕಿ.ಮೀ ದೂರದಲ್ಲಿದೆ.

ಗುಡ್ಡ ಏರುವುದೇ ರೋಮಾಂಚನಗುಡ್ಡದ ಮೇಲ್ಭಾಗದಲ್ಲಿ ನೆಲೆಸಿರುವ ಸ್ವಾಮಿಯ ದೇವಸ್ಥಾನ ಕೆಳಭಾಗದಿಂದ ಸುಮಾರು 2 ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ಗುಡ್ಡ ಏರಲು ತೇರಿನ ಆವರಣದಿಂದ ಕಾಳಿಕಾದೇವಿ ಗುಡಿ ಮಾರ್ಗವಾಗಿ ಹತ್ತಿದರೆ 307 ಮೆಟ್ಟಿಲುಗಳು, ಗ್ರಾಮದ ಮೂಲಕ 225 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ.
ಗುಡ್ಡದ ಮೇಲಿಂದ ನಿಂತು ಕೆಳಭಾಗದ ಕೆರೆ, ಕೆಂಪು ಹಂಚಿನ ಮನೆಗಳನ್ನು ನೋಡುವುದೇ ಒಂದು ಸೊಬಗು. ಕಲ್ಲಿನಿಂದ ಕೆತ್ತಲಾಗಿರುವ 6ಅಡಿ ಎತ್ತರದ ಶ್ರೀ ವೀರಭದ್ರಸ್ವಾಮಿಯ ಏಕಶಿಲೆ ಇದೆ. ವೀರಭದ್ರ ಸ್ವಾಮಿ ವಿಗ್ರಹದ ಎದುರು ಬಸವಣ್ಣನ ಗುಡಿ ಇದೆ. ಗುಡ್ಡದ ಮೇಲಿನ ಗೋಪುರವನ್ನು ನೋಡುವುದೇ ರಮಣೀಯ. ಗುಡ್ಡದ ಮಾರ್ಗಮಧ್ಯೆ ತಾಯಿ ಕಾಳಿಕಾದೇವಿ ದೇವಸ್ಥಾನವೂ ನೆಲೆಯೂರಿದ್ದು, ಭಕ್ತರು ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಕಾಳಿಕಾದೇವಿಗೂ ಆರಾಧನೆ ಮಾಡುತ್ತಾರೆ.

ಎಂಟರಂದು ಜಾತ್ರೆಸ್ವಾಮಿಯ ಮಹಾ ರಥೋತ್ಸವ ಮಾರ್ಚ್ 8ರಂದು ನಡೆಯಲಿದ್ದು, ಜಿಲ್ಲೆ ಸೇರಿ ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತಿತರ ಕಡೆಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಕೆಲವರು ಪಾದಯಾತ್ರೆ ಮೂಲಕ ಗುಡ್ಡಕ್ಕೆ ಆಗಮಿಸಿದರೆ ಟ್ರಾೃಕ್ಟರ್, ಆಪೇ ಆಟೋ, ಎತ್ತಿನ ಬಂಡಿ, ದ್ವಿಚಕ್ರ ವಾಹನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ಜಾತ್ರೆ ವೈಭವ ಕಣ್ತುಂಬಿಕೊಳ್ಳುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಲಾ ರಾಶಿ ಭವಿಷ್ಯ.

Fri Mar 3 , 2023
  ನಿಮ್ಮ ಅನಿರೀಕ್ಷಿತ ಸ್ವಭಾವ ನಿಮ್ಮ ವೈವಾಹಿಕ ಸಂಬಂಧವನ್ನು ಹಾಳು ಮಾಡಲು ಬಿಡಬೇಡಿ. ಇದನ್ನು ತಡೆಯುವುದನ್ನು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದಲ್ಲಿ ನೀವು ನಂತರ ವಿಷಾದಪಡಬಹುದು. ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ಒಟ್ಟಾರೆ ಒಂದು ಲಾಭದಾಯಕ ದಿನವಾದರೂ ನೀವು ನಿರಾಸೆ ಭರವಸೆಯಿಡಬಹುದಾದ ಯಾರಾದರೂ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ನಿಮ್ಮ ಪ್ರಿಯತಮೆಯ ಜೊತೆ ತಿಳುವಳಿಕೆ. ವೃತ್ತಿಯಲ್ಲಿನ ನಿಮ್ಮ ಕೌಶಲ್ಯದ ಪರೀಕ್ಷೆ ನಡೆಯಲಿದೆ. ನೀವು ಬಯಸಿದ ಫಲಿತಾಂಶ ನೀಡಲು ನಿಮ್ಮ ಪ್ರಯತ್ನಗಳ ಮೇಲೆ […]

Advertisement

Wordpress Social Share Plugin powered by Ultimatelysocial