ಸಂಪಾದಕೀಯ | ಉಕ್ರೇನ್‌- ರಷ್ಯಾ ಯುದ್ಧದಿಂದ ಜಗತ್ತಿಗೇ ದೊಡ್ಡ ಹೊರೆ.

ಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭಿಸಿ ವರ್ಷ ಕಳೆದಿದೆ. ಯುದ್ಧದಿಂದಾಗಿ ಅಪಾರವಾದ ನಷ್ಟ ಉಂಟಾಗಿದೆ. ಒಂದು ಅಂದಾಜಿನ ಪ್ರಕಾರ, ಉಕ್ರೇನ್‌ನ ಒಂದು ಲಕ್ಷದಷ್ಟು ಸೈನಿಕರು ಗಾಯಗೊಂಡಿದ್ದಾರೆ ಅಥವಾ ಮೃತಪಟ್ಟಿದ್ದಾರೆ. ಉಕ್ರೇನ್‌ ನಗರಗಳ ಮೇಲೆ ರಷ್ಯಾ ನಡೆಸಿದ ಬಾಂಬ್ ಮತ್ತು ಕ್ಷಿಪಣಿ ದಾಳಿಗಳಿಂದಾಗಿ ಬಲಿಯಾದ ನಾಗರಿಕರ ಸಂಖ್ಯೆಯೂ ದೊಡ್ಡದಾಗಿಯೇ ಇದೆ.80 ಲಕ್ಷಕ್ಕೂ ಹೆಚ್ಚು ಉಕ್ರೇನ್‌ ಪೌರರು ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು, ನೂರಾರು ಸೇತುವೆಗಳು, ವಿದ್ಯುತ್‌ ವಿತರಣೆ ಜಾಲ ಮತ್ತು ರಸ್ತೆಗಳು ನಾಶವಾಗಿವೆ. ತನಗೆ ಎಷ್ಟು ನಷ್ಟವಾಗಿದೆ ಎಂಬುದನ್ನು ರಷ್ಯಾ ಈವರೆಗೆ ಹೇಳಿಕೊಂಡಿಲ್ಲ. ಈವರೆಗೆ ಆಗಿರುವ ನಷ್ಟ ಸಣ್ಣದೇನಲ್ಲ. ಅಫ್ಗಾನಿಸ್ತಾನದ ಮೇಲೆ ರಷ್ಯಾ ನಡೆಸಿದ ದಾಳಿಯ ಸಂದರ್ಭದಲ್ಲಿ ಆಗಿರುವ ನಷ್ಟಕ್ಕಿಂತ ಈಗ ಆಗಿರುವ ನಷ್ಟವು ಬಹಳ ದೊಡ್ಡದಾಗಿದೆ.ಅಫ್ಗಾನಿಸ್ತಾನವನ್ನು ಸುಮಾರು ಒಂದು ದಶಕ ಕಾಲ ರಷ್ಯಾ ತನ್ನ ಅಧೀನದಲ್ಲಿ ಇರಿಸಿಕೊಂಡಿತ್ತು. ಆ ಸಂದರ್ಭದಲ್ಲಿ ರಷ್ಯಾದ ಸುಮಾರು 15 ಸಾವಿರ ಸೈನಿಕರು ಬಲಿಯಾಗಿದ್ದರು. ಆದರೆ, ಉಕ್ರೇನ್‌ ಮೇಲೆ ದಾಳಿ ನಡೆಸಿದ ಒಂದು ವರ್ಷದಲ್ಲಿಯೇ ರಷ್ಯಾದ 80 ಸಾವಿರದಿಂದ 1.5 ಲಕ್ಷ ಸೈನಿಕರುಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಯುದ್ಧದ ಪ್ರತಿಕೂಲ ಪರಿಣಾಮಗಳು ಯುದ್ಧದಲ್ಲಿ ತೊಡಗಿರುವ ಎರಡು ದೇಶಗಳು ಮತ್ತು ಅವುಗಳ ನೆರೆಯ ದೇಶಗಳಿಗಷ್ಟೇ ಸೀಮಿತವಾಗಿಲ್ಲ. ಈ ಯುದ್ಧದಿಂದಾಗಿ ಇಡೀ ಜಗತ್ತು ಕಷ್ಟ ನಷ್ಟ ಅನುಭವಿಸಿದೆ. ಜಾಗತಿಕ ಪೂರೈಕೆ ಸರಪಣಿಯನ್ನು ಈ ಸಂಘರ್ಷವು ಹಾಳುಗೆಡವಿದೆ. ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಆಹಾರಧಾನ್ಯಗಳ ದರವು ಗಗನಕ್ಕೇರಿದೆ. ದಕ್ಷಿಣ ಏಷ್ಯಾದ ದೇಶಗಳು ಸೇರಿದಂತೆ ಹಲವು ದೇಶಗಳಲ್ಲಿ ಭಾರಿ ಹಣದುಬ್ಬರ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಇದು ಕಾರಣವಾಗಿದೆ. ಒಂದು ವರ್ಷದಲ್ಲಿ ಜಾಗತಿಕ ಆರ್ಥಿಕತೆಗೆ ಆಗಿರುವ ನಷ್ಟ 1.6 ಲಕ್ಷ ಕೋಟಿ ಡಾಲರ್‌ (ಸುಮಾರು ₹132 ಲಕ್ಷ ಕೋಟಿ) ಎಂದು ಅಂದಾಜಿಸಲಾಗಿದೆ.ರಷ್ಯಾ ದೇಶವು ಉಕ್ರೇನ್‌ ಮೇಲೆ 2022ರ ಫೆಬ್ರುವರಿ 24ರಂದು ದಾಳಿ ಆರಂಭಿಸಿದಾಗ ಯುದ್ಧವು ಬಹಳ ದಿನಗಳೇನೂ ನಡೆಯುವುದಿಲ್ಲ ಎಂದೇ ಭಾವಿಸಲಾಗಿತ್ತು. ಇದು ಆಶಾವಾದದಚಿಂತನೆಯಾಗಿಯಷ್ಟೇ ಉಳಿಯಿತು. ಒಂದು ವರ್ಷದ ಬಳಿಕವೂ ಸಂಘರ್ಷ ಕೊನೆಗೊಳ್ಳುವ ಸುಳಿವು ಗೋಚರಿಸುತ್ತಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಯುದ್ಧದಿಂದ ಹಿಂದಕ್ಕೆ ಹೋಗಲೂ ಆಗದೆ, ಸಂಧಾನವೂ ಸಾಧ್ಯವಾಗದೆ ತಾವೇ ಹೆಣೆದುಕೊಂಡ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ.ಹಾಗಾಗಿ, ಯುದ್ಧವು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಬಹುದು. ರಷ್ಯಾವು ಉಕ್ರೇನ್‌ಗೆ ಹೆಚ್ಚು ಹೆಚ್ಚು ಸೈನಿಕರನ್ನು ಕಳುಹಿಸುತ್ತಲೇ ಇದೆ ಮತ್ತು ಹೆಚ್ಚು ಹೆಚ್ಚು ಅಪಾಯಕಾರಿಯಾದ ಶಸ್ತ್ರಾಸ್ತ್ರವನ್ನೂ ಬಳಸುತ್ತಿದೆ. ಉಕ್ರೇನ್‌ಗೆ ಪಶ್ಚಿಮದ ದೇಶಗಳು ಅತ್ಯಾಧುನಿಕ ಫಿರಂಗಿಗಳು, ಟ್ಯಾಂಕ್‌ಗಳು, ವಾಯುಪ್ರದೇಶ ರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿ ಗಳನ್ನು ಪೂರೈಸುತ್ತಿವೆ. ಕೋಟ್ಯಂತರ ಡಾಲರ್‌ ನೆರವು ಕೂಡ ನೀಡಿವೆ. ಇದರಿಂದಾಗಿ ಯುದ್ಧದಲ್ಲಿ ಉಕ್ರೇನ್‌ ಕೈಮೇಲಾಗುವಂತಹ ಸನ್ನಿವೇಶ ಸೃಷ್ಟಿಯಾಗಬಹುದು. ಅಂತಹ ಸ್ಥಿತಿ ಸೃಷ್ಟಿಯಾದರೆ, ಪುಟಿನ್‌ ಅವರು ಇನ್ನಷ್ಟು ಅಪಾಯಕಾರಿಯಾದ ಹೆಜ್ಜೆ ಇರಿಸಬಹುದು. ಅಣ್ವಸ್ತ್ರ ಬಳಸುವುದಕ್ಕೂ ಅವರು ಹೇಸದಿರಬಹುದು.