ಮಹಾದೇವ ಗೋವಿಂದ ರಾನಡೆ ಭಾರತದ ಪ್ರಸಿದ್ಧ ಸಮಾಜ ಸುಧಾರಕ.

ಮಹಾದೇವ ಗೋವಿಂದ ರಾನಡೆ ಭಾರತದ ಪ್ರಸಿದ್ಧ ಸಮಾಜ ಸುಧಾರಕ, ರಾಜನೀತಿಜ್ಞ, ಇತಿಹಾಸಕಾರ, ನ್ಯಾಯಾಧೀಶ ಹಾಗೂ ಅರ್ಥಶಾಸ್ತ್ರಜ್ಞ.ರಾನಡೆ 1842ರ ಜನವರಿ 18ರಂದು ಪುಣೆಯ ನಿಫಾದ್ನಲ್ಲಿ ಜನಿಸಿದರು. ತಾಯಿ ಗೋಪಿಕಾಬಾಯಿ, ತಂದೆ ಗೋವಿಂದರಾಯ.ತಂದೆ ಕೊಲ್ಹಾಪುರದಲ್ಲಿ ನೌಕರಿ ಮಾಡುತ್ತಿದ್ದುದರಿಂದ ಅಲ್ಲಿಯ ರಾಜಾರಾಮ್ ಶಾಲೆ ಸೇರಿದರು. ಅಲ್ಲಿ ಮರಾಠಿ ಮಾಧ್ಯಮವಿತ್ತು. ಅನಂತರ ಆಂಗ್ಲಮಾಧ್ಯಮ ಶಾಲೆ ಸೇರಿದರು(1851-56). ಹನ್ನೆರಡನೆಯ ವರ್ಷದಲ್ಲಿ ಇವರ ತಾಯಿ ತೀರಿಕೊಂಡರು. ಮುಂಬಯಿಯ ಎಲ್ಫಿನ್ಸ್ಟನ್ ವಿದ್ಯಾಸಂಸ್ಥೆ ಸೇರಿ(1857) ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪ್ರಥಮವಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಪ್ರಾರಂಭವಾದಾಗ ಅದರಲ್ಲಿ ಉತ್ತೀರ್ಣರಾದ 21 ವಿದ್ಯಾರ್ಥಿಗಳಲ್ಲಿ ಇವರು ಒಬ್ಬರು. 1862 ಏಪ್ರಿಲ್ನಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.ಪದವಿ ಪಡೆದರು. ಆನರ್ಸ್ನಲ್ಲಿ ಚಿನ್ನದ ಪದಕಗಳಿಸಿದರು. 1864ರಲ್ಲಿ ಎಂ.ಎ.ಪದವಿ ಪಡೆದರು. ಅದೇ ವರ್ಷ ಪ್ರಥಮ ಶ್ರೇಣಿಯಲ್ಲಿ ಎಲ್.ಎಲ್.ಬಿ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದರು. ಅಡ್ವೊಕೇಟ್ ಪರೀಕ್ಷೆ ಪಾಸಾದದ್ದು 1877ರಲ್ಲಿ. ಮುಂಬಯಿ ವಿಶ್ವವಿದ್ಯಾಲಯದ ಫೆಲೋ(1815) ಆದ ಭಾರತೀಯರಲ್ಲಿ ಇವರೇ ಮೊದಲಿಗರು. ಮಹಾದೇವ ಗೋವಿಂದ ರಾನಡೆ ಮೊದಲಿಗೆ ಮುಂಬಯಿ ಸರ್ಕಾರದ ಭಾಷಾಂತರಕಾರರಾಗಿ (1862) ಅನಂತರ ಅಕ್ಕಲಕೋಟೆಯ ಆಡಳಿತಗಾರರಾಗಿ ಸೇವೆ ಸಲ್ಲಿಸಿದರು. 1863ರಲ್ಲಿ ಎಲ್ಫಿನ್ಸ್ಟನ್ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. 1868ರಿಂದ 71ರ ತನಕ ಅದೇ ಕಾಲೇಜಿನಲ್ಲಿ ಇತಿಹಾಸ ಮತ್ತು ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. 1871ರಲ್ಲಿ ಮೊದಲನೆಯ ದರ್ಜೆಯ ಸಬಾರ್ಡಿನೇಟ್ ನ್ಯಾಯಾಧೀಶರಾಗಿ ಪುಣೆಗೆ ಹೋದರು. 1873ರಲ್ಲಿ ಪ್ರಥಮ ದರ್ಜೆಯ ಉಪನ್ಯಾಯಾಧೀಶರಾದರು. 1878ರಲ್ಲಿ ಅಮೀನರಾಗಿ ನಾಸಿಕಕ್ಕೆ ವರ್ಗವಾಗಿ ಹೋದರು. 1881ರಲ್ಲಿ ಮುಂಬಯಿಯ ಪ್ರೆಸಿಡೆನ್ಸಿ ನ್ಯಾಯಾಧೀಶರಾಗಿ ನೇಮಕಗೊಂಡರು. 1884ರಲ್ಲಿ ಲಘುವ್ಯಾಜ್ಯಗಳ ನ್ಯಾಯಾಧೀಶರಾಗಿ ನೇಮಕಗೊಂಡು ಪುಣೆಗೆ ತೆರಳಿದರು. 1896ರಲ್ಲಿ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡು ಜೀವಿತದ ಕೊನೆಯ ತನಕವೂ ಆ ಹುದ್ದೆಯಲ್ಲಿದ್ದರು. ಮೊಕದ್ದಮೆಯ ಪೂರ್ಣ ಸಮಾಲೋಚನೆ, ಸಾವಧಾನತೆ, ವಿವರಗಳ ಪರಿಶೀಲನೆ, ದಾಖಲೆಗಳ ಸೂಕ್ಷ್ಮಪರೀಕ್ಷೆ, ವಾಸ್ತವಾಂಶಗಳ ಚೊಕ್ಕ ನಿರೂಪಣೆ, ರುಜುವಾತುಗಳ ಸರಿಯಾದ ಗ್ರಹಿಕೆ, ಕಡೆಯ ನಿರ್ಣಯಕ್ಕೆ ಒಯ್ಯುವ ತರ್ಕಬದ್ದ ವಾದಸರಣಿ ಇವೆಲ್ಲ ಗುಣಗಳಿಂದಾಗಿ ಮೂವತ್ತರ ಹರೆಯದಲ್ಲೇ ಇವರು ನೀಡಿದ ತೀರ್ಪುಗಳು ಶ್ರೇಷ್ಠ ನ್ಯಾಯಾಲಯದ ಮೆಚ್ಚುಗೆ ಪಡೆದಿದ್ದವು.
1886ರಲ್ಲಿ ಸರ್ಕಾರದ ವೆಚ್ಚಗಳನ್ನು ಪರಿಶೀಲಿಸಿ ಉಳಿತಾಯದ ಮಾರ್ಗಗಳನ್ನು ಸೂಚಿಸಲು ಸರ್ಕಾರ ರಚಿಸಿದ ಸಮಿತಿಗೆ ರಾನಡೆ ಅವರನ್ನು ಓರ್ವ ಸದಸ್ಯರಾಗಿ ನೇಮಿಸಲಾಯಿತು. ಆ ಸಮಿತಿಯಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗಾಗಿ ಸಿ.ಐ.ಇ. ಎಂಬ ಬಿರುದು ಇವರಿಗೆ ಲಭಿಸಿತು(1887). ಇವರು 1885, 1890, 1893ರಲ್ಲಿ ಮುಂಬಯಿ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.ರಾನಡೆಯವರು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಅವುಗಳಲ್ಲಿ ಸಮಾಜಸೇವೆ, ರಾಜಕಾರಣ ಮತ್ತು ಆರ್ಥಿಕ ನೀತಿ ನಿರೂಪಣೆಯ ಕ್ಷೇತ್ರಗಳು ಉಲ್ಲೇಖಾರ್ಹವಾದವು. ಸ್ತ್ರೀಶಿಕ್ಷಣದ ಪ್ರಚಾರ, ಬಾಲ್ಯವಿವಾಹ ಮತ್ತು ಜಾತಿಭೇದಗಳ ವಿರೋಧ, ವಿಧವಾ ವಿವಾಹದ ಸಮರ್ಥನೆ, ಸಾಮಾಜಿಕ ದುಷ್ಟ ಸಂಪ್ರದಾಯಗಳ ಖಂಡನೆ ಹೀಗೆ ಹತ್ತಾರು ವಿಧದಲ್ಲಿ ಸಮಾಜ ಸುಧಾರಣೆಗಾಗಿ ಸರ್ಕಾರಿ ನೌಕರಿಯಲ್ಲಿದ್ದೇ ಶ್ರಮಿಸಿದರು.