ಸುಮಲತಾ vs ಪ್ರತಾಪ್ ಸಿಂಹ ನಡುವೆ ಕೋಲ್ಡ್​ ವಾರ್​!

ಮಂಡ್ಯ, ಮೈಸೂರು ಭಾಗದ ಬಹುವರ್ಷಗಳ ಕನಸು ಕೊನೆಗೂ ನನಸಾಗಿದೆ. ಸಕ್ಕರೆ ನಾಡಿನಲ್ಲಿ ಕೇಸರಿ ಕಲರವದೊಂದಿಗೆ ದಶಪಥ ಹೆದ್ದಾರಿಯನ್ನ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಪ್ರಧಾನಿ ಮೋದಿ ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಕೆಲವು ಘಟನೆಗಳು ವಿವಾದಕ್ಕೆ ಕಾರಣವಾಗಿವೆ.

ಈ ನಡುವೆ ಮತ್ತೆ ಸಂಸದರ ಕೋಲ್ಡ್​ ವಾರ್ ಶುರುವಾಗಿದೆ.

ಮದುಮಗಳಂತೆ ಸಿಂಗಾರಗೊಂಡಿದ್ದ ಸಕ್ಕರೆನಾಡು. ಸಂಪೂರ್ಣ ಕೇಸರಿಯಮವಾಗಿದ್ದ ಜೆಡಿಎಸ್ ಭದ್ರಕೋಟೆ. ಎಲ್ಲೆಡೆ ರಾರಾಜಿಸಿದ್ದ ಪ್ರಧಾನಿ ಮೋದಿ ಫ್ಲೆಕ್ಸ್ ಮತ್ತು ಬ್ಯಾನರ್​ಗಳು. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನ. ಎಲ್ಲೆಲ್ಲೂ ಮೋದಿ, ಮೋದಿ ಉದ್ಘೋಷ. ಅಂತೂ ಇಂತೂ ಕ್ರೆಡಿಟ್ ವಾರ್ ನಡುವೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ಮೋದಿ ಅದ್ಧೂರಿಯಾಗಿ ಲೋಕಾರ್ಪಣೆ ಮಾಡಿದ್ದಾರೆ.

ರೋಡ್ ಶೋ ಮೂಲಕ ಸಾಗಿ ಬಂದ ಪ್ರಧಾನಿ ಮೋದಿ ಮಂಡ್ಯದ ಅಮರಾವತಿ ಹೊಟೇಲ್ ಬಳಿ ದಶಪಥ ಹೆದ್ದಾರಿಗೆ ಎಂಟ್ರಿ ಕೊಟ್ಟರು. ಬಳಿಕ ಸುಮಾರು 8 ವರೆ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ದಶಪಥ ಹೆದ್ದಾರಿ ಉದ್ಘಾಟಿಸಿದರು. ಇನ್ನು ಗೆಜ್ಜಲಗೆರೆಯ ಬೃಹತ್ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಸೇರಿ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು. ಬಿಜೆಪಿಗೆ ಬೆಂಬಲ ಘೋಷಿಸಿರುವ ಸಂಸದೆ ಸುಮಲತಾ ಮೋದಿ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ಮಿಂಚಿದ್ರು.