ಉಕ್ರೇನ್‌ನಲ್ಲಿ ನಿಜವಾಗಿ ನಡೆಯುತ್ತಿರುವುದು ಪಶ್ಚಿಮದ ದೇಶಗಳು ಮತ್ತು ರಷ್ಯಾ ನಡುವಣ ಮೇಲಾಟ. ಈ ಯುದ್ಧದಲ್ಲಿ ಹೆಚ್ಚಿನ ಲಾಭ ಚೀನಾಕ್ಕೆ ಆಗಬಹುದು. ಯುದ್ಧಕ್ಕೆ ಸಂಬಂಧಿಸಿ, ವಿಶ್ವಸಂಸ್ಥೆ ಯಲ್ಲಿ ಮಂಡಿಸಲಾದ ನಿರ್ಣಯಗಳ ಪರವಾಗಿ ಚೀನಾ ಮತ ಹಾಕಿಲ್ಲ. ಆದರೆ, ಮತದಾನದಿಂದ ದೂರ ಉಳಿಯುವ ಮೂಲಕ ರಷ್ಯಾಕ್ಕೆ ನೆರವಾಗಿದೆ. ಚೀನಾದ ನಾಯಕರು ರಷ್ಯಾಕ್ಕೆ ಭೇಟಿ ನೀಡಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಯುದ್ಧವು ನಿಲ್ಲದೇ ಇರುವುದರ ಕುರಿತು ಚೀನಾಕ್ಕೆ ಕಳವಳ ಇದೆ. ಯುದ್ಧದಿಂದಾಗಿ ರಷ್ಯಾ ತೀರಾ ದುರ್ಬಲವಾಗಬಹುದು ಎಂಬುದರ ಅರಿವು ಚೀನಾಕ್ಕೆ ಇದೆ. ಹಾಗೆ ಆದರೆ, ಅಮೆರಿಕದ ಯಜಮಾನಿಕೆಗೆ ಸವಾಲೆಸೆಯುವ ಚೀನಾದ ಪ್ರಯತ್ನಕ್ಕೆ ರಷ್ಯಾದಿಂದ ಹೆಚ್ಚೇನೂ ಪ್ರಯೋಜನ ಆಗದಿರಬಹುದು. ಇಂತಹ ಕಳವಳಗಳಿಂದಾಗಿಯೇ ಚೀನಾವು ಸಂಧಾನಕಾರನಾಗುವ ವಿಚಾರದಲ್ಲಿ ಆಸಕ್ತಿ ತೋರುತ್ತಿದೆ. ಆದರೆ, ಚೀನಾವನ್ನು ಪ್ರಾಮಾಣಿಕ ಸಂಧಾನಕಾರ ಎಂದು ಉಕ್ರೇನ್‌ ಒಪ್ಪಬಹುದೇ ಎಂಬ ಪ್ರಶ್ನೆಯೂ ಇದೆ. ಹಾಗಿದ್ದರೂ ಪುಟಿನ್‌ ಅವರ ಮನವೊಲಿಸುವ ಸಾಮರ್ಥ್ಯವಿರುವ ಒಂದೇ ದೇಶ ಚೀನಾ ಮಾತ್ರ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಲಸಿಗರ ದೋಣಿಯೊಂದು ಸಮುದ್ರದಲ್ಲಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ.

Mon Feb 27 , 2023
  ಇಟೆಲಿ: ವಲಸಿಗರ ದೋಣಿಯೊಂದು ಸಮುದ್ರದಲ್ಲಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ. ಇಟೆಲಿಯ ದಕ್ಷಿಣ ತೀರದಲ್ಲಿ ಈ ದುರಂತ ಸಂಭವಿಸಿದೆ ಕಲಬ್ರಿಯಾದ ಕರಾವಳಿ ಪಟ್ಟಣ ಕ್ರೊಟೋನ್‌ನ ಬಂದರು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಆರ್‌ಎಐ ರೇಡಿಯೊ, ಈ ದೋಣಿಯಲ್ಲಿ 100ಕ್ಕೂ ಹೆಚ್ಚು ವಲಸಿಗರು ಪ್ರಯಾಣಿಸುತ್ತಿದ್ದರು ಎಂದು ಹೇಳಿದೆ. ಸಮುದ್ರದಲ್ಲಿ ಮುಂಜಾನೆ ವೇಳೆ ದೋಣಿ ತೊಂದರೆಗೆ ಸಿಲುಕಿಕೊಂಡಿದೆ. “ಸದ್ಯಕ್ಕೆ ಹಲವು ಮಂದಿ ಸಂತ್ರಸ್ತರು ಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” […]

Advertisement

Wordpress Social Share Plugin powered by Ultimatelysocial