ಎಸ್.ಕೆ. ರಾಮಚಂದ್ರರಾವ್, ನಮ್ಮ ಜೀವಿತ ಕಾಲದಲ್ಲಿ ಇಂತಹ ಅಪ್ರತಿಮ ವಿದ್ವಾಂಸರಿದ್ದರು ಎಂದರೆ ಅಚ್ಚರಿಹುಟ್ಟಿಸುವಷ್ಟು ಶ್ರೇಷ್ಠರಾದವರು

ಎಸ್.ಕೆ. ರಾಮಚಂದ್ರರಾವ್ 1925ರ ಸೆಪ್ಟೆಂಬರ್ 4ರಂದು ಹಾಸನದಲ್ಲಿ ಜನಿಸಿದರು. ಅವರ ತಂದೆ ಶ್ರೀ ಕೃಷ್ಣ ನಾರಾಯಣರಾವ್ ಕಾವೇರಿ ನದಿ ತೀರದ ಹನಸೊಗೆ ಗ್ರಾಮಕ್ಕೆ ಸೇರಿದವರು. ಅಲ್ಲಿನ ಮುಖ್ಯಪ್ರಾಣ ದೇಗುಲವು ಅವರ ಮನೆತನಕ್ಕೆ ಸೇರಿದುದಾಗಿತ್ತು. ಅವರ ತಾಯಿ ಕಮಲಾಬಾಯಿ ಅಂದಿನ ಮೈಸೂರು ಸಂಸ್ಥಾನದ ಸಾರ್ವಜನಿಕ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಶ್ರೀ ಕೆ. ನಾರಾಯಣರಾವ್ ಅವರ ಪುತ್ರಿ. ಬೆಂಗಳೂರಿನಲ್ಲಿದ್ದ ಈ ತಾತನ ಮನೆಯಲ್ಲಿಯೇ ರಾಮಚಂದ್ರರಾವ್ ಅವರ ಪ್ರಾರಂಭಿಕ ವಿದ್ಯಾಭ್ಯಾಸ ನೆರವೇರಿತು.
ರಾಮಚಂದ್ರರಾಯರ ತಾತನವರಾದ ನಾರಾಯಣರಾವ್ ನಿವೃತ್ತರಾದ ನಂತರದಲ್ಲಿ ಉತ್ತರಾದಿ ಮಠದ ಶ್ರೀ ಅಗ್ನಿಹೋತ್ರಿ ಯಜ್ಞವಿಠ್ಠಲಾಚಾರ್ಯರಿಂದ ಸಂಸ್ಕೃತ ಅಭ್ಯಾಸ ಮಾಡತೊಡಗಿದರು. ಇದನ್ನು ಆಸಕ್ತಿಯಿಂದ ಕೇಳುತ್ತಿದ್ದ ಬಾಲಕ ರಾಮಚಂದ್ರ ಸಹಾ ಸಂಸ್ಕೃತದ ಜ್ಞಾನವನ್ನು ಸುಲಭವಾಗಿ ರೂಢಿಗೊಳಿಸಿಕೊಂಡರು. ತಮ್ಮ ತಾತನವರು ನಿಧನರಾದ ಕಾರಣ ಹನ್ನೆರಡು ವಯಸ್ಸಿನ ಬಾಲಕ ರಾಮಚಂದ್ರರಾವ್ ತಮ್ಮ ತಂದೆ ತಾಯಿಯರಿದ್ದ ನಂಜನಗೂಡಿಗೆ ಬಂದು ಅಲ್ಲಿಯ ಪಾಠಶಾಲೆಯಲ್ಲಿ ತಮ್ಮ ಸಂಸ್ಕೃತಾಭ್ಯಾಸವನ್ನು ಮುಂದುವರೆಸಿದರು. ಅದಾದ ಒಂದು ವರ್ಷದಲ್ಲಿ ಅವರಿಗೆ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ದರ್ಶನ ದೊರಕಿ, ಅವರ ಬದುಕಿನ ಮೇಲೆ ಹೊಸದಾದ ಬೆಳಕನ್ನೇ ತಂದಿತು. ಮೂಲತಃ ಮಧ್ವ ಸಂಪ್ರದಾಯದ ಮನೆತನಕ್ಕೆ ಸೇರಿದ್ದರೂ, ಬಾಲಕ ರಾಮಚಂದ್ರರು ಜಗದ್ಗುರಗಳ ಬಳಿ ಆದಿಗುರು ಶ್ರೀ ಶಂಕರಾಚಾರ್ಯರ ಮೂಲ ರಚನೆಗಳನ್ನು ಓದುವ ಅಭಿಲಾಷೆ ವ್ಯಕ್ತಪಡಿಸಿದರು. ಅದರಿಂದ ಸಂತೋಷಗೊಂಡ ಯತಿವರ್ಯರು ರಾಮಚಂದ್ರರಾವ್ ಅವರಿಗೆ ತಕ್ಷಣವೇ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ವೇದಾಂತದ ಬೋಧಕರಾಗಿದ್ದ ಶ್ರೀ ಪಾಲ್ಗಾಟ್ ನಾರಾಯಣ ಶಾಸ್ತ್ರಿಗಳಿಂದ ಶ್ರೀ ಶಂಕರಾಚಾರ್ಯರ ಪ್ರಸ್ಥಾನತ್ರಯವನ್ನು ಕಲಿಯುವ ವ್ಯವಸ್ಥೆ ಕಲ್ಪಿಸಿಕೊಟ್ಟರು. ಈ ಕಲಿಕೆಯನ್ನು ರಾಮಚಂದ್ರ ರಾಯರು ಹಲವಾರು ವರ್ಷಗಳ ಕಾಲ ಶ್ರದ್ಧೆಯಿಂದ ನಡೆಸಿದರು.
ರಾಮಚಂದ್ರರಾವ್ ತಮ್ಮ ಹೈಸ್ಕೂಲಿನ ವಿದ್ಯಾಭ್ಯಾಸದ ನಂತರ ಮೈಸೂರಿನ ಯುವರಾಜಾ ಕಾಲೇಜು ಹಾಗೂ ಮಾನಸ ಗಂಗೋತ್ರಿಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಂದಿನ ದಿನಗಳಲ್ಲಿ ತಮ್ಮ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ. ಎಂ. ಹಿರಿಯಣ್ಣ, ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಪ್ರೊ. ರಾಘವಾಚಾರ್, ಪ್ರಾಕೃತ ಹಾಗೂ ಸಂಗೀತ ಶಾಸ್ತ್ರ ಬೋಧಕರಾಗಿದ್ದ ಶ್ರೀ ರಾಳಪಲ್ಲಿ ಅನಂತಕೃಷ್ಣ ಶರ್ಮ ಅವರ ಕುರಿತು ರಾಮಚಂದ್ರ ರಾವ್ ಅವರಿಗೆ ಅಪಾರ ಅಭಿಮಾನ ಮತ್ತು ಭಕ್ತಿಭಾವಗಳಿತ್ತು. ರಾಮಚಂದ್ರರಾವ್ ಅವರಿಗೆ ಸಂಗೀತ ಮತ್ತು ಸಂಗೀತಶಾಸ್ತ್ರಗಳಲ್ಲಿನ ಆಳವಾದ ಪರಿಜ್ಞಾನ ತಂದೆಯವರಿಂದ ಬಂದ ಬಳುವಳಿಯಾಗಿತ್ತು.ಪದವಿ ಪಡೆದ ನಂತರ ರಾಮಚಂದ್ರರಾಯರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಇಂಡಸ್ಟ್ರಿಯಲ್ ಸೈಕಾಲಜಿ ವಿಭಾಗದಲ್ಲಿ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಸೇರಿ ಅಲ್ಲಿ ಡಾಕ್ಟರ್ ಎನ್. ಎಸ್. ಶ್ರೀನಿವಾಸ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು. ತಾವು ಓದಿದ್ದು ವೇದಾಂತ ಮತ್ತು ಅದಕ್ಕೆ ಸಂಬಂಧಪಟ್ಟ ಗ್ರಂಥಗಳಾದರೂ, ರಾಮಚಂದ್ರರಾವ್ ಅವರಿಗೆ ವೇದಾಂತದ ಪರಿಧಿಯಾಚೆಗಿನ ಬೌದ್ಧ ಮತ್ತು ಜೈನ ಧರ್ಮಗಳ ಅಧ್ಯಯನ ಮಾಡಬೇಕೆಂಬ ಅಭಿಲಾಷೆಯಿತ್ತು. ಅವರ ಸ್ನೇಹಿತರೊಬ್ಬರು, ಸಿಂಹಳದ ಬೌದ್ಧ ಬಿಕ್ಷುಗಳೊಬ್ಬರು ಮಹಾಬೋಧಿ ಸೊಸೈಟಿಯಲ್ಲಿ ಚಾತುರ್ಮಾಸ್ಯದ ಆಚರಣೆಗೆ ಬಂದಿದ್ದಾರೆ, ಅವರನ್ನು ಭೇಟಿಯಾಗಿ ನೋಡಿ ಎಂದರು. ಹೀಗಾಗಿ ರಾಮಚಂದ್ರರಾವ್ ಅವರು ಪ್ರಸಿದ್ಧ ಬೌದ್ಧ ಭಿಕ್ಷುಗಳಾದ ಸಿಂಹಳದ ಭದ್ರಾಂತ ನಾರದ ಮಹಾತೇರ ಅವರನ್ನು ಭೇಟಿ ಮಾಡಿ ಅವರಿಂದ ಪಾಲಿ ಭಾಷೆಯನ್ನು ಅಭ್ಯಾಸ ಮಾಡಿದರಲ್ಲದೆ, ಅವರ ಮಾರ್ಗದರ್ಶನದಲ್ಲಿ ಬೌದ್ಧ ಧರ್ಮದ ಮೂಲ ಬೋಧನೆಗಳುಳ್ಳ ‘ತ್ರಿಪಿಟಕ’ಗಳ ಅಧ್ಯಯನ ಮಾಡಿದರು. ಇದಲ್ಲದೆ ಮಾರನೆಯ ವರ್ಷದಲ್ಲಿ ಪುನಃ ಬೆಂಗಳೂರಿಗೆ ಬಂದ ಶ್ರೀ ನಾರದ ಮಹಾತೇರರಿಂದ ‘ಸುತ್ತ ಪಿಟಕ’ಗಳ ಹಲವಾರು ಭಾಗಗಳನ್ನೂ ಕಲಿತರು. ಬೌದ್ಧ ಧರ್ಮದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ರಾಮಚಂದ್ರರಾವ್ ಅವರಿಗೆ ಒಮ್ಮೆ ಬೌದ್ಧ ಬಿಕ್ಷುವಾಗಬೇಕು ಎಂಬ ಇಚ್ಛೆಯೂ ಉಂಟಾಗಿತ್ತಂತೆ. ಯಾವುದನ್ನೇ ಆಗಲಿ ಅತ್ಯಂತ ಆಳ ಶ್ರದ್ಧೆಗಳಿಂದ ಅಭ್ಯಸಿಸುವ ರಾಮಚಂದ್ರರಾಯರ ಪ್ರವೃತ್ತಿಯೇ ಅಂತಹದು. ಇದೇ ಸರಿಸುಮಾರು ಅವಧಿಯಲ್ಲಿ ರಾಮಚಂದ್ರರಾಯರು ಅರ್ಧಮಾಗಧಿ ಮತ್ತು ಅಪಭ್ರಂಶ ಮತ್ತು ಆಗಮಗಳ ಕುರಿತಾದ ಜೈನ ಗ್ರಂಥಗಳನ್ನೂ ಅಧ್ಯಯನ ಮಾಡಿದರು.ಎಸ್ ಕೆ ರಾಮಚಂದ್ರ ರಾವ್ ಅವರಿಗೆ ಶಾಲಾ ದಿನಗಳಲ್ಲೇ ಚಿತ್ರಕಲೆ ಮತ್ತು ಶಿಲ್ಪಕಲೆಗಳಲ್ಲಿ ಆಸಕ್ತಿ ಉಂಟಾಗಿತ್ತು. ಹೀಗಾಗಿ ಮೇಣ, ಸಾಬೂನು ಮುಂತಾದವುಗಳಲ್ಲಿ ಶಿಲ್ಪಗಳನ್ನು ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ಪೆನ್ಸಿಲ್ ಮತ್ತು ಕಾರಾಕೊಲ್ಗಳಲ್ಲಿ ಚಿತ್ರಬಿಡಿಸುವ ಕಲೆ ಕೂಡಾ ಅವರಿಗೆ ಹಸ್ತಗತವಾಗಿತ್ತು. ಮುಂದೆ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಮಲ್ಲೇಶ್ವರದಲ್ಲಿ ವಾಸಿಸುತ್ತಿದ್ದ ಪ್ರಸಿದ್ಧ ಕಲಾವಿದರಾದ ಶ್ರೀ ವೆಂಕಟಪ್ಪನವರ ಮನೆಗೆ ಹೋಗಿ ಬರುತ್ತಾ, ಅವರ ಬಳಿ ಕಲಿಯುವುದಕ್ಕೆ ಅವಕಾಶ ಸಿಕ್ಕುವುದೇ ಎಂದು ವ್ಯಾಕುಲರಾಗಿದ್ದರು. ಆದರೆ ವೆಂಕಟಪ್ಪನವರು ರಾಮಚಂದ್ರರಾವ್ ಅವರಿಗೆ ಅವರು ಮಾಡುತ್ತಿರುವ ಕೆಲಸ ಬಿಟ್ಟು ಪೂರ್ಣವಾಗಿ ಕಲಾ ಲೋಕಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಮನಸ್ಸಿದ್ದರೆ ಮಾತ್ರ ಶಿಷ್ಯತ್ವ ನೀಡುವುದಾಗಿ ಹೇಳಿದರು. ಅಂದಿನ ಪರಿಸ್ಥಿತಿಯಲ್ಲಿ ರಾಮಚಂದ್ರರಾವ್ ಅವರಿಗೆ ಹಾಗೆ ಕೆಲಸ ಬಿಡುವುದು ಸಾಧ್ಯವಿರಲಿಲ್ಲ. ಹೀಗಿದ್ದರೂ ರಾಯರು