ಭವಿಷ್ಯದಲ್ಲಿ ಪುರುಷರನ್ನು ಒಳಗೊಂಡ ಮಹಿಳಾ ದಿನಾಚರಣೆ ಆಗಬೇಕು!

ಬೆಂಗಳೂರು, ಮಾರ್ಚ್ 08: ಜನ್ಮಪೂರ್ವದಿಂದಲೂ ತಾಯಿಯೊಂದಿಗೆ ಪವಿತ್ರ ಸಂಬಂಧ ಹೊಂದಿರುವ ಪುರಷರನ್ನು ಒಳಗೊಂಡು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನದಲ್ಲಿ ಆಯೋಜಿಸಿರುವ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮತ್ತು ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ’ ಮಾಡಿ ಅವರು ಮಾತನಾಡಿದರು.

ಪುರಷನು ತಾನು ಹುಟ್ಟು ಮೊದಲಿಂದಲೂ ತಾಯಿಯೊಂದಿಗೆ ಪವಿತ್ರ ಸಂಬಂಧ ಹೊಂದಿರುತ್ತಾನೆ. ತಾಯಿ, ಮಕ್ಕಳು, ಪತ್ನಿಯಿಂದ ಸದಾ ಸೇವೆ ಪಡೆಯುವುದು ಪುರುಷನೇ ಆಗಿದ್ದಾನೆ. ಮಹಿಳೆಗೆ ತೊಂದರೆಯಾದರೆ ಅದು ಗಂಡು ಮಕ್ಕಳಿಂದ, ಹೀಗಾಗಿ ಗಂಡು ಮಕ್ಕಳಿಗೆ ಮಹಿಳೆಯರ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಗತ್ತಿನ ಎಲ್ಲಾ ದೇಶಗಳಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಅವರ ಸುರಕ್ಷತೆ ಹಾಗೂ ಆರ್ಥಿಕ ಸ್ವಾತಂತ್ರ್ಯ ನೀಡಿ ಸಬಲರನ್ನಾಗಿ ಮಾಡಲು ಸಂಯುಕ್ತ ರಾಷ್ಟ್ರ ತೀರ್ಮಾನ ಮಾಡಿ ಈ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ನಮ್ಮದು ಪುರುಷ ಪ್ರಧಾನ ಸಮಾಜ ಆದರೆ, ಮೊದಲಿಂದ ನೋಡಿದರೆ, ಮಹಿಳೆ ಸಾಕಷ್ಟು ಸಾಧನೆ ಮಾಡಿದ್ದಾಳೆ. ನಮ್ಮ ಪುರಾಣಗಳಲ್ಲಿ ಮಹಿಳೆಯರು ಸಾಕಷ್ಟು ಮಹತ್ವ ಪಡೆದಿದ್ದಾರೆ. ಸ್ವಾತಂತ್ರ್ಯ. ಹೋರಾಟದಲ್ಲಿ ಕಿತ್ತೂರು ಚೆನ್ನಮ್ಮ ಕಹಳೆ ಊದಿದರು. ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ‌. ಗ್ರಾಮೀಣ ಆರ್ಥಿಕತೆಯಲ್ಲಿ ಮಹಿಳೆಯರ ಪಾಲುದಾರಿಗೆ ಹೆಚ್ಚು ಎಂದು ಮಹಿಳೆಯರ ಪಾತ್ರ, ಶೌರ್ಯ ಸಾಧನೆಯನ್ನು ಮುಖ್ಯಮಂತ್ರಿಗಳು ಬಣ್ಣಿಸಿದರು.

ಮಹಿಳೆಯರು ಸಮಸ್ಯೆಯ ಜೊತೆಗೆ ಬದುಕುತ್ತಿದ್ದಾರೆ. ಹೀಗಾಗಿ ಈ ವರ್ಷ ಬಜೆಟ್ ನಲ್ಲಿ ಹೊಲದಲ್ಲಿ ಕೆಲಸ ಮಾಡುವ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ನೀಡಲು ತಿರ್ಮಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತರು ಎಲ್ಲ ಮಕ್ಕಳ ತಾಯಿಯಾಗಿ‌ ಕೆಲಸ ಮಾಡುತ್ತಿದ್ದಾರೆ. ಅವರ ಸಹನೆ ಮೆಚ್ಚುವಂತದ್ದು, ಅವರಿಗೆ ಕಳೆದ ವರ್ಷ 1000 ರೂ. ಈ ವರ್ಷ ಒಂದು ಸಾವಿರ. ರೂ. ಹೆಚ್ಚಳ ಮಾಡಲಾಗಿದೆ. ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ ಎಂಬ ಮೂರು ಮಂತ್ರ ಅಳವಡಿಸಿಕೊಂಡು ಶಿಕ್ಷಣದ ಮೇಲೆ ಬಂಡವಾಳ ಹೂಡಿಕೆ ಮಾಡಲಾಗಿದೆ. ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಕೊಡಲು‌ ತಿರ್ಮಾನಿಸಲಾಗಿದೆ ಎಂದರು.

