ಕಾದಂಬರಿಗಳ ಲೋಕದಲ್ಲಿ ಕುಸುಮಾಕರ ದೇವರ ಗೆಣ್ಣೂರ ಎಂಬ ಅಂಕಿತದಿಂದ ಹೆಸರುವಾಸಿ ಆಗಿರುವವರು!

ವಸಂತ ದಿವಾಣಜಿ ಅವರು ವಿಜಾಪುರ ಜಿಲ್ಲೆಯ, ವಿಜಾಪುರ ತಾಲ್ಲೂಕಿನ ದೇವರ ಗೆಣ್ಣೂರ ಎಂಬ ಹಳ್ಳಿಯಲ್ಲಿ 1930ರ ಫೆಬ್ರವರಿ 15 ರಂದು ಜನಿಸಿದರು. ತಂದೆ ಅನಂತ ದಿವಾಣಜಿ. ತಾಯಿ ನರ್ಮದಾ. ವಸಂತರ ಪ್ರಾರಂಭಿಕ ಶಿಕ್ಷಣ ದೇವರ ಗೆಣ್ಣೂರು, ಹೊಸೂರು, ಬಾಬಾನಗರ, ಬಿಜ್ಜರಗಿ, ಗಲಗಲಿ ಮುಂತಾದ ಹಳ್ಳಿಗಳಲ್ಲಿ ನಡೆದವು. ಹದಿನಾಲ್ಕರ ಹರೆಯದಲ್ಲಿ ಹಳ್ಳಿಯಲ್ಲಿ ಓದುತ್ತಿದ್ದಾಗ ಒಮ್ಕೆ ಬೇಂದ್ರೆಯವರ ಮನೆಗೆ ಹೋಗಿ ಯಾವುದೋ ಒಂದು ಪದ್ಯದ ಅರ್ಥ ತಿಳಿಯದೆಂದು ಕೇಳಿದಾಗ, “ಕವಿತಾ ಯಾವ ಭಾಷಾದಾಗದ? ಕನ್ನಡದಾಗೆ. ನಿನಗೆ ಕನ್ನಡ ಬರ್ತದೇನೂ? ಬರತದ. ಆದರೂ ಕವಿತಾ ತಿಳಿದಿಲ್ಲ, ಹೌದು. ಹಾಂಗಾದರ ಇದರ ಅರ್ಥ ಇಷ್ಟ, ನಿನಗ ಕನ್ನಡ ಬರತಿರಲಿಕ್ಕಿಲ್ಲ, ಅಥವಾ ಕವಿತಾ ಕನ್ನಡದಾಗಿಲ್ಲ” ಎಂದು ಹೇಳಿ ಪದ್ಯದ ಅರ್ಥ ಹೇಳಿದ ಬೇಂದ್ರೆಯವರ ಒಡನಾಟವನ್ನು ಹಲವಾರು ವರ್ಷ ಅನುಭವಿಸಿದರು. ತಾವು ಓದಿದ ಹೈಸ್ಕೂಲಿನಲ್ಲಿಯೇ ಶಿಕ್ಷಕರಾಗಿ ನೇಮಕಗೊಂಡರು. ಆದರೆ ಬೇಂದ್ರೆಯವರ ಮಾರ್ಗದರ್ಶನದಲ್ಲಿ ಸೊಲ್ಲಾಪುರದ ದಯಾನಂದ ಕಾಲೇಜಿನಲ್ಲಿ ಎಂ.ಎ. ಪದವಿ ಪಡೆದ ನಂತರ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಅಲ್ಲೇ ನಿವೃತ್ತರಾದರು. ತತ್ತ್ವಜ್ಞಾನ, ಸಾಹಿತ್ಯ, ವಿಜ್ಞಾನ, ಹೋಮಿಯೋಪಥಿ, ಮನಃಶಾಸ್ತ್ರ ಮುಂತಾದ ಅನೇಕ ವಿಷಯಗಳನ್ನು ಸುದೀರ್ಘವಾಗಿ ಅಭ್ಯಾಸ ಮಾಡಿದರು. 1966 ರಲ್ಲಿ ರಂ.ಶ್ರೀ. ಮುಗಳಿಯವರ ಮಾರ್ಗದರ್ಶನದಲ್ಲಿ ಪುಣೆಯ ವಿಶ್ವವಿದ್ಯಾಲಯಕ್ಕೆ “ಪುರಂದರ ದಾಸರ ಜೀವನ ಹಾಗೂ ಕೃತಿಗಳು: ಒಂದು ಅಧ್ಯಯನ” ಎಂಬ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್‌.ಡಿ. ಪದವಿ ಪಡೆದರು. ಈ ಪ್ರೌಢ ಪ್ರಬಂಧವೇ ‘ಪ್ರಸಾದ ಯೋಗ’ ಎಂಬ ಹೆಸರಿನಿಂದ 1972ರಲ್ಲಿ ಪ್ರಕಟವಾಗಿದ್ದು, ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠದಿಂದ ಹಲವು ಬಾರಿ ಮರುಮುದ್ರಣಗೊಂಡಿದೆ. ಈ ಕೃತಿಗೆ ಜಿ. ವರದರಾಜರಾಯರು ವಿಸ್ತೃತ ಮುನ್ನುಡಿ ಬರೆದಿದ್ದಾರೆ.ಕುಸುಮಾಕರರು ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದು ಕವಿಯಾಗಿ. ಇವರ ಮೊದಲ ಕವನ ಸಂಕಲನ ‘ಸ್ವಪ್ನನೌಕೆ’ 1954 ರಲ್ಲಿ ಪ್ರಕಟವಾಯಿತು. ಇದರಲ್ಲಿರುವ ಕವಿತೆಗಳು ದಾಂಪತ್ಯ ಗೀತೆಗಳಿಂದ ನಳನಳಿಸಿವೆ. ಜಿ. ಕೃಷ್ಣಮೂರ್ತಿ, ಅರವಿಂದರು, ರವೀಂದ್ರರು, ಕಾಫ್ಕ, ಕಾಮು, ಥೋರೋ, ಐನ್‌ಸ್ಟೀನ್‌, ಓಪನ್‌ ಹೀಮರ್, ಹೆಝೆನ್‌ ಬರ್ಗ್, ಡೇವಿಡೆಬೊಮ ಇವರುಗಳಿಂದ ಪ್ರಭಾವಿತರಾದ ನಂತರ ತಮ್ಮ ಜೀವನಾನುಭವವನ್ನೂ ಸಶಕ್ತವಾಗಿ ಅಭಿವ್ಯಕ್ತಿಪಡಿಸಲು ಕಾದಂಬರಿಯೇ ಸರಿಯಾದ ಮಾರ್ಗವೆನಿಸಿದ್ದರಿಂದ ಕುಸುಮಾಕರರು ಆ ಪ್ರಕಾರದೆಡೆಗೆ ಹೊರಳಿದರು. ಇವರು ಬರೆದ ಮೊದಲ ಕಾದಂಬರಿ ‘ಮುಗಿಯದ ಕಥೆ’ 1965ರಲ್ಲಿ ಪ್ರಕಟಗೊಂಡಿತು. ‘ನಾಲ್ಕನೆಯ ಆಯಾಮ’ 1966 ರಲ್ಲಿ ಪ್ರಕಟಗೊಂಡಿದ್ದಲ್ಲದೆ ನಂತರದ ಮುದ್ರಣವನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಹೊರತಂದಿದೆ. 1993ರಲ್ಲಿ ‘ನಿರಿಂದ್ರಿಯ’, 1996ರಲ್ಲಿ ‘ಪರಿಘ’ ಪ್ರಕಟಿಸಿದರಲ್ಲದೆ,1998ರಲ್ಲಿ ಗಂಗಾಧರ ಗಾಡಗೀಳರ ಮರಾಠಿ ಕಾದಂಬರಿ ಅನುವಾದ ‘ದುರ್ದಮ್ಯ’ ವನ್ನೂ ಕನ್ನಡಕ್ಕೆ ತಂದು ಮರಾಠಿ ಭಾಷೆಯ ಮೇಲಿನ ಪ್ರೌಢತೆಯನ್ನು ವ್ಯಕ್ತ ಪಡಿಸಿದರು. ನಂತರ ಪ್ರಕಟವಾದ ಕಾದಂಬರಿ ‘ಬಯಲು-ಬಸಿರು’ 2005ರಲ್ಲಿ ಪ್ರಕಟಗೊಂಡು ಮರಾಠಿಗೂ ಅನುವಾಗಿದ್ದಲ್ಲದೆ ಅಮೆರಿಕಾದ ಬ್ಲೂಮಿಂಗ್‌ಟನ್‌ ನಲ್ಲಿರುವ ಮೈ.ಶ್ರೀ. ನಟರಾಜರು Mysore Natarajaಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.21.01.2001 ರಂದು ಬೇಂದ್ರೆಯವರ ಜನ್ಮ ದಿನಾಚರಣೆಯ ನಿಮಿತ್ತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಬೇಂದ್ರೆಯವರ ಒಡನಾಟವನ್ನು ಜ್ಞಾಪಿಸಿಕೊಂಡ ಕುಸುಮಾಕರರು ವ್ಯಕ್ತಪಡಿಸಿದ ಆತ್ಮೀಯ ಭಾವನೆಗಳನ್ನು ಕರ್ನಾಟಕ ವಿಶ್ವವಿದ್ಯಾಲಯವು ‘ಗಾಳಿ ಹೆಜ್ಜೆ ಹಿಡಿದ ಸುಗಂಧ’ ಎಂಬ ಕೃತಿ ರೂಪದಲ್ಲಿ ಹೊರತಂದಿದೆ.