ವೆಂಕಟಪ್ಪನವರ ಬಳಿ ಹೋಗುತ್ತಿದ್ದ ಸೀಮಿತ ಸಮಯಗಳಲ್ಲೇ ಚಿತ್ರರಚನೆಯ ಕುರಿತಾಗಿನ ಹಲವಾರು ನೈಪುಣ್ಯತೆಗಳನ್ನು ಕಂಡುಕೊಂಡರು. ಮಾತ್ರವಲ್ಲದೆ ತಮಗೆ ಬಿಡುವು ದೊರಕಿದ ಸಮಯದಲ್ಲೆಲ್ಲಾ ಕಲಾ ಲೋಕದಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು. ಅವರ ಸಾಧನೆಗಳ ಹಲವು ಪ್ರದರ್ಶನಗಳೂ ಏರ್ಪಾಡಾಗಿದ್ದವು.1954ರಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸಂಸ್ಥೆ ಪ್ರಾರಂಭಗೊಂಡಾಗ ಆ ಸಂಸ್ಥೆಯ ನಿರ್ದೇಶಕ ಹುದ್ದೆಯನ್ನು ವಹಿಸಿದ್ದ ಡಾ. ಎಂ. ವಿ. ಗೋವಿಂದಸ್ವಾಮಿ ಅವರು ಪ್ರೊ. ಎಸ್. ಕೆ ರಾಮಚಂದ್ರರಾವ್ ಅವರಿಗೆ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಹುದ್ದೆಯ ಆಹ್ವಾನ ನೀಡಿದರು. ಇಲ್ಲಿನ ಪಠ್ಯ ಬೋಧನೆಗಳಲ್ಲಿ ಭಾರತೀಯ ತತ್ವಚಿಂತನೆಗಳ ವಿಚಾರವೂ ಒಳಗೊಂಡಿತ್ತು. ಇದರಿಂದ ಪ್ರೇರಿತರಾದ ರಾಯರು 1962ರ ವರ್ಷದಲ್ಲಿ ‘ದಿ ಡೆವೆಲಪ್ಮೆಂಟ್ ಆಫ್ ಸೈಕಲಾಜಿಕಲ್ ಥಾಟ್ ಇನ್ ಇಂಡಿಯಾ’ ಎಂಬ ಗ್ರಂಥವನ್ನು ರಚಿಸಿದರು. ತಮ್ಮ ಆಳವಾದ ಸಂಶೋಧನೆಗಳ ಮೂಲಕ ರಾಯರು ಭಾರತೀಯ ಮಾದರಿಯ T.A.T ಕಾರ್ಡ್ಗಳನ್ನು ಸಿದ್ಧಪಡಿಸಿದರಲ್ಲದೆ ಅವುಗಳ ಉಪಯುಕ್ತತೆಯನ್ನು ನಿರೂಪಿಸುವ ಯಶಸ್ವೀ ಪ್ರಯೋಗಗಳನ್ನೂ ನಡೆಸಿದರು. ಪ್ರೊ. ಎಂ. ವಿ. ಗೋವಿಂದಸ್ವಾಮಿ ಅವರ ನಿಧನಾನಂತರದಲ್ಲಿ ಪ್ರೊ. ಎಸ್ ಕೆ ರಾಮಚಂದ್ರ ರಾವ್ ಅವರು ಡಿಪಾರ್ಟ್ಮೆಂಟ್ ಆಫ್ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರ ಜವಾಬ್ಧಾರಿಯನ್ನು ನಿರ್ವಹಿಸಿದರು. ಮಿಥಿಕ್ ಸೊಸೈಟಿಯಲ್ಲಿಯೂ ಕ್ರಿಯಾಶೀಲರಾಗಿದ್ದ ಅವರು ಅಲ್ಲಿನ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಭಾರತೀಯ ದರ್ಶನ ಶಾಸ್ತ್ರಗಳ (Indology) ಮೇಲೆ ಬೆಳಕು ಚೆಲ್ಲುವ ಹಲವಾರು ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸಿದರು.
