ಹೆಚ್ಚುತ್ತಿದೆ ಬೇಸಿಗೆಯ ಧಗೆ; ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು, ಫೆಬ್ರವರಿ 27;ಆರಂಭದಲ್ಲೇ ಜನರು ಬಿಸಿಲಿಗೆ ಕಂಗೆಟ್ಟಿದ್ದಾರೆ. ಮಾರ್ಚ್ 3ನೇ ವಾರದಲ್ಲಿ ದೇಶಾದ್ಯಂತ ಉಷ್ಣಾಂಶದಲ್ಲಿ ಮತ್ತಷ್ಟು ಏರಿಕೆ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಅಂದಾಜಿಸಿದ್ದಾರೆ.

ಈ ನಡುವೆ ಬೇಸಿಗೆಯ ಧಗೆ ಕಡಿಮೆ ಮಾಡುವ ಸುದ್ದಿಯೊಂದಿದೆ. ಹೌದು ದೇಶದ ಕೆಲವು ರಾಜ್ಯಗಳಲ್ಲಿ ಮಾರ್ಚ್ 2ರ ತನಕ ಮಳೆಯಾಗುವ ನಿರೀಕ್ಷೆ ಇದೆ.

ಫೆಬ್ರವರಿ ಅಂತ್ಯದಲ್ಲಿಯೇ ದೇಶದ ವಿವಿಧ ರಾಜ್ಯಗಳಲ್ಲಿ ಬಿಸಿಲು ಹೆಚ್ಚಾಗಿದೆ. ತಾಪಮಾನದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸರಾಸರಿಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಆದ್ದರಿಂದ ಫೆಬ್ರವರಿ 28 ರಿಂದ ಮಾರ್ಚ್ 2ರ ತನಕ ದೇಶದ ಕೆಲವು ರಾಜ್ಯಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲೂ ತಾಪಮಾನ ಜಾಸ್ತಿಯಾಗಿದೆ. ಆದರೆ ಮಳೆ ಜೋರಾಗಿ ಸುರಿಯುವ ಸಾಧ್ಯತೆ ಕಡಿಮೆ ಇದೆ.

ಕರ್ನಾಟಕದಲ್ಲಿಯೂ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಏರಿಕೆ ಕಂಡುಬಂದಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಮಾರ್ಚ್ ಬಳಿಕ ಬಿಸಿಲಿನ ತಾಪ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಫೆಬ್ರವರಿ 20ರ ಬಳಿಕ ಬಿಸಿಲಿನ ಝಳಕ್ಕೆ ಜನರು ಬಸವಳಿದು ಹೋಗಿದ್ದಾರೆ. ಮಾರ್ಚ್‌, ಏಪ್ರಿಲ್, ಮೇ ತಿಂಗಳ ಬಿಸಿಲು ಸಹಿಸುವುದು ಹೇಗೆ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಸೋಮವಾರ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕನಿಷ್ಠ ತಾಪಮಾನ 13 ಡಿಗ್ರಿ ಇರಬಹುದು ಎಂದು ಅಂದಾಜಿಸಲಾಗಿದೆ. ಉಳಿದಂತೆ ಹುಬ್ಬಳ್ಳಿ, ಹಾವೇರಿ, ಕಲಬುರಗಿ ಮತ್ತು ಬಾಗಕೋಟೆಯಲ್ಲಿ ಗರಿಷ್ಠ 36 ಡಿಗ್ರಿ, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಹವಾಮಾನ ಇಲಾಖೆ ಮಾಹಿತಿಯಂತೆ ಕರ್ನಾಟಕದಲ್ಲಿ ಮಳೆಯಾಗುವುದಿಲ್ಲ. ಜನರು ಬಿಸಿಲ ಧಗೆ ಸಹಿಸಿಕೊಳ್ಳಲೇಬೇಕಾಗಿದೆ.

ಯಾವ-ಯಾವ ರಾಜ್ಯದಲ್ಲಿ ಮಳೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಫೆಬ್ರವರಿ 28ರಿಂದ ಮಾರ್ಚ್ 2ರ ತನಕ ಹಿಮಾಲಯ ಪ್ರದೇಶಗಳು, ವಾಯುವ್ಯ ಭಾಗದ ರಾಜ್ಯಗಳಲ್ಲಿ ಮಳೆಯಾಗಲಿದೆ. ಹಿಮಾಚಲ ಪ್ರದೇಶ, ಚಂಡೀಗಢ್, ಹರ್ಯಾಣದಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ. ಇದರಿಂದಾಗಿ ಉಷ್ಣಾಂಶದಲ್ಲಿಯೂ ಸಹ ಕೆಲವು ಏರುಪೇರು ಉಂಟಾಗಲಿದೆ.

