ಹಿಮಾಚಲ ಪ್ರದೇಶದ ಒಂದು ಕಿರಿದಾದ ರಸ್ತೆ ಈಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ರಸ್ತೆ ಹಾದು ಹೋಗುವ ಮಾರ್ಗ ವರ್ಣನಾತೀತ ಪ್ರಾಕೃತಿಕ ಸೊಬಗನ್ನು ಮೈದಳೆದು ನಿಂತಂತಿದೆ. ಆದರೆ ಆ ರಸ್ತೆಯಲ್ಲಿ ಸಾಗಬೇಕೆಂದರೆ ಹೃದಯ ಗಟ್ಟಿ ಇರಲೇಬೇಕು. ಏಕೆ ಗೊತ್ತಾ.. ವಾಹನದಿಂದ ಕೈಗೆ ತಾಗುವಷ್ಟು ಸಮೀಪದಲ್ಲಿ ಬಂಡೆ ರಾಶಿ ಒಂದು ಬದಿಯಾದರೆ, ಇನ್ನೊಂದು ಬದಿಯಲ್ಲಿ ಆಳದ ಪ್ರಪಾತ. ಎದುರಿಗೆ ಇನ್ನೊಂದು ವಾಹನ ಬಾರದಷ್ಟು ಸಹ ಕಿರಿದಾದ ರಸ್ತೆ. ಇದರ ನಡುವೆ ಜಲಪಾತದ ಭೋರ್ಗರೆತ. ಭಾರತೀಯ ಕಂದಾಯ ಸೇವೆ ಅಧಿಕಾರಿ ಅಂಕುರ್ ರಾಪ್ರಿಯಾ ಟ್ವಿಟರ್ ನಲ್ಲಿ ಈ ರಸ್ತೆ ಸಂಚಾರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 58 ಸೆಕೆಂಡುಗಳ ವಿಡಿಯೋ ಕ್ಲಿಪ್ಪಿಂಗ್ ಜೊತೆಗೆ ಕಷ್ಟಕರವಾದ ರಸ್ತೆಗಳು ಸುಂದರವಾದ ಸ್ಥಳಗಳಿಗೆ ಕಾರಣವಾಗುತ್ತವೆ ಎಂಬ ಶೀರ್ಷಿಕೆಯನ್ನೂ ಅವರು ನೀಡಿದ್ದಾರೆ. ಹಿಮಾಚಲ ಪ್ರದೇಶ ಚಂಬಾ ಜಿಲ್ಲೆಯ ಸಾಚ್ ಪಾಸ್ ಬಳಿ ಪರ್ವತದ ಒಂದು ತುದಿಯಲ್ಲಿ ಈ ರಸ್ತೆ ಸಾಗುತ್ತದೆ. ಕಾರಿನ ಒಳಗಿನಿಂದಲೇ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಹಿಮದಿಂದ ಆವೃತವಾದ ಕಣಿವೆಯ ವಿಶಾಲ ನೋಟವನ್ನು ಒದಗಿಸುವ ಈ ವಿಡಿಯೋ ರಸ್ತೆಯಲ್ಲಿ ಹಾದು ಹೋಗುವವರನ್ನು ತೋರಿಸುವ ಜೊತೆಗೆ ಜಲಪಾತದ ರಮಣೀಯ ದೃಶ್ಯವನ್ನು ಕಟ್ಟಿಕೊಡುತ್ತದೆ. ಈ ವಿಡಿಯೋಗೆ ನೂರಾರು ಮಂದಿ ಕಾಮೆಂಟ್ ಮಾಡಿದ್ದು, ಭಯಾನಕ ಎಂದು ಬಣ್ಣಿಸಿದ್ದಾರೆ.
ವರ್ಣನಾತೀತ ಪ್ರಾಕೃತಿಕ ಸೊಬಗ ಮೈದಳೆದು ನಿಂತಂತಿದೆ

Please follow and like us: