ಕಾಶಿ ವಿಶ್ವನಾಥ ಶೆಟ್ಟಿ

ಕಾಶಿ ವಿಶ್ವನಾಥ ಶೆಟ್ಟಿ ಸಾಹಿತ್ಯ ಕ್ಷೇತ್ರದ ಸಾಧಕರು.
ಕಾಶಿ ವಿಶ್ವನಾಥ ಶೆಟ್ಟಿಯವರು 1928ರ ಫೆಬ್ರವರಿ 24ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಕೃಷ್ಣ ಶೆಟ್ಟಿ, ತಾಯಿ ಸೀತಾಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ತುಮಕೂರಿನಲ್ಲಿ ನಡೆಯಿತು. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಹಾಗೂ ಎಂ.ಎ. ಪದವಿ ಗಳಿಸಿದರು.
ಕಾಶಿ ವಿಶ್ವನಾಥ ಶೆಟ್ಟಿಯವರು ಶಾಲೆಯಲ್ಲಿ ಓದುತ್ತಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಮೂಡಿ ಸಾಹಿತ್ಯ ಚಟುವಟಿಕೆಗಳಿಗಾಗಿ ‘ವಿಶ್ವ ಸಂಘ’ ಎಂಬ ಸಂಘವನ್ನು ಸ್ಥಾಪಿಸಿದರು. ಸಂಘವನ್ನು ಉದ್ಘಾಟಿಸಿದವರು ಪ್ರಸಿದ್ಧ ಪತ್ರಕರ್ತರಾಗಿದ್ದ ತಿ.ತಾ.ಶರ್ಮರು. ಇವರ ಸಾಹಿತ್ಯ ಚಟುವಟಿಕೆಗಳ ಅತ್ಯುತ್ಸಾಹವನ್ನು ಮೆಚ್ಚಿ ಮಾತನಾಡಿದಾಗ ವಿಶ್ವನಾಥ ಶೆಟ್ಟರಿಗೆ ಹೊಸ ಹುರುಪು ಬಂದು ಅನೇಕ ಕಾರ್ಯಕ್ರಮಗಳನ್ನೇರ್ಪಡಿಸಿದರು. ಇಂಟರ್ ಮೀಡಿಯಟ್ ನಂತರ ತುಮಕೂರು ಕಾಲೇಜಿನಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿದ್ದರೂ ಕುವೆಂಪು, ಡಿ.ಎಲ್.ಎನ್., ಎಸ್.ವಿ.ಪರಮೇಶ್ವರ ಭಟ್ಟ. ಕ.ವೆಂ.ರಾಘವಾಚಾರ್ಯ ಮುಂತಾದವರುಗಳು ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದುದರಿಂದ ಪದವಿ ಪಡೆಯಲು ಮೈಸೂರನ್ನೇ ಆಯ್ಕೆಮಾಡಿಕೊಂಡರು.
ಕಾಶಿ ವಿಶ್ವನಾಥ ಶೆಟ್ಟಿಯವರು ಎಂ.ಎ. ಪದವಿ ಪಡೆದ ನಂತರ ಕೆಲಕಾಲ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಕೆಲಸಮಾಡಿದರು. ನಂತರ ಅಧ್ಯಾಪಕ ಹುದ್ದೆಯು ತುಮಕೂರಿನ ಕಾಲೇಜಿನಲ್ಲಿಯೇ ದೊರೆತಿದ್ದರಿಂದ ತುಮಕೂರನ್ನೇ ಆಯ್ಕೆ ಮಾಡಿಕೊಂಡು ಕೆಲ ವರ್ಷಗಳ ನಂತರ ಚಿಕ್ಕಮಗಳೂರಿಗೆ ವರ್ಗವಾಗಿ ಅಲ್ಲಿಯೇ ನಿವೃತ್ತರಾದರು.
