ಬಿ. ಜಿ. ಎಲ್. ಸ್ವಾಮಿ ಮಹಾನ್ ಸಸ್ಯಶಾಸ್ತ್ರಜ್ಞ.

ಬಿ. ಜಿ. ಎಲ್. ಸ್ವಾಮಿ ಮಹಾನ್ ಸಸ್ಯಶಾಸ್ತ್ರಜ್ಞರಾಗಿ, ಸಂಶೋಧಕರಾಗಿ, ಶಿಕ್ಷಕರಾಗಿ; ಕನ್ನಡ ಸಾಹಿತ್ಯದ ವಿನೋದಪೂರ್ಣ, ವಿಚಾರಪೂರ್ಣ ಹಾಗೂ ವೈಜ್ಞಾನಿಕ ಮಹಾನ್ ಬರಹಗಾರರಾಗಿ ಪ್ರಸಿದ್ಧರಾಗಿದ್ದಾರೆ.ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಾರ್ನರ್ ಅವರಿಂದ ಪ್ರಶಂಸಿತರಾದ ಬಿ.ಜಿ.ಎಲ್. ಸ್ವಾಮಿ (ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ) ಕನ್ನಡದ ಒಬ್ಬ ವಿಶಿಷ್ಟ ಬರಹಗಾರ, ಚಿಂತಕ ಹಾಗೂ ಸಂಶೋಧಕ. ಅವರ ವ್ಯಂಗ್ಯಬರಹಗಳಲ್ಲಾಗಲೀ, ಪ್ರವಾಸ ಕಥನಗಳಲ್ಲಾಗಲಿ, ಸಂಶೋಧನ ಗ್ರಂಥಗಳಲ್ಲಾಗಲಿ ಅವರ ‘ಸ್ವಾಮಿತನ’ ಎನ್ನಬಹುದಾದ ವಿಶಿಷ್ಟತೆ ಎದ್ದುಕಾಣುವಂಥದು. ಸಾಹಿತ್ಯದಲ್ಲಿ ಈ ಬಗೆಯ ಸಾವಯವ ಶಿಲ್ಪ ಅಪೂರ್ವವಾದದ್ದು. ಯಾವ ವಿಷಯವನ್ನೇ ಆರಿಸಿಕೊಂಡರೂ ಅದರ ಮೂಲ ಬೇರುಗಳನ್ನೇ ಅಲುಗಾಡಿಸುವ ಸ್ವಭಾವ ಅವರದು. ಅವರು ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾವನ್ನು ರೇಖಿಸುತ್ತಾ ನಮ್ಮ ದೇಶಕ್ಕೆ ದಕ್ಷಿಣ ಅಮೆರಿಕಾದಿಂದ ಬಂದ ತರಕಾರಿಗಳನ್ನೆಲ್ಲ ಗುರುತಿಸುತ್ತಾರೆ. ಅವರು ದಕ್ಷಿಣ ಭಾರತದ ಶಾಸನಗಳ ಕೂಲಂಕಷ ಅಧ್ಯಯನ ಮಾಡುವುದು ಅವುಗಳಲ್ಲಿ ಉಕ್ತವಾದ ಗಿಡಮರಗಳ ಹಿನ್ನೆಲೆಯಲ್ಲಿ. ಕರ್ನಾಟಕದ ಸಂಗೀತದ ಬಗೆಗೆ ಚಿಂತಿಸುವುದರ ಜತೆಗೇ ವಿಜಯನಗರದ ಪತನದ ವಾಸ್ತವಗಳ ಶೋಧನೆಗೆ ಹೊರಡುತ್ತಾರೆ. ತಂಬಾಕಿನಂಥ ಮಾದಕ ವಸ್ತುವಿನ ಕಥನವನ್ನು ಅಷ್ಟೇ ಮಾದಕವಾದ ಮೋಹಕ ಶೈಲಿಯಲ್ಲಿ ಮಂಡಿಸುತ್ತಾರೆ. ಅವರು ಕೊಡುವ ವ್ಯಕ್ತಿಚಿತ್ರಗಳೂ, ತಮಿಳು ಅನುವಾದಗಳೂ ಸ್ವಾಮಿಯವರದೇ ಎಂದು ಹೇಳಬಹುದಾದ ಒಂದು ಗಡಸುತನದಿಂದ ಕೂಡಿರುತ್ತವೆ. ‘ಪಂಚಕಲಶಗೋಪುರ’ದಲ್ಲಿ ಅವರು ಬಿ.ಎಂ.ಶ್ರೀಯವರ ಭಾಷಣ ಶ್ರದ್ಧೆ-ಗೀಳು ಎರಡನ್ನೂ ಹಾಸ್ಯ-ಮೆಚ್ಚಿಕೆಗಳ ವಿಚಿತ್ರ ಮಿಶ್ರಣದಿಂದ ಪರಿಚಯ ಮಾಡಿಕೊಟ್ಟಿರುವ ಬಗೆಯನ್ನು ನೋಡಬೇಕು. ಬಿ.ಜಿ.ಎಲ್. ಸ್ವಾಮಿಯವರು ಸ್ವಯಂ ರೇಖಾಚಿತ್ರಕಾರರೂ ಆಗಿರುವುದರಿಂದ ತಮ್ಮ ವಿವರಣೆಯ ಕಲಾತ್ಮಕ ದೃಶ್ಯಚಿತ್ರಗಳನ್ನು ತಮ್ಮದೇ ಅದ ದೃಷ್ಟಿಕೋನದಿಂದ ಬಿಡಿಸುವ ಹವ್ಯಾಸವನ್ನು ಪ್ರದರ್ಶಿಸಿ ತಮ್ಮ ಬರಹಗಳಿಗೆ ಒಂದು ಹೊಸ ಅಯಾಮವನ್ನು ಒದಗಿಸುತ್ತಾರೆ. ವಿವಾದಾತ್ಮಕ ವಿಷಯಗಳ ಸುಳಿಯಲ್ಲಿ ಸಿಲುಕಬಯಸುವುದೂ ಅವರಿಗೆ ಒಂದು ಪ್ರಿಯವಾದ ಹವ್ಯಾಸ. ತಮಿಳು ಭಾಷೆಯ ಪ್ರಾಚೀನತೆಯನ್ನು ತೋರಿಸುವ ವಿಷಯದಲ್ಲಿ ತಮಿಳು ವಿದ್ವಾಂಸರು ಮಾಡಿರುವ ಆತುರದ ತೀರ್ಮಾನಗಳನ್ನು ಪ್ರಬಲ ಸಾಕ್ಷಾಧಾರಗಳಿಂದ ಖಂಡಿಸಿ ತಮಿಳರ ಅಸಹನೆಗೆ ಪಾತ್ರರಾದದ್ದನ್ನಾಗಲಿ, ಪುರಂದರ ದಾಸರ ಕೀರ್ತನೆಗಳ ಕೆಲವು ಮಿತಿಗಳನ್ನು ಶುದ್ಧ ಸಂಗೀತದ ದೃಷ್ಟಿಯಿಂದ ಚರ್ಚಿಸಿ ಕನ್ನಡದಲ್ಲಿ ದೊಡ್ಡ ವಿವಾದದ ಸುಳಿಯನ್ನು ಎಬ್ಬಿಸುವುದನ್ನಾಗಲಿ, ಚಿದಂಬರದ ನಟರಾಜನ ಆನಂದ ತಾಂಡವದ ಮೂಲವು ಕಾಶ್ಮೀರ ಶೈವದ ಪ್ರತ್ಯಭಿಜ್ಞಾದರ್ಶನದ ಪ್ರಭಾವದಿಂದ ಬಂದುದೆಂದು ಸಾಕ್ಷಾಧಾರಗಳಿಂದ ಗುರುತಿಸಿದ್ದುದನ್ನಾಗಲಿ ಇಲ್ಲಿ ನೆನಪಿಸಿಕೊಳ್ಳಬಹುದು. ಬೇರೆ ಬೇರೆ ಪ್ರಸಂಗಗಳ ವ್ಯಂಗ್ಯ ವಿಮರ್ಶೆ ಮಾಡುವ ಸಂದರ್ಭದಲ್ಲಿ ಆನುಷಂಗಿಕವಾಗಿ ತಮ್ಮ ಮನೋಧರ್ಮ ಯಾವ ಧಾತುವಿನದು ಎಂಬುದನ್ನು ಧ್ವನಿಸುತ್ತ ಹೋಗುವ ಜಾಯಮಾನ ಅವರದು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಂತಹ ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕ, ಪ್ರಾಚಾರ್ಯ ಸ್ಥಾನಗಳಲ್ಲಿದ್ದೂ ದೊಗಲೆ ಜುಬ್ಬ, ಪೈಜಾಮಾ ಅಥವಾ ನಿಕ್ಕರ್ ಗಳಲ್ಲಿ ಓಡಾಡಿ ಕೆಲವು ಸಂಪ್ರದಾಯಸ್ಥ ಶಿಕ್ಷಕರಿಗೆ, ಶಿಕ್ಷಣಾಧಿಕಾರಿಗಳಿಗೆ ಅವರು ನುಂಗಲಾರದ, ಉಗುಳಲಾರದ ತುತ್ತಾಗಿದ್ದುದೂ ಉಂಟು. ‘ಆನೆ ನಡೆದುದೆ ಮಾರ್ಗ’ ಎಂದು ಕೇಶಿರಾಜ ಹೇಳಿರುವುದು ಇಂಥವರನ್ನೇ ಕುರಿತು ಎಂದು ಕಾಣುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ಎಸ್. ನಿಸಾರ್ ಅಹಮದ್ 'ನಿತ್ಯೋತ್ಸವ’ದ ಕವಿ.

Mon Feb 6 , 2023
  ಕೆ. ಎಸ್. ನಿಸಾರ್ ಅಹಮದ್ ಎಲ್ಲ ರೀತಿಯಲ್ಲೂ ಪ್ರತಿನಿತ್ಯ ಆಪ್ತವಾಗಿ ನೆನಪಾಗುವ ನಮ್ಮ ನಿಜ ‘ನಿತ್ಯೋತ್ಸವ’ದ ಕವಿ. ಜೋಗದ ಸಿರಿಬೆಳಕಿನಲ್ಲಿ ಹಾಡನ್ನು ಹಾಡಿಕೊಂಡಾಗಲೆಲ್ಲಾ ಅದೇನೋ ತುಂಬು ಆನಂದ ಸಿಗುತ್ತದೆ. ಬೆಣ್ಣೆ ಕದ್ದ ನಮ್ಮ ಕೃಷ್ಣ ನೆನೆದಾಗಲೆಲ್ಲ ಆ ಕೃಷ್ಣ ನಮ್ಮ ಕಣ್ಣ ಮುಂದೆಯೇ ಇಲ್ಲೇ ಎಲ್ಲೋ ಓಡಾಡುತ್ತಿರುವಂತೆ ಭಾಸವಾಗುತ್ತದೆ. ಅವರು ಮಾಸ್ತಿಯವರನ್ನು ವರ್ಣಿಸುವಾಗ ಗಾಂಧೀ ಬಜಾರಿನಲ್ಲಿ ಅಂದು ಹೋದಾಗಲೆಲ್ಲಾ ಕಣ್ಣಿಗೆ ಬೀಳುತ್ತಿದ್ದ ಮಾಸ್ತಿಯವರ ಚಿತ್ರ ಕಣ್ಣ ಮುಂದೆ ಬಂದು […]

Advertisement

Wordpress Social Share Plugin powered by Ultimatelysocial