ಆನೂರು ಅನಂತಕೃಷ್ಣ ಶರ್ಮ

 
ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರು
ಸಂಗೀತ ವಿದ್ವಾಂಸರಾಗಿ ಮತ್ತು ಮೃದಂಗ ವಾದಕರಾಗಿ ಪ್ರಸಿದ್ಧರಾಗಿದ್ದಾರೆ.
ಆನೂರು ಅನಂತಕೃಷ್ಣ ಶರ್ಮರು 1965ರ ಮಾರ್ಚ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ಅನಂತಕೃಷ್ಣ ಶರ್ಮರದ್ದು ಹಲವು ತಲೆಮಾರುಗಳಿಂದ ಸಂಗೀತಕ್ಕೆ ಪ್ರಸಿದ್ಧವಾದ ಮನೆತನ. ಅವರ ತಂದೆ ಪ್ರಖ್ಯಾತ ಪಿಟೀಲು ವಾದಕರಾಗಿದ್ದ ಆನೂರು ರಾಮಕೃಷ್ಣ ಅವರು. ತಾಯಿ ಶ್ರೀಲಕ್ಷ್ಮಿ. ಅಣ್ಣ ಆನೂರು ದತ್ತಾತ್ರೇಯ ಶರ್ಮರೂ ಮೃದಂಗ ವಿದ್ವಾಂಸರು. ತಾತಂದಿರಾದ ಆನೂರು ಶಾಮಣ್ಣನವರು ಮಹಾನ್ ವೀಣಾ ವಿದ್ವಾಂಸರು ಮತ್ತು ಅವರ ಸಹೋದರರಾದ ಆನೂರು ಸೂರ್ಯನಾರಾಯಣರು ಶಾಸ್ರೀಯ ಗಾಯನ ಮತ್ತು ನೃತ್ಯಗಾಯನಗಳಿಗೆ ಪ್ರಸಿದ್ಧರಾಗಿದ್ದವರು.
ತಂದೆಯಿಂದಲೇ ಸಂಗೀತದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅನಂತಕೃಷ್ಣ ಶರ್ಮರು ಮೃದಂಗ ವಾದನದೆಡೆಗೆ ಒಲವು ಮೂಡಿಸಿಕೊಂಡರು. ಮೃದಂಗ ಮತ್ತು ಘಟಂ ವಾದನ ವಿದ್ವಾನ್ ಆರ್.ಎ. ರಾಜಗೋಪಾಲ್ ಅವರಲ್ಲಿ ಲಯ-ವಾದ್ಯದಲ್ಲಿ ಶಿಕ್ಷಣ ಪಡೆದ ಶರ್ಮರು ಹದಿನೈದನೇ ವಯಸ್ಸಿನಿಂದಲೇ ದೇಶದ ಹಲವಾರು ಪ್ರತಿಷ್ಠಿತ ಸಂಗೀತ ಕಚೇರಿಗಳಲ್ಲಿ ಪ್ರಖ್ಯಾತ ಸಂಗೀತಗಾರರಿಗೆ ಮೃದಂಗ ವಾದನದ ಸಹಯೋಗ ನೀಡಿ ಹೆಸರಾದರು. ಎಂ. ಬಾಲಮುರಳಿಕೃಷ್ಣ, ಎಂ.ಎಲ್. ವಸಂತಕುಮಾರಿ, ಟಿ.ವಿ. ಗೋಪಾಲಕೃಷ್ಣನ್, ಆರ್.ಕೆ. ಶ್ರೀಕಂಠನ್, ಎಸ್. ರಾಮನಾಥನ್, ಆರ್.ಕೆ. ಪದ್ಮನಾಭ, ಮಹಾರಾಜಪುರಂ ಸಂತಾನಂ, ಲಾಲ್ಗುಡಿ ಜಯರಾಮನ್, ಬಾಂಬೆ ಸಹೋದರಿಯರು, ಉನ್ನಿ ಕೃಷ್ಣನ್, ಕದ್ರಿ ಗೋಪಾಲನಾಥ್, ಎ.ಕೆ.ಸಿ. ನಟರಾಜನ್ ಹೀಗೆ ಹೇಳುತ್ತ ಹೋದಲ್ಲಿ ಬಹುತೇಕ ಎಲ್ಲ ಪ್ರಸಿದ್ಧರ ಸಂಗೀತ ಕಚೇರಿಗಳಿಗೂ ಆನೂರು ಅನಂತಕೃಷ್ಣ ಶರ್ಮರ ಮೃದಂಗದ ನಿನಾದ ವ್ಯಾಪಿಸುತ್ತಾ ಬಂದಿದೆ.
ಹಲವಾರು ಬಾರಿ ಸಂಗೀತ ವಿದೇಶಯಾತ್ರೆಗಳಲ್ಲಿ ಪಾಲ್ಗೊಂಡ ಆನೂರು ಅನಂತಕೃಷ್ಣ ಶರ್ಮರ ಮೃದಂಗದ ಮೇರು ಕೀರ್ತಿ ಹಲವಾರು ಐರೋಪ್ಯ ರಾಷ್ಟ್ರಗಳು, ಅಮೆರಿಕಾ ಹೀಗೆ ವಿಶ್ವವ್ಯಾಪಿ.
ಶಾಸ್ತ್ರೀಯ ಸಂಗೀತದ ಜೊತೆಗೆ ಹಲವು ಶಾಸ್ತ್ರೀಯ ನೃತ್ಯ, ನೃತ್ಯ ನಾಟಕ ರೂಪಗಳು, ಭಕ್ತಿಗೀತೆಗಳು, ಸಂಸ್ಕೃತ ಶ್ಲೋಕ ಪ್ರಸ್ತುತಿಗಳ ಶ್ರವ್ಯ ಮಾಧ್ಯಮಗಳಿಗೆ ಆನೂರು ಅನಂತಕೃಷ್ಷ ಶರ್ಮರ ಸಂಗೀತ ನಿರ್ದೇಶನ ಸಹಾ ಸಂದಿದೆ.
ಕರ್ನಾಟಕ ಗಾನ ಕಲಾ ಪರಿಷತ್, ಪುರಂದರ-ತ್ಯಾಗರಾಜರ ಸಂಗೀತ ಸೇವಾ ಮಂಡಲಿ ಮುಂತಾದುವುಗಳ ಸಂಚಾಲಕರಾಗಿ ದುಡಿದಿದ್ದ ಆನೂರು ಅನಂತಕೃಷ್ಣ ಶರ್ಮರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಾಲಂಕೃತರೂ ಆದವರು.
ಆನೂರು ಅನಂತಕೃಷ್ಣ ಶರ್ಮರಿಗೆ ಕರ್ನಾಟಕ ಗಾನಕಲಾ ಪರಿಷತ್ತಿನ ಗಾನಕಲಾಶ್ರೀ, ಗಾಯನ ಸಮಾಜದಿಂದ ಶ್ರೇಷ್ಠ ಮೃದಂಗ ಪಟು, ಪರ್ಕ್ಯುಸಿವ್ ಆರ್ಟ್ ಸೆಂಟರಿನಿಂದ ಲಯ-ಕಲ ಪ್ರತಿಭಾಮಣಿ, ಮದರಾಸು ಮ್ಯೂಸಿಕ್ ಅಕಾಡಮಿಯಿಂದ ಶ್ರೇಷ್ಠ ಮೃದಂಗ ವಾದಕ, ನಾದ ಜ್ಯೋತಿ ಸಂಗೀತ ಸಭಾದಿಂದ ‘ನಾಡ ಜ್ಯೋತಿ’, ಭಜನಾ ಸಂಸ್ಥೆಯಿಂದ ನಾದ-ಲಯ-ಸಾಮ್ರಾಟ, ಚಿಂತಾಮಣಿ ಗಾಯನ ಸಮಾಜದಿಂದ ನಾದ ಚಿಂತಾಮಣಿ, ಶ್ರೀ ಕಂಚಿಮಠದ ಅಸ್ಥಾನ ವಿದ್ವಾನ್ ಮುಂತಾದ ಅನೇಕ ಗೌರವಗಳು ಸಂದಿವೆ.
ಆನೂರು ಅನಂತಕೃಷ್ಣ ಶರ್ಮ ಅವರು ಗುರುಗಳಾಗಿ ಅನೇಕ ಶಿಷ್ಯರನ್ನೂ ಸಂಗೀತಲೋಕಕ್ಕೆ ನೀಡಿದ್ದಾರೆ. ಈ ಸಂಗೀತ ಸಾಧಕ ಆನೂರು ಅನಂತಕೃಷ್ಣ ಶರ್ಮರ ಸಂಗೀತ ಮಾಧುರ್ಯ ಅನಂತ ಪ್ರವಹಿಸುತ್ತಿರಲಿ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಲ್ಲೂರು ಶ್ರೀನಿವಾಸ ಜೋಯಿಸರು | On the birth anniversary of great Historian and writer Hullur Sreenivasa Jois |

