ಲೀಲಾವತಿ ಚಿತ್ರರಂಗದ ಕಲಾವಿದೆ.

 

‘ದೇವ್ರೇ, ದೇವ್ರೇ’ ತಾರೆ ಲೀಲಾವತಿ ಅವರನ್ನು ಹೇಗೆ ತಾನೇ ಮರೆಯಲು ಸಾಧ್ಯ. ಅವರು ತೆರೆಯಮೇಲೆ ನಾಯಕಿಯಾಗಿದ್ದಾಗ, ತಾಯಿಯಾಗಿದ್ದಾಗ, ಅತ್ತೆಯಾಗಿದ್ದಾಗ, ಕೋಪಿಸಿಕೊಂಡಾಗ, ಅತ್ತಾಗ, ನಕ್ಕಾಗ, ಸಿಡುಕಿದಾಗ, ಮಿಡುಕಿದಾಗ, ಸುಮ್ಮನೆ ನೋಡಿದಾಗ, ಹೀಗೆ ಅವರಂತೆ ಮನಸೆಳೆದ ಕಲಾವಿದರು ಅಪರೂಪ. ಐದು ದಶಕಗಳಿಗೂ ಹೆಚ್ಚು ಕಾಲ ಅವರು ಚಿತ್ರರಂಗದಲ್ಲಿ ಬೆಳೆದ ರೀತಿ ಅನನ್ಯ.ನಾಗರಹಾವು ಚಿತ್ರದಲ್ಲಿ ‘ರಾಮಾಚಾರಿ’ ವಿಷ್ಣುವರ್ಧನ, ‘ಚಾಮಯ್ಯ ಮೇಷ್ಟ್ರು’ ಅಶ್ವಥ್ ಅವರ ಜೊತೆಯಲ್ಲಿ ಚಾಮಯ್ಯ ಮೇಷ್ಟ್ರ ಪತ್ನಿಯಾಗಿ, ರಾಮಾಚಾರಿಯ ಸಲಹುವ ಯಶೋದೆಯಂತೆ, ಮಾತು ಮಾತಿಗೂ ‘ದೇವ್ರೇ, ದೇವ್ರೇ’ ಅನ್ನುವ ಆ ಮಾತೃ ಸ್ವರೂಪಿ ಲೀಲಾವತಿಯನ್ನು ಮರೆಯುವುದು ಸಾಧ್ಯವೇ ಇಲ್ಲ. ಅಂತೆಯೇ ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ’ ಎಂಬಲ್ಲಿ ಪ್ರೀತಿಯ ಶಿಕ್ಷಕಿಯಾಗಿ ಅವರು ಕಂಡ ರೀತಿ, ‘ಮೆಲ್ಲುಸಿರೇ ಸವಿಗಾನ’ ಹಾಡಿನಲ್ಲಿ ಅವರು ತೋರಿದ ಸುಂದರ ಅಭಿನಯ, ‘ಅಂತಿಂಥ ಹೆಣ್ಣು ನೀನಲ್ಲ’ ಎಂದು ಅತ್ತ ಕಾಳಿಂಗರಾಯರು ಹಾಡುತ್ತಿದ್ದರೆ ಇತ್ತ ರಾಜ್ ಜೊತೆಯಲ್ಲಿ ತೋರುತ್ತಿದ್ದ ಲಾವಣ್ಯ, ‘ಗೆಜ್ಜೆ ಪೂಜೆ’ ಚಿತ್ರದಲ್ಲಿ ನಾಯಕಿಯ ತಾಯಿಯಾಗಿ ಕಣ್ಣುಗಳಲ್ಲೇ ಇಡೀ ಚಿತ್ರಕಥೆಗೆ ಬೇಕಾದ ವಾತಾವರಣವನ್ನು ಕಟ್ಟಿಕೊಡುವ ರೀತಿ, ‘ಭಕ್ತ ಕುಂಬಾರ’ದಲ್ಲಿ ಭಕ್ತಿ, ನಿರಾಶೆ, ಆಕ್ರೋಶ, ಪ್ರೀತಿ ಇವುಗಳೆಲ್ಲವನ್ನೂ ಒಟ್ಟಿಗೆ ತರುವ ಸಂಗಮ, ‘ಅವರ್ಗಳ್’ ಎಂಬ ತಮಿಳು ಚಿತ್ರದಲ್ಲಿ ಕ್ರೂರಿಯಾದ ಮಗ ರಜನೀಕಾಂತನಿಗೆ ತನ್ನ ಸೌಮ್ಯತನದಿಂದಲೇ ಬಂಡೆದ್ದ ಆಕೆಯ ಅಭಿನಯದ ರೀತಿ ಹೀಗೆ ಹೇಳುತ್ತಾ ಹೋದರೆ ಅದು ಕೊನೆಯಿಲ್ಲದ ಕಥೆಯಾಗುತ್ತದೆ. ಅಂತಹ ಭವ್ಯ ಕಲಾವಿದೆ ಲೀಲಾವತಿಯವರು.ಲೀಲಾವತಿಯವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ಬದುಕು ಸಾಗಿಸಲು ಮೈಸೂರಿನ ಕಡೆ ಮುಖ ಮಾಡಿದ ಲೀಲಾವತಿಯವರು ಅತ್ಯಂತ ಕಷ್ಟಪೂರ್ಣ ಜೀವನವನ್ನು ಪ್ರಾರಂಭಿಸಿದರು. ಹೊಟ್ಟೆಹೊರೆಯಲು ಪಾತ್ರೆ ತೊಳೆದು ಜೀವನ ಸಾಗಿಸಿದ್ದೂ ಉಂಟು. ಮುಂದೆ ರಣಧೀರ ಕಂಠೀರವ ಚಿತ್ರಕ್ಕಾಗಿ 1500 ರೂಪಾಯಿ ಆದಾಯ ದೊರಕುವವರೆಗೆ ಅವರು ಪಟ್ಟ ಬವಣೆಗಳು ಅನೇಕ. ಲೀಲಾವತಿ ತಾಯಿ ಹೇಳುತ್ತಾರೆ “ಬದುಕೆಂಬುದು ರೈಲುಬಂಡಿಯಂತೆ. ಬದುಕಲ್ಲಿ ನೀವು ರೈಲು ತಡವಾಗಿ ಬರಬಹುದು ಎಂದು ನಿರೀಕ್ಷಿಸಬಹುದು. ಆದರೆ ಅದು ಹಳಿತಪ್ಪುತ್ತದೆ ಎಂದು ನಿರೀಕ್ಷಿಸುವುದು ಕಷ್ಟ!”. ಈ ಮಾತುಗಳು ಲೀಲಾವತಿಯವರ ಬದುಕಿನ ಸೂಕ್ಷ್ಮ ಎಳೆಗಳನ್ನು ಹೇಳುತ್ತದೆ. ಒಂದು ರೀತಿಯಲ್ಲಿ ಹಳಿತಪ್ಪಿದ ಬದುಕಿನಲ್ಲೂ ಅವರೂ ಎಲ್ಲಾ ಪರೀಕ್ಷೆಗಳಲ್ಲೂ ಹೋರಾಡಿ ಜೀವನದ ರೈಲುಬಂಡಿಯನ್ನು ತಳ್ಳುತ್ತಾ ಬದುಕು ಸಾಗಿಸಿದವರು.ಲೀಲಾವತಿಯವರು ಮೈಸೂರಿನಲ್ಲಿ ಶಂಕರ್ ಸಿಂಗ್ ಅವರ ‘ನಾಗಕನ್ನಿಕಾ’ ಚಿತ್ರದಲ್ಲಿ ಪುಟ್ಟಪಾತ್ರವೊಂದರ ಮೂಲಕ ಚಿತ್ರಜೀವನವನ್ನು ಪ್ರಾರಂಭಿಸಿದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ನಗಣ್ಯವಾದ ಪಾತ್ರಗಳಲ್ಲಿ ಸಹಾ ಅಭಿನಯಿಸಿದರು. ‘ರಾಣಿ ಹೊನ್ನಮ್ಮ’ ಲೀಲಾವತಿಯವರು ನಾಯಕಿಯಾದ ಪ್ರಥಮ ಚಿತ್ರ. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಗೆಜ್ಜೆ ಪೂಜೆ, ಸಿಪಾಯಿ ರಾಮು, ಭಕ್ತ ಕುಂಬಾರ ಚಿತ್ರಗಳಲ್ಲಿ ಅವರದು ಘನವೇತ್ತ ಪಾತ್ರಗಳು. ಹಲವಾರು ಚಿತ್ರಗಳಲ್ಲಿ ಅವರು ನಾಯಕನಟರಿಗೆ ದೊರಕುತ್ತಿದ್ದ ಎರಡರಷ್ಟು ಸಂಭಾವನೆ ಪಡೆಯುವಂತಹ ಪ್ರಸಿದ್ಧಿ ಸಹಾ ಪಡೆದಿದ್ದರು. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಅವರು ಅಭಿನಯಿಸಿದ ಚಿತ್ರಗಳ ಸಂಖ್ಯೆ ಸುಮಾರು 600ರ ಸಮೀಪದ್ದು.ಮದುವೆ ಮಾಡಿ ನೋಡು, ಸಂತ ತುಕಾರಾಂ ಚಿತ್ರಗಳಿಗೆ ಲೀಲಾವತಿಯವರು ರಾಷ್ಟ್ರಪ್ರಶಸ್ತಿ ಪಡೆದರೆ, ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಸ್ವೀಕರಿಸಿದರು. ಅವರೇ ನಿರ್ಮಿಸಿದ ‘ಕನ್ನಡದ ಕಂದ’ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಪಡೆದರು.
ಲೀಲಾವತಿ ಅವರ ಮಗ ವಿನೋದ್ ರಾಜ್ ಹಲವಾರು ಚಿತ್ರಗಳಲ್ಲಿ ನಟಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದಲ್ಲಿ ಭಾವಗೀತೆ.

