ಸರ್ಕಾರಿ ನೌಕರರು ಮುಷ್ಕರ ಮಾಡಬಹುದೇ?

7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 1ರ ಬುಧವಾರದಿಂದ ಉದ್ಯೋಗಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿಕರ್ನಾಟಕದ ಸರ್ಕಾರಿ ನೌಕರರು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಷ್ಕರ ನಡೆಸದಂತೆ ಮಾಡಿದ ಮನವಿಗೆ ಸಹ ಸರ್ಕಾರಿ ನೌಕರರು ಸ್ಪಂದಿಸಿಲ್ಲ. ಮುಷ್ಕರದಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ನಡೆಯದೇ ಜನರು ಪರದಾಟ ನಡೆಸಬೇಕಾಗಬಹುದು.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್‌. ಷಡಾಕ್ಷರಿ, “ರಾಜ್ಯ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ಕರೆಯನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ” ಎಂದು ಹೇಳಿದ್ದಾರೆ. ಮುಷ್ಕರದ ಹಿನ್ನಲೆಯಲ್ಲಿ ವಿವಿಧ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕೆಲವು ಇಲಾಖೆಗಳ ನೌಕರರು ಮುಷ್ಕರಕ್ಕೆ ನೈತಿಕ ಬೆಂಬಲ ನೀಡಿದ್ದಾರೆ. ಸರ್ಕಾರಿ ನೌಕರರು ಮುಷ್ಕರ ನಡೆಸಬಹುದೇ?, ಮುಷ್ಕರ ತಡೆಯಲು ಸರ್ಕಾರ ಎಸ್ಮಾ ಕಾಯ್ದೆ ಜಾರಿಗೊಳಿಸಲು ಅವಕಾಶವಿದೆಯೇ? ಇಂತಹ ಹಲವು ಪ್ರಶ್ನೆಗಳಿವೆ.

ಕರ್ನಾಟಕದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರಲ್ಲಿ ಸರ್ಕಾರಿ ನೌಕರರ ಕರ್ತವ್ಯ, ಜವ್ದಾರಿಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ನೀಡಿದೆ. ಇದರಲ್ಲಿಯೇ ಸರ್ಕಾರಿ ನೌಕರರು ಮುಷ್ಕರ ನಡೆಸಬಹುದೇ ಎಂದು ಸಹ ವಿವರಣೆ ನೀಡಲಾಗಿದೆ. ಬುಧವಾರದಿಂದ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಈ ಬಗ್ಗೆ ಮಾಹಿತಿ ತಿಳಿಯೋಣ.

ಬಹಿರಂಗ ಸಭೆ ಮತ್ತು ಮುಷ್ಕರಗಳು: ಯಾರೇ ಸರ್ಕಾರಿ ನೌಕರನು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯ, ದೇಶದ ಭದ್ರತೆಯ, ವಿದೇಶಿ ರಾಷ್ಟ್ರಗಳೊಂದಿಗಿನ ಸ್ನೇಹಯುತ ಸಂಬಂಧದ ಹಿತದೃಷ್ಟಿಗೆ, ಸಾರ್ವಜನಿಕ ಸುವ್ಯವಸ್ಥೆಗೆ, ಸಭ್ಯತೆಗೆ ಅಥವಾ ನೈತಿಕತೆಗೆ ಧಕ್ಕೆಯುಂಟು ಮಾಡುವ ಅಥವಾ ನ್ಯಾಯಾಲಯ ನಿಂದನೆಗೆ, ಮಾನಹಾನಿಗೆ ಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವುದನ್ನು ಒಳಗೊಂಡಿರುವ ಯಾವುದೇ ಪ್ರದರ್ಶನದಲ್ಲಿ ತನ್ನನ್ನು ತೊಡಗಿಸಿಕೊಳ್ಳತಕ್ಕದ್ದಲ್ಲ ಅಥವಾ ಭಾಗವಹಿಸತಕ್ಕದ್ದಲ್ಲ.

