ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಬ್ಬ ಮಹಿಳೆ ಆಗಿದ್ದರೆ

ಲಂಡನ್, ಜೂನ್ 30: ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕುತೂಹಲಭರಿತ ಪ್ರತಿಕ್ರಿಯೆ ನೀಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಬ್ಬ ಮಹಿಳೆ ಆಗಿದ್ದರೆ ಉಕ್ರೇನ್ ಮೇಲೆ ಹುಚ್ಚುಚ್ಚಾಗಿ ಮೇಲೆರಗಿ ಯುದ್ಧ ಮಾಡುತ್ತಿರಲಿಲ್ಲ ಎಂದು ಬೋರಿಸ್ ಹೇಳಿದ್ದಾರೆ.

ಜರ್ಮನಿಯ ಕ್ರುನ್ ಜಿಲ್ಲೆಯ ಶ್ಲಾಸ್ ಎಲ್ಮಾವು ಎಂಬಲ್ಲಿ ನಡೆದ G7 ಶೃಂಗಸಭೆಯ ಬಳಿಕ ಮಾಧ್ಯಮ ಸಂದರ್ಶನವೊಂದರಲ್ಲಿ ಬೋರಿಸ್ ಜಾನ್ಸನ್ ಮಾತನಾಡುತ್ತಾ ಪುಟಿನ್ ಬಗ್ಗೆ ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸಿದರು.

ವ್ಲಾದಿಮಿರ್ ಪುಟಿನ್ ಅವರ ಗಡುಸು ವ್ಯಕ್ತಿತ್ವ ಮತ್ತು ಪೌರುಷತನದ ಅಂಶಗಳು ಉಕ್ರೇನ್ ಮೇಲೆ ರಷ್ಯಾ ಯುದ್ಧಕ್ಕೆ ಏರಿ ಹೋಗಲು ಪ್ರಮುಖ ಕಾರಣ ಎಂಬುದು ಬೋರಿನ್ ಜಾನ್ಸನ್ ವಿಶ್ಲೇಷಣೆ.

“ಪುಟಿನ್ ಮಹಿಳೆಯಾಗಿದ್ದರೆ ಈ ರೀತಿ ಹುಚ್ಚುಚ್ಚಾಗಿ ಮತ್ತು ಭೀಕರವಾಗಿ ಆಕ್ರಮಣ ಮಾಡುತ್ತಿರಲಿಲ್ಲ, ಹಿಂಸಾಚಾರ ಎಸಗುತ್ತಿರಲಿಲ್ಲ” ಎಂದು ಜರ್ಮನಿಯ ಝಡ್‌ಡಿಎಫ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟರು. ವ್ಲಾದಿಮಿರ್ ಪುಟಿನ್ ಅವರು ಮ್ಯಾಚೊಮ್ಯಾನ್ ಎಂಬ ರೀತಿಯಲ್ಲಿ ಬಿಂಬಿಸುವ ಅನೇಕ ಚಿತ್ರಗಳು ವೈರಲ್ ಆಗಿರುವುದು ಹೌದು. ಈ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಪ್ರತಿಕ್ರಿಯೆ ಬಂದಿದೆ.

ವ್ಲಾದಿಮಿರ್ ಪುಟಿನ್ ಪೌರುಷತನದ ವ್ಯಕ್ತಿತ್ವ ಉಕ್ರೇನ್-ರಷ್ಯಾ ಯುದ್ಧಕ್ಕೆ ಕಾರಣ ಎಂಬುದು ಬ್ರಿಟನ್ ಪ್ರಧಾನಿಗಳ ಒಂದು ಅನಿಸಿಕೆ. ಅದಕ್ಕಿಂತ ಹೆಚ್ಚಾಗಿ, ಮಹಿಳೆಯರು ಅಧಿಕಾರದಲ್ಲಿದ್ದರೆ ಯುದ್ಧದಂತಹ ಅನಾಹುತ ಹೆಚ್ಚು ಸಂಭವಿಸುವುದಿಲ್ಲ ಎಂಬುದು ಬೋರಿಸ್ ಜಾನ್ಸನ್ ಹೇಳಬೇಕೆಂದಿದ್ದ ಸಂದೇಶ.