ಈಗಾಗಲೇ ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ರಾಜ್ಯಗಳಲ್ಲಿ ಲಘುವಾಗಿ ಮಳೆಯಾಗಿದೆ. ಪಂಜಾಬ್, ಹರ್ಯಾಣ, ಚಂಡೀಗಢದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 1ರ ತನಕ 30 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಸಹ ಮುನ್ಸೂಚನೆ ನೀಡಲಾಗಿದೆ.

ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ವಾಯುವ್ಯ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ಗರಿಷ್ಠ ತಾಪಮಾನವು ಸರಾಸರಿಗಿಂತ 3 ರಿಂದ 5ರಷ್ಟು ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್‌ನ ಕೆಲವು ಭಾಗದಲ್ಲಿ ಉಷ್ಣಾಂಶ 35 ರಿಂದ 37 ಡಿಗ್ರಿ ತನಕ ಇರಲಿದೆ. ಉತ್ತರ ಪ್ರದೇಶ, ದೆಹಲಿಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಇರುವಷ್ಟು ಬಿಸಿಲು ಈಗಿದೆ.

ಬೇಸಿಗೆ ಆರಂಭ ಕರ್ನಾಟಕದಲ್ಲಿ ಮಾರ್ಚ್ 1ರ ಬದಲಿಗೆ ಫೆಬ್ರವರಿ 24ರಿಂದಲೇ ಬೇಸಿಗೆ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ದಿನಗಳಲ್ಲಿ ಬೇಸಿಗೆಯ ಧಗೆ ಇದ್ದರೂ ಮುಂಜಾನೆ ಸಮಯದಲ್ಲಿ ಶುಷ್ಕ ವಾತಾವರಣ ಇರಲಿದೆ. ಬೆಂಗಳೂರು ನಗರದಲ್ಲಿ ವಾಡಿಕೆಯಂತೆ ಫೆಬ್ರವರಿ ತಿಂಗಳಿನಲ್ಲಿ 7 ಮಿ. ಮೀ. ಮಳೆಯಾಗಬೇಕಿತ್ತು. ಆದರೆ, ಈ ವರ್ಷ ಮಳೆಯಾಗಿಲ್ಲ. ಮೋಡದ ಸಂಚಾರವೂ ಇಲ್ಲದ ಕಾರಣ ಈಗ ಮಳೆಯಾಗುವ ಸಾಧ್ಯತೆ ಇಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ಕಾಡುತ್ತೆ ಈ ಸಮಸ್ಯೆ..!

Mon Feb 27 , 2023
ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ರೋಗ ಆಹ್ವಾನಿಸಿದಂತೆ ಅಂತಾ ಹಿರಿಯರು ಹೇಳ್ತಾರೆ. ಈಗಿನ ಜನರು ಅದನ್ನು ನಿರ್ಲಕ್ಷಿಸಿಯಾಗಿದೆ. ಹಿತವೆನಿಸುವ ಕಾರಣ ಸಾಮಾನ್ಯವಾಗಿ ಎಲ್ಲರೂ ಈ ಭಂಗಿಯಲ್ಲಿ ಕುಳಿತುಕೊಳ್ಳಲು ಇಷ್ಟ ಪಡ್ತಾರೆ. ಆದ್ರೆ ಹಿರಿಯರು ಹೇಳುವುದಕ್ಕೂ ಒಂದು ವೈಜ್ಞಾನಿಕ ಕಾರಣವಿದೆ. ಅಧ್ಯಯನವೊಂದು ಕೂಡ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬೇಡಿ ಎಂದಿದೆ. ಪುರುಷರು ಈ ರೀತಿ ಕುಳಿತುಕೊಳ್ಳುವುದು ಕಡಿಮೆ. ಮಹಿಳೆಯರು ಇದೇ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಅದು ಅವರಿಗೆ ಕಂಫರ್ಟ್ ಎನ್ನಿಸುತ್ತದೆ. […]

Advertisement

Wordpress Social Share Plugin powered by Ultimatelysocial