ನಾಳೆಯಿಂದ ಜನತಾಮಿತ್ರ ಕಾರ್ಯಕ್ರಮ, ಜೆಡಿಎಸ್ ಚುನಾವಣಾ ಪ್ರಚಾರ ಆರಂಭ

 

ಬೆಂಗಳೂರು, ಜೂ.30 -ನಾಳೆಯಿಂದ 17 ದಿನಗಳ ಕಾಲ ನಗರದಲ್ಲಿ ಜೆಡಿಎಸ್ ಜನತಾ ಮಿತ್ರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಚುನಾವಣೆ ಪ್ರಚಾರ ಪ್ರಾರಂಭಿಸಲಿದೆ. ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಒಂದು ಸುತ್ತು ಚುನಾವಣೆ ಪ್ರಚಾರ ನಡೆಸಿರುವ ಜೆಡಿಎಸ್ ಎರಡನೇ ಹಂತದಲ್ಲಿ ಜನತಾಮಿತ್ರ ಕಾರ್ಯಕ್ರಮದ ಮೂಲಕ ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದೆ.

ಮುಂಬರುವ ಬಿಬಿಎಂಪಿ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜನತಾಮಿತ್ರ ನಡೆಸಲಾಗುತ್ತಿದೆ. ನಾಳೆ ಜೆಪಿ ಭವನದಲ್ಲಿ ಪ್ರಾರಂಭವಾಗುವ ಈ ಕಾರ್ಯಕ್ರಮವು ಎಲ್ಲ ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್‍ಗಳಲ್ಲಿ ನಡೆಯಲಿದೆ.

ಜಲಧಾರೆಯಂತೆ ಜನತಾ ಮಿತ್ರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಕ್ಷದ ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಪಕ್ಷದ ಮುಖಂಡರೆಲ್ಲ ಪ್ರತ್ಯೇಕ ತಂಡಗಳಾಗಿ ಬೇರ್ಪಟ್ಟು ಸಂಚಾರ ಮಾಡಬೇಕು. ಎಲ್ಲ ವಾರ್ಡ್‍ಗಳಲ್ಲಿಯೂ ಸಭೆಗಳನ್ನು ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈಗಾಗಲೇ ಸೂಚನೆ ನೀಡಿದ್ದು, ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಜನತಾ ಮಿತ್ರ ವಾಹನವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಜನರು ತಮ್ಮ ನಿರೀಕ್ಷೆಯ ಸರ್ಕಾರ ಹೇಗಿರಬೇಕು ಎಂಬ ಬಗ್ಗೆ ಸಲಹೆ, ಅಭಿಪ್ರಾಯವನ್ನು ಕೊಡಬಹುದು. ಜನತಾ ಮಿತ್ರ ಹೆಸರಿನ ಎಲ್‍ಇಡಿ ಪರದೆ ಹೊಂದಿರುವ 15 ವಾಹನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ವಾಹನ ತಲಾ ಎರಡು ಕ್ಷೇತ್ರಗಳಿಗೆ ತೆರಳಲಿದೆ. ಅಷ್ಟೂ ವಾಹನಗಳಿಗೆ ಶಾಸಕರು ಅಥವಾ ಹಿರಿಯ ಮುಖಂಡರ ನೇತೃತ್ವದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಎಲ್ಲ ಪ್ರಮುಖರು ತಮ್ಮ ನೇತೃತ್ವದ ತಂಡಗಳ ಮೂಲಕ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಗಳ ಮಾಹಿತಿಯನ್ನು ಮನೆಮನೆಗೂ ಮುಟ್ಟಿಸುವ ಉದ್ದೇಶ ಜನತಾ ಮಿತ್ರ ಹೊಂದಿದೆ.

ಜೆಡಿಎಸ್ ಅಧಿಕಾರಕ್ಕೆ ಬಂದರೆ, ಎಲ್ಲರಿಗೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯ, ಕುಡಿಯುವ ನೀರು, ಜಲಮೂಲಗಳ ಸಂರಕ್ಷಣೆ, ಕೆರೆಕಟ್ಟೆಗಳ ರಕ್ಷಣೆ, ತ್ಯಾಜ್ಯ ನೀರಿನ ಸಮರ್ಪಕ ನಿರ್ವಹಣೆ, ಸುಗಮ ಸಂಚಾರ, ಸ್ವಚ್ಛತೆ, ನೈರ್ಮಲ್ಯ, ಸಮರ್ಪಕ ಕಸ ವಿಲೇವಾರಿ, ಆರ್ಥಿಕವಾಗಿ ದುರ್ಬಲರಾಗಿರುವವರ ಸಂಬಲೀಕರಣ ಇತ್ಯಾದಿ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡುವ ಭರವಸೆ ನೀಡಲಿದೆ.

ಜುಲೈ 17ರಂದು ಜನತಾ ಮಿತ್ರ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಅಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ಆರ್. ಪುರ, ಟಿನ್ ಫ್ಯಾಕ್ಟರಿ ಸಂಚಾರ ದಟ್ಟಣೆ ತಪ್ಪಿಸಲು ಹೊಸ ಐಡಿಯಾ

Thu Jun 30 , 2022
ಬೆಂಗಳೂರು, ಜೂನ್ 29: ಬೆಂಗಳೂರಿನ ಮತ್ತೊಂದು ಜಂಕ್ಷನ್ ನಗರದಿಂದ ಹೊರ ಹೋಗುವ ಮತ್ತು ಒಳ ಬರುವ ಜನರನ್ನು ಹೈರಾಣಾಗಿಸಿದೆ. ಅದುವೇ ಕೆ. ಆರ್. ಪುರ ಸಮೀಪದ ಟಿನ್ ಫ್ಯಾಕ್ಟರಿ ಜಂಕ್ಷನ್. ಹೊಸಕೋಟೆ ಕೋಲಾರ, ಆಂಧ್ರ ಪ್ರದೇಶ, ತಿರುಪತಿಗೆ ಹೋಗುವ ಜನರು ಇದೇ ಮಾರ್ಗವನ್ನು ಬಳಸುತ್ತಾರೆ. ಈ ಜಂಕ್ಷನ್ ಅನ್ನು ದಾಟಿದರೆ ಸಾಕು 20 ಕಿ. ಮೀ. ಹೆಚ್ಚು ದೂರ ಕ್ರಮಿಸಿದಂತೆ ಅನಿಸದೇ ಇರಲ್ಲ. ಕೃಷ್ಣರಾಜಪುರಕ್ಕೆ ಹೋಗುವ ಹಾದಿಯಲ್ಲಿ ಸಿಗುವುದೇ ಟಿನ್ […]

Advertisement

Wordpress Social Share Plugin powered by Ultimatelysocial