ಚಾರ್ಲ್ಸ್ ಡಾರ್ವಿನ್ ಮಹಾನ್ ವಿಜ್ಞಾನಿ.

 

ಆಧುನಿಕ ಜೀವವಿಜ್ಞಾನಕ್ಕೆ ಬುನಾದಿ ಒದಗಿಸಿದ ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ 1809ರ ವರ್ಷದ ಫೆಬ್ರುವರಿ 12ರಂದು ಜನಿಸಿದರು. ತಂದೆಯ ವೈದ್ಯವೃತ್ತಿಯಲ್ಲಿ ಸಹಾಯ ಮಾಡುತ್ತಿದ್ದ ಡಾರ್ವಿನ್ ಎಡಿನ್ಬರೋ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸವನ್ನೇನೋ ಪ್ರಾರಂಭಿಸಿದರು. ಏಕೋ ಮನಸ್ಸು ಕೂಡಲಿಲ್ಲ. ಅವರ ಮನಸ್ಸು ‘ಜೀವಶಾಸ್ತ್ರ’ಗಳ ಅಧ್ಯಯನದ ಹಿಂದೆ ಓಡತೊಡಗಿತ್ತು. ಮಗ ವೈದ್ಯಕೀಯ ಅಭ್ಯಾಸವನ್ನು ನಿರ್ಲಕ್ಷಿಸುತ್ತಿರುವುದು ತಂದೆಗೆ ಬೇಸರ ಉಂಟುಮಾಡಿತು. ಹಾಗಾಗಿ ಇವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕ್ರಿಸ್ತ ಕಾಲೇಜಿಗೆ ಬಿ.ಎ. ಪದವಿಗಾಗಿ ಸೇರಿಸಿದರು. ಅಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಜಾನ್ ಸ್ಟೀವನ್ಸ್ ಹೆನ್ಸ್ಲೊ ಅವರ ಪಟ್ಟ ಶಿಷ್ಯರಾದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿದ್ದಾಗ ವಿಲಿಯಂ ಪೇಲೆ, ಜಾನ್ ಹೆರ್ಶೆಲ್, ಅಲೆಕ್ಸಾಂಡರ್ ವಾನ್ ಹುಮ್ಬೊಲ್ಟ್ ಮತ್ತಿತರರ ಪುಸ್ತಕಗಳನ್ನು ಓದಿ ಪ್ರಭಾವಿತರಾದರು. ಆಗಿನ ಪ್ರಖ್ಯಾತ ಭೂರಚನಶಾಸ್ತ್ರಜ್ಞರಾಗಿದ್ದ ಆಡಮ್ ಸೆಡ್ಜ್‌ವಿಕ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯ ಕೈಗೊಂಡರು. ಈ ಹೊತ್ತಿಗೆ ಹೆನ್ಸ್ಲೊ ಅವರು ಡಾರ್ವಿನ್ ಅವರನ್ನು ದಕ್ಷಿಣ ಅಮೇರಿಕ ಖಂಡಕ್ಕೆ ಅಧ್ಯಯನ ನಡೆಸ ಹೊರಟಿದ್ದ ‘ಎಚ್ ಎಮ್ ಎಸ್ ಬೀಗಲ್’ ಹಡಗಿನಲ್ಲಿನ ಜೀವಶಾಸ್ತ್ರಜ್ಞ ಪಯಣಿಗನನ್ನಾಗಿ ಶಿಫಾರಸ್ಸು ಮಾಡಿದರು.ಬೀಗಲ್ ಹಡಗು ಸುಮಾರು 5 ವರ್ಷಗಳವರೆಗೆ ತನ್ನ ಪರ್ಯಟನೆಯನ್ನು ನಡೆಸಿತು. ಈ ಪ್ರವಾಸದಲ್ಲಿ ಡಾರ್ವಿನ್ ಹೋದ ಕಡೆಗಳಲ್ಲೆಲ್ಲಾ ಅಲ್ಲಿನ ಭೂರಚನೆ ಮತ್ತು ಜೀವ ವೈವಿಧ್ಯಗಳನ್ನು ಅಧ್ಯಯನ ಮಾಡಿದರು. ಸಮುದ್ರಯಾನದಿಂದ ಅಸ್ವಸ್ಥರಾಗಿದ್ದರೂ ಈ ಅಧ್ಯಯನಗಳನ್ನು ಬಹಳ ಎಚ್ಚರಿಕೆಯಿಂದ ದಾಖಲಿಸಿದರು. ನೀರಿನಲ್ಲಿ ವಾಸಿಸುವ ಬೆನ್ನೆಲುಬುಳ್ಳ ಪ್ರಾಣಿಗಳ ಬಗೆಗೆ ಅತ್ಯಂತ ಹೆಚ್ಚು ಮಾಹಿತಿ ಸಂಗ್ರಹಿಸಿದರು. ಪೆಟಗೋನಿಯ ಪ್ರದೇಶದಲ್ಲಿದ್ದಾಗ ಅವರು ಅಳಿದುಹೋಗಿರುವ ಸಸ್ತನಿ ಪ್ರಾಣಿಗಳ ಒಂದು ದೊಡ್ಡ ಜೀವಪಳಯುಳಿಕೆ ಪ್ರದೇಶವನ್ನು ಕಂಡುಕೊಂಡರು. ಮುಂದೆ ಗ್ಯಾಲಾಪಗೊಸ್ ದ್ವೀಪಗಳಲ್ಲಿ ವೈವಿಧ್ಯಮಯ ಜೀವಿಗಳನ್ನು ಕಂಡರು. ಇಂಥಹ ಜೀವಿಗಳು ಪ್ರಪಂಚದ ಬೇರೆಲ್ಲೂ ಇಲ್ಲದಿದ್ದರಿಂದ, ಎಲ್ಲಾ ತರಹದ ಜೀವಿಗಳೂ ಒಂದೇ ಕಾಲಮಾನದಲ್ಲಿ ಸೃಷ್ಟಿಯಾದವು ಎಂಬ ಸಿದ್ಧಾಂತದ ಬಗ್ಗೆ ಅವರಲ್ಲಿ ತೀವ್ರ ಸಂಶಯಗಳನ್ನು ಹುಟ್ಟುಹಾಕಿದವು. ಇವರು ಗ್ಯಾಲಪಗೋಸ್ ದ್ವೀಪಗಳಲ್ಲಿ ಸಂಗ್ರಹಿಸಿದ್ದ ಪಕ್ಷಿಗಳು, ಫಿಂಚ್ ಮತ್ತು ವ್ರೆನ್ ಕುಟುಂಬದ 12 ವಿವಿಧ ಪ್ರಜಾತಿಗಳಿಗೆ ಸೇರಿರುವಂತಹವು ಎಂಬುದನ್ನು ಪಕ್ಷಿ ತಜ್ಞ ಜಾನ್ ಗೂಲ್ಡ್ ಗುರುತಿಸಿದರು.ಮುಂದೆ ಡಾರ್ವಿನ್ ಅವರು ಲಂಡನ್ ನಗರಕ್ಕೆ ಸ್ಥಳಾಂತರಗೊಂಡರು. ಇಲ್ಲಿ ಚಾರ್ಲ್ಸ್ ಲ್ಯೆಲ್ ಅವರೊಡನೆ ಸೇರಿದ್ದ ಚಿಂತಕರ ಗುಂಪೊಂದನ್ನು ಸೇರಿದರು. ಆಗಿನ ಪ್ರಮುಖ ಚಿಂತಕರು ಎಲ್ಲಾ ಪ್ರಜಾತಿಗಳು ಒಮ್ಮೆಲೇ ಸೃಷ್ಟಿಹೊಂದಿದವು ಎಂಬ ವಾದವನ್ನು ನಂಬಿದ್ದರು. ಆದರೆ ಡಾರ್ವಿನ್ ತಮ್ಮ ಗ್ಯಾಲಪಗೋಸ್ ಪಕ್ಷಿಗಳ ವೈವಿಧ್ಯತೆಯ ಬಗ್ಗೆ ಯೋಚಿಸುತ್ತ, ಒಂದು ಪ್ರಜಾತಿ ಇತರ ಪ್ರಜಾತಿಗಳಾಗಿ ಪರಿವರ್ತನಗೊಳ್ಳುವ ಸಾಧ್ಯತೆಗಳಿವೆ ಎಂದು ಚಿಂತಿಸತೊಡಗಿದ್ದರು. ಇದರ ಜೊತೆಗೆ ಇವರು ತಮ್ಮ ಸುದೀರ್ಘ ಪ್ರವಾಸದ ಕುರಿತಾಗಿ ಒಂದು ಪುಸ್ತಕವನ್ನು ಕೂಡ ಬರೆಯಲು ಪ್ರಾರಂಭಿಸಿದರು. ಅನೇಕ ಸಂಪುಟಗಳಲ್ಲಿ ಪ್ರಕಟವಾದ ಜುವಾಲಜಿ ಆಫ್ ದ ವಾಯೇಜ್ ಆಫ್ ಎಚ್.ಎಮ್.ಎಸ್. ಬೀಗಲ್ ಮೇಲೆ ತೀವ್ರವಾಗಿ ಕೆಲಸ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶಾದ್ಯಂತ ನಕ್ಸಲರ ಸಂಘಟನೆಗಳಿಗೆ ರಾಜಕೀಯ ಪಕ್ಷಗಳ ಬೆಂಬಲವಿದೆ.