1959ರ ವರ್ಷದಲ್ಲಿ ಪ್ರೊ ರಾಮಚಂದ್ರ ರಾವ್ ಅವರು ಕ್ಲಿನಿಕಲ್ ಸೈಕಾಲಜಿ ಅಭ್ಯಾಸ ಮಾಡಿದ ರಮಾದೇವಿ ಅವರನ್ನು ವಿವಾಹವಾದರು. ಅವರ ಪುತ್ರಿ ಹೋಮಿಯೋಪತಿ ವೈದ್ಯರಾಗಿದ್ದರೆ ಅವರ ಪುತ್ರ ಆಯುರ್ವೇದದ ವೈದ್ಯರಾಗಿದ್ದರು.
1965ರ ವರ್ಷದಲ್ಲಿ ತಮ್ಮ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸೇವೆಯಿಂದ ಹೊರಬಂದ ರಾಮಚಂದ್ರರಾಯರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಹಲವಾರು ವಿದ್ಯಾಸಂಸ್ಥೆಗಳಲ್ಲಿ ಮನಃಶಾಸ್ತ್ರ, ತತ್ವಶಾಸ್ತ್ರ, ಭಾರತೀಯ ದರ್ಶನ ಶಾಸ್ತ್ರಗಳನ್ನು ಬೋಧಿಸುವುದರ ಜೊತೆಗೆ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1968ರಿಂದ 1972ರ ವರ್ಷದವರೆಗೆ ಅವರು ಬೆಂಗಳೂರಿನಲ್ಲಿದ್ದ ಕಾಲಿಸನ್ ಕಾಲೇಜ್ ಸ್ಟಡಿ ಸೆಂಟರ್ ಆಫ್ ಯೂನಿವರ್ಸಿಟಿ ಆಫ್ ಪೆಸಿಫಿಕ್ (ಕ್ಯಾಲಿಫೋರ್ನಿಯ, ಯು ಎಸ್ ಎ) ಸಂಸ್ಥೆಯಲ್ಲಿ ಭಾರತೀಯ ಸಂಸ್ಕೃತಿ ವಿಭಾಗದ ಮುಖ್ಯಸ್ಥರಾಗಿದ್ದರು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಸಂಸ್ಥೆಯ ಸೀನಿಯರ ಅಸೋಸಿಯೇಟ್ ಆಗಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯ ಆಹ್ವಾನಿತ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.ಇದಲ್ಲದೆ ಪ್ರೊ. ಎಸ್. ಕೆ ರಾಮಚಂದ್ರ ರಾವ್ ಅವರು 35 ವರ್ಷಗಳಿಗೂ ಹೆಚ್ಚು ಕಾಲ ಆಸಕ್ತರಿಗೆ ಭಗವದ್ಗೀತೆ, ಉಪನಿಷತ್ತು, ಶಿವ ಸೂತ್ರ, ಬ್ರಹ್ಮ ಸೂತ್ರ, ಪತಂಜಲಿ ಯೋಗ ಸೂತ್ರ, ವಾಖ್ಯಪದೀಯ, ಶಿಲ್ಪಶಾಸ್ತ್ರ, ತ್ರಿಪುರ ರಹಸ್ಯ, ಭಾರತೀಯ ತತ್ವಶಾಸ್ತ್ರ, ಆಗಮ-ಶಾಸ್ತ್ರ, ದರ್ಶನ ಶಾಸ್ತ್ರ ಮುಂತಾದ ಅಮೂಲ್ಯ ವಿಷಯಗಳ ಬಗ್ಗೆ ತರಬೇತಿ ನೀಡಿದರು. ಅವರ ಉಪನ್ಯಾಸಗಳು ಸ್ಪಷ್ಟತೆ ಮತ್ತು ವಿದ್ವತ್ಪೂರ್ಣತೆಗಳಿಗಾಗಿ ಪ್ರಖ್ಯಾತವಾಗಿದ್ದವು.ಪ್ರೊ.