ಕುಸುಮಾಕರರ ಸಾಹಿತ್ಯ ಸಾಧನೆಗಾಗಿ ‘ಸ್ವಪ್ನ ನೌಕೆ’ ಕಾವ್ಯಕೃತಿಗೆ ರಾಜ್ಯ ಸರಕಾರದ ಪ್ರಶಸ್ತಿ (1954), ನಾಲ್ಕನೆಯ ಆಯಾಮ ಮತ್ತು ನಿರಿಂದ್ರಿಯ ಕಾದಂಬರಿಗಳಿಗೆ ಮತ್ತು ಒಟ್ಟಾರೆ ಸಾಹಿತ್ಯ ಸಾಧನೆಗೆ – ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿದ್ದರೆ, ದುರ್ದಮ್ಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿದೆ. ‘ಅವಗಾಹ’ ಕುಸುಮಾಕರ ದೇವರ ಗೆಣ್ಣೂರರಿಗೆ 2008 ವರ್ಷದಲ್ಲಿ ಅರ್ಪಿತಗೊಂಡ ಗೌರವ ಗ್ರಂಥ. ಇದಲ್ಲದೆ ‘ಬೊಗಸಿ ತುಂಬಾ ಭಕ್ತಿ ಹಿಡಿದು’ ಎಂಬ ಹೆಸರಿನಲ್ಲಿ ಇವರ ಸಾಹಿತ್ಯ ಸಮೀಕ್ಷೆಯ ಕೃತಿಯೂ ಅರ್ಪಣೆಯಾಗಿದೆ.ಕುಸುಮಾಕರ ದೇವರಗೆಣ್ಣೂರ ಅವರು 2012ರ ಏಪ್ರಿಲ್ 17ರಂದು ನಿಧನರಾದರು. ಈ ಮಹಾನ್ ಚೇತನಕ್ಕೆ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು F1 ತೊರೆಯುತ್ತೇನೆ ಎಂದು ಎಂದಿಗೂ ಹೇಳಲಿಲ್ಲ: ಲೂಯಿಸ್ ಹ್ಯಾಮಿಲ್ಟನ್

Fri Feb 18 , 2022
  2021 ರ ವಿಶ್ವ ಚಾಂಪಿಯನ್‌ಶಿಪ್ ಅಭಿಯಾನದ ಆಘಾತಕಾರಿ ಅಂತ್ಯದ ಹೊರತಾಗಿಯೂ ಅವರು ಫಾರ್ಮುಲಾ ಒನ್ ತೊರೆಯುವುದಾಗಿ ಎಂದಿಗೂ ಹೇಳಲಿಲ್ಲ ಎಂದು ಲೆವಿಸ್ ಹ್ಯಾಮಿಲ್ಟನ್ ಶುಕ್ರವಾರ ಒತ್ತಾಯಿಸಿದರು. ಬ್ರಿಟಿಷ್ ಚಾಲಕ, 37, ಡಿಸೆಂಬರ್ 12 ರಂದು ಅಬುಧಾಬಿಯಲ್ಲಿ ಮ್ಯಾಕ್ಸ್ ವರ್ಸ್ಟಾಪ್ಪೆನ್ ವಿರುದ್ಧ ವಿವಾದಾತ್ಮಕ ಸಂದರ್ಭಗಳಲ್ಲಿ ಚಾಂಪಿಯನ್‌ಶಿಪ್ ಅನ್ನು ಕಳೆದುಕೊಂಡ ನಂತರ ಮೊದಲ ಬಾರಿಗೆ ಮಾತನಾಡುತ್ತಿದ್ದರು. 2022 ರ ಮರ್ಸಿಡಿಸ್ ಕಾರನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಏಳು ಬಾರಿಯ ಚಾಂಪಿಯನ್ ಹ್ಯಾಮಿಲ್ಟನ್ […]

Advertisement

Wordpress Social Share Plugin powered by Ultimatelysocial