ಮುಂದುವರೆದ ಸುಮಲತಾ v/s ಪ್ರತಾಪ್ ಸಿಂಹ ವಾರ್​

ಇನ್ನು ಮೋದಿ ಆಗಮಿಸಿದ ಹೊತ್ತಲ್ಲೇ ಸಂಸದರಾದ ಸುಮಲತಾ ವರ್ಸಸ್​ ಪ್ರತಾಪ್ ಸಿಂಹ ನಡುವಿನ ವಾರ್​ ಮುಂದುವರೆದಿದೆ. ಸಂಸದೆ ಪಕ್ಷಕ್ಕೆ ಬೆಂಬಲ ನೀಡಿದ ಬಳಿಕವೂ ಇಬ್ಬರ ನಡುವೆ ಕೋಲ್ಡ್ ವಾರ್ ಮುಂದುವರೆದಿದೆ. ದಶಪಥ ಹೆದ್ದಾರಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರತಾಪ್ ಸಿಂಹರನ್ನ ಕಾರ್ಯಕ್ರಮದಲ್ಲಿ ಕಡೆಗಣನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆಹ್ವಾನ ಪತ್ರಿಕೆಯಲ್ಲಿ ಸಂಸದೆ ಸುಮಲತಾ ಹೆಸರು ಮಾತ್ರವಿದ್ದು ಪ್ರತಾಪ್ ಸಿಂಹ ಹೆಸರಿಗೆ ಬ್ರೇಕ್​ ಬಿದ್ದಿದ್ದರಿಂದ ಈ ಶೀತಲ ಸಮರ ಮತ್ತೆ ಮುನ್ನೆಲೆ ಬಂದಿದೆ. ಇದೇ ವಿಚಾರ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದ್ರೆ ಮಂಡ್ಯದಲ್ಲಿ ಕಾರ್ಯಕ್ರಮ ನಡೆದಿದ್ದರಿಂದ ಸುಮಲತಾ ಹೆಸರು ಹಾಕಲಾಗಿದೆ. ತಪ್ಪು ತಿಳಿಬೇಡಿ ಅಂತ ಟ್ವೀಟ್​ ಮಾಡಿ ಪ್ರತಾಪ್ ಸಿಂಹ ವಿವಾದಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

ಕಾಲಿಗೆ ಬೀಳಲು ಬಂದಿದ್ದ ಮಹಿಳೆಗೆ ಶಿರಭಾಗಿ ನಮಿಸಿದ ಮೋದಿ

ಇನ್ನು ಮಂಡ್ಯದಲ್ಲಿ ದಶಪಥ ರಸ್ತೆ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಕಾಲಿಗೆ ಬೀಳಲು ಮುಂದಾಗಿದ್ದ ಮಹಿಳೆಗೆ ಮೋದಿ ನಮಸ್ಕರಿಸಿದ್ದಾರೆ. ಗಜ್ಜಲೆಗೆರೆ ಬಳಿ ನಡೆದ ಕಾರ್ಯಕ್ರಮದ ವೇಳೆ ಬಿಜೆಪಿ ಮುಖಂಡರು ಸಾಲಾಗಿ ನಿಂತು ಸ್ವಾಗತ ಕೋರುತ್ತಿದ್ರು. ಈ ವೇಳೆ ಕಾಲಿಗೆ ಬೀಳಲು ಮುಂದಾದ ಮಹಿಳೆ ಮುಂದೆಯೇ ಮೋದಿ ಶಿರಭಾಗಿ ನಮಸ್ಕರಿಸಿದರು. ಮಂಡ್ಯ ಮಾತ್ರವಲ್ಲ ಧಾರವಾಡದ ಐಐಟಿ ಉದ್ಘಾಟನಾ ವೇದಿಕೆ ಮೇಲೂ ಇಂತದ್ದೇ ಪ್ರಸಂಗ ನಡೀತು. ಕಾಲಿಗೆ ನಮಸ್ಕರಿಸಲು ಬಂದ ಆರ್​ಎಸ್‌ಎಸ್ ಕಾರ್ಯಕರ್ತನಿಗೆ ಮೋದಿಯೇ ಶಿರಬಾಗಿ ನಮಸ್ಕರಿಸಿದ್ದಾರೆ.