Tue Mar 29 , 2022
  ಹುಲ್ಲೂರು ಶ್ರೀನಿವಾಸ ಜೋಯಿಸರು ನಮ್ಮ ನಾಡಿನ ಮಹಾನ್ ಸಂಶೋಧಕರಾಗಿ, ರಾಷ್ಟ್ರಪ್ರೇಮಿಗಳಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದವರಾಗಿ ಅಮರರಾಗಿದ್ದಾರೆ. ಹುಲ್ಲೂರು ಶ್ರೀನಿವಾಸ ಜೋಯಿಸರು 1892ರ ಮಾರ್ಚ್ 29ರಂದು ಜನಿಸಿದರು. ಅವರ ಕುಟುಂಬದ ಹಿರಿಯರು ಸುಮಾರು ಮೂರು ನೂರು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಳಿಯ ಅಂಬಳೆ ಗ್ರಾಮದಿಂದ ಚಿತ್ರದುರ್ಗ ಜಿಲ್ಲೆಯ ಹುಲ್ಲೂರಿಗೆ ವಲಸೆ ಬಂದವರು. ತಂದೆ ಪಾಂಡುರಂಗ ಜೋಯಿಸ್. ತಾಯಿ ಪಾರ್ವತಮ್ಮ. ಶ್ರೀನಿವಾಸ ಜೋಯಿಸರು ಪ್ರಾಥಮಿಕ ಶಿಕ್ಷಣ ಪಡೆದುದು ಚಿತ್ರದುರ್ಗದಲ್ಲಿ. […]

Advertisement

Wordpress Social Share Plugin powered by Ultimatelysocial