ಅರಿತು ಕುಡಿದರೆ ಆರೋಗ್ಯ – ಬೇಸಿಗೆಯಲ್ಲಿ ಎಂತಹ ಪಾನೀಯ ಪಾನ ಮಾಡಬೇಕು?

‘ಶಿವರಾತ್ರಿ ಬಂತು, ಚಳಿ ಶಿವ ಶಿವಾ ಅಂತ ಓಡಿಹೋಯ್ತು’ ಎಂಬುದು ಜನಪದರ ಹವಾಮಾನ ವಿಶ್ಲೇಷಣೆ. ಅದು ವಾಸ್ತವಿಕವೂ ಹೌದು.

ಶಿವರಾತ್ರಿ ಕಾಲ ಬದಲಾವಣೆಯನ್ನು ಸೂಚಿಸುವ ಹಬ್ಬ. ಅತಿ ಚಳಿಯಿಂದ ಬಿಸಿಲಿಗೆ ಒಡ್ಡಿಕೊಳ್ಳುವ ಸಮಯ. ಚಳಿಗಾಲದಲ್ಲಿ ದೇಹಕ್ಕೆ ಅತಿ ಕಡಿಮೆ ದ್ರವ ಪದಾರ್ಥಗಳ ಅವಶ್ಯಕತೆ ಇದ್ದರೆ, ಬೇಸಿಗೆಯಲ್ಲಿ ಅವುಗಳ ಅವಶ್ಯಕತೆ ಹೆಚ್ಚಾಗುತ್ತಾ ಹೋಗುತ್ತದೆ.

ಅದನ್ನು ಪೂರೈಸಲು ಪಾನೀಯ ಪಾನ ಅವಶ್ಯಕ. ಆದರೆ ಎಂತಹ ಪಾನೀಯಗಳನ್ನು ಪಾನ ಮಾಡಬೇಕೆನ್ನುವ ವಿವೇಚನೆ ಅತ್ಯವಶ್ಯಕ.

ಎಲ್ಲ ದ್ರವಪದಾರ್ಥಗಳೂ ಪಾನೀಯಗಳೇ. ಬಾಯಾರಿಕೆಯನ್ನು ನೀಗಿಸಲು ಉತ್ತಮ ಪಾನೀಯ ಎಂದರೆ ನೀರು. ಯಾವುದೇ ಕಾಲದಲ್ಲಾದರೂ ಅತಿಯಾಗಿ ನೀರನ್ನು ಸೇವಿಸಿದರೆ ಜೀರ್ಣಶಕ್ತಿಯು ಕಡಿಮೆಯಾಗುತ್ತದೆ, ನೀರನ್ನು ಸೇವಿಸದೇ ಇದ್ದರೆ ಬಳಲಿಕೆ ಉಂಟಾಗುತ್ತದೆ. ಮಿತವಾಗಿ, ಆದರೆ ದೇಹಕ್ಕೆ ಹಿತವಾಗುವಂತೆ ಜಾಣ್ಮೆಯಿಂದ ನೀರನ್ನು ಸೇವಿಸಬೇಕು. ತಂಪಿನಿಂದ ಬಿಸಿಲಿಗೆ ದೇಹ ಒಗ್ಗಿಕೊಳ್ಳುವಾಗ ಉರಿಶೀತವಾಗಿ ಅಲರ್ಜಿ, ನೆಗಡಿ, ಕೆಮ್ಮು ಮುಂತಾದ ತೊಂದರೆಗಳು ಉತ್ಪನ್ನವಾಗಬಹುದು. ಆದ್ದರಿಂದ ಬೇಸಿಗೆ ಪ್ರಾರಂಭವಾದಾಗ ಸಂಸ್ಕರಿತ ನೀರು, ಎಂದರೆ ಏಲಕ್ಕಿ, ಕಾಚು, ಲಾವಂಚ, ಶ್ರೀಗಂಧ ಇವುಗಳಲ್ಲಿ ಯಾವುದಾದರೊಂದನ್ನು ಹಾಕಿ ಕುದಿಸಿ ತಣಿಸಿದ ನೀರನ್ನು ಉಪಯೋಗಿಸಬೇಕು. ಇದರಿಂದ ಅಜೀರ್ಣವೇ ಮೊದಲಾದ ತೊಂದರೆಗಳು, ಉರಿಮೂತ್ರ, ಕಣ್ಣು ಕೆಂಪಾಗುವುದು, ಕಣ್ಣುರಿ, ಗಂಟಲಿನ ಉರಿಯೂತ, ಮೊದಲಾದ ಅನೇಕ ರೋಗಗಳನ್ನು ತಡೆಗಟ್ಟಬಹುದು.

