ಹಿಜಾಬ್ ಧರಿಸಿದವರಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ;

 

ಬೆಂಗಳೂರು, ಏಪ್ರಿಲ್ 19: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಹಿಜಾಬ್ ಹಾಕಿಕೊಂಡು ಬರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯುವುದಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ವೇಳೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ನಿಯಮವನ್ನು ಪಾಲನೆ ಮಾಡಬೇಕು.

ಹಿಜಾಬ್ ಧರಿಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಹಿಜಾಬ್ ವಿವಾದದ ನಡುವೆ ಎಸ್‌ಎಸ್‌ಎಲ್ ಸಿ (10 ನೇ ತರಗತಿ) ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದೀಗ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಏಪ್ರಿಲ್ 22 ರಿಂದ ಮೇ 18ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಪಿಯುಸಿ ಪರೀಕ್ಷೆಗೆ ವ್ಯಾಪಕ ಭದ್ರತಾ ವ್ಯವಸ್ಥೆ:

ಕರ್ನಾಟಕದಲ್ಲಿ ತೀವ್ರ ಚರ್ಚೆ ಹಾಗೂ ವಿವಾದವನ್ನು ಹುಟ್ಟು ಹಾಕಿದ್ದ ಹಿಜಾಬ್ ವಿಚಾರವು ಮತ್ತೊಮ್ಮೆ ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ. ದ್ವಿತೀಯ ಪಿಯುಸಿ ಪರೀಕ್ಷೆ ವೇಳೆಯಲ್ಲಿ ವಿವಾದವು ಮರುಕಳಿಸುವ ನಿರೀಕ್ಷೆಯ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸುಗಮವಾಗಿ ಪರೀಕ್ಷೆಗಳನ್ನು ನಡೆಸುವ ಉದ್ದೇಶದಿಂದಾಗಿ ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಪಿಯುಸಿ ಪರೀಕ್ಷೆಗೆ ಹೇಗಿದೆ ಸಿದ್ಧತೆ?:

ರಾಜ್ಯದ 1,076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ. ಒಟ್ಟು 3,46,936 ವಿದ್ಯಾರ್ಥಿಗಳು ಮತ್ತು 3,37,319 ವಿದ್ಯಾರ್ಥಿನಿಯರು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 74 ವಿದ್ಯಾರ್ಥಿಗಳು ಸ್ವಲೀನತೆಯಿಂದ ಬಳಲುತ್ತಿದ್ದರೆ, 377 ವಿದ್ಯಾರ್ಥಿಗಳು ಶ್ರವಣ ದೋಷವುಳ್ಳವರಾಗಿದ್ದಾರೆ. 371 ವಿದ್ಯಾರ್ಥಿಗಳ ಕಲಿಕೆಯಲ್ಲಿ ಅಸಮರ್ಥತೆ, 683 ವಿದ್ಯಾರ್ಥಿಗಳಲ್ಲಿ ಲೊಕೊಮೊಟರ್ ದುರ್ಬಲತೆ (ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವ ಸಮಸ್ಯೆ) ಇದೆ. 128 ವಿದ್ಯಾರ್ಥಿಗಳು ಬುದ್ಧಿಮಾಂದ್ಯ, 103 ವಿದ್ಯಾರ್ಥಿಗಳು ಬಹು ಅಂಗವೈಕಲ್ಯ, 48 ವಿದ್ಯಾರ್ಥಿಗಳು ವಾಕ್ ದೋಷ, 355 ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ (ಅಂಧತ್ವ) ಮತ್ತು 55 ವಿದ್ಯಾರ್ಥಿಗಳಲ್ಲಿ ಕಡಿಮೆ ದೃಷ್ಟಿಯ ದೋಷ ಸಮಸ್ಯೆಯ ನಡುವೆಯೂ ಪರೀಕ್ಷೆ ಬರೆಯಲಿದ್ದಾರೆ.

ಭದ್ರತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೇ ಇಲಾಖೆಯು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತೆಯನ್ನು ನಿಯೋಜಿಸಿದೆ. ಎಲ್ಲಾ ಪರೀಕ್ಷಾ ಕಾರ್ಯಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಕೈಗೊಳ್ಳಲಾಗುತ್ತಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಲಾಗುವುದು ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

ಹಿಜಾಬ್ ಕುರಿತು ಹೈಕೋರ್ಟ್ ಆದೇಶ:

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಕರ್ನಾಟಕ ಹೈಕೋರ್ಟ್ ವಿಶೇಷ ಪೀಠವು ತರಗತಿ ಕೊಠಡಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಹಿಜಾಬ್ ಧರಿಸುವುದು ಇಸ್ಲಾಮಿನ ಅತ್ಯಗತ್ಯ ಅಭ್ಯಾಸವಲ್ಲ ಎಂದು ಪೀಠವು ಹೇಳಿದೆ.

SSLC ಪರೀಕ್ಷೆ ವೇಳೆಯಲ್ಲೂ ಹಿಜಾಬ್ ನಿಷೇಧ:

ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ಆರು ವಿದ್ಯಾರ್ಥಿಗಳಿಂದ ಆರಂಭವಾದ ಹಿಜಾಬ್ ವಿವಾದ ರಾಜ್ಯಾದ್ಯಂತ ವ್ಯಾಪಿಸಿ ಬಿಕ್ಕಟ್ಟಿಗೆ ಕಾರಣವಾಗಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ದಿ ಮಾಡಿದ್ದು, ಕರ್ನಾಟಕ ಸರ್ಕಾರವು SSLC ಪರೀಕ್ಷೆಗಳನ್ನು ಭಾರೀ ಪೊಲೀಸ್ ಭದ್ರತೆಯೊಂದಿಗೆ ನಡೆಸಿತು. ಈ ವೇಳೆ ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹಠಾತ್ ಏರಿಕೆಯಾಗಿದ್ದು,

Wed Apr 20 , 2022
ಕಳೆದ 24 ಗಂಟೆಯಲ್ಲಿ 2‌,067 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, 24 ಗಂಟೆಯಲ್ಲಿ 40 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,22,006 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 12,340 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 480 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,25,13,248 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ ನಿನ್ನೆ […]

Advertisement

Wordpress Social Share Plugin powered by Ultimatelysocial