ಎಸ್. ಕೆ ರಾಮಚಂದ್ರ ರಾವ್ ಅವರು ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿ ಮತ್ತು ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಸಹಾ ಸೇವೆ ಸಲ್ಲಿಸಿದರು. ಕರ್ನಾಟಕ ರಾಜ್ಯದ ‘ಆಗಮ ಬೋರ್ಡ್’ ಸಂಸ್ಥೆಯಲ್ಲಿ ಸಹಾ ಅವರು ಸೇವೆ ಸಲ್ಲಿಸಿದರು. ತಿರುಮಲ ತಿರುಪತಿ ದೇವಸ್ಥಾನದ ಸಲಹಾ ಸಮಿತಿಯಲ್ಲೂ ಅವರ ಸೇವೆ ಸಂದಿತ್ತು.ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರಿಗೆ 1986ರ ವರ್ಷದ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೇ ಅಲ್ಲದೆ ನೂರಾರು ಪ್ರಶಸ್ತಿ ಗೌರವಗಳು ಸಂದವು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ಅರ್ಪಿಸಿದವು. ಮುಂಬೈನ ಸ್ವಾಮಿ ಗಂಗೇಶ್ವರಾನಂದಜೀ ಟ್ರಸ್ಟ್ ಅವರಿಗೆ ‘ವೇದರತ್ನ’ ಎಂಬ ಗೌರವ ಅರ್ಪಿಸಿತು. ನಿಡುಮಾಮಿಡಿ ಶ್ರೀಶೈಲ ಮಠ ‘ವಿದ್ಯಾಲಂಕಾರ’, ತಿರುಪತಿಯ ರಾಷ್ಟೀಯ ಸಂಸ್ಕೃತ ವಿದ್ಯಾಪೀಠ ‘ವಾಚಸ್ಪತಿ’, ಗಾಯನ ಸಮಾಜ ‘ಸಂಗೀತ ಕಲಾ ರತ್ನ’ ಹೀಗೆ ನೂರಾರು ಸಂಸ್ಥೆಗಳು ಅವರಿಗೆ ಬಿರುದು ಸಮ್ಮಾನಗಳನ್ನು ನೀಡಿ ಗೌರವಿಸಿದವು. ಉಜ್ಜೈನಿಯ ಮಹರ್ಷಿ ಸಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು ಅವರಿಗೆ 2000ದ ವರ್ಷದಲ್ಲಿ ತನ್ನ ಪ್ರತಿಷ್ಟಿತ ಪ್ರಶಸ್ತಿಯನ್ನು ಸಲ್ಲಿಸಿತು.ಪ್ರೊ. ಎಸ್. ಕೆ ರಾಮಚಂದ್ರರಾವ್ ಅವರು ಚಿತ್ರಕಾರರು, ಕಲಾವಿದರು, ಶಿಲ್ಪಿ, ಸಂಗೀತ ಶಾಸ್ತ್ರಜ್ಞರೂ ಹೌದು. ಗ್ರಂಥಕರ್ತರಾಗಿ ಅವರು ಮಾಡಿದ ಸಾಧನೆ ಅತ್ಯಮೂಲ್ಯವಾದುದು. ಕನ್ನಡದಲ್ಲಿ ಅವರು 90ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಷ್ಟೇ ಸಂಖ್ಯೆಯ ಇಂಗ್ಲಿಷ್ ಗ್ರಂಥಗಳೂ ಕೂಡಾ ಅವರಿಂದ ಹೊರಹೊಮ್ಮಿವೆ. ಇದಲ್ಲದೆ ಸಂಸ್ಕೃತದಲ್ಲಿ ‘ಪೌರವ ದಿಗ್ವಿಜಯ’, ಮತ್ತು ಪಾಲಿ ಭಾಷೆಯಲ್ಲಿ ವಿಶುದ್ಧಿಮಗ್ಗದ ಬುದ್ಧ ಘೋಶನ ಕುರಿತಾದ ‘ವಿಶುದ್ಧಿಮಗ್ಗಭಾವಿನಿ’ ಗ್ರಂಥಗಳನ್ನು ರಚಿಸಿದ್ದಾರೆ. ಪಾಲಿಯ ‘ಸುಮಂಗಲ-ಗಾಥಾ’ ಬಗ್ಗೆ ಅವರು ಬರೆದಿರುವ ವಿಶ್ಲೇಷಣಾತ್ಮಕ ಬರಹವು 1957ರ ವರ್ಷದಲ್ಲಿ ಪ್ರಖ್ಯಾತ ಪ್ರಕಟಣೆಯಾದ ‘ದಿ ಲೈಟ್ ಆಫ್ ಧಮ್ಮಾ’ ದಲ್ಲಿ ಪ್ರಕಟಗೊಂಡಿತ್ತು.