ಪ್ರಕೃತಿದತ್ತವಾಗಿರುವ ಬೇಸಿಗೆಯ ಪಾನೀಯ ಎಂದರೆ ಅದು ಎಳನೀರು. ಇದನ್ನು ಹಿತಮಿತವಾಗಿ ಸೇವಿಸಿದರೆ ದೇಹ-ಮನಸ್ಸೆರಡಕ್ಕೂ ಆಹ್ಲಾದವೀಯುತ್ತದೆ. ಅತಿಸಾರ, ಬಳಲಿಕೆ, ವಾಂತಿಯಾದಾಗ ಎಳನೀರಿನ ಸೇವನೆ ಉತ್ತಮ ಔಷಧರೂಪವಾದ ಆಹಾರ. ಬಿಸಿಲಿನ ಕಾವಿನಿಂದಾಗಿ ಅನೇಕರಿಗೆ ಅತಿಯಾದ ಮಲಬದ್ಧತೆಯಾಗುತ್ತದೆ, ಆಗ ಎಳನೀರನ್ನು ಬಿಸಿಮಾಡಿ, ಎಂದರೆ ಎಳೆನೀರನ್ನು ಒಂದು ಪಾತ್ರೆಗೆ ಬಗ್ಗಿಸಿ, ಆ ಪಾತ್ರೆಯನ್ನು ಬಿಸಿನೀರಿನಲ್ಲಿಟ್ಟು ಬೆಚ್ಚಗೆ ಮಾಡಿ ಕುಡಿಯುವುದರಿಂದ ಮಲಬದ್ಧತೆಯೂ ನಿವಾರಣೆಯಾಗುತ್ತದೆ.

ಬೇಸಗೆಯ ಮತ್ತೊಂದು ಉತ್ತಮವಾದ ಪಾನೀಯ ಎಂದರೆ ಬಾರ್ಲಿಗಂಜಿ ಅಥವಾ ಬಾರ್ಲಿನೀರು. ಬಿಸಿಲಿನ ಬೇಗೆಯಿಂದ ಮೂತ್ರದ ಪ್ರಮಾಣ ಕಡಿಮೆಯಾಗಿ, ಉರಿಮೂತ್ರ ಉಂಟಾದಲ್ಲಿ ದೇಹದ ಉಷ್ಣತೆ ಹೆಚ್ಚಾಗಿ ತಲೆ ತಿರುಗುವುದು ಮೊದಲಾದ ತೊಂದರೆ ಇದ್ದರೆ, ಬಾರ್ಲಿಗಂಜಿ ಅಥವಾ ಬಾರ್ಲಿನೀರು ಉತ್ತಮವಾದ ಪಾನೀಯ. ಬಾರ್ಲಿಹಿಟ್ಟು ಅಥವಾ ಬಾರ್ಲಿಕಾಳನ್ನು ಬೇಯಿಸಿ ಅನ್ನ ಅಥವಾ ಗಂಜಿಯಂತೆಯು ಸೇವಿಸಬಹುದು.

ಹಣ್ಣುಗಳ ಸೇವನೆಗೆ ಉತ್ತಮವಾದ ಕಾಲ ಬೇಸಿಗೆ. ಅವರವರ ದೇಹ ಪ್ರಕೃತಿಗನುಗುಣವಾಗಿ ಹಣ್ಣುಗಳನ್ನು ಅಥವಾ ಹಣ್ಣಿನ ರಸವನ್ನು, ಪಾನಕಗಳನ್ನು ಸೇವಿಸಬಹುದು. ಆದರೆ ಯಾವುದೇ ಕಾರಣಕ್ಕೂ ಹಣ್ಣು ಮತ್ತು ಹಾಲನ್ನು ಬೆರೆಸಿ ತಯಾರಿಸುವ ಪಾನೀಯಗಳನ್ನು ಸೇವಿಸಬಾರದು. ಹಣ್ಣು-ಹಾಲಿನ ಮಿಶ್ರಣ ಎಂದರೆ ‘ಮಿಲ್ಕ್ ಶೇಕ್’, ಫ್ರೂಟ್ ಸಲಾಡಿಗೆ ಹಾಲು ಸೇರಿಸುವುದು, ಹಾಲಿನಿಂದ ತಯಾರಾದ ಐಸ್ ಕ್ರೀಂ ಬೆರೆಸಿ ಸೇವಿಸುವುದು ಅನೇಕ ರೋಗಗಳಿಗೆ ಆಹ್ವಾನವಿತ್ತಂತೆ. ಹಣ್ಣು ಮತ್ತು ಹಾಲು ಎರಡೂ ದೇಹವನ್ನು ಪೋಷಿಸುವ ಆಹಾರವಾದರೂ ಅವೆರಡರ ಮಿಶ್ರಣ ಆರೋಗ್ಯವನ್ನು ಹಾಳುಮಾಡುತ್ತದೆ.