ರೌಡಿಶೀಟರ್‌ ಫೈಟರ್​ ರವಿಗೆ ಕೈಮುಗಿದ ಪ್ರಧಾನಿ

ಮೋದಿಯಿಂದ ಪ್ರಧಾನಿ ಹುದ್ದೆಗೆ ಕಳಂಕವೆಂದು ಕಾಂಗ್ರೆಸ್ ಕಿಡಿ

ಇನ್ನು ಫೈಟರ್ ರವಿ ಬಿಜೆಪಿ‌ ಸೇರ್ಪಡೆ ವೇಳೆ ಸೃಷ್ಟಿಯಾಗಿದ್ದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ನಿನ್ನೆ ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸಿದ ವೇಳೆ ಪಿಇಎಸ್ ಹೆಲಿಪ್ಯಾಡ್‌ನಲ್ಲಿ ಫೈಟರ್ ರವಿ ಸ್ವಾಗತ ಕೋರಿದ್ದಾರೆ. ಈ ಸಂದರ್ಭ ಮೋದಿ ಕೂಡ ಫೈಟರ್​ ರವಿಗೆ ಕೈಮುಗಿದಿದ್ದಾರೆ. ಸದ್ಯ ಇದನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್, ರೌಡಿಶೀಟರ್‌ಗೆ ಕೈಮುಗಿದು ಪ್ರಧಾನಿ ಹುದ್ದೆಗೆ ಮೋದಿ ಕಳಂಕ ತಂದಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಕಿಡಿಕಾರಿದೆ.

ಕಾರ್ಯಕ್ರಮಕ್ಕೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ

ಇನ್ನು ಪ್ರಧಾನಿ ಮೋದಿಯಿಂದ ದಶಪಥ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಸಂಸದ ಡಿಕೆ ಸುರೇಶ್​ ಆರೋಪಿಸಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿಯ ಬಹು ಭಾಗವು ನಾನು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾದುಹೋಗಿದೆ. ಆದ್ರೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುವ ಕನಿಷ್ಟ ಸೌಜನ್ಯವೂ ಸರ್ಕಾರಕ್ಕಿಲ್ಲ ಅಂತ ಸರಣಿ ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ದಶಪಥ ಹೆದ್ದಾರಿ ಲೋಕಾರ್ಪಣೆಯ ಅದ್ಭುತ ಕ್ಷಣವನ್ನು ಕೇಸರಿ ಕಲಿಗಳು ಹಾಗೂ ಮಂಡ್ಯ, ಮೈಸೂರು ಭಾಗದ ಜನ ಕಣ್ತುಂಬಿಕೊಂಡಿದ್ದಾರೆ. ವಾಹನ ಸವಾರರು ಎಕ್ಸ್​ಪ್ರೆಸ್​ ಹೈವೇಯ ಅನುಕೂಲ ಪಡೆಯುತ್ತಿದ್ದಾರೆ. ಆದ್ರೆ ಮೋದಿ ಆಗಮನದ ಬಳಿಕ ಕೆಲವೊಂದು ವಿಚಾರಗಳು ವಿವಾದದ ಕಿಡಿ ಹೊತ್ತಿಸಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಧುನಿಕ ಭಗೀರಥ ಎಂಬಿ ಪಾಟೀಲ್ ಕಂಚಿನ ಪ್ರತಿಮೆ !

Mon Mar 13 , 2023
ಬರದನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಕ್ರಾಂತಿ ಮಾಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಆಧುನಿಕ ಭಗೀರಥ ಎಂದು ಖ್ಯಾತಿ ಪಡೆದಿದ್ದಾರೆ. ಸಂಗಾಪುರ ಎಸ್ ಎಚ್ ಗ್ರಾಮಸ್ಥರು 7ಲಕ್ಷ ರೂಪಾಯಿ ವೆಚ್ಚದಲ್ಲಿ ಕಂಚಿನ ಮೂರ್ತಿ ತಯಾರಿಸಿ ಮಾರ್ಚ್ 17ರಂದು ಅನಾವರಣಗೊಳಿಸಲಿದ್ದಾರೆ. ಎಂಬಿ ಪಾಟೀಲ್ 2013ರಿಂದ 2018ವರೆಗೆ ಜಲಸಂಪನ್ಮೂಲ ಸಚಿವರಾಗಿ ತಾವು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ಅದರಲ್ಲಿ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್.ಗ್ರಾಮದಲ್ಲಿ […]

Advertisement

Wordpress Social Share Plugin powered by Ultimatelysocial