ಅಭಿನವ ಗುಪ್ತ, ಆದಿಕವಿ ವಾಲ್ಮೀಕಿ, ಆಳ್ವಾರರ ನುಡಿ ಮುತ್ತುಗಳು, ಆನಂದ ಕುಮಾರಸ್ವಾಮಿ, ಆಂಜನೇಯನ ಕಲ್ಪನೆಗಳಲ್ಲಿ ಸ್ವಾರಸ್ಯ, ಅಣ್ಣಪ್ಪ ದೈವ, ಅತೀಂದ್ರಿಯ ಅನುಭವ, ಅವಧೂತ , ಅಂತರ್ಯಜ್ಞ, ಆಯುರ್ವೇದ ಪರಿಚಯ, ಆಯುರ್ವೇದದಲ್ಲಿ ನಾಡೀ ವಿಜ್ಞಾನ, ಬದುಕಿಗೆ ಬೆಳಕು, ಬೆಂಗಳೂರಿನ ಕರಗ, ಭಾರತದ ದೇವಾಲಯ, ಭರತಮುನಿಯ ನಾಟ್ಯಶಾಸ್ತ್ರ, ಭಾರತದ ದೇವಾಲಯಗಳ ಜಾನಪದ ಮೂಲ, ಬೋಧಿ ಧರ್ಮ, ಬೋಧಿಯ ಬೆಳಕಿನಲ್ಲಿ, ಚುಂಚುನಕಟ್ಟೆ – ಸಾಲಿಗ್ರಾಮ – ಹನಸೊಗೆ, ದರ್ಶನ ಪ್ರಬಂಧ, ದಾಸ ಸಾಹಿತ್ಯ ಮತ್ತು ಸಂಸ್ಕೃತಿ, ದೀಪಂಕರ, ಗಣಪತಿಯ ಕಲ್ಪನೆ, ಗಣಪತಿಯ ರೂಪಗಳು, ಗಾಂಧೀಜಿಯ ಧಾರ್ಮಿಕ ದೃಷ್ಟಿ, ಗೀತೆಗೊಂದು ಕೈಪಿಡಿ, ಗೊಮ್ಮಟೇಶ್ವರ, ಹಣ ಪ್ರಪಂಚ, ಹಿರಿಯ ಹೆಜ್ಜೆಗಳು, ಜಯದೇವನ ಗೀತ ಗೊವಿಂದ, ಈಶಾವಾಸ್ಯ ಉಪನಿಶತ್, ಕೆ. ವೆಂಕಟಪ್ಪ, ಕಲಾನುಭವದಲ್ಲಿ ಸಾಹಸ, ಕನ್ನಡ ನಾಡಿನ ಧಾರ್ಮಿಕ ಪರಂಪರೆ, ಕನ್ನಡ ನಾಡಿನಲ್ಲಿ ಆಯುರ್ವೇದ, ಕನಕದಾಸರು, ಮಹಾಕವಿ ಅಶ್ವಘೋಶ, ಮಹರ್ಷಿ ದೈವರಾತರು, ಮನಃಶಾಸ್ತ್ರ ಪ್ರವೇಶಿಕಾ, ಮಂಗಳೂರಿನ ಬುದ್ಧಿವಂತರು ಮತ್ತು ಇತರ ಕಥೆಗಳು, ಸಂಗೀತ ಸಾಮ್ರಾಜ್ಞಿ – ಎಮ್.ಎಸ್.ಸುಬ್ಬುಲಕ್ಷ್ಮಿ, ನಗೆಯ ನೆಲೆ, ನಮ್ಮ ಸಂಗೀತ ಮತ್ತು ವಾಗ್ಗೇಯಕಾರರು, ಓಂ ಪರಮಪದ, ಪರಿಮಾನಸ ಶಾಸ್ತ್ರ, ಪ್ರಾಚೀನ ಸಂಸ್ಕೃತಿ, ಪ್ರತಿಭೆ ಎಂದರೇನು?, ಪುರಂದರ ಸಾಹಿತ್ಯ ದರ್ಶನ, ಪುರುಷ ಸರಸ್ವತಿ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ, ಪೂರ್ಣಪ್ರಜ್ಞ ಪ್ರಶಸ್ತಿ, ರಾಘವೇಂದ್ರ ಸ್ವಾಮಿಗಳು, ಶ್ರೀ ರಾಮಕೃಷ್ಣ ಪರಮಹಂಸರ ಮಾತುಕತೆಗಳು, ಸಂಪ್ರದಾಯಕ ಚಿತ್ರಕಲೆ, ಸಂಪ್ರದಾಯ ಶಿಲ್ಪಕಲೆ, ಸಂಗೀತದ ಇತಿಹಾಸ, ಸಂಗೀತರತ್ನ ಚೌಡಯ್ಯ, ಶಂಕರ ವಾಣಿ, ಸೌಂದರನಂದ, ಶಾಂತಲ, ಶ್ರೀ ಕೃಷ್ಣನ ವ್ಯಕ್ತಿತ್ವ, ಶ್ರೀ ಶಂಕರ ಸಂದೇಶ, ಶ್ರೀ ಶಾರದಾ ಪೀಠದ ಮಾಣಿಕ್ಯ, ಶ್ರೀಸೂಕ್ತ, ಶ್ರೀ ತತ್ತ್ವನಿಧಿ, ಶ್ರೀ ಮಧ್ವಾಚಾರ್ಯರು, ಶ್ರೀ ಚಂದ್ರಶೇಖರ ಭಾರತಿ. ಸುಖ ಪ್ರಾರಬ್ಧ, ಟಿಬೆಟ್ಟಿನ ಯೋಗಿ ಮಿಲರೇಪ, ಟಿಬೆಟ್ಟಿನಲ್ಲಿ ತಾಂತ್ರಿಕ ಸಂಪ್ರದಾಯ, ತಿರುಚಿ ಸ್ವಾಮಿಗಳ ಬದುಕು – ಬೆಳಕು, ತಿರುಪತಿ ತಿಮ್ಮಪ್ಪ, ತ್ಯಾಗರಾಜರು, ವೈದ್ಯಕ ಹಿತೋಪದೇಶ, ವೈವಸ್ವತ ಮನು, ವಾಲ್ಮೀಕಿ ಪ್ರತಿಭೆ, ವರ್ಧಮಾನ ಮಹಾವೀರನಾದಾಮೃತಂ, ವೈದ್ಯಸಾರ ಸಂಗ್ರಹ, ವೇದ ವಾಜ್ಜ್ಮಯ ಮತ್ತು ಉಪನಿಷತ್ತುಗಳು, ವೈಶಾಖ ಪೂರ್ಣಿಮೆ, ವಿಚಾರ ಲಹರಿ, ವಿವಾಹ ಪದ್ಧತಿಗಳು, ವ್ಯಕ್ತಿಯ ಪ್ರವೃತ್ತಿಗಳು ಮತ್ತು ವಿನ್ಯಾಸಗಳು, ಯಂತ್ರಗಳು, ಗೀತ ಗೋವಿಂದ, ಭದ್ರಬಾಹುಸ್ವಾಮಿ, ಝಣ ಝಣ ಹಣ, ಬ್ರಾಹ್ಮ ಧರ್ಮ, ಚಿತ್ರ ರಾಮಾಯಣ, ಕರ್ನಾಟಕದ ಕಲೆಗಳು, ಮೂರ್ತಿ ಶಿಲ್ಪ-ನೆಲೆ,ಹಿನ್ನೆಲೆ, ರಾಮಾನುಜ ದರ್ಶನ, ಹರಿದಾಸರು, ಶ್ರೀ ಪುರಂದರದಾಸರು, ದಂಡಿಯ ಅವಂತಿ ಸುಂದರೀ, ವೇದದಲ್ಲಿನ ಕಥೆಗಳು ಇವೇ ಮುಂತಾದವು ಪ್ರೊ. ಎಸ್. ಕೆ. ರಾಮಚಂದ್ರ ರಾಯರ ಅಸಂಖ್ಯಾತ ಕನ್ನಡ ಬರಹಗಳಲ್ಲಿ ಸೇರಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಳವಿಕಾ ಮೋಹನನ್ ತಾನು ಯಾವ ರೀತಿಯ ವ್ಯಕ್ತಿಯನ್ನು ಪ್ರೀತಿಸುತ್ತೇನೆ ಎಂದರು?

Wed Feb 16 , 2022
ಮಾಳವಿಕಾ ಮೋಹನನ್ ಫೆಬ್ರವರಿ 16 ರಂದು ಟ್ವಿಟರ್‌ನಲ್ಲಿ ಪ್ರಶ್ನೋತ್ತರ ಅವಧಿಯನ್ನು ನಡೆಸಿದರು. ಅವರು ತಮ್ಮ ನೆಚ್ಚಿನ ನಟರು ಮತ್ತು ತಾನು ಪ್ರೀತಿಸುವ ರೀತಿಯ ವ್ಯಕ್ತಿಯ ಬಗ್ಗೆ ಕೆಲವು ರೋಚಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ಮಾಳವಿಕಾ ಅವರಿಗೆ ಯಾವ ರೀತಿಯ ವ್ಯಕ್ತಿ ಇಷ್ಟ ಎಂದು ಕೇಳಿದರು. ಮಾಸ್ಟರ್ ನಟಿ ಕ್ಲಾಸಿ ಉತ್ತರವನ್ನು ನೀಡಿದರು, ಇದು ಸಾವಿರಾರು ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಮಾಳವಿಕಾ ಮೋಹನನ್‌ಗೆ ತನ್ನ ಅಭಿಮಾನಿಗಳನ್ನು ಹೇಗೆ ಸಂತೋಷಪಡಿಸಬೇಕು ಎಂದು ಖಚಿತವಾಗಿ […]

Advertisement

Wordpress Social Share Plugin powered by Ultimatelysocial