Mon Mar 6 , 2023
  ಪದ್ಮಾ ಕುಮಟಾ ಪ್ರಥಮ ಚಿತ್ರ ಚೋಮನದುಡಿಯಲ್ಲಿಯೇ ಪ್ರತಿಭೆ ತೋರಿ ರಾಷ್ಟ್ರ ಪ್ರಶಸ್ತಿ ಪಡೆದವರು. ಕಣಗಾಲರ ‘ಫಲಿತಾಂಶ’ ಚಿತ್ರದಲ್ಲಿ ಅವರು ಜೈಜಗದೀಶ್ ಮುಂದೆ, “ಅವರೇ ಕಾಳು ಉಪ್ಪಿಟ್ಟು ತಂದಿದೀನಿ ತೊಗೊಳ್ಳಿ” ಅಂತ ಉತ್ಸಾಹದಿಂದ ನುಡಿಯುತ್ತ ಅಭಿನಯಿಸಿದ್ದು ಇನ್ನೂ ನೆನಪಲ್ಲಿದೆ. ಅವರು ಹಲವಾರು ಕಿರುತೆರೆಯ ಧಾರವಾಹಿಗಳಲ್ಲಿದ್ದರು. ಅಭಿನಯಿಸುವ ಸಂದರ್ಭದಲ್ಲೇ ನಿಧನರಾದ ಕರ್ಮಜೀವಿ. ಕೆಲವೊಂದು ಕಲಾವಿದರನ್ನು ಒಂದೆರಡು ಚಿತ್ರಗಳ ಕೆಲವೇ ನಿಮಿಷಗಳಲ್ಲಿ ಕಂಡಿದ್ದರೂ ಅವರು ಉಳಿಸುವ ನೆನಪು ಅಪಾರವಾದದ್ದು. ಅಂತಹ ಕಲಾವಿದರ ಸಾಲಿನಲ್ಲಿ […]

Advertisement

Wordpress Social Share Plugin powered by Ultimatelysocial