ರಾನಡೆಯವರು ಕೇಶವಚಂದ್ರಸೇನರಿಂದ ಮುಂಬಯಿಯಲ್ಲಿ ಸ್ಥಾಪಿತವಾದ (1867) ಪ್ರಾರ್ಥನಾ ಸಮಾಜದ ಅನುಯಾಯಿಗಳಾಗಿದ್ದರು. ಇದರ ಮೂಲಕ ಭಾರತೀಯತ್ವ ಜಾಗೃತಿಗೊಳ್ಳುವಂತೆ ಶ್ರಮಿಸಿದರು. ಮಿತ್ರರ ನೆರವಿನಿಂದ ಪುಣೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಪ್ರೌಢಶಾಲೆಯೊಂದನ್ನು ಪ್ರಾರಂಭಿಸಿದರು (1882). ಪಂಡಿತ ರಮಾಬಾಯಿಯವರಿಂದ ಸ್ಥಾಪಿತವಾದ ಶಾರದಾ ಸದನದ ಬೆನ್ನೆಲುಬಾಗಿ ದುಡಿದರು. ಸಮಾಜ ಸುಧಾರಣೆಗಾಗಿ ಇವರು ಮಾಡಿದ ಕೆಲಸಗಳಲ್ಲಿ ಅದ್ವಿತೀಯವಾದದ್ದು ಭಾರತ ರಾಷ್ಟ್ರೀಯ ಸಮಾಜ ಸಮ್ಮೇಳನದಲ್ಲಿ ಸಲ್ಲಿಸಿದ ಸೇವೆ. ಸಾಮಾಜಿಕ ಅನ್ಯಾಯಗಳನ್ನು ಎದುರಿಸುವುದಕ್ಕಾಗಿ ದೇಶದ ತುಂಬೆಲ್ಲ ಹರಡಿದ್ದ ಸಂಘಗಳ ಪ್ರತಿನಿಧಿಗಳನ್ನು ವರ್ಷಕ್ಕೊಮ್ಮೆ ಒಂದೆಡೆ ಸೇರಿಸಿ ಅವರಲ್ಲಿನ ಸುಧಾರಣಾ ಶಕ್ತಿಗಳನ್ನು ಬಲಪಡಿಸುವುದು ಈ ಸಮ್ಮೇಳನದ ಉದ್ದೇಶ. ಇದರ ಪ್ರಧಾನ ಕಾರ್ಯಕರ್ತರಾಗಿ ರಾನಡೆಯವರು ಮದರಾಸು, ಮುಂಬಯಿ, ನಾಗಪುರ, ಅಮರಾವತಿ, ಸತಾರಾ ಮುಂತಾದೆಡೆಗಳಲ್ಲಿ ಸಮ್ಮೇಳನಗಳನ್ನು ಏರ್ಪಡಿಸಿದರು. ಸುಮಾರು 20-30 ವರ್ಷಗಳ ಕಾಲ ಇವರು ಸುಧಾರಣಾ ಚಳವಳಿಯ ಜೀವಾಳವಾಗಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೇವೆಗಳ ನಿಯಂತ್ರಣ ವಿಚಾರದಲ್ಲಿ ದೆಹಲಿ-ಕೇಂದ್ರ ಸರ್ಕಾರ ನಡುವಿನ ವಿವಾದ.

Wed Jan 18 , 2023
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ-ದೆಹಲಿ ಸರ್ಕಾರದ ನಡುವಿನ ಸಂಘರ್ಷ ಮುಂದುವರಿದದ್ದು, ವಿವಾದ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ-ದೆಹಲಿ ಸರ್ಕಾರದ ನಡುವಿನ ಸಂಘರ್ಷ ಮುಂದುವರಿದದ್ದು, ವಿವಾದ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ತೀರ್ಪನ್ನು ಕಾಯ್ದಿರಿಸುವ ಮೊದಲು ಸುಮಾರು […]

Advertisement

Wordpress Social Share Plugin powered by Ultimatelysocial