ಹೆಚ್ಚೆಚ್ಚು ಮಹಿಳೆಯರು ಅಧಿಕಾರದ ಆಯಕಟ್ಟಿನ ಜಾಗದಲ್ಲಿ ಇದ್ದರೆ ಜಾಗತಿಕ ಶಾಂತಿಗೆ ಸಹಕಾರಿ ಆಗುತ್ತದೆ ಎಂದೂ ಬೋರಿಸ್ ಜಾನ್ಸನ್ ಹೇಳಿದರು.

ಪೌರುಷತನಕ್ಕೆ ಕೆಟ್ಟ ಉದಾಹರಣೆ

ವ್ಲಾದಿಮಿರ್ ಪುಟಿನ್ ತೆರೆದೆದೆಯನ್ನು ತೋರಿಸುತ್ತಾ ಕುದುರೆ ಮೇಲೆ ಕೂತಿರುವ ಚಿತ್ರವೊಂದು ಬಹಳ ವೈರಲ್ ಆಗಿದೆ. ಜಿ7 ಶೃಂಗಸಭೆ ಪುಟಿನ್ ಅವರ ಈ ಪೌರಷತನದ ಚಿತ್ರವನ್ನು ವಿವಿಧ ದೇಶಗಳ ನಾಯಕರು ಲೇವಡಿ ಮಾಡಿದ್ದರು.

ಈ ಬಗ್ಗೆ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಬೋರಿಸ್ ಜಾನ್ಸನ್, “ನಿಮಗೆ ಅಪಾಯಕಾರಿಯಾದ ಪೌರುಷತನಕ್ಕೆ ಒಳ್ಳೆಯ ಉದಾಹರಣೆ ಬೇಕೆಂದರೆ, ಪುಟಿನ್ ಈಗ ಮಾಡುತ್ತಿರುವುದನ್ನು ನೋಡಿ,” ಎಂದು ಬ್ರಿಟನ್ ಪ್ರಧಾನಿ ತಿಳಿಸಿದರು.

ಪಾಶ್ಚಿಮಾತ್ಯ ದೇಶಗಳ ಯುದ್ಧಸಿದ್ಧತೆ

ಜೂನ್ 28ರಂದು ಮುಕ್ತಾಯಗೊಂಡ ಜಿ7 ಶೃಂಗಸಭೆಯಲ್ಲಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ನ್ಯಾಟೋ ಸಂಘಟನೆಯ ದೇಶಗಳಿಗೆ ಮಿಲಿಟರಿ ವೆಚ್ಚ ಹೆಚ್ಚು ಮಾಡುವಂತೆ ಕರೆ ನೀಡಿದ್ದರು.

ಹಾಗೆಯೇ, ರಷ್ಯಾ ವಿಚಾರದಲ್ಲಿ ಬ್ರಿಟನ್ ಕರುಣೆ ತೋರಬಾರದು ಎಂದು ತಮ್ಮ ದೇಶದ ಜನರು ನಿರೀಕ್ಷಿಸಿದ್ದಾರೆ ಎಂದು ಹೇಳುವ ಮೂಲಕ ಬೋರಿಸ್ ಜಾನ್ಸನ್ ಮುಂದಾಗುವ ಬೆಳವಣಿಗೆಯ ಬಗ್ಗೆ ಸುಳಿವು ನೀಡಿದ್ದಾರೆ.

ಸ್ಪೇನ್ ದೇಶದ ಮ್ಯಾಡ್ರಿಡ್‌ನಲ್ಲಿ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್, ಅಥವಾ ನ್ಯಾಟೋದ ಸಭೆಯ ನಡೆಯಲಿದ್ದು, ಅಲ್ಲಿ ಭವಿಷ್ಯದ ಅಪಾಯಗಳನ್ನು ಹೇಗೆ ಎದುರಿಸಬಹುದು ಎಂಬುದರ ಚರ್ಚೆಯಾಗಲಿದೆ. ಇಲ್ಲಿ ಉಕ್ರೇನ್‌ನಿಂದ ಕಾಲ್ತೆಗೆಯದೇ ಯುದ್ಧ ಮುಂದುವರಿಸಿರುವ ರಷ್ಯಾ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು ಎಂದೂ ಅವಲೋಕಿಸಬಹುದು.