Sun Feb 12 , 2023
ಕವರ್ಧಾ (ಛತ್ತಿಸ್ಗಢ) – ದೇಶಾದ್ಯಂತ ನಕ್ಸಲರ ಸಂಘಟನೆಗಳಿಗೆ ರಾಜಕೀಯ ಪಕ್ಷಗಳ ಬೆಂಬಲವಿದೆ. ನಕ್ಸಲರಿಗೆ ರಾಜಕೀಯ ಪಕ್ಷಗಳಿಂದ ರಾಜಕೀಯ ಆಶ್ರಯ ಸಿಕ್ಕಿದೆ, ಎಂದು ಗೋವರ್ಧನ ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಹೇಳಿದರು. ಜಗದಲಪುರ ಇಲ್ಲಿಯ ಧರ್ಮ ಸಂಸತ್ತಿನ ಸಮಯದಲ್ಲಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರ ನೀಡುವಾಗ ಈ ಹೇಳಿಕೆ ನೀಡಿದರು. ಅವರು ಮಾತು ಮುಂದುವರಿಸಿ, “ಆಡಳಿತದಲ್ಲಿರುವ ಪಕ್ಷ ಮತ್ತು ವಿರೋಧಿ ಪಕ್ಷದವರಿಂದ ನಕ್ಸಲರಿಗೆ ನೀಡುವ ಬೆಂಬಲ ನಿಲ್ಲಿಸಿದರೇ ದೇಶದಲ್ಲಿ […]

Advertisement

Wordpress Social Share Plugin powered by Ultimatelysocial