ಎಷ್ಟೇ ಸಂಖ್ಯೆಯ ಸರ್ಕಾರಿ ನೌಕರರೂಡನೆ ಸೇರಿ ಯಾವುದೇ ಬಗೆಯ ಮುಷ್ಕರದಲ್ಲಿ ತೊಡಗತಕ್ಕದ್ದಲ್ಲ ಅಥವಾ ಯಾವುದೇ ರೀತಿಯಲ್ಲಿ ಅದಕ್ಕೆ ಪ್ರೇರೇಪಣೆ ಮಾಡತಕ್ಕದ್ದಲ್ಲ. ಪ್ರಚೋದನೆ ಮಾಡತಕ್ಕದ್ದಲ್ಲ ಅಥವಾ ಪ್ರೇರಣೆ ಮಾಡತಕ್ಕದ್ದಲ್ಲ.

ಈ ನಿಯಮದ ಉದ್ದೇಶಗಳಿಗಾಗಿ ‘ಮುಷ್ಕರ’ ಎಂದರೆ (ಕರ್ತವ್ಯದಿಂದ ಅನಧಿಕೃತ ಗೈರುಹಾಜರಾಗುವುದೂ ಸೇರಿದಂತೆ) ಸರ್ಕಾರಿ ನೌಕರರ ಒಂದು ಗುಂಪು ಒಟ್ಟಾಗಿ ಸೇರಿಕೊಂಡು ಕೆಲಸ ಮಾಡುವುದನ್ನು ನಿಲ್ಲಿಸುವುದು ಅಥವಾ ನಿಧಾನಗತಿಯಲ್ಲಿ ಕೆಲಸ ಮಾಡುವುದು ಅಥವಾ ಎಷ್ಟೇ ಸಂಖ್ಯೆಯ ಸರ್ಕಾರಿ ನೌಕರರು ಒಟ್ಟಾಗಿ ಸೇರಿ ಅಥವಾ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಕೆಲಸ ಮಾಡಲು ನಿರಾಕರಿಸುವುದು ಎಂದು ಅರ್ಥವಾಗಿದೆ.

ರಾಜ್ಯ ಅಥವಾ ಕೇಂದ್ರ ಸರ್ಕಾರದ ಕಾರ್ಯನೀತಿ ಟೀಕೆ; ಕರ್ನಾಟಕ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಕಾರ್ಯನೀತಿ ಅಥವಾ ಕ್ರಮವನ್ನು ಟೀಕಿಸುವುದನ್ನು ಸಹ ಮಾಡುವಂತಿಲ್ಲ. ಯಾರೇ ಸರ್ಕಾರಿ ನೌಕರನು, ಆಕಾಶವಾಣಿ ಪ್ರಸಾರದಲ್ಲಾಗಲಿ ಅಥವಾ ದೂರದರ್ಶನದ ಕಾರ್ಯಕ್ರಮದಲ್ಲಾಗಲಿ ಅಥವಾ ಯಾವುದೇ ಸಾರ್ವಜನಿಕ ಮಾಧ್ಯಮದಲ್ಲಿ ವಾಸ್ತವ ಹೇಳಿಕೆ ಅಥವಾ ಅಭಿಪ್ರಾಯ ನೀಡುವುದಾಗಲಿ ಅವನ ಹೆಸರಿನಲ್ಲಿ ಅಥವಾ ಅನಾಮಧೇಯವಾಗಿ, ಗುಪ್ತನಾಮದಲ್ಲಿ ಅಥವಾ ಬೇರೊಬ್ಬನ ಹೆಸರಿನಲ್ಲಿ ಪ್ರಕಟಿಸಲಾದ ಇತರ ಯಾವುದ ದಸ್ತಾವೇಜಿನಲ್ಲಿ ಅಥವಾ ಪತ್ರಿಕೆಗೆ ಬರೆದ ಯಾವುದೇ ಪತ್ರದಲ್ಲಿ ಅಥವಾ ಯಾವುದೇ ಸಾರ್ವಜನಿಕ ಹೇಳಿಕೆಯಲ್ಲಿ ಟೀಕೆ ಮಾಡುವಂತಿಲ್ಲ.