ಬೇಸಗೆಯಲ್ಲಿ ಎಲ್ಲರಿಗೂ ಅತಿ ಪ್ರಿಯವಾದ ಹಣ್ಣು ಕಲ್ಲಂಗಡಿ, ಕರಬೂಜ. ಕಲ್ಲಂಗಡಿ ತಿಂದರೆ ನೆಗಡಿ ಕೆಮ್ಮು ಗಂಟಲುನೋವು ಬರುತ್ತದೆ ಎನ್ನುವವರೂ ಇದ್ದಾರೆ. ಪ್ರಕೃತಿ ಚಿಕಿತ್ಸಕರ ಪ್ರಕಾರ ಕಲ್ಲಂಗಡಿ ಹಣ್ಣು ತಿಂದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಕುಡಿದರೆ ಅದು ದೇಹದಲ್ಲಿನ ಕಶ್ಮಲಗಳನ್ನು ಮೂತ್ರ ಮತ್ತು ಬೆವರಿನ ಮೂಲಕ ಹೊರ ಹಾಕಿ ದೇಹಕ್ಕೆ ತಂಪನ್ನೀವುದರ ಜೊತೆಗೆ ಚರ್ಮರೋಗವೇ ಮೊದಲಾದ ಅನೇಕ ದೀರ್ಘಕಾಲೀನ ರೋಗಗಳನ್ನು ಗುಣಪಡಿಸುತ್ತದೆ. ಆದರೆ ಕಲ್ಲಂಗಡಿಯಲ್ಲಿಯೇ ನೀರಿದೆ ಎಂದು ನೀರನ್ನು ಸೇವಿಸದೆ ಹೋದರೆ ನೆಗಡಿ, ಮೈತುರಿಕೆ, ಉರಿಮೂತ್ರ ಮೊದಲಾದ ರೋಗಗಳು ಉತ್ಪನ್ನವಾಗಲೂಬಹುದು. ಕರಬೂಜಕ್ಕೆ ಉಪ್ಪು ಮೆಣಸಿನ ಮಿಶ್ರಣ ಬೆರೆಸಿ ಸೇವಿಸುವುದು ಅನುಕೂಲಕರವಾದರೂ, ಪಿತ್ತದ ತೊಂದರೆ ಇರುವವರಿಗೆ ಮೂಗು, ಮೂತ್ರ, ಮಲಗಳಲ್ಲಿ ರಕ್ತಪ್ರವೃತ್ತಿಯಾಗಲು ಕಾರಣವಾಗಬಹುದು.