ಕಾಶಿ ವಿಶ್ವನಾಥ ಶೆಟ್ಟಿಯವರು ಕಾಲೇಜು ದಿನಗಳಲ್ಲಿಯೇ ಸಾಹಿತ್ಯ ಕೃಷಿ ಆರಭಿಸಿದರು. ‘ಕಾಶೀ ಕಾವೇರಿ’ ಪ್ರಕಟಗೊಂಡ ಇವರ ಮೊದಲ ಕವನ ಸಂಕಲನ. ತೀ.ನಂ.ಶ್ರೀ. ಯವರು ಇವರ ಕಾವ್ಯದ ದೃಷ್ಟಿ, ನಿರರ್ಗಳ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ನಂತರ ಪ್ರಕಟಗೊಂಡ ಕವನ ಸಂಕಲನಗಳು ಮಾವು ಮಲ್ಲಿಗೆ, ರಾಗ ಯೋಗ, ಮೇಘಮಾಲೆ, ಚಂದ್ರಿಕಾ ಚಂದ್ರಮ, ಮುಗುಳು ಮಿಂಚು, ಸಮರ್ಪಣಾ, ದ್ರಾಕ್ಷಿ ಮದಿರಾಕ್ಷಿ, ಮುಂತಾದವುಗಳು. ಸೀತಕ್ಕನ ಸಮರ, ಸಮಾಗಮ, ಜೀವಕ್ಕೆ ಜೀವ, ಅಭಾಗಿನಿ, ಭಗ್ನ ಹೃದಯ ಕಾದಂಬರಿಗಳು. ಭವ್ಯ ಭಾರತ ಪರಂಪರೆ, ಧರ್ಮನಂದನ, ಉತ್ಕೃಷ್ಟ ಭಾರತ, ಸಂಘಮಿತ್ರ, ಏಕಲವ್ಯ, ಮಹಾಭೀಷ್ಕ್ರಮಣ ಇವರ ನಾಟಕಗಳು. ಗೃಹದೇವತೆ, ಬ್ರಹ್ಮಗಂಟು, ಶರಣು ಶನಿದೇವ, ಆಚಾರದ ಬೆನ್ನಲ್ಲಿ ಇವರ ಕಥಾ ಸಂಕಲನಗಳು. ಸ್ವಾಮಿ ಶಿವಾನಂದ ಸರಸ್ವತಿ, ಶ್ರೀ ಲಕ್ಷ್ಮೀನರಸಿಂಹ ಸೋಮಯಾಜಿ, ವೀರ ಸಾವರ್ಕರ್ ಮುಂತಾದವು ಜೀವನ ಚರಿತ್ರೆಗಳು. ಕುಮಾರ ವಾಲ್ಮೀಕಿ, ರುದ್ರ ಭಟ್ಟ, ಕನ್ನಡ ಶತಕ ಸಾಹಿತ್ಯ, ಕನ್ನಡದಲ್ಲೊಂದು ಕ್ರೈಸ್ತಯುಗ, ಕನ್ನಡ ಕವಯಿತ್ರಿಯರು, ವಚನಕಾರ್ತಿಯರು, ವಾಸವಿ ಮುಂತಾದ ಕೃತಿಗಳನ್ನು ರಚಿಸಿದ್ದಲ್ಲದೆ ಎಲಿಯಟ್ಟನ ಮರ್ಡರ್ ಇನ್ ದಿ ಕ್ಯಾಥಡ್ರಲ್ ನಾಟಕವನ್ನು ‘ದೇಗುಲದಲ್ಲಿ ಕೊಲೆ’ ಎಂದು ಅನುವಾದಿಸಿದ್ದರು. ಕುವೆಂಪು ಸಾಹಿತ್ಯ ಸಂಬಂಧಿ ಸಂಪುಟವಾದ ‘ಉಪಾಯನ ಕೃತಿ ಕರಂಡ’ ನೆನಪಿನ ಸಂಚಿಕೆಯ ಸಂಪಾದಕರಾಗಿ ದುಡಿದಿದ್ದರು.
ಕಾಶಿ ವಿಶ್ವನಾಥ ಶೆಟ್ಟಿಯವರ ಮಹಾ ಕಾವ್ಯ ‘ಬುದ್ಧ ಚರಿತ ಮಹಾ ಮಧು’. ಬುದ್ಧನ ಜೀವನವನ್ನು ಕುರಿತು ಬರೆದ ಕನ್ನಡದ ಮಹಾ ಕಾವ್ಯ ಕೃತಿ ಇದಾಗಿದ್ದು ಒಂದು ಸಾವಿರಕ್ಕೂ ಹೆಚ್ಚು ಪುಟಗಳನ್ನೊಳಗೊಂಡು ಆರು ಸಾವಿರ ಪದ್ಯಗಳಿವೆ. ಅನೇಕ ವರ್ಷಗಳ ಅಧ್ಯಯನ, ಚಿಂತನೆ, ಪ್ರವಾಸಾನುಭವದಲ್ಲಿ ಸಂಗ್ರಹಿಸಿದ ವಿಷಯಗಳನ್ನು ಸತತವಾಗಿ ಎರಡು ವರ್ಷಗಳ ಕಾಲ ಕುಳಿತು ರಚಿಸಿದ ಮಹಾ ಕಾವ್ಯವಿದು. ಮಹಾಕಾವ್ಯಗಳ ರಚನೆಯ ಕಾಲವಲ್ಲ ಎನ್ನುವ ಸಮಯದಲ್ಲೂ ಮಹಾ ಕಾವ್ಯ ರಚಿಸಿದ ಹಿರಿಯ ಸಾಹಸ ಇವರದ್ದು.
ಕಾಶಿ ವಿಶ್ವನಾಥ ಶೆಟ್ಟಿಯವರ ಶ್ರೀ ಲಕ್ಷ್ಮೀನರಸಿಂಹ ಸೋಮಯಾಜಿ ಕೃತಿಯು ವೈಶ್ಯ ಸಮುದಾಯಕ್ಕೆ ಆಪ್ತ ಗ್ರಂಥವಾಗಿದೆ. ಶ್ರೀ ವಾಸವಿ ದೇವಿಯ ಬಗೆಗೆ ಅಷ್ಟಕ ಸುಪ್ರಭಾತ, ತ್ರಿಶತಿ ಮತ್ತು ಜೀವನ ಚರಿ‌ತ್ರೆಗಳನ್ನು ರಚಿಸಿದ್ದಾರೆ. ವಾಸವಿ ಜಯಂತ್ಯೋತ್ಸವದಂದು ವಾಸವಿಗೆ ಉಯ್ಯಾಲೆ ಸೇವೆ ಮಾಡುವ ಸಂದರ್ಭದಲ್ಲಿ ಹಾಡಲನುಕೂಲವಾಗುವಂತೆ ಲಾಲಿ ಹಾಡನ್ನು ರಚಿಸಿದ್ದು ಜನಪ್ರಿಯ ಹಾಡಾಗಿದೆ. ದೈವ ಭಕ್ತರಾಗಿದ್ದ ಕಾಶಿ ವಿಶ್ವನಾಥರು ಗಣೇಶೋತ್ಸವ, ರಾಮೋತ್ಸವಗಳ ಸಂದರ್ಭದಲ್ಲಿ ಊರಲ್ಲೆಲ್ಲಾ ಉತ್ಸವ ಹೊರಡಿಸಿ ಸಾರ್ವಜನಿಕರು ಭಾಗಿಯಾಗುವಂತೆ ಮಾಡುವ ಕುಶಲ ಸಂಘಟಕರೆನಿಸಿದ್ದರು.
ಕಾಶಿ ವಿಶ್ವನಾಥ ಶೆಟ್ಟಿಯವರು ಸಾಹಿತ್ಯ ಪರಿಚಾರಿಕೆಯಲ್ಲಿಯೂ ಮುಂಚೂಣಿಯಲ್ಲಿದ್ದು ಹಲವಾರು ವಿಚಾರ ಸಂಕಿರಣ, ಸಭೆ, ಸಮಾರಂಭಗಳ ರೂವಾರಿಯಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದ್ದಲ್ಲದೆ ಚಿಕ್ಕಮಗಳೂರಿನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸ್ಕೌಟ್ ಚಳುವಳಿಗಳಲ್ಲಿ ಭಾಗಿಯಾಗಿ, ‘ಮಹಾರಾಜ ಸ್ಕೌಟ್’ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಕಾಶಿ ವಿಶ್ವನಾಥ ಶೆಟ್ಟಿಯವರು 1990ರ ಆಗಸ್ಟ್ 20ರಂದು ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತ. ಸು. ಶಾಮರಾಯರ ‘ಮೂರು ತಲೆಮಾರು’

Fri Feb 25 , 2022
ಈ ದಿನವನ್ನು ಟಿ. ಎಸ್. ವೆಂಕಣ್ಣಯ್ಯನವರ ಸ್ಮರಣ ದಿನವಾಗಿ ನೆನೆದಾಗ ಅವರ ಕುರಿತು ಎಷ್ಟು ಚಿಂತಿಸಿದರೂ, ಓಹ್ ಅವರ ಎತ್ತರದ ಆಳದ ಕುರಿತು ಇನ್ನಷ್ಟು ಅರಸಬೇಕು ಅನಿಸುತ್ತಿದೆ. ಈ ನಿಟ್ಟಿನಲ್ಲಿ ವೆಂಕಣ್ಣಯ್ಯನವರ ಕಿರಿಯ ಸಹೋದರ ತ. ಸು. ಶಾಮರಾಯರ ‘ಮೂರು ತಲೆಮಾರು’ ಅಮೂಲ್ಯ ಆಸರೆ. ಮೂರು ತಲೆಮಾರು ತ. ಸು ಶಾಮರಾಯರು ಹೇಳಿರುವ ಅವರ ವಂಶದ ಮೂರು ತಲೆಮಾರುಗಳ ಚರಿತ್ರೆ. ಮೊದಲನೆಯ ತಲೆಮಾರಿನ ಬಗ್ಗೆ ಅವರು ಕೇಳಿದ್ದನ್ನೂ, ಎರಡನೇ ತಲೆಮಾರಿನ […]

Advertisement

Wordpress Social Share Plugin powered by Ultimatelysocial