ಕರ್ನಾಟಕ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಪ್ರಸ್ತುತ ಅಥವಾ ಇತ್ತೀಚಿನ ಯಾವುದೇ ನೀತಿಯ ಅಥವಾ ಕ್ರಮದ ಬಗ್ಗೆ ಪ್ರತಿಕೂಲ ಟೀಕೆಯ ಪರಿಣಾಮ ಹೊಂದಿರುವಂಥ ಯಾವುದೇ ಸಂಗತಿಗಳ ನಿರೂಪಣೆಯನ್ನು ಮಾಡತಕ್ಕದ್ದಲ್ಲ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸತಕ್ಕದ್ದಲ್ಲ ಎಂದು ನಿಯಮ ಹೇಳುತ್ತದೆ. ಈ ಖಂಡದಲ್ಲಿ ಒಳಗೊಂಡಿರುವುದು ಯಾವುದೂ, ಸರ್ಕಾರಿ ನೌಕರನು, ಸರ್ಕಾರಿ ನೌಕರರ ಮಾನ್ಯತೆ ಪಡೆದ ಸಂಘದ ಅಥವಾ ಸಂಘದ ಪದಾಧಿಕಾರಿಯಾಗಿ ಅಂಥ ಸರ್ಕಾರಿ ನೌಕರರ ಸೇವಾ ಸ್ಥಿತಿಗತಿ ರಕ್ಷಿಸುವ ಅಥವಾ ಅವುಗಳಲ್ಲಿ ಸುಧಾರಣೆಯನ್ನು ಸುನಿಶ್ಚಿತಗೊಳಿಸುವ ಉದ್ದೇಶಗಳಿಗಾಗಿ ವ್ಯಕ್ತಪಡಿಸಿದ ಪ್ರಾಮಾಣಿಕ ಅಭಿಪ್ರಾಯಗಳಿಗೆ ಅನ್ವಯಿಸತಕ್ಕದ್ದಲ್ಲ.

ಕರ್ನಾಟಕ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಅಥವ ಇತರ ಯಾವುದೇ ರಾಜ್ಯ ಸರ್ಕಾರದ ಅಥವ ಕೇಂದ್ರ ಸರ್ಕಾರದ ಮತ್ತು ಯಾವುದೇ ವಿದೇಶಿ ಸರ್ಕಾರದ ನಡುವಿನ ಸಂಬಂಧಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂಥ ಯಾವುದೇ ಸಂಗತಿಗಳ ನಿರೂಪಣೆಯನ್ನು ಮಾಡತಕ್ಕದ್ದಲ್ಲ ಅಥವ ಅಭಿಪ್ರಾಯವನ್ನು ವ್ಯಕ್ತಪಡಿತಕ್ಕದ್ದಲ್ಲ. ಈ ನಿಯಮದಲ್ಲಿರುವುದು ಯಾವುದೂ ಸರ್ಕಾರಿ ನೌಕರನು ತನ್ನ ಪದೀಯ ಸಾಮರ್ಥ್ಯದಲ್ಲಿ ಅಥವ ತನಗೆ ವಹಿಸಲಾಗಿರುವ ಕರ್ತವ್ಯವನ್ನು ವಿದ್ಯುಕ್ತವಾಗಿ ನಿರ್ವಹಿಸುವಾಗ ನೀಡಿದ ಯಾವುದೇ ಹೇಳಿಕೆಗೆ ಅಥವ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಅನ್ವಯವಾಗತಕ್ಕದ್ದಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡದ 'ಸೌತ್​ ಇಂಡಿಯನ್​ ಹೀರೋ' ಚಿತ್ರ ನೋಡಲು ಕೇರಳದಿಂದ ಬೆಂಗಳೂರಿಗೆ ಬಂದ ಪ್ರೇಕ್ಷಕರು,

Wed Mar 1 , 2023
  ಹೊಸ ನಟ ಸಾರ್ಥಕ್​ ಅಭಿನಯದ ‘ಸೌತ್​ ಇಂಡಿಯನ್​ ಹೀರೋ’ ಚಿತ್ರಕ್ಕೆ ನರೇಶ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಕನ್ನಡದ ಈ ಚಿತ್ರಕ್ಕೆ ಪರಭಾಷೆಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ನಟ ಸಾರ್ಥಕ್​ (Saarthak) ಅವರು ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರ ನೋಡಲು ಹೊರ ರಾಜ್ಯಗಳ ಪ್ರೇಕ್ಷಕರು ಬೆಂಗಳೂರಿಗೆ ಬಂದಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಿಂದ ಬಂದಿರುವ ಅಭಿಮಾನಿಗಳು ಬೆಂಗಳೂರಿನಲ್ಲಿ ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಪರ […]

Advertisement

Wordpress Social Share Plugin powered by Ultimatelysocial