ಬಿಸಿಲಿನ ಬೇಗೆಯನ್ನು ತಣಿಸಲು ಸಾಂಪ್ರದಾಯಿಕ ಪಾನೀಯ ಎಂದರೆ ಹೆಸರುಕಾಳಿನ ಪಾನಕ ಮತ್ತು ಭತ್ತದ ಅರಳಿನ ಗಂಜಿ ಅಥವಾ ಪಾನಕ. ಹೆಸರುಕಾಳನ್ನು ನೆನೆಸಿ, ರುಬ್ಬಿ, ಅದರಿಂದ ಬಂದ ರಸಕ್ಕೆ ಏಲಕ್ಕಿ, ಬೆಲ್ಲವನ್ನು ಬೆರೆಸಿ ಸೇವಿಸುವುದು ಉರಿಮೂತ್ರ, ಮಲಬದ್ಧತೆ ಮೊದಲಾದ ರೋಗಗಳನ್ನು ತಡೆಗಟ್ಟುತ್ತದೆ ಮತ್ತು ಗುಣಪಡಿಸುತ್ತದೆ ಕೂಡ. ಹಾಗೆಯೇ ಭತ್ತದ ಅರಳನ್ನು ಕುದಿಸಿ ಸಕ್ಕರೆ ಅಥವಾ ಬೆಲ್ಲ ಬೆರೆಸಿ ಏಲಕ್ಕಿ ಸೇರಿಸಿ ಸೇವಿಸುವುದು ಆರೋಗ್ಯಕರ. ಅರಳಿನ ಹಿಟ್ಟು, ಹಣ್ಣಿನ ರಸ ಅಥವಾ ಒಣಹಣ್ಣುಗಳಾದ ಅಂಜೂರ, ದ್ರಾಕ್ಷಿ, ಖರ್ಜೂರ, ಇವುಗಳಲ್ಲಿ ಯಾವುದಾದರೂ ಒಂದನ್ನು ಸೇರಿಸಿ ಮಂಥಿನಲ್ಲಿ ಕಡೆದು, ಅಥವಾ ಮಿಕ್ಸಿಯಲ್ಲಿ ಕಡೆದು, ಅದಕ್ಕೆ, ಏಲಕ್ಕಿ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಅತಿಯಾದ ಬಾಯಾರಿಕೆ, ವಾಂತಿ, ಭೇದಿ, ಮೈ ಒಣಗುವಿಕೆ, ಆಮ್ಲಪಿತ್ತ, ಕೆಮ್ಮು-ದಮ್ಮುಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ರಾಮಬಾಣವಾಗಿದೆ.

ಅತಿ ತಂಪಾದ ನೀರು/ಪಾನೀಯಗಳನ್ನು ಕುಡಿಯುವಾಗ ತಂಪೆನಿಸಿದರೂ, ಅವು ರಕ್ತಪರಿಚಲನೆಯನ್ನು ವ್ಯತ್ಯಾಸ ಮಾಡುವ ಮೂಲಕ ಚರ್ಮ, ಹೃದಯ, ರಕ್ತನಾಳ ಸಂಬಂಧಿ, ರೋಗಗಳ ಉತ್ಪತ್ತಿಗೆ ಕಾರಣವಾಗುತ್ತವೆ. ರಾಸಾಯನಿಕ ತಂಪು ಪಾನೀಯಗಳ ಸೇವನೆ ಯಕೃತ್ತಿನ ಮೇಲೂ ದುಷ್ಪರಿಣಾಮವನ್ನು ಉಂಟುಮಾಡುತ್ತವೆ. ಮದ್ಯಪಾನಪ್ರಿಯರಿಗಂತೂ ಅತಿ ತೊಂದರೆ ಕೊಡುವ ಕಾಲ ಬೇಸಿಗೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಖಾಲಿ ಕೊಡದೊಂದಿಗೆ ಪಾಲಿಕೆ ಸಾಮಾನ್ಯ ಸಭೆಗೆ ಆಗಮಿಸಿದ ಕಾಂಗ್ರೆಸ್ ಪಾಲಿಕೆ ಸದಸ್ಯರು.

Tue Feb 28 , 2023
  ಖಾಲಿ ಕೊಡದೊಂದಿಗೆ ಪಾಲಿಕೆ ಸಾಮಾನ್ಯ ಸಭೆಗೆ ಆಗಮಿಸಿದ ಕಾಂಗ್ರೆಸ್ ಪಾಲಿಕೆ ಸದಸ್ಯರು ಧಾರವಾಡ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಹುಬ್ಬಳ್ಳಿ ಧಾರವಾಡ ಸಾಮಾನ್ಯ ಸಭೆ ಈ ವೇಳೆ ಖಾಲಿ ಕೊಡ ಹಿಡಿದು ಸಭೆಗೆ ನುಗ್ಗಲು ಯತ್ನ ಒಳಗೆ ಬರದಂತೆ ತಳ್ಳಿದ ಬಿಜೆಪಿ ಸದಸ್ಯರು ಕಳೆದ ೨೦ ದಿನಗಳಿಂದ ಜಲ ಮಂಡಳಿ ನೌಕರರಿಂದ ನಡೆದಿರುವ ಪ್ರತಿಭಟನೆ ಬೆಂಬಲಿಸಿ ಬಂದಿದ್ದ ಕಾಂಗ್ರೆಸ್ ಸದಸ್ಯರು ಈ ವೇಳೆ ತಳ್ಳಾಟ ನೂಕಾಟ ತೀವ್ರತೆಗೆ ಹೋದ ತಳ್ಳಾಟದ […]

Advertisement

Wordpress Social Share Plugin powered by Ultimatelysocial