ಸ್ತ್ರೀ ಸಾಮರ್ಥ್ಯ ಯೋಜನೆಯಡಿ ನೆರವು

ಸ್ತ್ರೀ ಸಾಮರ್ಥ್ಯ ಯೋಜನೆ ಅಡಿ 5 ಲಕ್ಷ ರೂ. ನೀಡಲಾಗುತ್ತಿದೆ. ಆರೂವರೆ ಕೊಟೆ ಜನಸಂಖ್ಯೆ ಇದೆ‌.‌ 13 ಕೋಟಿ ಕೈಗಳು ಕೆಲಸ ಮಾಡಿದರೆ ಇನ್ನೂ ಹೆಚ್ಚು ಅಭಿವೃದ್ದಿ ಸಾಧಿಸಲು ಸಾಧ್ಯ. ಸ್ತ್ರೀ ಶಕ್ತಿ ಯಿಂದ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ನಮ್ಮ ಸರ್ಕಾರದ್ದು. ಮಹಿಳೆಯ ಸುರಕ್ಷತೆಗೆ ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಸುರಕ್ಷಿತ ನಗರ ಯೋಜನೆ ಗೆ ಚಾಲನೆ ನೀಡಲಾಗಿದೆ. ಏಳು ಸಾವಿರ ಕ್ಯಾಮೆರಾ ಅಳವಡಿಸಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. 400 ವಾಹನಗಳನ್ನು ಒದಗಿಸಲಾಗಿದೆ. ಈ ಯೋಜನೆಯನ್ನು ತಾಲ್ಲೂಕು ಕೇಂದ್ರ ಹಾಗೂ ಎಲ್ಲಾ ಮಹಾನಗರ ಪಾಲಿಕೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ಹಣ ಉಳಿತಾಯ ಪ್ರವೃತ್ತಿಯಿಂದ ಆರ್ಥಿಕತೆ ಸದೃಢ

ಮಹಿಳೆಯರು ಹಣ ಉಳಿತಾಯ ಮಾಡುವ ಪ್ರವೃತ್ತಿಯಿಂದ ನಮ್ಮ ಆರ್ಥಿಕತೆ ಇನ್ನೂ ಸದೃಢವಾಗಿದೆ. ಅಮೇರಿಕಾದ ಬ್ಯಾಂಕುಗಳು ದಿವಳಿಯಾದರೂ ನಮ್ಮ ಮಹಿಳೆಯರ ಉಳಿತಾಯ ಸಂಸ್ಕೃತಿ ಆರ್ಥಿಕತೆಗೆ ಕೊಡುಗೆಯಾಗಿದೆ. ಯಾರದೇ ಮನೆಯಲ್ಲಿ ಹುಟ್ಟಿದರೂ ನಾವು ಬೆಳೆದು ಇತರರಿಗೆ ನೆರವಾಗುವ ಕೆಲಸ ಮಾಡಬೇಕು. ಇದರಿಂದ ಸಮಾಜಕ್ಕೆ ಅನುಕೂಲವಾಗಲಿದೆ. ಐಟಿ ಬಿಟಿ, ಬ್ಯಾಂಕಿಂಗ್ ಕ್ಷೇತ್ರ, ಸೇರಿದಂತೆ ಎಲ್ಲಾ ರಂಗದಲ್ಲಿಯೂ ಮುಂದಿರುವ ಮಹಿಳೆಯರು ವಿಮಾನ, ಬಸ್, ಟ್ರಕ್, ಟ್ರ್ಯಾಕ್ಟರ್ ಎಲ್ಲವನ್ನೂ ಓಡಿಸುತ್ತಾರೆ. ಕನ್ನಡದ ಮಹಿಳೆಯರು ಅಂತಾರಾಷ್ಟ್ರೀಯ ‌ಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಬೊಮ್ಮಾಯಿ ಆಶಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್, ಸಾಲು ಮರದ ತಿಮ್ಮಕ್ಕ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ.ನಾಯ್ಡು, ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ರಾಜಣ್ಣಗೌಡ, ಡಿ.ಆರ್.ಡಿ.ಓ ಸಂಸ್ಥೆಯ ಆಶು ಭಾಟಿಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಡಾ; ಅನುರಾಧಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ:ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡಳಿ ಅನುಮತಿ ಪಡೆಯದೇ ಮನೆ ಗೋಡೆ ಒಡೆದು ಪ್ರವೇಶಿಸಿದವನಿಗೆ ದಂಡ ವಿಧಿಸಿದ ಕೋರ್ಟ್ ತೀರ್ಪು, ಏನಿದು?

Wed Mar 8 , 2023
ಬೆಂಗಳೂರು, ಮಾರ್ಚ್ 08: ಬೆಂಗಳೂರಿನ ಜಯನಗರಲ್ಲಿರುವ ರಾಗಿಗುಡ್ಡ ಕೊಳಚೆ ಪ್ರದೇಶದಲ್ಲಿ ಮಂಡಳಿ ವತಿಯಿಂದ ನಿರ್ಮಿಸಿದ ಮನೆಗಳ ನಡುಗೋಡೆ ಒಡೆದು ಹಾಕಿ ಅನಧಿಕೃತ ಪ್ರವೇಶ ಮಾಡಿರುವ ಆರೋಪಿಗೆ ಸಿಎಂಎಂ ನ್ಯಾಯಾಲಯವು ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯ (ವಾರ್ಡ್ ನಂ.177) ರಾಗಿಗುಡ್ಡ ಕೊಳಚೆ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ನರ್ಮ್, ಬಿಎಸ್‌ಯುಪಿ ಯೋಜನೆಯಡಿ ನಿರ್ಮಿಸಿದ್ದ ನಿವೇಶನ ವಸತಿ ಸಂಕೀರ್ಣದ ಬ್ಲಾಕ್ ನಂ.1 ರಲ್ಲಿ 1ನೇ ಮಹಡಿಯನ್ನು […]

Advertisement

Wordpress Social Share Plugin powered by Ultimatelysocial