ರಷ್ಯಾ ಮೇಲೆ ಇನ್ನಷ್ಟು ಕಠಿಣ ಕ್ರಮ

ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ವಿವಿಧ ಆರ್ಥಿಕ ನಿಷೇಧ ಕ್ರಮಗಳನ್ನು ಮುಂದುವರಿಸುತ್ತಲೇ ಇವೆ. ವ್ಲಾದಿಮಿರ್ ಪುಟಿನ್ ಅವರ ಆಪ್ತರೆಂದು ಪರಿಗಣಿಸಲಾದ ಹಾಗೂ ರಷ್ಯಾದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಎನಿಸಿದ ವ್ಲಾದಿಮಿರ್ ಪೊಟಾನಿನ್   ಅವರನ್ನು ಗುರಿಯಾಗಿಸಿ ಬ್ರಿಟನ್ ದೇಶ ಹೊಸ ನಿಷೇಧಗಳನ್ನು ಹೇರಿದೆ.

ಇಂಟೆರೋಸ್ ಎಂಬ ಬಹುದೊಡ್ಡ ಕಂಪನಿಯ ಮಾಲೀಕರಾದ ಪೊಟಾನಿನ್ ಇತ್ತೀಚಿನವರೆಗೂ ಭಾರಿ ಹಣ ಸಂಪಾದನೆ ಮಾಡಿದ್ದಾರೆ. ಪುಟಿನ್‌ಗೆ ಬೆಂಬಲ ನೀಡುತ್ತಿರುವ ಪೊಟಾನಿನ್ ಮೇಲೆ ಈಗ ಪಾಶ್ಚಿಮಾತ್ಯ ದೇಶಗಳ ಕಣ್ಣು ಬಿದ್ದಿದೆ.

ಹಾಗೆಯೇ, ಪುಟಿನ್ ಅವರ ಸಂಬಂಧಿಯಾಗಿರುವ ಹಾಗೂ ರಷ್ಯಾದ ಕಲ್ಲಿದ್ದಲು ಗಣಿಗಾರಿಕೆ ಕಂಪನಿಯ ಅಧ್ಯಕ್ಷೆಯಾಗಿರುವ ಆನಾ ಸಿವಿಲೇವಾ (Anna Tsivileva) ಅವರ ಮೇಲೂ ಬ್ರಿಟನ್ ಆರ್ಥಿಕ ನಿಷೇಧ ಹಾಕಿದೆ. ಹಾಗೆಯೇ, ಸಿರಿಯಾದಲ್ಲಿ ಅಲ್ಲಿನ ಅಧ್ಯಕ್ಷರಿಗೆ ಬೆಂಬಲ ನೀಡುತ್ತಿರುವ ರಷ್ಯನ್ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೂ ಬ್ರಿಟನ್ ಸರಕಾರ ನಿಷೇಧ ಕ್ರಮ ಜಾರಿ ಮಾಡುತ್‌ಇದೆ.

ಆರ್ಥಿಕ ನಿಷೇಧ ಕ್ರಮ ಎಂದರೆ ಆ ವ್ಯಕ್ತಿ ಅಥವಾ ಕಂಪನಿ ಜೊತೆ ಯಾವುದೇ ರೀತಿಯ ವ್ಯವಹಾರ ಇಟ್ಟುಕೊಳ್ಳಲಾಗದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಜೂ30ರ ಪ್ರಮುಖ ರಾಜಕೀಯ ವಿದ್ಯಮಾನಗಳು

Thu Jun 30 , 2022
ಬೆಂಗಳೂರು, ಜೂ.30: ಬೆಂಗಳೂರಿನಲ್ಲಿ ಗುರುವಾರ (ಜೂ .30) ನಡೆಯಲಿರುವ ವಿವಿಧ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳ ಕಾರ್ಯಕ್ರಗಳು, ಪ್ರತಿಭಟನೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಬೆಳಗ್ಗೆ 9.30:ತುಮಕೂರಿನ ಶ್ರೀ ಸಿದ್ಧಾರ್ಥ ಎಜ್ಯುಕೇಶನ್ ಸೊಸೈಟಿ ಮತ್ತು ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ವತಿಯಿಂದ ‘ವೃಕ್ಷಮಾತೆ, ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕನವರ 111ನೇ ಜನ್ಮದಿನದ ಸಂಭ್ರಮ ಹಾಗೂ ನ್ಯಾಷನಲ್ ಗ್ರೀನರಿ ಪ್ರಶಸ್ತಿ -2020 ಪ್ರದಾನ ಸಮಾರಂಭ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ […]

Advertisement

Wordpress Social Share Plugin powered by Ultimatelysocial